ಡಿಕೆಶಿ ಪರ ನಿಂತವರ ವಿರುದ್ಧ ಸಿಎಂ ಟಾರ್ಗೆಟ್: ಡಾ. ಪ್ರಣವಾನಂದ ಸ್ವಾಮೀಜಿ ಆರೋಪ

Upayuktha
0


ಕಲಬುರಗಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರ ನಿಂತವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಚಿತ್ತಾಪುರ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.


ಮಾ. 21ರಂದು ಬೆಂಗಳೂರಿನಲ್ಲಿ ಅತಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ನಿಯೋಗದೊಂದಿಗೆ ಡಿ.ಕೆ. ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯದ ಬೇಡಿಕೆಗಳನ್ನು ಸಲ್ಲಿಸಿದ ನಂತರದಿಂದಲೇ ಅತಿ ಹಿಂದುಳಿದ ಸ್ವಾಮೀಜಿಗಳನ್ನೂ ಹಾಗೂ ಅವರ ಸಮುದಾಯವನ್ನೂ ಗುರಿಯಾಗಿಸಲಾಗಿದೆ ಎಂದು ಹೇಳಿದರು.


ರಾಜ್ಯಾದ್ಯಂತ ಸುಮಾರು 700 ಕಿ.ಮೀ. ಪಾದಯಾತ್ರೆ ನಡೆಸಿ ಈಡಿಗ, ಬಿಲ್ಲವ ಸಮುದಾಯಗಳ ಬೇಡಿಕೆಗಳಿಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಸಚಿವ ಶಿವರಾಜ್ ತಂಗಡಿ ಅವರನ್ನು ಸಂಧಾನಕ್ಕೆ ಕಳುಹಿಸಿ ಚರ್ಚೆ ನಡೆಸಲಾಗಿತ್ತು. ಹೋರಾಟ ಹಿಂಪಡೆಯುವಂತೆ ಮನವಿ ಮಾಡಲಾಗಿದ್ದರೂ, ನಂತರ ಮುಖ್ಯಮಂತ್ರಿಗಳು ಸೌಜನ್ಯಕ್ಕೂ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.


ಬಜೆಟ್‌ನಲ್ಲಿ ಅತಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಘೋಷಣೆ ಮಾಡದೇ ಅನ್ಯಾಯ ಮಾಡಲಾಗಿದೆ ಎಂದು ಅವರು ಟೀಕಿಸಿದರು.


ಮುಖ್ಯಮಂತ್ರಿಯನ್ನು ಸ್ಥಾನದಿಂದ ಕೆಳಗಿಳಿಸುವ ಬೇಡಿಕೆ ಇಲ್ಲ. ಆದರೆ, ಹೈಕಮಾಂಡ್ ಸಮ್ಮುಖದಲ್ಲಿ ನಡೆದ ಒಪ್ಪಂದದಂತೆ ಎರಡು ವರ್ಷಗಳ ಬಳಿಕ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಅಭಿಪ್ರಾಯ ಮಾತ್ರ ಎಂದು ಹೇಳಿದರು. ಪಕ್ಷಕ್ಕಾಗಿ ಡಿಕೆ ಮಾಡಿದ ತ್ಯಾಗ ಮತ್ತು ಅಹರ್ನಿಶಿ ದುಡಿಮೆಯನ್ನು ಹೈಕಮಾಂಡ್ ಗೌರವಿಸಬೇಕು ಎಂದು ಒತ್ತಾಯಿಸಿದರು.


ಒಂದು ವಾರದೊಳಗೆ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಲು ಅತಿ ಹಿಂದುಳಿದ ಸ್ವಾಮೀಜಿಗಳ ನಿಯೋಗ ದೆಹಲಿಗೆ ತೆರಳಲಿದೆ. ಈ ಸಂಬಂಧ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ದೂರವಾಣಿ ಮೂಲಕ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತಿ ಹಿಂದುಳಿದ ಸ್ವಾಮೀಜಿಗಳಿಗೆ ಭರವಸೆ ನೀಡಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸ್ವಾಮೀಜಿಗಳಿಗೆ ಬೆಂಗಳೂರಿನಲ್ಲಿ ಶೀಘ್ರ ನಿವೇಶನ ಒದಗಿಸಿ ಗುರುಮಠ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.


ಮೇ ತಿಂಗಳಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಅತಿ ಹಿಂದುಳಿದ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಲಾಗಿದೆ.


ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಬೇಡಿಕೆಯಂತೆ ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಪ್ರತಿಷ್ಠಾಪನೆಗೆ ನಿವೇಶನ ನೀಡಲು ಒಪ್ಪಿಕೊಂಡಿದ್ದು, ಶೀಘ್ರವೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.


ಸಂಪುಟ ಪುನಾರಚನೆ ವೇಳೆ ಬೇಳೂರು ಗೋಪಾಲಕೃಷ್ಣ ಅವರಿಗೆ ಈಡಿಗ ಕೋಟಾದಲ್ಲಿ ಸಚಿವ ಸ್ಥಾನ ನೀಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.


ನಿಯೋಗದಲ್ಲಿ ಭಗೀರಥಾನಂದ ಸ್ವಾಮೀಜಿ, ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಹಾಗೂ ಮಂದಾರ ಮಠದ ಶ್ರೀ ಮಹಾಂತ ಮಹಾಸ್ವಾಮಿಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top