ನವದೆಹಲಿ: ಭಾರತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ನಡೆಯುತ್ತಿರುವ ವೇಗದ ಬೆಳವಣಿಗೆ “ನಿಜಕ್ಕೂ ಅಚ್ಚರಿದಾಯಕ” ಎಂದು ಸ್ಯಾಮ್ ಆಲ್ಟ್‌ಮನ್ ಅವರು ಪ್ರಶಂಸಿಸಿದ್ದಾರೆ. ಗುರುವಾರ ಮಾತನಾಡಿದ ಅವರು, ಭಾರತದ ತಂತ್ರಜ್ಞಾನ ಪರಿಸರದ ಮೇಲೆ ಭಾರಿ ವಿಶ್ವಾಸ ವ್ಯಕ್ತಪಡಿಸಿದರು.
ಎಐ ಮೂಲಸೌಕರ್ಯದಿಂದ ಹಿಡಿದು ಮಾದರಿ ಅಭಿವೃದ್ಧಿ ಹಾಗೂ ಅಪ್ಲಿಕೇಶನ್‌ಗಳವರೆಗೆ ಸಂಪೂರ್ಣ ಎಐ ಶ್ರೇಣಿಯಲ್ಲಿ ಹೂಡಿಕೆ ಮಾಡಲು ಭಾರತ ತೋರಿಸುತ್ತಿರುವ ದೃಢ ನಿಶ್ಚಯ ಗಮನಾರ್ಹವಾಗಿದೆ ಎಂದು ಆಲ್ಟ್‌ಮನ್ ಹೇಳಿದರು. ಜೊತೆಗೆ, ಭಾರತದಲ್ಲಿ ಎಐ ಸಾಧನಗಳ ಬಳಕೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಎಂದೂ ಅವರು ಅಭಿಪ್ರಾಯಪಟ್ಟರು.
“ಭಾರತದಲ್ಲಿ ಎಐಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆ ನಿಜಕ್ಕೂ ಅಚ್ಚರಿಯಾಯಕ. ಮೂಲಸೌಕರ್ಯ ಹಂತದಿಂದ ಮಾದರಿ ಹಂತ ಹಾಗೂ ಅದರ ಮೇಲಿನ ಅಪ್ಲಿಕೇಶನ್ ಹಂತದವರೆಗೆ ಹೂಡಿಕೆ ಮಾಡಲು ದೇಶ ತೋರಿಸುತ್ತಿರುವ ಬದ್ಧತೆ ಮತ್ತು ಜನರು ಈ ಸಾಧನಗಳನ್ನು ಅಳವಡಿಸಿಕೊಳ್ಳುತ್ತಿರುವ ವೇಗ ಅತ್ಯಂತ ಗಮನಾರ್ಹವಾಗಿದೆ,” ಎಂದು ಅವರು ಹೇಳಿದರು.
ಕಂಪ್ಯೂಟರ್ ಪ್ರೋಗ್ರಾಮಿಂಗ್‌ಗಾಗಿ ವಿನ್ಯಾಸಗೊಳಿಸಲಾದ ಓಪನ್‌ಎಐನ ವಿಶೇಷ ಎಐ ಸಾಧನ ‘ಕೋಡೆಕ್ಸ್’ಗೆ ಭಾರತವೇ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು, ಶೀಘ್ರದಲ್ಲೇ ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.
“ಕೋಡೆಕ್ಸ್‌ಗೆ ಭಾರತವೇ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಬಹುದು ಎಂದು ಯಾರೋ ನನಗೆ ಹೇಳಿದರು. ಇಷ್ಟೊಂದು ಉತ್ಸಾಹ ಮತ್ತು ವೇಗದೊಂದಿಗೆ ಎಐ ಅಳವಡಿಸಿಕೊಳ್ಳುತ್ತಿರುವ ಮತ್ತೊಂದು ದೇಶ ನನಗೆ ಗೊತ್ತಿಲ್ಲ. ಇದರಿಂದ ಅತ್ಯಂತ ಶಕ್ತಿಶಾಲಿ ಹೊಸ ತಲೆಮಾರಿನ ಸ್ಟಾರ್ಟ್‌ಅಪ್‌ಗಳು ಉದಯಿಸುವುದು ಖಚಿತ,” ಎಂದು ಆಲ್ಟ್‌ಮನ್ ಹೇಳಿದರು.
ಓಪನ್ ಎಐನ ‘ಸ್ಟಾರ್‌ಗೇಟ್’ ಎಐ ಮೂಲಸೌಕರ್ಯ ಯೋಜನೆ ಭಾರತಕ್ಕೆ ವಿಸ್ತರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದು ನಮಗಿಂತಲೂ ಹೆಚ್ಚು ಭಾರತದ ನಿರ್ಧಾರಕ್ಕೆ ಸಂಬಂಧಿಸಿದೆ. ಆದರೂ, ಇದು ಶೀಘ್ರವಾಗಿಯೇ ನಡೆಯುವುದನ್ನು ನಾವು ಇಷ್ಟಪಡುತ್ತೇವೆ” ಎಂದರು.
ಭಾರತದಲ್ಲಿ ಸುಮಾರು 100 ಬಿಲಿಯನ್ ಡಾಲರ್ ಮೌಲ್ಯದ ಎಐ ಮೂಲಸೌಕರ್ಯ ಹೂಡಿಕೆ ಯೋಜನೆಗಳಿದ್ದು, ಅವುಗಳಲ್ಲಿ ಪಾಲುದಾರಿಕೆಗೆ OpenAI ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಲ್ಟ್‌ಮನ್, “ಭಾರತದೊಂದಿಗೆ ದೊಡ್ಡ ಮಟ್ಟದಲ್ಲಿ ಸಹಭಾಗಿತ್ವಕ್ಕೆ ನಾವು ಸಂತೋಷದಿಂದ ಸಿದ್ಧ” ಎಂದು ಹೇಳಿದರು.
ಎಐ ವಿಷಯ ಲೇಬಲಿಂಗ್, ವಯೋಮಿತಿ ನಿಯಂತ್ರಣ (ಏಜ್-ಗೇಟಿಂಗ್) ಮೊದಲಾದ ನಿಯಂತ್ರಣ ಕ್ರಮಗಳ ಬಗ್ಗೆ ಮಾತನಾಡಿದ ಅವರು, ಪ್ರತಿ ದೇಶವೂ ವಿಭಿನ್ನ ವಿಧಾನಗಳನ್ನು ಪ್ರಯೋಗಿಸಲಿದೆ ಎಂದರು. ಸಮಯದೊಂದಿಗೆ ಯಾವ ನಿಯಮಗಳು ಪರಿಣಾಮಕಾರಿ ಎಂಬುದರ ಬಗ್ಗೆ ಪಾಠಗಳು ದೊರೆಯಲಿದ್ದು, ಭವಿಷ್ಯದಲ್ಲಿ ಕೆಲ ಮಟ್ಟಿನ ಜಾಗತಿಕ ಮಾನದಂಡಗಳು ರೂಪುಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಉದ್ಯೋಗ ಕ್ಷೇತ್ರದ ಮೇಲೆ ಎಐಯ ಪರಿಣಾಮದ ಕುರಿತು ಮಾತನಾಡಿದ ಆಲ್ಟ್‌ಮನ್, ಅನೇಕ ಉದ್ಯೋಗಗಳಲ್ಲಿ ಭಾಗಶಃ ಬದಲಾವಣೆ ಆಗಲಿದ್ದು, ಕೆಲ ಉದ್ಯೋಗಗಳು ಸಂಪೂರ್ಣವಾಗಿ ರೂಪಾಂತರಗೊಳ್ಳಲಿವೆ ಹಾಗೂ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು. ಹೊಂದಿಕೊಳ್ಳುವ ಸಾಮರ್ಥ್ಯ, ಸ್ಥೈರ್ಯ ಮತ್ತು ಎಐ ಸಾಧನಗಳ ಬಳಕೆಯಲ್ಲಿ ಪ್ರಾವೀಣ್ಯತೆ ಅತ್ಯಂತ ಅಗತ್ಯ ಕೌಶಲ್ಯಗಳಾಗಿವೆ ಎಂದು ಅವರು ಹೇಳಿದರು.
ಶಿಕ್ಷಣ ಕ್ಷೇತ್ರದ ಮೇಲೆ ಎಐಯ ಬೌದ್ಧಿಕ ಪರಿಣಾಮದ ಕುರಿತು ಮಾತನಾಡಿದ ಅವರು, ಗೂಗಲ್ ಪ್ರಾರಂಭದ ದಿನಗಳಲ್ಲಿ ಶಿಕ್ಷಕರು ಆತಂಕಗೊಂಡಿದ್ದನ್ನು ನೆನಪಿಸಿದರು. ಆಗಲೂ ಸಮಾಜ ಹೊಂದಿಕೊಂಡಂತೆ ಈಗಲೂ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
“ಸಾಧನಗಳು ಇನ್ನಷ್ಟು ಶಕ್ತಿಶಾಲಿಯಾಗುತ್ತಿದಂತೆ, ವಿದ್ಯಾರ್ಥಿಗಳಿಂದಲೂ ಹೆಚ್ಚಿನ ಚಿಂತನಾ ಶಕ್ತಿ ಮತ್ತು ಸೃಜನಶೀಲತೆಯನ್ನು ನಿರೀಕ್ಷಿಸಬೇಕು” ಎಂದು ಅವರು ಹೇಳಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


