ಪ್ಲಾಸ್ಟಿಕ್ ಬೇಡ ಅಂತಾರೆ, ಪ್ಲಾಸ್ಟಿಕ್‌ನಲ್ಲೇ ಕುಡೀತಾರೆ....!

Upayuktha
0

 ಕೈ ಪಕ್ಷ ಹೇಳುವುದು ಒಂದು, ಮಾಡುವುದು ಇನ್ನೊಂದು ಅಂತಾಗುವುದು ಬೇಡ...





ಪ್ಲಾಸ್ಟಿಕ್ ಬಾಟಲಿ ನೀರು ಆರೋಗ್ಯಕ್ಕೆ ಹಾನಿಕರ. ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿ ನೀರಿನಲ್ಲಿ 2,40,000 ಕ್ಕೂ ಹೆಚ್ಚು ಪ್ಲಾಸ್ಟಿಕ್ ಮೈಕ್ರೋಕಣಗಳು ಇದ್ದು, ಮನುಷ್ಯರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿದ್ದು, ಕ್ಯಾನ್ಸರ್, ಬಂಜೆತನ, ಅಂಗವಿಕಲ ಮಕ್ಕಳ ಜನನಗಳಿಗೂ ಕಾರಣವಾಗುತ್ತಿವೆ.  ನೀರಿನ ಬಾಟಲಿಯಲ್ಲಿನ ಪ್ಲಾಸ್ಟಿಕ್ ಮೈಕ್ರೋ ಕಣಗಳು ಜೀವಿಗಳ ಬೆಳವಣಿಗೆ-ಕಾರ್ಯನಿರ್ವಹಣೆ -ಸಂತಾನೋತ್ಪತ್ತಿಗೆ ಅಗತ್ಯವಾದ ಆನುವಂಶಿಕ ಮಾಹಿತಿಯನ್ನು ಹೊತ್ತಿರುವ ಮೂಲ ಅಣುವಾಗಿರುವ DNA ಮೇಲೂ ಪ್ರಭಾವ ಬೀರುತ್ತಿವೆ ಎಂದು ಸಂಶೋಧನಾ ವರದಿಗಳು ಮಾಹಿತಿ ಕೊಡುತ್ತಿವೆ.


ಪರಿಸರದ ಸಕಲ ಜೀವ ವೈವಿಧ್ಯತೆಯ ಮೇಲೂ, ನೀರು-ಮಣ್ಣು-ಗಾಳಿಯು ಕಲುಷಿತಗೊಳ್ಳಲೂ ನೀರಿನ ಬಾಟಲಿಯ ಪ್ಲಾಸ್ಟಿಕ್ ತ್ಯಾಜ್ಯ ಕಾರಣವಾಗುತ್ತಿವೆ.


ಇವೆಲ್ಲ ಮಾಹಿತಿಗಳನ್ನು ಸರಕಾರದ ಗಮನಕ್ಕೆ ತಂದ ಪರಿಣಾಮ ಮತ್ತು ಒತ್ತಾಯದ ಪರಿಣಾಮದಿಂದ, ಸ್ವತಃ ಕರ್ನಾಟಕದ ಮುಖ್ಯಮಂತ್ರಿಗಳೇ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ ಬಳಸದಂತೆ ಅಧಿಕೃತ ಸೂಚನೆ ಹೊರಡಿಸಿದ್ದಾರೆ.


ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಕೆ ಮಾಡುವಂತೆ ಸೂಚನೆಗಳ ಟಿಪ್ಪಣಿಯನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳೇ ನೀಡಿದ್ದಾರೆ. ಈ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.  


ಮುಖ್ಯಮಂತ್ರಿಗಳ ಈ ಟಿಪ್ಪಣಿಯನ್ನು ಉಲ್ಲೇಖಿಸಿ, ಸರಕಾರದ ಅಧೀನ ಕಾರ್ಯದರ್ಶಿ ಬಿ.ಕೆ. ಸಂದೀಪ್‌ರವರು ಮೊನ್ನೆ ಜನವರಿ 31, 2026 ಕ್ಕೆ ಸರಕಾರಿ ಇಲಾಖೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ಮಾಡಿದ್ದಾರೆ.  


ಇದಿಷ್ಟು ಒಂದು ಕಡೆಯಾದರೆ, ಮುಖ್ಯಮಂತ್ರಿಗಳೇ ಭಾಗವಹಿಸುವ ಅವರ ಪಕ್ಷದ ಸಭೆಗಳಲ್ಲಿ, ಅವರದೇ ಪಕ್ಷದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಕೆ ಮಾಡದೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುತ್ತಿರುವುದು ಟಿವಿಗಳಲ್ಲಿ ಬರುವ ಸುದ್ಧಿಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.


ದಯವಿಟ್ಟು ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ತನ್ನದೇ ಸರಕಾರ ನೀಡಿದ ಆದೇಶವನ್ನು  ತಮ್ಮ ಪಕ್ಷದ ಸಭೆ ಸಮಾರಂಭಗಳಲ್ಲೂ, ಕಾರ್ಯಕ್ರಮಗಳಲ್ಲೂ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಕೆ ಮಾಡುವಂತೆ ತಕ್ಷಣ ಕ್ರಮ ಕೈಗೊಂಡು ಮಾದರಿಯಾಗಲಿ. ಹಾಗೂ ರಾಜ್ಯ ಮತ್ತು ದೇಶದ ಸರಕಾರಿ ಕಛೇರಿಗಳ ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳಲ್ಲಿ ಕಟ್ಟು ನಿಟ್ಟಾಗಿ ಕ್ರಮ ಕೈಗೊಂಡು ಮಾದರಿಯಾಗುವಂತೆ ರಾಜ್ಯ ಸರಕಾರ ಪ್ರಯತ್ನ ಮಾಡಲಿ.


ಈಗಾಗಲೆ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ನಿಷೇಧವನ್ನು ಸರಕಾರಿ ಕಾರ್ಯಕ್ರಮಗಳಲ್ಲಿ ನ್ಯಾಯಾಂಗದ ಕಾನೂನು ಮೂಲಕ ಜಾರಿ ಮಾಡಿದ ಮೇಲೆ, ಶಾಸಕಾಂಗ ಕಾರ್ಯಾಂಗಗಳಲ್ಲೂ ಅನುಷ್ಠಾನಕ್ಕೆ ಬರುವಂತೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಪ್ರಾಮಾಣಿಕ ಪ್ರಯತ್ನ ಮಾಡಲಿ.


ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲ ಮಂತ್ರಿಗಳು ಮತ್ತು ಶಾಸಕರುಗಳು ತಾವು ಭಾಗವಹಿಸುವ ಸಭೆ ಸಮಾರಂಭಗಳ ಆಸನಗಳಲ್ಲಿ ಕೂರುವ ಮೊದಲು, ಟೇಬಲ್ ಮೇಲೆ ನೀರಿಗೆ ಪ್ಲಾಸ್ಟಿಕ್ ಬಾಟಲಿ ಬದಲು, ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರಗಳನ್ನು ಬಳಕೆ ಮಾಡಿದ್ದನ್ನು ಖಚಿತಪಡಿಸಿಕೊಳ್ಳಲಿ.


ಹೇಳುವುದು ವೇದಾಂತ ಕುಡಿಯುವುದು ಪ್ಲಾಸ್ಟಿಕ್ ಬಾಟಲಿ ನೀರು!! ಅಂತಾಗುವುದು ಬೇಡ.  


ಕರ್ನಾಟಕದ ಮುಖ್ಯಮಂತ್ರಿಗಳು ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ ಬಳಸದಂತೆ ಅಧಿಕೃತ ಸೂಚನೆ ಹೊರಡಿಸಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top