ಶರಣಾಗತಿಯ ಶಕ್ತಿ– ಕುರುಕ್ಷೇತ್ರದಿಂದ ಜೀವನದವರೆಗೆ

Upayuktha
0


ವಿಶ್ವ ರೂಪಧರ, ಲೀಲಾವತಾರಿ ಶ್ರೀ ಕೃಷ್ಣ ತೋರಿ ಕೊಟ್ಟ ಅದ್ಭುತ ಜೀವನ ಕಥನವಿದು. ತ್ಯಾಗೇನೈಕೇ ಅಮೃತತ್ವ ಮಾನಷುಃ, ಅಂದರೆ ತ್ಯಾಗವೊಂದೇ ಅಮೃತತ್ವಕ್ಕೆ ರಹದಾರಿ ಎಂದು ಸಾರಿ ಸಾರಿ ಹೇಳುವ ಮಹಾ ಕಥನವಿದು. ಜೀವನದ ಏರಿಳಿತಗಳಲ್ಲಿ ಸಮಚಿತ್ತವೇ ಸತ್ಯವೆಂದು ಸಾರುವ ಕಥನವಿದು.  


ಕುರುಕ್ಷೇತ್ರ ಸಂಪೂರ್ಣ ತಯಾರಾಗಿತ್ತು... ಇನ್ನೇನು ರಣಭೇರಿ ಬಾರಿಸಲೊಂದೇ ಬಾಕಿಯಿತ್ತು. ಧರ್ಮ ಅಧರ್ಮಗಳ ಮಧ್ಯೆ ಸಂಸಾರವೊಂದು ಇಬ್ಬಾಗವಾಗಿ ನಿಂತಿತ್ತು. ಒಂದು ಬದಿಯಲ್ಲಿ ಪಂಚ ಪಾಂಡವರು ಮತ್ತೊಂದು ಕಡೆಯಲ್ಲಿ ಅಪಾರ ಕೌರವ ಪಡೆ, ಅಂತಿಮ ಸತ್ಯೋದ್ಧಾರಕ್ಕಾಗಿ  ಮಧ್ಯೆ ಜಗದೋಧ್ದಾರಕ ಶ್ರೀ ಕೃಷ್ಣ. 


(ಹೇ ಗೋವಿಂದ  ಹೇ ಮುರಾರಿ, ನಿನ್ನ ಲೀಲೆ ಅಪಾರ, ಯಾರು ನಿನಗೆ ಶರಣಾದರೋ ಅವರು ಎಲ್ಲವನ್ನೂ ಪಡೆದರು, ಯಾರು ನಿನ್ನನ್ನು ಮರೆತರೋ, ಅವರನ್ನು ಈ ಜಗವೂ ತ್ಯಜಿಸಿತು... ಹೇ ಗೋವಿಂದ ಹೇ ಮುರಾರಿ ನಿನ್ನ ಲೀಲೆ ಅಪಾರ)


ಕೃಷ್ಣನ ಬಳಿಗೆ ಅಹಂಕಾರ ತಲೆಗೇರಿದ, ಅಭಿಮಾನದ ಮದವೇರಿದ ದುರ್ಯೋದನ ಮೊದಲು ಬಂದು, ತಲೆಯೆತ್ತಿ,ಎದೆಯೆತ್ತಿ ನಿಂತಿದ್ದ. ಅನಂತರ  ಅರ್ಜುನ ಶರಣಾಗತ ಬಾಲಕನ ತೆರದಿ ಬಂದವನೇ  ಕೃಷ್ಣನ ಪದತಲದಲ್ಲಿ ವಿನೀತನಾಗಿ ಕುಳಿತಿದ್ದ. ಕೃಷ್ಣ ಕಣ್ಣು ತೆರೆದಾಗ ಮೊದಲು ಕಂಡದ್ದೇ ಅರ್ಜುನ. ಆಗ ದುರ್ಯೋಧನ ಮೊದಲು ಬಂದವ ನಾನು, ನನ್ನದೇ ಮೊದಲ ಹಕ್ಕು ಎಂದು ಮಂಡಿಸಿದಾಗ ಧುರ್ಯೋಧನನ ಅಹಂಕಾರ ತಲೆಗೇರಿತ್ತು.... ಆದರೆ ಚರಣಗಳಲ್ಲಿ ಶರಣಾದ ಪಾಂಡವರಿಗೆ ದೇವರ ಕೃಪೆ ಮೊದಲಿತ್ತು.... ಎಂದೆಂದಿಗೂ ಅವರ ಕೈ ಹಿಡಿದು ನಡೆಸುವವನಿದ್ದ ಕೃಷ್ಣ ಪರಮಾತ್ಮ.



ಎದುರಿದ್ದ ಈರ್ವರ ಮಾತನ್ನೂ ನಗುತ್ತಾ ಆಲಿಸಿದ ಮುರಾರಿ... .ಒಂದು ಕಡೆಯಲ್ಲಿ ಶಸ್ತ್ರ ಸಜ್ಜಿತ ನನ್ನ ಸೈನ್ಯ ಮತ್ತೊಂದೆಡೆಯಲ್ಲಿ ಶಸ್ತ್ರ ರಹಿತನಾಗಿ ನಾನೊಬ್ಬನೇ , ಹೇಳಿ ಯಾರಿಗೇನು ಬೇಕು ಎಂದಾಗ ದುರ್ಯೋಧನ ಹರ್ಷಗೊಂಡು ನನಗೆ ಸೇನೆಯೇ ಇರಲಿ ಕೃಷ್ಣನೊಬ್ಬನಿಂದ ಈ ಪಾಂಡವರು ಏನು ತಾನೇ ಪಡೆದಾರೆಂದು ಅಲೋಚಿಸುತ್ತಿರುವಾಗ ಪಾಂಡವರು ಕೃಷ್ಣನಿಗೆ ಶರಣಾಗತರಾಗಿದ್ದರು. ಅರ್ಜುನ ಕೃಷ್ಣನ ಚರಣಗಳನ್ನು ಹಿಡಿದು ಹೇ ನಾಥಾ, ರಣರಂಗದಲ್ಲಿ ನಮಗೆ ನಿನ್ನ ಸಂಗವೊಂದರ ಹೊರತು ಸೇನೆಯೂ ಬೇಡ, ರಾಜ್ಯವೂ ಬೇಡ, ಕೇವಲ ನೀನೊಲಿದಿದ್ದರೆ ಸಾಕು ಎಂದು ಪಾಂಡವರೈವರೂ ಪ್ರಾರ್ಥಿಸುತಿದ್ದರು.


(ಹೇ ಗೋವಿಂದ ಹೇ ಮುರಾರಿ, ನಿನ್ನ ಲೀಲೆ ಅಪಾರ, ನಿನ್ನ ಬಯಸಿದವರಿಗೆ ಎಲ್ಲಾ ನೀಡಿರುವೆ, ನಿನ್ನ ಮರೆತವರನ್ನು ಈ ಜಗವೂ ತ್ಯಜಿಸಿತು.ಹೇ ಗೋವಿಂದ ಹೇ ಮುರಾರಿ, ನಿನ್ನ ಲೀಲೆ ಅಪಾರ)


ಕೊನೆಗೂ ತಮ್ಮಲ್ಲಿ  ಅಪಾರ ಸೈನ್ಯವಿದ್ದವರು ಗೆಲ್ಲಲೇ ಇಲ್ಲ. ಕೇಶವನ ಪದತಲದಲ್ಲಿ ಶರಣಾಗಿದ್ದವರು ಎಲ್ಲವನ್ನೂ ಪಡೆದಿದ್ದರು. 


(ಹೇ ನಾಥ ನಾರಾಯಣ, ವಾಸುದೇವ, ನಿನ್ನ ಮಹಿಮೆ ಅಪಾರ, ನಿನ್ನ ಕೃಪೆ ಅಪಾರ)


ನಮ್ಮ ನಿತ್ಯಜೀವನದಲ್ಲೂ ಇದೇ ಪಾಠ. ಇದು ಯಾವ ಕಾಲಕ್ಕೂ ಪರಮ ಸತ್ಯ, ಸಂಪತ್ತು, ಅಹಂಕಾರ ,ದರ್ಪ, ಮದ, ವ್ಯಾಮೋಹಗಳು,  ದುಃಖ , ಸೋಲು, ಯಾತನೆಯನ್ನೇ ಕೊಟ್ಟೀತಷ್ಟೇ  ಅಲ್ಲದೇ ಸುಖ ಸಮಾಧಾನ ನೆಮ್ಮದಿ  ಕೊಡಲಾರದು. ನಾನು, ನನ್ನಿಂದ, ಎಲ್ಲವೂ ನನಗಾಗಿ ಎಂಬ ಮಾನಸಿಕತೆ ಕಳೆದು...


ಈಶಾವಾಸ್ಯಮಿದಂ ಸರ್ವಂ

ಯತ್ಕಿಂಚ ಜಗತ್ಯಾಂ ಜಗತ್

ತೇನ ತ್ಯಕ್ತೇನ ಭುಂಜೀತಾಃ

ಮಾಗೃಧಃಕಸ್ಯಸ್ವಿದ್ಧನಮ್.....


ಈಶನಾವರಿಸಿಹನೀ ಜಗವನು, ಎಲ್ಲವೂ ಈಶ ಕೃಪೆಯೆಂದು ಅರಿತು, ತ್ಯಾಗವೊಂದೇ ಸತ್ಯವೆಂದರಿತು, ಪರ ವ್ಯಾಮೋಹ  ತ್ಯಜಿಸಿದಾಗ ನಿಜ ನೆಮ್ಮದಿ ಲಭಿಸೀತು. 


-  ಟಿ. ಆರ್ ಸುರೇಶ್‌ಚಂದ್ರ (ಟಿಆರ್ಯಸ್)


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top