ತಂತ್ರಜ್ಞಾನ–ಸಂಸ್ಕೃತಿಯ ಸಮ್ಮಿಲನವೇ ಭಾರತದ ಜಾಗತಿಕ ಗುರುತು: ವಿವಾಸ್ವನ್ ಶಾಸ್ತ್ರಿ

Upayuktha
0


ಬೆಂಗಳೂರು: ತಂತ್ರಜ್ಞಾನ ಮತ್ತು ಸಂಸ್ಕೃತಿ ಅವಿನಾಭಾವವಾಗಿ ಸಾಗಿದಾಗ ಮಾತ್ರ ಭಾರತದಂತಹ ರಾಷ್ಟ್ರಗಳು ವಿಶ್ವಮಟ್ಟದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಜಿಇ ಹೆಲ್ತ್‌ಕೇರ್ ಉಪಾಧ್ಯಕ್ಷ ವಿವಾಸ್ವನ್  ಶಾಸ್ತ್ರಿ ಅಭಿಪ್ರಾಯಪಟ್ಟರು.


ಅವರು ಇಂದು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಹಾಗೂ ಸಂಸ್ಕೃತಿ ಉತ್ಸವ ಅನಾದ್ಯಂತ–2026 ಅನ್ನು ವಿಧಿವತ್ತಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.


“ಭಾರತ ಇಂದು ಇಡೀ ಜಗತ್ತಿನಲ್ಲಿಯೇ ತಂತ್ರಜ್ಞಾನದ ಶಕ್ತಿಕೇಂದ್ರವಾಗುವ ದಿಕ್ಕಿನಲ್ಲಿ ದ್ರುತಗತಿಯಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ನಮ್ಮ ಸಂಸ್ಕೃತಿಯ ನಿರಂತರ ಸಾಂಗತ್ಯ, ಸ್ವದೇಶೀಕರಣದ ಚಿಂತನೆ, ಪರಂಪರಾಗತ ಜ್ಞಾನ ಹಾಗೂ ಬಹುತ್ವದ ಮೌಲ್ಯಗಳೇ ಪ್ರಮುಖ ಕಾರಣಗಳಾಗಿವೆ. ನಮ್ಮ ನೆಲದ ಔದಾರ್ಯ ಮತ್ತು ಸಾಂಸ್ಕೃತಿಕ ಅರಿವು ಭಾರತದ ತಂತ್ರಜ್ಞಾನ ಆವಿಷ್ಕಾರಗಳಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿರುವುದರಿಂದಲೇ ಭಾರತ ಜಾಗತಿಕ ವೇದಿಕೆಯಲ್ಲಿ ವಿಭಿನ್ನ ಸ್ಥಾನವನ್ನು ಗಳಿಸಿದೆ,” ಎಂದು ಅವರು ಹೇಳಿದರು.


ಮುಂದುವರಿದು ಮಾತನಾಡಿದ ಅವರು, “ಪ್ರತಿಯೊಬ್ಬ ತಂತ್ರಜ್ಞಾನ ವಿದ್ಯಾರ್ಥಿಯೂ ತನ್ನ ಶಕ್ತಿಯನ್ನು ಗುರುತಿಸಿ, ಅದರಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಮುನ್ನಡೆಯಬೇಕು. ಆಗ ವೈಯಕ್ತಿಕ ಶಕ್ತಿಯೊಂದಿಗೆ ಕೌಶಲ್ಯಗಳು ಒಗ್ಗೂಡುತ್ತವೆ. ಅಲ್ಲದೆ, ವ್ಯಕ್ತಿಯನ್ನು ಹಿಂದುಗ್ಗಿಸುವ ದುರ್ಬಲತೆಗಳನ್ನು ನಿಯಂತ್ರಿಸಲು ಸಹ ಇದು ನೆರವಾಗುತ್ತದೆ. ಅಂತಹ ಸ್ಥಿತಿಯಲ್ಲಿ ಯಶಸ್ಸು ಅನಿವಾರ್ಯ,” ಎಂದು ಹೇಳಿದರು.


ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಚಿತ್ರ ಹಾಗೂ ಕಿರುತೆರೆ ನಟ ವಿರಾಟ್ ಮಾತನಾಡಿ, “ಸ್ವತಃ ಇಂಜಿನಿಯರಿಂಗ್ ಪದವೀಧರನಾದ ನನಗೆ ಕಲಾರಂಗದಲ್ಲಿ ದೃಢ ಹೆಜ್ಜೆ ಇಡಲು ತಂತ್ರಜ್ಞಾನದ ಅರಿವು ಹಾಗೂ ತಾರ್ಕಿಕ ಚಿಂತನೆ ಬಹಳ ನೆರವಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಧ್ಯಯನ ಯಾವುದೇ ಕ್ಷೇತ್ರದಲ್ಲಿಯೂ ಆತ್ಮವಿಶ್ವಾಸದಿಂದ ಮುನ್ನಡೆಯಲು ಪ್ರೇರಣೆಯಾಗುತ್ತದೆ,” ಎಂದು ತಿಳಿಸಿದರು.


ಕಾರ್ಯಕ್ರಮದ ಆರಂಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಅವರು ಸ್ವಾಗತ ಭಾಷಣ ಮಾಡಿ, ಸಂಸ್ಥೆಯ ಶೈಕ್ಷಣಿಕ ಸಾಧನೆಗಳು ಹಾಗೂ ‘ಅನಾದ್ಯಂತ’ ಉತ್ಸವ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಹಂತಕ್ಕೆ ತಲುಪಿರುವ ಪ್ರಗತಿಯ ಕುರಿತು ವಿವರಿಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ ವಹಿಸಿದ್ದರು. ಅವರು ಮಾತನಾಡಿ, “ಅನಾದ್ಯಂತದಂತಹ ತಂತ್ರಜ್ಞಾನ–ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಮನೋಭಾವವನ್ನು ಬೆಳೆಸುವ ವೇಗವರ್ಧಕಗಳಂತೆ ಕಾರ್ಯನಿರ್ವಹಿಸುತ್ತವೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಉತ್ಸವದ ಸಂಯೋಜಕರಾದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥೆ ಡಾ. ಹಿತಾ ಡಿ. ಶೆಟ್ಟಿ, ಡಾ. ರಾಮಚಂದ್ರ ಎ.ಸಿ., ಪಠ್ಯಕ್ರಮ ಅಭಿವೃದ್ಧಿ ಮತ್ತು ಶೈಕ್ಷಣಿಕ ನಿರ್ದೇಶಕ ಡಾ. ಜೆ. ಸುಧೀರ್ ರೆಡ್ಡಿ, ಹಾಗೂ ವಿದ್ಯಾರ್ಥಿ ಸಂಯೋಜಕರಾದ ಅನುಶ್ರವ ಮತ್ತು ಹೃದ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ದೇಶದ ವಿವಿಧ ಭಾಗಗಳ ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರತಿನಿಧಿಸುವ ಆರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಉತ್ಸವದ ಅಂಗವಾಗಿ ತಂತ್ರಜ್ಞಾನ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕೊರಿಯೋ ನೈಟ್, ಫ್ಯಾಶನ್ ಶೋ, ಕ್ವಿಜ್, ಕವನ ರಚನೆ, ರೀಲ್ ಮೇಕಿಂಗ್, ಮೊಬೈಲ್ ಫೋಟೋಗ್ರಫಿ, ಏಕವ್ಯಕ್ತಿ ಗಾಯನ ಮತ್ತು ನರ್ತನ, ಏಕಪಾತ್ರ ಅಭಿನಯ, ಪ್ರೋ ಶೋ, ಡಿಬೇಟ್ ಹಾಗೂ ಡಿಜೆ ನೈಟ್ ಸೇರಿದಂತೆ ಹಲವು ಆಕರ್ಷಕ ಕಾರ್ಯಕ್ರಮಗಳು ಜರುಗಲಿವೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top