ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಯ ಆತ್ಮಹತ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲೂ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಚರ್ಚೆಯ ಕೇಂದ್ರಬಿಂದು- ಅವರ ಸ್ಲೋವಾಕಿಯಾ ದೇಶದ ಗೌರವಾನ್ವಿತ ಕಾನ್ಸಲ್ ಹುದ್ದೆ. ಈ ಹುದ್ದೆಯ ಸ್ವರೂಪ, ಅದರೊಂದಿಗೆ ಬರುವ ಅಧಿಕಾರಗಳು ಮತ್ತು ಮೇಲ್ವಿಚಾರಣೆಯ ಕೊರತೆ - ಇವೆಲ್ಲವೂ ಈಗ ಸಾರ್ವಜನಿಕ ಗಮನಕ್ಕೆ ಬಂದಿವೆ.
ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ಡಾ. ರಾಯ್ ಸಿ.ಜೆ. ಅವರನ್ನು 2017ರಲ್ಲಿ ಸ್ಲೋವಾಕ್ ಗಣರಾಜ್ಯದ ಗೌರವಾನ್ವಿತ ಕಾನ್ಸಲ್ ಆಗಿ ನೇಮಿಸಲಾಗಿತ್ತು. ಜನವರಿ 2026ರಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧನೆಗಳ ಹಿನ್ನೆಲೆ ಅವರ ಆತ್ಮಹತ್ಯೆ ನಡೆದ ಬಳಿಕ, ಅವರು ಹಿಂದಿನ ಸಂದರ್ಭಗಳಲ್ಲಿ ತಮ್ಮ ರಾಜತಾಂತ್ರಿಕ ಸ್ಥಾನಮಾನವನ್ನು ಅಧಿಕಾರಿಗಳ ಮುಂದೆ ಉಲ್ಲೇಖಿಸಿದ್ದ ವಿಚಾರ ಬಹಿರಂಗವಾಯಿತು. ಇದರಿಂದ ‘ಗೌರವಾನ್ವಿತ ಕಾನ್ಸಲ್’ ಎಂಬ ಹುದ್ದೆಯ ನಿಜ ಸ್ವರೂಪವೇ ಚರ್ಚೆಗೆ ಬಂದಿತು.
ಸಂಬಳವಿಲ್ಲದ ಹುದ್ದೆ, ಆದರೆ ಅಪಾರ ಅಧಿಕಾರ
ಗೌರವಾನ್ವಿತ ಕಾನ್ಸಲ್‌ಗಳು ಪೂರ್ಣಕಾಲಿಕ ರಾಜತಾಂತ್ರಿಕರಲ್ಲ. ಅವರು ಭಾಗಕಾಲಿಕ, ಸಂಬಳರಹಿತ ಪ್ರತಿನಿಧಿಗಳು. ಸಾಮಾನ್ಯವಾಗಿ ಸಣ್ಣ ರಾಷ್ಟ್ರಗಳು ಅಥವಾ ವಿದೇಶದಲ್ಲಿ ರಾಯಭಾರ ಕಚೇರಿ ಸ್ಥಾಪಿಸಲು ಸಾಧ್ಯವಿಲ್ಲದ ದೇಶಗಳು ಈ ರೀತಿಯ ನೇಮಕಾತಿಗಳನ್ನು ಮಾಡುತ್ತವೆ. ಆದರೆ, ಕಾರ್ಯಭಾರ ಸೀಮಿತವಾಗಿದ್ದರೂ, ಇವರಿಗೆ ದೊರೆಯುವ ಅಧಿಕಾರಗಳು ಅಚ್ಚರಿ ಮೂಡಿಸುವಂತಿವೆ.
ಅಂತರರಾಷ್ಟ್ರೀಯ ಒಪ್ಪಂದಗಳ ಪ್ರಕಾರ, ಇವರ ಕಚೇರಿ ದಾಖಲೆಗಳು, ಪತ್ರವ್ಯವಹಾರ ಮತ್ತು ‘ಡಿಪ್ಲೊಮ್ಯಾಟಿಕ್ ಪೌಚ್’ಗಳು ಯಾವುದೇ ಶೋಧನೆಗೆ ಒಳಪಡುವುದಿಲ್ಲ. ಗಡಿಗಳಾಚೆ ಸಾಗುವ ಈ ಪೌಚ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸುವಂತಿಲ್ಲ. ಇದೇ ಅಧಿಕಾರಗಳು ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತಿರುವುದು ಆತಂಕಕಾರಿ ಸಂಗತಿ.
ಕೇರಳದ ಚಿನ್ನ ಕಳ್ಳಸಾಗಣೆ: ವ್ಯವಸ್ಥೆಯ ವೈಫಲ್ಯ
ಈ ಚರ್ಚೆಯ ಸಂದರ್ಭದಲ್ಲಿ, 2020ರಲ್ಲಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಚಿನ್ನ ಕಳ್ಳಸಾಗಣೆ ಪ್ರಕರಣ ಮತ್ತೆ ನೆನಪಿಗೆ ಬರುತ್ತದೆ. ಡಿಪ್ಲೊಮ್ಯಾಟಿಕ್ ಬ್ಯಾಗೇಜ್ ಮೂಲಕ ಸುಮಾರು 30 ಕೆ.ಜಿ. ಚಿನ್ನ ಪತ್ತೆಯಾಗಿತ್ತು. ತನಿಖೆಯ ಪ್ರಕಾರ, ಒಂದೇ ಮಾರ್ಗವನ್ನು ಬಳಸಿ ಕನಿಷ್ಠ 180 ಕೆ.ಜಿ. ಚಿನ್ನವನ್ನು ಹಲವು ಬಾರಿ ಕಳ್ಳಸಾಗಣೆ ಮಾಡಲಾಗಿತ್ತು.
ಡಿಪ್ಲೊಮ್ಯಾಟಿಕ್ ಬ್ಯಾಗ್‌ಗಳಿಗೆ ಕಳುಹಿಸುವ ದೇಶದ ವಿದೇಶಾಂಗ ಸಚಿವಾಲಯದ ಅನುಮತಿ ಮತ್ತು ಸ್ವೀಕರಿಸುವ ಕಾನ್ಸುಲೇಟ್‌ನ ದೃಢೀಕರಣ ಅಗತ್ಯ. ಈ ಪ್ರಕರಣದಲ್ಲಿ ಎಲ್ಲಾ ಅಧಿಕೃತ ಅನುಮತಿಗಳೂ ಇದ್ದವು. ಅಂದರೆ, ಕಾನೂನುಬದ್ಧ ವ್ಯವಸ್ಥೆಯೊಳಗೇ ಅಕ್ರಮ ನಡೆದಿತ್ತು. ಈ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು ವೃತ್ತಿಪರ ರಾಜತಾಂತ್ರಿಕರು. ಆದರೆ ಪ್ರಶ್ನೆ ಉಳಿಯುತ್ತದೆ- ಇಂತಹ ಅಧಿಕಾರಗಳು ಗೌರವಾನ್ವಿತ ಕಾನ್ಸಲ್‌ಗಳ ಕೈಗೆ ಬಂದರೆ ಪರಿಣಾಮವೇನು?
‘ಶ್ಯಾಡೋ ಡಿಪ್ಲೊಮ್ಯಾಟ್ಸ್’ ಎಂಬ ಆತಂಕಕಾರಿ ಪದ
ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ICIJ) ಗೌರವಾನ್ವಿತ ಕಾನ್ಸಲ್‌ಗಳನ್ನು ‘ಶ್ಯಾಡೋ ಡಿಪ್ಲೊಮ್ಯಾಟ್ಸ್’ ಎಂದು ಕರೆಯುತ್ತದೆ. 2022ರಲ್ಲಿ ಪ್ರಕಟಿಸಿದ ತನಿಖಾ ವರದಿಯಲ್ಲಿ, ಜಗತ್ತಿನಾದ್ಯಂತ ಕನಿಷ್ಠ 500 ಪ್ರಸ್ತುತ ಹಾಗೂ ಮಾಜಿ ಗೌರವಾನ್ವಿತ ಕಾನ್ಸಲ್‌ಗಳು ಅಪರಾಧ ಆರೋಪಗಳು ಅಥವಾ ಗಂಭೀರ ವಿವಾದಗಳಲ್ಲಿ ಸಿಲುಕಿದ್ದರೆಂದು ತಿಳಿಸಿದೆ.
ಮಾದಕ ವಸ್ತು ಸಾಗಣೆದಾರರು, ಹಣ ಅಕ್ರಮ ವರ್ಗಾವಣೆ ಆರೋಪಿಗಳು, ಲೈಂಗಿಕ ಅಪರಾಧಿಗಳು, ಶಸ್ತ್ರಾಸ್ತ್ರ ವ್ಯಾಪಾರಿಗಳು- ಇಂತಹವರೂ ಈ ಹುದ್ದೆಗಳನ್ನು ಅಲಂಕರಿಸಿರುವ ಉದಾಹರಣೆಗಳು ದಾಖಲಾಗಿವೆ. ಇಂದು ಈ ಹುದ್ದೆ ಎಷ್ಟರ ಮಟ್ಟಿಗೆ ಆಕರ್ಷಕವಾಗಿದೆ ಎಂದರೆ, ಹಣ ಪಡೆದು ಗೌರವಾನ್ವಿತ ಕಾನ್ಸಲ್ ಹುದ್ದೆ ಒದಗಿಸುವ ಮಧ್ಯವರ್ತಿ ಉದ್ಯಮವೇ ಹುಟ್ಟಿಕೊಂಡಿದೆ.
ಮೇಲ್ವಿಚಾರಣೆಯೇ ಇಲ್ಲ
ಗಂಭೀರ ಸಂಗತಿಯೆಂದರೆ, ಗೌರವಾನ್ವಿತ ಕಾನ್ಸಲ್‌ಗಳ ಮೇಲೆ ಯಾವುದೇ ಜಾಗತಿಕ ನಿಯಂತ್ರಣ ಸಂಸ್ಥೆ ಇಲ್ಲ. ಅನೇಕ ದೇಶಗಳು ತಮ್ಮ ಗೌರವಾನ್ವಿತ ಕಾನ್ಸಲ್‌ಗಳ ಪಟ್ಟಿಯನ್ನೇ ಸಾರ್ವಜನಿಕಗೊಳಿಸುವುದಿಲ್ಲ. ಹಿನ್ನೆಲೆ ಪರಿಶೀಲನೆ, ಅಪರಾಧ ದಾಖಲೆಗಳ ತಪಾಸಣೆ- ಇವೆಲ್ಲವೂ ಬಹುತೇಕ ಕಡೆ ಕಾಣೆಯೇ.
ಕೆಲವು ರಾಷ್ಟ್ರಗಳು ಈ ವ್ಯವಸ್ಥೆಯ ದುರುಪಯೋಗವನ್ನು ಗಮನಿಸಿ ಪರಿಷ್ಕರಣೆ ಅಥವಾ ಸಮೂಹ ವಜಾಗಳಿಗೆ ಮುಂದಾಗಿವೆ. ಆದರೆ ಜಗತ್ತಿನಾದ್ಯಂತ ಸಾವಿರಾರು ಗೌರವಾನ್ವಿತ ಕಾನ್ಸಲ್‌ಗಳು ಇನ್ನೂ ಯಾವುದೇ ಸ್ಪಷ್ಟ ಮೇಲ್ವಿಚಾರಣೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ.
ಪುನರ್‌ಚಿಂತನೆಯ ಅವಶ್ಯಕತೆ
ಬೆಂಗಳೂರು ಪ್ರಕರಣ ಒಂದು ವೈಯಕ್ತಿಕ ದುರಂತ ಮಾತ್ರವಲ್ಲ. ಅದು ಜಾಗತಿಕ ರಾಜತಾಂತ್ರಿಕ ವ್ಯವಸ್ಥೆಯೊಳಗಿನ ಅಪಾಯಕಾರಿ ಬೂದು ಪ್ರದೇಶವೊಂದನ್ನು ಬಹಿರಂಗಪಡಿಸಿದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕಠಿಣ ಪರಿಶೀಲನೆ ಇಲ್ಲದೆ ಈ ವ್ಯವಸ್ಥೆ ಮುಂದುವರಿದರೆ, ಅದು ಕಾನೂನು ಆಳ್ವಿಕೆಗೆ ದೊಡ್ಡ ಸವಾಲಾಗುತ್ತದೆ.
ರಾಜತಾಂತ್ರಿಕ ಗೌರವವು ಸಾರ್ವಜನಿಕ ಸೇವೆಯ ಸಂಕೇತವಾಗಬೇಕೇ ಹೊರತು, ಅಕ್ರಮ ಚಟುವಟಿಕೆಗಳಿಗೆ ರಕ್ಷಣಾ ಕವಚವಾಗಬಾರದು. ‘ಗೌರವಾನ್ವಿತ ಕಾನ್ಸಲ್’ ವ್ಯವಸ್ಥೆಗೆ ಈಗ ಗಂಭೀರ ಪುನರ್‌ಆಲೋಚನೆ ಮತ್ತು ಸುಧಾರಣೆ ಅನಿವಾರ್ಯವಾಗಿದೆ.
- ಡಾ. ಜಿ. ಶ್ರೀಕುಮಾರ್ ಮೆನನ್
(ಲೇಖಕರು- ಮಲ್ಟಿ-ಡಿಸಿಪ್ಲಿನರಿ ಸ್ಕೂಲ್ ಆಫ್ ಎಕನಾಮಿಕ್ ಇಂಟೆಲಿಜೆನ್ಸ್ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಪರೋಕ್ಷ ತೆರಿಗೆಗಳು ಮತ್ತು ಮಾದಕ ದ್ರವ್ಯಗಳ ಮಾಜಿ ಮಹಾನಿರ್ದೇಶಕರು.)


