ಅದೊಂದು ಚಿಕ್ಕ ಊರು, ಜೀನಸು ಅಂಗಡಿಯಲ್ಲಿ ವ್ಯಾಪಾರಕ್ಕಿಳಿದವನಿಗೆ, ಸಾಲದ ಹೊರೆ ತೀರದು. ಊರ ಹೊರಕ್ಕೆ ಒಂದು ಚಿಕ್ಕ ಜಮೀನು, ಆ ಜಮೀನಿನಲ್ಲಿ ಬಂದ ಫಲ ಅವನ ಮನೆಯ ಊಟಕ್ಕೆ ತೀರದು. ಜೀವನ ಆರಕ್ಕೇರದೆ ಮೂರಕ್ಕಿಳಿಯದೆ ಮುಂದೆ ಹೋಗುತ್ತಿತ್ತು.
ಅವನ ತಂದೆ ತಾಯಿ ಕಳೆದ ವರ್ಷ, ಕೊರೊನಾದಿಂದ ತೀರಿ ಹೋಗಿದ್ದರು. ಒಬ್ಬನೇ ಇದ್ದವನಿಗೆ ಹಗಲು ರಾತ್ರೆ ಎನ್ನದೆ ದುಡಿಯುತ್ತಿದ್ದ.
.
ಹೀಗಿರಲು ಒಂದು ದಿನ ಅವನ ಜೀನಸು ಅಂಗಡಿಗೆ ಒಬ್ಬ ಅನುರೂಪದ ಹುಡುಗಿ ಬರುವಳು. ಅವನು ಅವಳನ್ನು ಇಲ್ಲಿಯವರೆಗೆ ನೋಡಿರಲಿಲ್ಲ. ಬಂದವಳು ಸಕ್ಕರೆಗಾಗಿ ಕೇಳಿದಳು, ಇವನು ಅವಳನ್ನು ನೋಡಿದಲ್ಲೇ ಬಾಕಿ. ಸುಧಾರಿಸಿಕೊಂಡು ಸಕ್ಕರೆ ತೂಗಿ ಕೊಡುವಷ್ಟರಲ್ಲಿ ಗಲಿಬಿಲಿಗೊಂಡ ಎಂದು ಅವನ ಚರ್ಯೆಯೇ ಅವಳಿಗೆ ಹೇಳಿತ್ತು, ಕಡೆ ತುಟಿಯಲ್ಲಿ ಚಿಕ್ಕ ನಗುವೊಂದು ಹಾಗೆ ಬಂದು ಹೀಗೆ ಹೋಯಿತು. ಆದರೆ ಅವಳಲ್ಲಿ ದುಡ್ಡಿಲ್ಲ ಎಂದಳು, ಪರವಾಗಿಲ್ಲ ನಾಳೆ ಕೊಡು ಎಂದ. ದಿನಗಳುರುಳಿದವು, ಅವಳು ದಿನವೂ ಬಂದು ಸಕ್ಕರೆ ಕೊಳ್ಳುವುದು ಮುಂದುವರೆದಿತ್ತು.
ಹೀಗೆ ಇರಲು ಜೂನ್ ತಿಂಗಳ ಮೊದಲ ವಾರ ಇವನು ಊರ ಹೊರಗಿನ ಜಮೀನನಲ್ಲಿ ಕೃಷಿ ಮಾಡಲೆಂದು ಹೊರಟನು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಿರಂತರವಾಗಿ ಬೆವರು ಸುರಿಸಿ ದುಡಿದ ಇವನು ಹೈರಾಣಾಗಿ ಕೆರೆ ಬದಿಯ ಕಟ್ಟೆಯಲ್ಲಿ ಊಟಕ್ಕೆಂದು ಕುಳಿತ, ಊಟ ಶುರುವಿಟ್ಟದಷ್ಟೇ ಅದೇನಾಯ್ತೋ ತಿಳಿಯದು ಸಿಕ್ಕಾಪಟ್ಟೆ ಕೆಮ್ಮು. ಹತ್ತಿರದಲ್ಲಿ ಯಾರೂ ಇಲ್ಲ. ಯಾವತ್ತೂ ಇಲ್ಲದ್ದು ಅವತ್ತು ಯಾಕೆ ಎಂದು ಅರಿಯದಾದನು.
ಕೆಮ್ಮಿ ಕೆಮ್ಮಿ ಮೂರ್ಛೆ ಹೋಯ್ತು. ಅದೆಷ್ಟು ಹೊತ್ತು ಕೆರೆ ಬದಿಯಲ್ಲಿ ಇದ್ದನೋ ಗೊತ್ತಿಲ್ಲ, ಕಣ್ಣು ತೆರೆಯುವಷ್ಟರಲ್ಲಿ ಅವನಿಗೆ ತಾನು ಯಾವುದೋ ಮರದ ಕೆಳಗೆ ಮಲಗಿರುವಂತೆ ಗೋಚರವಾಯಿತು. ತಿರುಗಿ ನೋಡಲು, ಸಕ್ಕರೆ ಹುಡುಗಿ. ತಿಳಿ ನಗುವಿನೊಂದಿಗೆ ನಿಂತಿಹಳು. ಇವನಿಗೇನು ಮಾಡಲಿ ಎಂದು ಅರಿಯದೆ, ನಾನು ಯಾಕೆ ಇಲ್ಲಿದ್ದೇನೆ ಎಂದು ಕೇಳಿದ.
ಸಕ್ಕರೆ ಹುಡುಗಿ “ನಿಮ್ಮ ಕೆಮ್ಮು ಕೆರೆ ಪಕ್ಕದಲ್ಲಿದ್ದ ನನ್ನ ಮನೆವರೆಗೆ ಕೇಳುತ್ತಿತ್ತು, ನಾನು ಬಂದು ನೋಡ್ಬೇಕಾದ್ರೆ ನಿಮಗೆ ಮೂರ್ಛೆ ಹೋಗಿತ್ತು. ಹಾಗಾಗಿ ನಾನು ಅಲ್ಲಿಂದ ನಿಮ್ಮನ್ನು ಎತ್ತಿ ತಂದು ಇಲ್ಲಿ ಮರದ ಕೆಳಗೆ ಮಲಗಿಸಿದೆ, ಮತ್ತೆ ಆರೈಕೆ ಶುರುವಿಟ್ಟೆ” ಎಂದಳು.
ಅವನು “ನಿಮ್ಮ ಸಹಾಯಕ್ಕೆ ತುಂಬಾ ಧನ್ಯವಾದಗಳು, ಯಾವತ್ತೂ ಈ ರೀತಿ ಆಗಿದ್ದಿಲ್ಲ ಇವತ್ತು ಯಾಕೆ ಹೀಗಾಯ್ತು ಗೊತ್ತಿಲ್ಲ. ಅಂದ ಹಾಗೆ ನಿಮ್ಮ ಹೆಸರು?!” ಅವಳು “ಮಾಯಾ. ನಿಮಗೆ ಅಡ್ಡಿಲ್ಲ ಅಂದ್ರೆ ಇವತ್ತು ನಾನು ಮಾಡಿದ ಅಡುಗೆ ಕೊಡುವೆ ಅದನ್ನೇ ಊಟ ಮಾಡಿ” ಎಂದು ಅವನ ಉತ್ತರಕ್ಕೂ ಕಾಯದೆ ಪಕ್ಕದಲ್ಲೇ ಅವಳ ಮನೆಯಿಂದ ತಟ್ಟೆ ತಂದು, ಊಟ ಬಡಿಸಿ ಉಣ್ಣು ಎಂಬಂತೆ ನಿಂತಳು.
ಅವನಿಗೆ ಏನು ಮಾಡಲೆಂದು ತೋಚಲಿಲ್ಲ. ಊಟ ಮಾಡಿದ. ಅಷ್ಟು ರುಚಿಯಾದ ಊಟ ಅವನು ಮಾಡಿದ್ದಿರಲಿಲ್ಲ. ಊಟ ಮಾಡಿದವನೇ “ನಿಮಗೆ ತುಂಬ ಧನ್ಯವಾದ, ನಾನಿನ್ನು ಬರುತ್ತೇನೆ” ಎಂದು ಹೊರಡಲನುವಾದ. ಮಾಯ “ನಾಳೆಯಿಂದ ಊಟಕ್ಕೆ ಬಂದು ಬಿಡಿ, ನಿಮ್ಮ ಮನೆಯಿಂದ ತರಬೇಕೆಂದಿಲ್ಲ” ಎಂದಳು.
ದಿನ ಕಳೆದವು, ಅವನ ವ್ಯಾಪಾರ ತುಂಬಾ ಬೆಳೆಯತೊಡಗಿತು, ಚಿಕ್ಕ ಎರಡು ಟೆಂಪೋ ಇಟ್ಟು ವ್ಯಾಪಾರ ಮಾಡುವಷ್ಟರ ಮಟ್ಟಿಗೆ ಬೆಳೆಯಿತು. ಅವನ ಊರಾಚೆಯಿರುವ ಜಮೀನಿನಲ್ಲೂ ಒಳ್ಳೆಯ ಫಸಲು ಬರುತ್ತಿತ್ತು. ನಿತ್ಯ ಮಧ್ಯಾಹ್ನ ಊಟ ಮಾಯ ನ ಮನೆಯಿಂದ ತಂದು ಕೆರೆ ಪಕ್ಕದಲ್ಲಿ ಕೊಡುತ್ತಿದ್ದಳು. ಸಾಲಗಳೆಲ್ಲ ಮುಗಿಯಿತು, ಟೆಂಪೋದಿಂದ ಬಡ್ತಿ ಹೊಂದಿ ಲಾರಿ ಬಂತು. ಜಮೀನು ಬೆಳೆದು ಪಕ್ಕದ ಜಮೀನನ್ನೂ ಕೊಂಡುಕೊಂಡ.
ಬೆಳೆದು ನಿಂತವನಿಗೆ ಏನೋ ಒಂದು ಕೊರತೆ. ಒಬ್ಬ ಸಂಗಾತಿಯ ಕೊರತೆ ತೋರಿತು.
ಒಂದು ಮಧ್ಯಾಹ್ನ ಊಟಕ್ಕೆ ಕುಳಿತ ಅವನು ಮಾಯ ನೊಂದಿಗೆ ವಿಷಯ ಪ್ರಸ್ತಾಪಿಸಿದ. ಮಾಯ “ನಿನಗೊಬ್ಬ ಸಂಗಾತಿ ಬೇಕು ಅಷ್ಟೇ ತಾನೇ, ಹುಡುಕೋಣ”. ಅವನು “ನೀನೇನು ಅಂದುಕೊಳ್ಳದಿದ್ದಲ್ಲಿ, ನೀನೆ ಯಾಕಾಗಬಾರದು?! ನಿನ್ನ ಆಗಮನದ ನಂತರ ನನ್ನ ಜೀವನದಲ್ಲಿ ಎಲ್ಲಾ ರೀತಿಯ ಏಳಿಗೆಗಳು ಉಂಟಾಗಿದೆ, ಹಾಗಿದ್ದಲ್ಲಿ ನೀನೆ ಯಾಕಾಗಬಾರದು” ಎಂದ.
ಮಾಯ “ನನ್ನಿಂದ ಅದು ಅಸಾಧ್ಯ” ಎಂದಳು. ಅವನು “ದಯವಿಟ್ಟು ಹಾಗನ್ನಬೇಡ, ಇಷ್ಟು ವರ್ಷಗಳಿಂದ ನಮ್ಮಿಬ್ಬರ ಮಾತು ಕಥೆ ಎಲ್ಲ ಮನದಲ್ಲಿಟ್ಟು ನಾನು ಈ ನಿರ್ಧಾರಕ್ಕೆ ಬಂದಿರುವೆ. ಇದರಲ್ಲಿ ನನಗೇನೂ ತಪ್ಪು ಕಾಣುವುದಿಲ್ಲ, ನಾವಿಬ್ಬರೂ ಒಬ್ಬರನ್ನೊಬ್ಬರು ಸಾಕಷ್ಟು ಅರ್ಥ ಮಾಡಿಕೊಂಡಿದ್ದೇವೆ, ಇನ್ನೇನು ಬೇಕಾಗಿದೆ ದಾಂಪತ್ಯ ಜೀವನಕ್ಕೆ”
ಮಾಯ “ಎರಡು ದಿನ ತಡಿ, ಆಮೇಲೆ ಹೇಳುತ್ತೇನೆ”
ನಿರಾಸೆಯಿಂದ ಅವನು ಮನೆಗೆ ಹೊರಟ. ಎರಡು ದಿನ ಹೇಗೆ ಕಳೆಯಲಿ ಎಂದು ಚಿಂತಾಕ್ರಾಂತನಾದ. ಎರಡು ದಿನ ಕಳೆದರೆ ಇನ್ನು ಅವಳು ಬರುವಳು ಎಂದು ಮನೆಯನ್ನು ಸ್ವಚ್ಛಗೊಳಿಸಲು ತೊಡಗಿದ. ತಂದೆ ತಾಯಿಯ ಮರಣದ ನಂತರ ಅವರ ಕೋಣೆಗೆ ಹೋಗಿರಲೇ ಇಲ್ಲ. ಆ ದಿನ ಸ್ವಚ್ಛಗೊಳಿಸಲು ಹೋದ. ಹೋದವನಿಗೆ ಒಂದು ಕಾಗದ ಸಿಕ್ಕಿತು.
ಕಾಗದದ ಮೇಲೆ “ಪ್ರೀತಿಯ ಮಗನಿಗೆ ಅಪ್ಪನ ಆಶೀರ್ವಾದ” ಎಂದು ಶುರು. ಪಕ್ಕದಲ್ಲಿದ್ದ ಸೋಫಾದಲ್ಲಿ ಕುಳಿತು ಓದಲು ಸಣ್ಣಕೆ ಬೆವರಿ ಹೋದನು.
ಕಾಗದ ಹೀಗಿತ್ತು “ಮಗನೇ, ನಮ್ಮ ಋಣಾನುಬಂಧ ಎಷ್ಟು ಸಮಯ ಎಂದು ಅರಿಯೆ. ಈ ಮಾರಕ ರೋಗ ನನ್ನನ್ನೂ ನಿನ್ನ ಅಮ್ಮನನ್ನು ಪ್ರಾಣ ತೆಗೆಯುತ್ತದೆ ಎಂದು ಅನಿಸುತ್ತಿದೆ. ನೀನು ಇದನ್ನು ಓದುವಾಗ ನಾವು ಈ ಲೋಕದಲ್ಲಿ ಇರಲಿಕ್ಕಿಲ್ಲ,
ಆದರೆ ನಿನಗೊಂದು ವಿಷಯ ಹೇಳುತ್ತೇನೆ. ಹಿಂದೊಮ್ಮೆ ನಾನು ನಮ್ಮ ಜಮೀನಿನಲ್ಲಿ ಕೃಷಿ ಮಾಡಲು, ಒಂದು ದಿನ ಒಂದು ಬಡ ಹೆಂಗಸು ಕೆಲಸವಿದೆಯಾ ಎಂದು ಕೇಳಿ ಬರುತ್ತಾಳೆ. ನಾನು ಅವಳಿಗೆ ಏನು ಇಲ್ಲವೆಂದು ಹೇಳಿ ಕಳಿಸುತ್ತೇನೆ. ಅವಳು ಮತ್ತೆ ಮತ್ತೆ ಬಂದು ಕೇಳಲು ಜೋರು ಮಾಡಿ ಬೈದು ಓಡಿಸಿದ ನೆನಪು. ಅದಾದ ನಂತರ ವರ್ಷಗಳು ಉರುಳಿದಂತೆ ನಮ್ಮ ವ್ಯಾಪಾರ ಕಳೆಗುಂದ ತೊಡಗಿತು, ಜಮೀನು ಬರಡಾಯಿತು, ಸಾಲದ ಹೊರೆಯಾಯಿತು.
ನನಗೆ ನನ್ನ ತಪ್ಪಿನ ಅರಿವಾಗಲು ವರುಷಗಳುರುಳಿದವು, ಅಷ್ಟೊತ್ತಿಗಾಗಲೇ ಸಮಯ ಮೀರಿತ್ತು. ನನ್ನ ಕೊನೆ ದಿನಗಳು ಬಂದಿದ್ದವು. ಮಗನೇ, ನಾನು ಮಾಡಿದ ತಪ್ಪು ನೀನು ಮಾಡಬೇಡ, ಬಂದವರಿಗೆ ನಿನ್ನ ಕೈಲಾದ ಸಹಾಯ ಮಾಡು, ನನ್ನ ತಪ್ಪಿನ ಅರಿವು ನನಗೀಗ ಆಗಿದೆ. ನಿನಗೊಳ್ಳೆಯದಾಗಲಿ, ನಿನ್ನನ್ನು ಆ ದೈವ ಕಾಪಾಡಲಿ”.
ಓದಿ ಮುಗಿಸಿದ ಅವನು ಮರುದಿನ ಬೆಳಗ್ಗೆ ಬೇಗನೆ ಎದ್ದು ಜಮೀನಿನ ಕಡೆ ಹೋದ. ಅವನಿಗೆ ಮಾಯನ ಹತ್ತಿರ ಅವನೆಲ್ಲ ಗೊಂದಲಗಳನ್ನು ಹೇಳಿಕೊಳ್ಳಬೇಕಿತ್ತು. ತಂದೆಯ ಪತ್ರ ಅವನನ್ನು ಚಿಂತೆಗೀಡು ಮಾಡಿತ್ತು.
ಜಮೀನಿಗೆ ಹೋದ ಅವನಿಗೆ ಆಶ್ಚರ್ಯ ಕಾದಿತ್ತು. ಪಕ್ಕದಲ್ಲಿ ಕೆರೆ ಇತ್ತು, ಆದರೆ ಅದರ ಪಕ್ಕದ ಮಾಯನ ಮನೆ ಇರಲಿಲ್ಲ. ಜನ ಸೇರಿದ್ದರು, ಗುರೂಜಿ ಬಂದಿದ್ದರು. ಅವನು ಜನರ ನಡುವೆ ಮುನ್ನುಗ್ಗಿದ, ಗುರೂಜಿಯ ಬಂಟರು ತಡೆದರು.
ಅವನು ಪೇಚಾಡಿದ, ಅವನ ಕಂಡ ಗುರೂಜಿ “ಏನು ಮಗು?! ಮಾಯ ನನ್ನು ಹುಡುಕಿ ಬಂದಿರುವೆಯ, ಇದೆಲ್ಲವೂ ಮಾಯೆ. ಆ ದೈವದ ಮಾಯೆ. ನಿನ್ನ ತಂದೆ ಸಾಕ್ಷಾತ್ ಲಕ್ಷ್ಮೀದೇವಿ ಬಂದಾಗ ಓಡಿಸಿದ, ನೀನು ಸಕ್ಕರೆಯನ್ನಿತ್ತೆ. ಅವನು ಚಟ್ಟಕ್ಕೇರಿದ, ನೀನು ಲಾರಿ ಏರಿದೆ.। ಅಷ್ಟೇ!!"
ಕೆಲವೊಮ್ಮೆ ಅರಿಯದೆ ಇರುವ ವಿಚಾರ ಬಹಳಷ್ಟು ಇರುತ್ತದೆ.
- ಸಚಿನ್ ಕುಳಮರ್ವ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


