ಇಂದು ನಾವು ಬದುಕುತ್ತಿರುವ ಕಾಲವೆಂದರೆ ಕೈಯಲ್ಲೇ ಜಗತ್ತು ಕಾಣಬಹುದಾದ ಆಧುನಿಕ ಯುಗ. ಜನಿಸಿದ ಮಗುವಿನಿಂದ ಹಿಡಿದು ಜೀವನದ ಅಂತಿಮ ಹಂತದಲ್ಲಿರುವ ಹಿರಿಯರವರೆಗೆ, ಎಲ್ಲರೂ ಎಲ್ಲವನ್ನೂ ತಿಳಿದುಕೊಳ್ಳಬಹುದಾದ ಈ ಮಾಹಿತಿ ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ. ಇದು ನಿಜಕ್ಕೂ ಧನಾತ್ಮಕ ವಿಷಯ, ಏಕೆಂದರೆ ಹಿಂದೊಂದು ಕಾಲದಲ್ಲಿ ಒಬ್ಬ ವ್ಯಕ್ತಿ, ಒಂದು ಸ್ಥಳ ಅಥವಾ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ಹಗಲು-ರಾತ್ರಿ ಶ್ರಮಿಸಬೇಕಾಗುತ್ತಿತ್ತೇ ಹೊರತು ಸುಲಭವಾಗಿ ತಿಳಿಯುತ್ತಿರಲಿಲ್ಲ. ಆದರೆ ಇಂದಿಗೆ, ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ನಮ್ಮ ಅಂಗೈಯಲ್ಲೇ ಇರುತ್ತವೆ.
ಜಗತ್ತಿನ ಪವರ್ ಸೆಂಟರ್ ಆಗಿರುವ ಅಮೇರಿಕಾದ ನ್ಯೂಯಾರ್ಕ್‌ನಿಂದ ಹಿಡಿದು ಕರ್ನಾಟಕದ ಮಲೆನಾಡಿನ ಪುಟ್ಟ ಹಳ್ಳಿಯವರೆಗೆ, ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಸಾಧಿಸಬಹುದಾದ ಹಂತಕ್ಕೆ ಮನುಷ್ಯನ ಬುದ್ಧಿಮತ್ತೆ ತಲುಪಿದೆ. ಒಂದು ಸಮಾಜವಾಗಿ ನಾವು ಕಳೆದ ಹಾದಿ ಪ್ರಶಂಸಾರ್ಹ. ಆದರೆ ಇದೇ ಸಂದರ್ಭದಲ್ಲಿ ಒಂದು ಪ್ರಶ್ನೆ ಎದ್ದುಕೊಳ್ಳುತ್ತದೆ — ನಾವು ಈ ಸಾಮಾಜಿಕ ಮಾಧ್ಯಮಗಳನ್ನು ಎಷ್ಟು ಜವಾಬ್ದಾರಿಯಿಂದ ಬಳಸುತ್ತಿದ್ದೇವೆ?
ಜಾಲತಾಣಗಳ ಮೂಲಕ ಒಂದು ದೇಶದ ಜನರ ಮನಸ್ಥಿತಿಯನ್ನು ಹದಗೆಡಿಸಿ, ವಿನಾಶದ ದಾರಿಯಲ್ಲಿ ನುಗ್ಗಿಸುವುದೇ ಅಭಿವೃದ್ಧಿಯ ಲಕ್ಷಣವೇ?ಅಭಿವ್ಯಕ್ತಿಯ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರನ್ನಾದರೂ ಹೀನಾಯವಾಗಿ ದೂಷಿಸುವುದು, ಚಾರಿತ್ರ್ಯಹರಣ ಮಾಡುವುದು ಈಗ ಸಾಮಾನ್ಯವಾಗಿದೆ. ಸರಿ-ತಪ್ಪುಗಳ ವಿಷಯಗಳಲ್ಲಿ ವಿಮರ್ಶಾತ್ಮಕ ಮನೋಭಾವ ಕಳೆದುಕೊಳ್ಳುತ್ತಿದ್ದೇವೆ, ವಿಮರ್ಶಕರಿಗೆ ಅಭಿನಂದನೆಗಳಿಗಿಂತ ಅವಮಾನಗಳೇ ಹೆಚ್ಚು ಸಿಗುತ್ತಿವೆ.
ಇತ್ತೀಚಿನ ಉದಾಹರಣೆಯಾಗಿ, ಒಂದು ಹುಡುಗಿ ಪ್ರಸಿದ್ಧ ಗಾಯಕರ ಹಾಡನ್ನು ಕೆಟ್ಟ ರೀತಿಯಲ್ಲಿ ಹಾಡಿದರೂ ಕ್ಷಣಾರ್ಧದಲ್ಲೇ ಜನಪ್ರಿಯತೆ ಪಡೆಯುತ್ತಾಳೆ. ಆದರೆ ವರ್ಷಗಳ ಕಾಲ ಶ್ರಮಿಸಿರುವ ಪ್ರತಿಭಾವಂತರು ಒಂದೇ ಅವಕಾಶಕ್ಕಾಗಿ ಅಲೆದಾಡುತ್ತಾರೆ. ಇದು ಸಾಮಾಜಿಕ ಮಾಧ್ಯಮದ ಒಡೆಯ ಬದಿ. ಒಳಿತುಗಳಿದ್ದರೂ ಕೆಡುಕುಗಳ ಪ್ರಮಾಣ ಹೆಚ್ಚಾದಾಗ, ಆ ಒಳಿತುಗಳಿಗೂ ಮೌಲ್ಯ ಕುಂದುತ್ತದೆ.
ಇತ್ತೀಚೆಗೆ ಕೇರಳದಲ್ಲಿ ನಡೆದ ಘಟನೆಯು ಮನ ತಲ್ಲಣಗೊಳಿಸುವಂತದ್ದು — ರೀಲ್ಸ್ ಹುಚ್ಚಿನಲ್ಲಿ ಒಬ್ಬ ವ್ಯಕ್ತಿಯನ್ನು ಅಪಪ್ರಚಾರದ ಬಲೆಗೆ ಸಿಕ್ಕುವಂತೆ ಮಾಡಲಾಗಿದ್ದು, ಆತನ ಸಾವಿನವರೆಗೂ ಕಥೆ ತಲುಪಿದೆ. ಇದರ ತಪ್ಪು ಕೇವಲ ಆಕೆಯಲ್ಲ; ಸಮಾಜವಾಗಿ ನಮ್ಮ ಮೇಲೂ ಹೊಣೆಯಿದೆ.
ನಾವು ಗಮನಿಸಿದಂತೆ, ಒಳ್ಳೆಯ ವಿಚಾರಗಳಿಗೆ ಸಿಗುವ ಮನ್ನಣೆಗಿಂತ ಅನಗತ್ಯ ವಿಷಯಗಳಿಗೆ ಪ್ರಚಾರ ಹೆಚ್ಚು. ನಿಜವಾದ ಸಾಧಕರು ಮರೆಯಾಗುವ ಪರಿಸ್ಥಿತಿ ಬಂದಿದೆ. ನಾವು ಆದರ್ಶವಾಗಿ ಕಾಣುವ ವ್ಯಕ್ತಿಗಳಿಗೂ ಸಾಮಾಜಿಕ ಜವಾಬ್ದಾರಿ ಅನಿವಾರ್ಯ;ಆದರೆ ಕೆಲವರು ಸ್ವಾತಂತ್ರ್ಯ ಮತ್ತು ಆಧುನಿಕತೆಯ ಹೆಸರಲ್ಲಿ ಪಾಶ್ಚಾತ್ಯ ಅನುಕರಣೆಗೆ ಮೊರೆ ಹೋಗುತ್ತಾರೆ. ಇದರ ಪರಿಣಾಮ ಮುಂದಿನ ಪೀಳಿಗೆ ತಪ್ಪು ಸಂದೇಶ ಪಡೆಯುತ್ತದೆ.
ಸರ್ಕಾರಗಳಿಗೂ ಈ ವಿಷಯದಲ್ಲಿ ಮುತುವರ್ಜಿ ಅಗತ್ಯ. ಅಧಿಕಾರದ ರಾಜಕಾರಣದಿಂದ ವಿಷಯಾಧಾರಿತ ಚರ್ಚೆಯ ಕಡೆಗೆ ಹೊರಳಬೇಕಿದೆ. ಇಂದಿನ ಸ್ಥಿತಿಯಲ್ಲಿ ಆಳುವವರು ಮತ್ತು ಆಳಲ್ಪಡುವವರು ಇಬ್ಬರೂ ಪರಸ್ಪರ ದ್ವಂದ್ವದಲ್ಲಿ ಸಿಲುಕಿದ್ದಾರೆ.
ಇನ್ನೂ ಸಮಯ ಕಳೆದುಹೋಗಿಲ್ಲ — ಒಂದು ಸಮಾಜವಾಗಿ ನಾವು ವಿಮರ್ಶಾತ್ಮಕವಾಗಿ ಯೋಚಿಸಬೇಕು, ಸರಿ-ತಪ್ಪುಗಳ ಅರಿವಿನಿಂದ ಮುಂದಿನ ಪೀಳಿಗೆಗೆ ಒಳಿತು ಮಾಡುವಂತೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಜವಾಬ್ದಾರಿಯಿಂದ ರೂಪಿಸಬೇಕು. ಅದು ಕೇವಲ ಅಗತ್ಯವಲ್ಲ, ಅನಿವಾರ್ಯವೂ ಹೌದು.
- ಪ್ರದೀಪ್ ಶೆಟ್ಟಿ ಬೇಳೂರು


