ಜೋರಾಗಿ ಮಳೆ ಬರುವ ಆ ರಾತ್ರಿ ಅವನು ಮನೆಯಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲ್ಸ ಮಾಡ್ತಾ ಇದ್ದ. ಊಟದ ಹೊತ್ತಾಗಿತ್ತು, ಹಸಿವು ಹೊಟ್ಟೆಯಲ್ಲಿ ತಾಳ ಹಾಕುತ್ತಿತ್ತು. ಆದರೆ ಅಡುಗೆ ಮಾಡಲು ಮನಸಿರಲಿಲ್ಲ, ಪುರುಸೊತ್ತೂ ಇರಲಿಲ್ಲ. ಆನ್ಲೈನ್ ಆರ್ಡರ್ ಮಾಡುವ ಎಂದು ಸ್ವಿಗ್ಗಿ, ಜೊಮ್ಯಾಟೋ ನೋಡಿದ. ಮಳೆಗೆ ಯಾವೊಬ್ಬನೂ ಡೆಲಿವರಿ ಮಾಡಲು ಇರಲಿಲ್ಲ. ಇನ್ನೇನು ಮಾಡಲಿ ಎಂದು ಯೋಚಿಸಿದ. ಮ್ಯಾಗಿ ಮಾಡುವ ಎಂದುಕೊಂಡ. ಅಡುಗೆ ಕೋಣೆಗೆ ಹೋಗಿ ನೋಡಿದರೆ ಇದ್ದ ಕೊನೆಯ ಪ್ಯಾಕ್ ಮ್ಯಾಗಿ ಎಕ್ಸ್‌ಪೈರಿ ಡೇಟ್ ಕಳೆದಿತ್ತು.
ಇನ್ನೇನು ಮಾಡುವುದು ಎಂದು ಯೋಚಿಸಿದ, ಅಕ್ಕಿ, ಬೇಳೆ, ಕಾಳು, ಮೊಸರು ಎಲ್ಲವೂ ಮುಗಿದಿತ್ತು. ಸಂಜೆ ಇನ್‌ಸ್ಟಾಮಾರ್ಟ್ ಕಾರ್ಟ್ ಗೆ ಹಾಕಿ ಇಟ್ಟವನಿಗೆ ಮ್ಯಾನೇಜರ್ ಅರ್ಜೆಂಟ್ ಮೀಟಿಂಗ್ ಜಾಯಿನ್ ಆಗು ಎಂದಾಗ ಆರ್ಡರ್ ಮಾಡಲು ಮರೆತಿದ್ದ. ಬಿಸ್ಕಿಟ್ ಸಹಿತ ಇರಲಿಲ್ಲ.
ಅಕೌಂಟ್‌ನಲ್ಲಿ ಏಳಂಕೆಯ ದುಡ್ಡಿತ್ತು, ಮನೆಯಲ್ಲಿ ಸಾಮಾನಿಲ್ಲ, ಮನಸಲ್ಲಿ ನೆಮ್ಮದಿಯಿಲ್ಲ, ಹೊಟ್ಟೆಯಲ್ಲಿ ಊಟ ಇಲ್ಲ, ಕಣ್ಣಿಗೆ ನಿದ್ದೆ ಇಲ್ಲ. ಆ ನಿಮಿಷ ಏನು ಮಾಡಲಿ ಎಂದು ತೋಚದಾಯಿತು ಅವನಿಗೆ. ಸಿಟ್ಟು, ವೈರಾಗ್ಯ ಎಲ್ಲ ಒಟ್ಟು ಸೇರಿ ಸರಸರನೆ ಫ್ಲಾಟ್‌ನಿಂದ ಹೊರಗೆ ಬಂದು ಕೆಳಗಿಳಿದು ತನ್ನ ಕಾರಿನ ಬಳಿ ಬಂದ.
ಧೋ ಎಂದು ಮಳೆ ಹೊಡೆಯುತ್ತಿತ್ತು. ಇನ್ನೇನು ಕಾರ್ ತೆಗೆಯಲುನುವಾದ, ಕೀ ಫ್ಲ್ಯಾಟ್‌ನಲ್ಲಿ ಬಾಕಿ ಅಂತ ಗೋಚರವಾಯಿತು. ಮತ್ತೆ ಅದೇ ಸಿಟ್ಟಲ್ಲಿ, ಜಿಗುಪ್ಸೆಯಲ್ಲಿ ದರದರನೆ ಮನೆಗೆ ಹೋದ, ಧಡ್ ಎಂದು ಬಾಗಿಲು ತೆರೆದವನೇ ಕೀ ಗಾಗಿ ಹುಡುಕಾಡಿದ. ಕೀ ಹುಕ್‌ನಲ್ಲಿಂದ ಕೀ ತೆಗೆದವನೇ ಬಾಗಿಲಿಗೆ ಓಡಿದ.
ವರ್ಕ್ ರೂಮ್ ಅಲ್ಲಿ ಲೈಟ್ ಫ್ಯಾನ್ ಆಫ್ ಮಾಡಲು ಮರೆತೆನೋ ಎಂದು ಹೋದವನಿಗೆ, ಅವನನ್ನೇ ಅಲ್ಲಿ ಲ್ಯಾಪ್‌ಟಾಪ್ ಎದುರು, ಬಳಲಿ ಬಸವಳಿದು ಬೆಂಡಾಗಿ ಲ್ಯಾಪ್‌ಟಾಪ್ ಮೇಲೆ ಸುಸ್ತಾಗಿ ಮಲಗಿದ್ದು ಕಾಣಿಸಿತು.
ಆಶ್ಚರ್ಯ, ಗಾಬರಿ, ಭಯ, ಈ ಮೂರೂ ಒಟ್ಟಿಗೆ ಆಯಿತು. ಹತ್ತಿರ ಸಮೀಪಿಸಿದ, ಕಣ್ಣು ತೆರೆದೇ ಇತ್ತು. ಲ್ಯಾಪ್‌ಟಾಪ್‌ನಲ್ಲಿ ಮ್ಯಾನೇಜರ್ “ಧನಂಜಯ್ ಧನಂಜಯ್, ಗೆಟ್ ಅಪ್” ಎಂದು ಒಂದೇ ಸಮನೆ ಕಿರುಚುತ್ತಿದ್ದ.
ಧನಂಜಯ್ ಮಾತ್ರ ಗೆಟ್ ಅಪ್ ಆಗಲು ಅಸಾಧ್ಯವಾದಲ್ಲಿಗೆ ತಲುಪಿ ಆಗಿತ್ತು !
- ಸಚಿನ್ ಕುಳಮರ್ವ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


