ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಸಹಭಾಗಿತ್ವದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹಾಗೂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ಮಾರ್ಗದರ್ಶನದಲ್ಲಿ ಎರಡು ದಿನಗಳ 'ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನ (Rural Livelihoods and Sustainability: A Global Perspective) ವಿಚಾರದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಈ ಅಂತಾರಾಷ್ಟ್ರೀಯ ಸಮ್ಮೇಳನವು ಇದೇ ಬರುವ ಫೆಬ್ರವರಿ 9 ಮತ್ತು 10ರಂದು ನಡೆಯಲಿದ್ದು, ವಿಚಾರ ಸಂಕೀರಣಕ್ಕೆ ನವದೆಹಲಿಯ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ICSSR) ಯಿಂದ ಪ್ರಾಯೋಜಕತ್ವ ದೊರೆತಿದೆ.
ಸಭಾ ಕಾರ್ಯಕ್ರಮ:
ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿನಾಂಕ 9 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡದ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಅಮೇರಿಕಾದ ಮೆಕ್ಸಿಕೋ ಸಿಟಿಯ ಲ್ಯಾಟಿನ್ ಅಮೆರಿಕನ್ ಫ್ಯಾಕಲ್ಟಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಪ್ರೊ. ಮರಿಯಾನೋ ರೋಯಾಸ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ವಹಿಸಿಕೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಚನದೊಂದಿಗೆ ಮೂವತ್ತಾರು ಸಂಶೋಧನಾ ಲೇಖನಗಳನ್ನೊಳಗೊಂಡ ISBN ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ವಿಚಾರ ಗೋಷ್ಠಿ:
ಸಭಾ ಕಾರ್ಯಕ್ರಮದ ಬಳಿಕ ನಡೆಯುವ ವಿಚಾರ ಗೋಷ್ಠಿಯಲ್ಲಿ ಪ್ರೊ. ಮರಿಯಾನೋ ರೋಯಾಸ್, ಅರ್ಥಶಾಸ್ತ್ರದ ಪ್ರಾಧ್ಯಾಪಕರು, ಲ್ಯಾಟಿನ್ ಅಮೇರಿಕನ್ ಫ್ಯಾಕಲ್ಟಿ ಆಫ್ ಸೋಶಿಯಲ್ ಸೈನ್ಸ್-ಮೆಕ್ಸಿಕೋ ಸಿಟಿ, ಅವರು ದಿಕ್ಸೂಚಿ ಭಾಷಣವನ್ನು ನಡೆಸಿಕೊಳ್ಳಲಿದ್ದಾರೆ.
ಮೊದಲನೆಯ ದಿನದ ಕಾರ್ಯಕ್ರಮಗಳು
ಮೊದಲನೆ ದಿನದಲ್ಲಿ RBI ಪ್ರಾದೇಶಿಕ ಸಂಸ್ಥೆ ಬೆಂಗಳೂರು ಇದರ ಫಿನ್ ಟೆಕ್ ವಿಭಾಗದ ಸಹಾಯಕ ಮಹಾ ಪ್ರಬಂಧಕ ಸ್ವಪ್ನಿಲ್ ಶಾನು ಭಾರ್ಗವ್ ಅವರು ಸುಸ್ಥಿರ ಗ್ರಾಮೀಣ ಜೀವನೋಪಾಯಕ್ಕಾಗಿ ಡಿಜಿಟಲ್ ಪಾವತಿ ಮತ್ತು ಫಿನ್‌ಟಿಕ್ ಪಾತ್ರ, ಎಸ್.ಕೆ.ಡಿ.ಆರ್.ಡಿ.ಪಿ ಸಿಇಒ ಅನಿಲ್ ಕುಮಾರ್ ಎಸ್ ಎಸ್ ಅವರು ಎಮ್.ಎಸ್.ಎಮ್.ಇ. ಬೆಂಬಲ ಸಂಸ್ಥೆಯಾಗಿ ಎಸ್.ಕೆ.ಡಿ.ಆರ್.ಡಿ.ಪಿ., ವಿಜಯಪುರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹೆಚ್ಚುವರಿ ಡೆಪ್ಯೂಟಿ ಕಮಿಷನರ್ ಡಾ. ಔದ್ರಮ ಅವರು ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಜೀವನೋಪಾಯಕ್ಕಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂಬ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ನಂತರ ಮೂರು ಸಮಾನಾಂತರ ತಾಂತ್ರಿಕ ಅಧಿವೇಶನಗಳಲ್ಲಿ ಸುಮಾರು ಎಪ್ಪತ್ತು ಸಂಶೋಧನಾ ಲೇಖನಗಳ ಮಂಡನೆಯನ್ನು ಮಾಡಲಿದ್ದಾರೆ. ಈ ಅಧಿವೇಶನಗಳನ್ನು ಡಾ. ಉದಯಚಂದ್ರ ಪಿ.ಎನ್., ಮತ್ತು ಡಾ. ಎ. ಜಯಕುಮಾರ ಶೆಟ್ಟಿ, ನಿವೃತ್ತ ಪ್ರಾಂಶುಪಾಲರುಗಳು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು ಹಾಗೂ ಪ್ರೊ. ಪರಮೇಶ್ವರ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ನಡೆಸಿಕೊಡಲಿದ್ದಾರೆ.
ಎರಡನೇ ದಿನದ ಕಾರ್ಯಕ್ರಮಗಳು:
ಎರಡನೆಯ ದಿನದಲ್ಲಿ ದೆಹಲಿಯ ಜೆ.ಎನ್.ಯು. ಇದರ ಪ್ರಾಧ್ಯಾಪಕರಾದ ಪ್ರೊ. ರಮೇಶ್.ಎಸ್. ಸಾಲ್ಯಾನ್ ಅವರು ಭಾರತದಲ್ಲಿ ಗ್ರಾಮೀಣ ಜೀವನೋಪಾಯಕ್ಕಾಗಿ ಐಸಿಟಿ-ಚಾಲಿತ ಪರಿವರ್ತನೆ, ಶ್ರೀಲಂಕಾದ ನಳಿನಿ ರತ್ನರಾಜ ಇವರು ಸುಸ್ಥಿರ ಗ್ರಾಮೀಣ ಜೀವನೋಪಾಯಕ್ಕಾಗಿ ಸ್ತ್ರೀವಾದಿ ಮಾರ್ಗಗಳು, ಒಡಿಶಾದ ರೆವೆನ್ ಶಾ ವಿಶ್ವವಿದ್ಯಾನಿಲಯದ ಡಾ. ಕಿಶೋರ್ ಕುಮಾರ್ ದಾಸ್ ಅವರು ಕೃಷಿ ಉದ್ಯಮಶೀಲತೆ ಮತ್ತು ಸುಸ್ಥಿರ ಜೀವನೋಪಾಯ, ಅಫ್ಘಾನಿಸ್ತಾನದ ಡಾ. ಅಜೀಜುದ್ದೀನ್ ಸುಲ್ತಾನಿ ಅವರು ಅಸಂಘಟಿತ ವಲಯದಲ್ಲಿ ಆರ್ಥಿಕ ಸೇರ್ಪಡೆ ಮತ್ತುಸಾಮಾಜಿಕ ಭದ್ರತೆ ಹಾಗೂ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ. ಎಂ.ಜಿ. ಚಂದ್ರಕಾಂತ್ ಇವರು ಆರೋಗ್ಯ ಅರ್ಥಶಾಸ್ತ್ರದ ಸಮಸ್ಯೆಗಳು ಎಂಬ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.
ನಂತರದ ಸಂವಾದಗೋಷ್ಠಿಯನ್ನು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರೊ. ಪ್ರೀತಿ ಕೀರ್ತಿ ಡಿ'ಸೋಜಾ ಇವರು ನಡೆಸಿಕೊಡಲಿದ್ದು, ಈ ಸಂದರ್ಭದಲ್ಲಿ ಡಾ. ರಾಜೇಶ್ ಆಚಾರ್ಯ ಎಚ್. ಸಹ ಪ್ರಾಧ್ಯಾಪಕರು, ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ, ವಿಜಯ್ ಕುಮಾರ್ ಬಿ. ಪಿ, ಕಾರ್ಯನಿರ್ವಾಹಕ ನಿರ್ದೇಶಕರು, RUDSET ಸಂಸ್ಥೆ, ಕೇಂದ್ರ ಕಚೇರಿ, ಉಜಿರೆ, ಮನೋರಮಾ ಭಟ್ ಜಿ.ವಿ, ವಕೀಲರು ಮತ್ತು ಮಾಜಿ ನಿರ್ದೇಶಕರು, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ (ಆರ್), ಉಜಿರೆ, ಕಿರಣ್ ರೊನಾಡ್, ವ್ಯವಸ್ಥಾಪಕ ನಿರ್ದೇಶಕರು, KRS ಟೂರ್ಸ್ ಅಂಡ್ ಟ್ರಾವೆಲ್ಸ್ ಮಲೇಷ್ಯಾ, ಶೇಖ್ ಲತೀಫ್, ಕೆ.ಎ.ಎಸ್, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ಕರ್ನಾಟಕ ಇವರುಗಳು ವಿಚಾರ ಗೋಷ್ಟಿಯ ವಿಷಯದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ.
ಸಮಾರೋಪ ಸಮಾರಂಭ:
ಎರಡು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭವು ಫೆಬ್ರವರಿ 10ರಂದು ಮಧ್ಯಾಹ್ನ 3.45ರಿಂದ 4.45ರವರೆಗೆ ಇದೇ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರವಾಡೆ ವಿನಾಯಕ ಕಾರಭಾರಿ, ಐಎಎಸ್ ಇವರು ಸಮಾರೋಪ ಭಾಷಣವನ್ನು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಶ್ರೀ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ಧನ್ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ. ವಹಿಸಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

