ಮಿತ್ತಬಾಗಿಲು ಬಿ.ಕೆ ದೇವರಾಯರಿಗೆ ರೈತಪೀಠ ಪ್ರಶಸ್ತಿ ಘೋಷಣೆ

Upayuktha
0

ರೈತರಿಗಾಗಿ ಪ್ರಶಸ್ತಿ ಸ್ಥಾಪಿಸಿದ ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥ ಡಾ. ರಾಮಕೃಷ್ಣ ಆಚಾರ್ ಅವರ ಮಾದರಿ ನಡೆ




ಮಂಗಳೂರು, ಫೆ.7: ದೇಶದ ರೈತರಿಗೆ ಗೌರವ ಸಲ್ಲಬೇಕು, ಕೃಷಿ ಕೆಲಸಕ್ಕೆ ಪ್ರೋತ್ಸಾಹ ದೊರೆಯಬೇಕು ಎಂಬ ಉದ್ದೇಶದಿಂದ ದಕ್ಷಿಣ ಕನ್ನಡದ ರೈತ ಉದ್ಯಮಿ, ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾದ ಡಾ.ರಾಮಕೃಷ್ಣ ಆಚಾರ್ ಅವರು ಒಂದು ಲಕ್ಷ ರೂಪಾಯಿ ಮೊತ್ತದ ವಿನೂತನ ರೈತಪೀಠ ಪ್ರಶಸ್ತಿ ಯನ್ನು ಸ್ಥಾಪಿಸಿದ್ದಾರೆ. ಪ್ರತೀ ವರ್ಷವೂ ರೈತರನ್ನು ಪುರಸ್ಕರಿಸಿ ಗೌರವಿಸುವ ಉದ್ದೇಶದಿಂದ ಸ್ಥಾಪಿಸಲಾದ ಈ ಪ್ರಶಸ್ತಿಗೆ 200ಕ್ಕೂ ಹೆಚ್ಚು ಅಪರೂಪದ ಭತ್ತದ ತಳಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿರುವ ಅಪರೂಪದ ರೈತ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಬಿ.ಕೆ. ದೇವರಾಯ ಮಿತ್ತಬಾಗಿಲು ಅವರು ಆಯ್ಕೆಯಾಗಿದ್ದಾರೆ.


ದಕ್ಷಿಣ ಕನ್ನಡದಲ್ಲಿ ಬಹಳಷ್ಟು ಕಡೆಗಳಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿದ್ದರೂ 80ರ ಹರೆಯದ ಬಿ.ಕೆ ದೇವರಾಯರು 200ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ. 'ಕಾಲದ ಹೊಡೆತಕ್ಕೆ ಮರೆಯಾಗಿ ಹೋಗಬಹುದಾಗಿದ್ದ ಅಪರೂಪದ ತಳಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿರುವುದಲ್ಲದೇ, ಕೃಷಿಯಲ್ಲಿ ಇತರರಿಗೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಕೆ. ದೇವರಾಯರಿಗೆ ಮತ್ತು ಅವರ ಶ್ರೇಷ್ಠ ಬದುಕಿಗೆ ಗೌರವ ನೀಡುವ ಸಲುವಾಗಿ ಮೊದಲ ವರ್ಷದ ರೈತಪೀಠ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡುತ್ತಿದ್ದೇವೆ' ಎಂದು ಡಾ. ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ. 


ಮೂಡಬಿದ್ರಿ ಸಮೀಪದಲ್ಲಿರುವ ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾಗಿ, ಉದ್ಯಮಿಯಾಗಿ ಸಾಕಷ್ಟು ಕೆಲಸ ಮಾಡಿರುವ ಡಾ. ರಾಮಕೃಷ್ಣ ಆಚಾರ್ ಇದೀಗ ಕೃಷಿಗೆ, ರೈತರಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವುದು ಮಾದರಿ ನಡೆಯಾಗಿದೆ. ಮುಂದಿನ ಪೀಳಿಗೆ ಕೃಷಿಯತ್ತ ಆಕರ್ಷಿತರಾಗುವಂತೆ ಮಾಡುವ, ಮಣ್ಣಿನ ಸಂರಕ್ಷಣೆ ಮಾಡುವ, ಕೃಷಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಡಾ. ರಾಮಕೃಷ್ಣ ಆಚಾರ್ ಅವರ ಈ ನಿಲುವು ಅತ್ಯಂತ ಮಹತ್ವದ್ದಾಗಿದೆ.


ರೈತಪೀಠ ಪ್ರಶಸ್ತಿಯನ್ನು ಫೆ.20ರಂದು ಪಶ್ಚಿಮ ಘಟ್ಟದ ಬುಡದಲ್ಲಿರುವ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮುನಿಯಾಲಿನಲ್ಲಿರುವ ಗೋ-ಧಾಮ ತೋಟದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಮಾರಂಭದಲ್ಲಿ ಮಹಾರಾಷ್ಟ್ರ ಕೊಲ್ಹಾಪುರದ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿ ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಗೋ-ಧಾಮದಲ್ಲಿ ಕೃಷಿ ಜಾಗೃತಿ ಮೂಡಿಸುವ ಕೃಷಿ ಮಂಡಲ ಕಾರ್ಯಕ್ರಮ ಮತ್ತು ಏಕಪವಿತ್ರ ಶ್ರೀಮನ್ನಾಗಮಂಡಲ ಕಾರ್ಯಕ್ರಮ ಜರುಗಲಿದೆ.


ಡಾ. ರಾಮಕೃಷ್ಣ ಆಚಾರ್ ಅವರು ತಮ್ಮ ಉದ್ದೇಶದ ಕುರಿತು, 'ನಮ್ಮ ದೇಶದಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್, ಡಾಕ್ಟರ್, ಉದ್ಯಮಿಗಳಿಗೆ ಸಿಗುವಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಗೌರವ ರೈತನಿಗೂ ಸಲ್ಲಬೇಕು. ಆತನಿಗೆ ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕು. ಜೊತೆಗೆ ಹಲವಾರು ರಾಜ್ಯಗಳಿಗೆ ಹೋಗಿ ರೈತರ ಜೊತೆ ಒಡನಾಡಿದ ಕಾರಣದಿಂದ ತಿಳಿದುಬಂದ ವಿಚಾರವೆಂದರೆ ಮಣ್ಣಿನ ಫಲವತ್ತತೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಮಣ್ಣಿನ ಫಲವತ್ತತೆ ಉಳಿಯಬೇಕೆಂದರೆ ಕೃಷಿ ಕೆಲಸ ಉಳಿಯಬೇಕು, ಹೆಚ್ಚಾಗಬೇಕು. ಹಾಗಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಿದ್ದೇನೆ. ಈ ಉದ್ದೇಶದ ಒಂದು ಭಾಗವಾಗಿ ಪ್ರಶಸ್ತಿ ಸ್ಥಾಪನೆಯಾಗಿದೆ. ಇನ್ನುಳಿದಂತೆ ಮುಂದಿನ ಪೀಳಿಗೆಯ ಮಕ್ಕಳಿಗೆ ಕೃಷಿ ಪರಿಚಯಿಸುವ ಸಲುವಾಗಿ ಗೋಧಾಮ ಎಂಬ ಮಾದರಿ ಕೃಷಿ ತೋಟ ನಿರ್ಮಿಸಿದ್ದೇನೆ. ಇದರ ಹೊರತಾಗಿಯೂ ಸಾಕಷ್ಟು ಯೋಜನೆಗಳಿವೆ' ಎನ್ನುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top