ವೈದ್ಯಕೀಯ ಪ್ರತಿನಿಧಿಗಳು ನಿರಂತರ ಅಧ್ಯಯನ, ಸಂಶೋಧನೆಗಳಿಂದ ಯಶಸ್ಸು ಸಾಧಿಸಬೇಕು: ಡಾ. ಹಾಜಿ ಯು.ಕೆ. ಮೋನು

Upayuktha
0

ಮಂಗಳೂರು ಫೆ 07: “ವೈದ್ಯಕೀಯ ಪ್ರತಿನಿಧಿಗಳು ವಿವಿಧ ವೈದ್ಯಕೀಯ ಕಾರ್ಯಗಾರಗಳಲ್ಲಿ ಭಾಗವಹಿಸಿ, ನಿರಂತರ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ನೂತನ ಆವಿಷ್ಕಾರ, ಆಧುನಿಕ ಬೆಳವಣಿಗೆಗಳಿಗೆ ಸ್ಪಂದಿಸಿ ತಮ್ಮ ವೈದ್ಯಕೀಯ ಜ್ಞಾನವನ್ನು ವೃದ್ದಿಸಿ, ಯಶಸ್ಸು ಸಾಧಿಸಬೇಕು ಮಾತ್ರವಲ್ಲದೆ ಜನಮನ್ನಣೆಗೆ ಪಾತ್ರರಾಗಬೇಕು” ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ನಿರ್ದೇಶಕರಾದ ಡಾ. ಹಾಜಿ ಯು.ಕೆ. ಮೋನು ಸಲಹೆ ನೀಡಿದ್ದಾರೆ.


ಅವರು ತಮ್ಮ ಸಂಸ್ಥೆಯ ಮಕ್ಕಳ ಶಾಸ್ತ್ರ ಮತ್ತು ಚಿಕಿತ್ಸಾ ವಿಭಾಗದ ಔಷಧ ಶಾಸ್ತ್ರ ವಿಭಾಗ, ಸೂಕ್ಷ್ಮ ಜೀವ ಶಾಸ್ತ್ರ ವಿಭಾಗ ಸಹಯೋಗದೊಂದಿಗೆ ಅವರ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಇಂದು (ಫೆ.7) ತಮ್ಮ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನ ಅವಧಿಯ “ಪುಟ್ಟ ರೋಗಿಗಳು ಮತ್ತು ದೊಡ್ಡ ನಿರ್ಧಾರಗಳು” ಎಂದು ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 


ಕಾಲೇಜಿನ ಡೀನ್‌ರವರಾದ ಡಾ. ಶಹನವಾಜ್ ಮಣಿಪಾಡಿ ಅವರು ಈ ಕಾರ್ಯಾಗಾರದಲ್ಲಿ ರಾಷ್ಟ್ರ ಮಟ್ಟದ ವಿವಿಧ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳ ಶಾಸ್ತ್ರ ಕ್ಷೇತ್ರದಲ್ಲಿ ಇತ್ತೀಚಿಗೆನ ಪ್ರಗತಿ ಮತ್ತು ಬೆಳವಣಿಗೆಗಳನ್ನು ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ಅತಿಥಿ ಉಪನ್ಯಾಸವನ್ನು ನೀಡಲಿರುವರು. ಹಿರಿಯ ಪ್ರಾಧ್ಯಾಪಕರಾದ ಡಾ. ಶಂಶಾದ್ ಎ. ಖಾನ್ ರವರು ಕಾರ್ಯಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.




ಈ ವೈದ್ಯಕೀಯ ಕಾರ್ಯಗಾರದಲ್ಲಿ ಬೆಂಗಳೂರು ನಗರ ಮೂಲದ ಮಣಿಪಾಲ ಆಸ್ಪತ್ರೆಯ ಡಾ. ಭಾಸ್ಕರ್ ಶೆಣೈ ದಿಕ್ಸೂಚಿ ಭಾಷಣ ಮಾಡಿದರು. ಕೊಯಮುತ್ತೂರು ನಗರ ಮೂಲದ ಕೊವೈಯ್ ಆಸ್ಪತ್ರೆಯ ಡಾ. ಅಶ್ವತ್ ದೊರೈಸ್ವಾಮಿಯವರು ಟೈಫೋಯಿಡ್ ರೋಗ ನಿರ್ವಹಣೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಕೊಚ್ಚಿ ನಗರದ ಅಮೃತ ವೈದ್ಯಕೀಯ ಕಾಲೇಜಿನ ಡಾ. ಪ್ರಿನ್ಸಿ ಲೂಯಿಸ್ ಪಲಟ್ಟಿಯವರು ಮಕ್ಕಳ ರೋಗ ಮತ್ತು ಲಕ್ಷಣ ಮತ್ತು ಕಾರಣಗಳ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಬೆಂಗಳೂರು ನಗರ ಮೂಲದ ಕಾವೇರಿ ಆಸ್ಪತ್ರೆಯ ಡಾ. ಅಕ್ಷತಾ ರವೀಂದ್ರರವರು ಮಕ್ಕಳಲ್ಲಿ ಅನಾವಶ್ಯಕ ರೋಗ ನಿರೋಧಕ ಔಷಧ ಬಳಕೆಯ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ನಾಲ್ವರಿಗೆ ವೈದ್ಯಕೀಯ ವೃತ್ತಿಯಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.


ಮಕ್ಕಳ ಸ್ವಾಸ್ಥ್ಯ ವಿಭಾಗದ ಮುಖ್ಯಸ್ಥ ಡಾ. ಓನೀಲ್ ಫೆರ್ನಾಂಡಿಸ್ ಸ್ವಾಗತಿಸಿದರು. ವೇದಿಕೆಯಲ್ಲಿ ಡಾ. ಎಂ.ವಿ. ಪ್ರಭು, ಡಾ. ಅಂಜನ್ ಕುಮಾರ್, ಡಾ. ರೋಹನ್ ಮೋನಿಸ್, ಡಾ. ಮನೋಹರ್ ರೇವಂಕರ್, ಡಾ. ಯಶ್ವಂತ್ ಕುಮಾರ್ ಉಪಸ್ಥಿತರಿದ್ದರು. 


ಡಾ. ಡೈಲಾನ್ ಡಿ’ಸೋಜಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ವಂದಿಸಿದರು. ಈ ಕಾರ್ಯಾಗಾರವು ಸುಮಾರು 150 ವೈದ್ಯಕೀಯ ಪ್ರತಿನಿಧಿಗಳಿಗೆ ವಿಶೇಷ ಆಸಕ್ತಿ ಮೂಡಿಸಿತ್ತು. 


Post a Comment

0 Comments
Post a Comment (0)
To Top