ಪಂಪ್‌ವೆಲ್–ಕರಾವಳಿ ರಸ್ತೆ ಕಾಮಗಾರಿ ಹಿನ್ನೆಲೆ: 4 ತಿಂಗಳು ಪರ್ಯಾಯ ಸಂಚಾರ ವ್ಯವಸ್ಥೆ

Upayuktha
0

 ಮಂಗಳೂರು ನಗರ ಸಂಚಾರ ಮಾರ್ಗಗಳಲ್ಲಿ ಮಹತ್ವದ ಬದಲಾವಣೆ





ಮಂಗಳೂರು, ಫೆ. 14: ಮಂಗಳೂರು ನಗರದ ಪ್ರಮುಖ ಸಂಚಾರ ಮಾರ್ಗವಾದ ಪಂಪ್‌ವೆಲ್ ವೃತ್ತ–ಕರಾವಳಿ ಜಂಕ್ಷನ್ ನಡುವಿನ ಚತುಷ್ಪಥ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ನಗರ ಸಂಚಾರ ಮಾರ್ಗಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಈ ಕಾಮಗಾರಿ ಫೆಬ್ರವರಿ 15ರಿಂದ ಜೂನ್ 15ರವರೆಗೆ ನಾಲ್ಕು ತಿಂಗಳುಗಳ ಕಾಲ ನಡೆಯಲಿದೆ.


ಈ ಅವಧಿಯಲ್ಲಿ ಸಂಚಾರ ದಟ್ಟಣೆ ತಪ್ಪಿಸುವ ಹಾಗೂ ಸಾರ್ವಜನಿಕರ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಹಾಗೂ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಿದೆ.


ಏಕಮುಖ ಸಂಚಾರ ವ್ಯವಸ್ಥೆ ಜಾರಿ

ಕಾಮಗಾರಿ ನಡೆಯುವ ಅವಧಿಯಲ್ಲಿ, ಪಂಪ್‌ವೆಲ್ ವೃತ್ತದಿಂದ ಕಂಕನಾಡಿ ಹಳೆ ರಸ್ತೆ ಮೂಲಕ ಕಂಕನಾಡಿ ಜಂಕ್ಷನ್‌ಗೆ (ಮಂಗಳೂರು ನಗರಕ್ಕೆ ಒಳಬರುವ ವಾಹನಗಳಿಗೆ); ಕರಾವಳಿ ಜಂಕ್ಷನ್‌ನಿಂದ ಪಂಪ್‌ವೆಲ್ ವೃತ್ತದವರೆಗೆ ಬೈಪಾಸ್ ರಸ್ತೆಯ ಮೂಲಕ (ನಗರದಿಂದ ಹೊರ ಹೋಗುವ ವಾಹನಗಳಿಗೆ) ತಾತ್ಕಾಲಿಕ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿರುತ್ತದೆ.


ಪರ್ಯಾಯ ಸಂಚಾರ ಮಾರ್ಗಗಳು

ಸಾರ್ವಜನಿಕರು ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ:


ಪಂಪ್‌ವೆಲ್ ಜಂಕ್ಷನ್‌ನಿಂದ ಕರಾವಳಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಅವುಗಳನ್ನು ಕಂಕನಾಡಿ ಹಳೆ ರಸ್ತೆಯ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ.


ತಲಪಾಡಿ ಹಾಗೂ ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರ ಪ್ರವೇಶಿಸುವ ಎಲ್ಲಾ ವಾಹನಗಳು ➝ ಮಹಾಕಾಳಿಪಡ್ಪು – ಮಾರ್ಗನ್ಸ್ ಗೇಟ್ – ಕೋಟಿಚೆನ್ನಯ ಸರ್ಕಲ್ ಅಥವಾ ಮಂಗಳಾದೇವಿ ಮಾರ್ಗವಾಗಿ ಸಂಚರಿಸಬೇಕು.


ಬಿ.ಸಿ. ರೋಡ್ ಕಡೆಯಿಂದ ಬರುವ ಭಾರಿ ವಾಹನಗಳು, ಇತರೆ ವಾಹನಗಳು ಹಾಗೂ ಲಾಲ್‌ಬಾಗ್ ಬಸ್ ನಿಲ್ದಾಣಕ್ಕೆ ತೆರಳುವ KSRTC ಬಸ್‌ಗಳು ➝ ಪಡೀಲ್ ಜಂಕ್ಷನ್‌ನಿಂದ ನಂತೂರು ಕಡೆಗೆ ಸಂಚರಿಸಬೇಕು.


ಕೇರಳ–ಕಾಸರಗೋಡು ಕಡೆಯಿಂದ ಕರಾವಳಿ ಮಾರ್ಗವಾಗಿ ಬರುವ ಭಾರಿ ವಾಹನಗಳು ಮತ್ತು KSRTC ಬಸ್‌ಗಳು ➝ ಪಂಪ್‌ವೆಲ್ ಜಂಕ್ಷನ್‌ನಿಂದ ನಂತೂರು ಕಡೆಗೆ ಸಂಚರಿಸಬೇಕು.


ಮಂಗಳೂರು ನಗರದ ಒಳಭಾಗದಿಂದ ಕರಾವಳಿ ಜಂಕ್ಷನ್ ಮೂಲಕ ಪಂಪ್‌ವೆಲ್ ಕಡೆಗೆ ಸಂಚರಿಸುವ ವಾಹನಗಳಿಗೆ ಯಾವುದೇ ಬದಲಾವಣೆ ಇರುವುದಿಲ್ಲ.


ವಾಹನ ನಿಲುಗಡೆಗೆ ಸಂಪೂರ್ಣ ನಿರ್ಬಂಧ

ಸಂಚಾರ ಸುಗಮತೆಗೆ ಕೆಳಕಂಡ ರಸ್ತೆಗಳಲ್ಲಿ ವಾಹನ ನಿಲುಗಡೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ:

ಕಂಕನಾಡಿ ಜಂಕ್ಷನ್–ಪಂಪ್‌ವೆಲ್ ರಸ್ತೆ (ಕಂಕನಾಡಿ ಹಳೆ ರಸ್ತೆ)

ಕರಾವಳಿ–ಕಂಕನಾಡಿ ರಸ್ತೆ

ಕಂಕನಾಡಿ–ಫಳ್ನೀರ್ (ಹೈಲ್ಯಾಂಡ್ ಆಸ್ಪತ್ರೆ ರಸ್ತೆ)

ಕರಾವಳಿ–ಬಲ್ಮಠ ರಸ್ತೆ

ಕಂಕನಾಡಿ ಬೈಪಾಸ್ ರಸ್ತೆ (ಎರಡೂ ಬದಿಗಳು)


ಪೊಲೀಸ್ ಇಲಾಖೆಯ ಮನವಿ

ಕಾಮಗಾರಿ ಅವಧಿಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಸಂಯಮದಿಂದ ಸಂಚರಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.



Post a Comment

0 Comments
Post a Comment (0)
To Top