ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಬೆಳಿಗ್ಗೆ ಕಣ್ಣು ತೆರೆದ ಕ್ಷಣದಿಂದ ಹಿಡಿದು ರಾತ್ರಿ ಮಲಗುವ ತನಕವೂ ನಾವು ಮೊಬೈಲ್ ಪರದೆಯಲ್ಲೇ ಬದುಕುತ್ತಿರುವಂತಾಗಿದೆ. ಮೊಬೈಲ್ ಇಲ್ಲದೆ ಒಂದು ದಿನ ಕಳೆಯುವುದು ಅಸಾಧ್ಯವೆನ್ನುವಷ್ಟು ಅದು ನಮ್ಮ ಜೀವನವನ್ನು ಆವರಿಸಿದೆ. ಆದರೆ ಆ ಒಂದು ದಿನ ಮೊಬೈಲ್ ಕೈ ತಪ್ಪಿದರೆ ನಮ್ಮ ಬದುಕಿನಲ್ಲಿ ಎಂತಹ ಬದಲಾವಣೆಗಳು ಸಂಭವಿಸಬಹುದು ಎಂಬುದನ್ನು ನಾನು ಸ್ವತಃ ಅನುಭವಿಸಿದೆ.
ಮೊಬೈಲ್‌ನ ಆಕರ್ಷಣೆಗೆ ಒಳಗಾಗಿ ನಾವು ಅನೇಕ ಅಮೂಲ್ಯ ಸಂಗತಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸ್ನೇಹ, ಕುಟುಂಬದ ಸಾನ್ನಿಧ್ಯ, ನಿಜವಾದ ಸಂತೋಷ- ಇವೆಲ್ಲವೂ ಪರದೆಯ ಹಿಂದೆ ಮರೆಯಾಗುತ್ತಿದೆ. ಒಂದು ದಿನ ಕಾಲೇಜಿಗೆ ಹೊರಡುವಾಗ ಆಗಿದ್ದ ಅವಸರದಲ್ಲಿ ನನ್ನ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಹೊರಟೆ. ಆದರೆ ಆ ಕ್ಷಣಕ್ಕೆ ಅದು ನನ್ನ ಗಮನಕ್ಕೆ ಬಂದಿರಲಿಲ್ಲ. ಬಸ್ ನಿಲ್ದಾಣದಲ್ಲಿ ನಿಂತು ಸಮಯ ನೋಡಲು ಜೇಬಿಗೆ ಕೈ ಹಾಕಿದಾಗ ಮೊಬೈಲ್ ಇಲ್ಲದಿರುವುದು ಗೊತ್ತಾಯಿತು. ಆಗಲೇ ನೆನಪಾಯಿತು- ನನ್ನ ಅವಸರವೇ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಬರಲು ಕಾರಣವಾಗಿದೆ ಎಂದು.
ಸ್ವಲ್ಪ ಅಸಮಾಧಾನ ಮನಸ್ಸಿನಲ್ಲಿದ್ದರೂ ಬಸ್ ಬಂದಾಗ ಅದರಲ್ಲಿ ಹತ್ತಿದೆ. ಕುಳಿತುಕೊಳ್ಳಲು ಸೀಟ್ ಇರಲಿಲ್ಲ, ನಿಂತುಕೊಂಡೇ ಪ್ರಯಾಣ ಆರಂಭವಾಯಿತು. ‘ಇಂದು ಮೊಬೈಲ್ ಇಲ್ಲದೆ ದಿನ ಹೇಗಿರಬಹುದು?’ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು. ಬಸ್ಸಿನೊಳಗೆ ನೋಡಿದಾಗ ಬಹುತೇಕ ಜನರು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ, ಮಾತನಾಡುತ್ತಾ ತಮ್ಮದೇ ಲೋಕದಲ್ಲಿ ಮುಳುಗಿದ್ದರು. ಆದರೆ ಅವರ ಮಧ್ಯೆ ಒಬ್ಬ ವ್ಯಕ್ತಿ ಮಾತ್ರ ವಿಭಿನ್ನವಾಗಿ ಕಾಣಿಸಿಕೊಂಡರು. ಅವರ ಕೈಯಲ್ಲೂ ಮೊಬೈಲ್ ಇದ್ದರೂ, ಅವಶ್ಯಕ ಮಾತುಕತೆಗೆ ಮಾತ್ರ ಬಳಸಿದರು. ಬಳಿಕ ಕಿಟಕಿಯಿಂದ ಹೊರಗೆ ಕಾಣುವ ಪ್ರಕೃತಿಯನ್ನು ನೋಡುವುದರಲ್ಲಿ ತೊಡಗಿದರು. ಅವರ ಮುಖದಲ್ಲಿ ಕಂಡ ನೆಮ್ಮದಿ ನನಗೆ ಅಚ್ಚರಿಯನ್ನೂ ಸಂತೋಷವನ್ನೂ ನೀಡಿತು. ಆ ಕ್ಷಣದಲ್ಲಿ ಮೊಬೈಲ್ ಇಲ್ಲದ ಜೀವನವೂ ಎಷ್ಟೊಂದು ಶಾಂತವಾಗಿರಬಹುದು ಎಂಬ ಭಾವನೆ ಮೂಡಿತು.
ಅಷ್ಟರಲ್ಲಿ ನನ್ನ ಕಾಲೇಜಿನ ನಿಲ್ದಾಣ ಬಂದಿತು. ಬಸ್ಸಿನಿಂದ ಇಳಿದು ಕಾಲೇಜಿಗೆ ತಲುಪಿದೆ. ಮೊದಲ ಅವಧಿ ಇಲ್ಲದ ಕಾರಣ ನಾನು ನನ್ನ ಸ್ನೇಹಿತೆಯರೊಂದಿಗೆ ಕ್ರೀಡಾಂಗಣದ ಕಡೆಗೆ ಹೋಗಿ ಕುಳಿತೆವು. ಸಾಮಾನ್ಯವಾಗಿ ಮೊಬೈಲ್ ಕೈಯಲ್ಲಿದ್ದರೆ ಪ್ರತಿಯೊಬ್ಬರೂ ಅದನ್ನೇ ನೋಡುತ್ತಾ ಸಮಯ ಕಳೆಯುತ್ತಿದ್ದೆವು. ಆದರೆ ಆ ದಿನ ಮೊಬೈಲ್ ಇಲ್ಲದ ಕಾರಣ ನಾವು ಪರಸ್ಪರ ಮಾತನಾಡುತ್ತಾ, ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ನಗುತ್ತಾ ಸಮಯ ಕಳೆದಿತು. ಆ ಒಂದು ಗಂಟೆ ನನಗೆ ಅಪಾರ ಸಂತೋಷ ನೀಡಿತು.
ಆಗ ನನಗೆ ಸ್ಪಷ್ಟವಾಗಿ ಅರಿವಾಯಿತು- ಮೊಬೈಲ್ ಮರೆತದ್ದು ನನಗೆ ನಷ್ಟವಲ್ಲ, ಲಾಭವೇ ಆಗಿದೆ. ಮೊಬೈಲ್ ಕೊಡಲಾರದ ಪ್ರೀತಿ, ಕಾಳಜಿ ಮತ್ತು ಆತ್ಮೀಯತೆಯನ್ನು ನನ್ನ ಸ್ನೇಹಿತೆಯರು ನನಗೆ ನೀಡಿದ್ದಾರೆ. ಮೊಬೈಲ್ ಇಲ್ಲದ ದಿನ ಮನಸ್ಸು ಹೆಚ್ಚು ಶಾಂತವಾಗಿತ್ತು. ಕಣ್ಣುಗಳಿಗೆ ವಿಶ್ರಾಂತಿ ಸಿಕ್ಕಿತು. ಸುತ್ತಮುತ್ತಲಿನ ಪ್ರಕೃತಿಯನ್ನು ಗಮನಿಸುವ ಅವಕಾಶ ದೊರೆಯಿತು. ಆ ಒಂದು ದಿನ ನನಗೆ ಕಲಿಸಿದ ಪಾಠ ಎಂದರೆ—ಮೊಬೈಲ್‌ನಿಂದ ದೂರವಾದಾಗಲೇ ನಿಜವಾದ ಬದುಕಿನ ಸೌಂದರ್ಯ ನಮಗೆ ಗೋಚರಿಸುತ್ತದೆ.
– ಸ್ವಾತಿ ಡಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


