ಮಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ 1000 ದಿನಗಳ ಆಡಳಿತವನ್ನು ತೀವ್ರವಾಗಿ ಟೀಕಿಸಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, “ಜನ ಸಂಕಷ್ಟ ಅನುಭವಿಸುತ್ತಿರುವಾಗ ಸರಕಾರ ಸಂಭ್ರಮಾಚರಣೆ ಮಾಡುತ್ತಿರುವುದು ವಿಕೃತ ಮನೋಭಾವದ ಪರಮಾವಧಿ” ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಉದ್ದೇಶಿಸಿ, “ಸಾಲ ಮಾಡುವುದರಲ್ಲಿ ನೀವು ದಾಖಲೆ ನಿರ್ಮಿಸಿದ್ದೀರಿ. ಅಧಿಕಾರಕ್ಕೆ ಬಂದ ಮೊದಲ ಎರಡೂವರೆ ವರ್ಷಗಳಲ್ಲಿ ಐದು ಲಕ್ಷ ಕೋಟಿ ರೂಪಾಯಿ ಸಾಲ ಮೀರಿಸಿದ್ದು, ಇತರ ಸಾಲಗಳನ್ನು ಸೇರಿಸಿದರೆ ಒಟ್ಟು ಸಾಲ ಏಳು ವರೆ ಲಕ್ಷ ಕೋಟಿ ರೂಪಾಯಿ ದಾಟಿದೆ” ಎಂದು ಹೇಳಿದರು.
ಜನ ಸಂಕಷ್ಟದಲ್ಲಿ ಸಂಭ್ರಮ ಅಸಂಗತ
ಜನರು ಬೆಲೆ ಏರಿಕೆ, ನಿರುದ್ಯೋಗ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟದಲ್ಲಿರುವಾಗ ಸರಕಾರ ಸಂಭ್ರಮಾಚರಣೆ ನಡೆಸುತ್ತಿರುವುದು ಅಸಹ್ಯಕರ ಎಂದು ರವಿ ಕಿಡಿಕಾರಿದರು. “ಇದು ಹೆಮ್ಮೆಪಡುವ ವಿಷಯವಲ್ಲ, ತಲೆ ತಗ್ಗಿಸಬೇಕಾದ ಆಡಳಿತ” ಎಂದರು.
ಆರೋಗ್ಯ, ಮೂಲಸೌಕರ್ಯಗಳಲ್ಲಿ ವಿಫಲತೆ
ರಾಜ್ಯದಲ್ಲಿ ಆಸ್ಪತ್ರೆಗಳಿಗೆ ಸಮರ್ಪಕ ಔಷಧ ಸರಬರಾಜು ಮಾಡಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಬಂಡವಾಳ ಹೂಡಿಕೆ ನಡೆಯುತ್ತಿಲ್ಲ ಎಂದರು. ಸರಕಾರದ ಆದಾಯದಲ್ಲಿ ಸುಮಾರು 15,000 ಕೋಟಿ ರೂಪಾಯಿ ಖೋತಾ ಆಗುತ್ತಿದೆ ಎಂದು ಹೇಳಿದರು.
ಭ್ರಷ್ಟಾಚಾರದ ಸರಣಿ ಆರೋಪ
ರಾಜ್ಯದಲ್ಲಿ ನಡೆದಿರುವ ಹಲವು ಹಗರಣಗಳನ್ನು ಉಲ್ಲೇಖಿಸಿದ ಸಿ.ಟಿ. ರವಿ ಅವರು, ಮೂಡಾ, ವಾಲ್ಮೀಕಿ ಹಾಗೂ ವಕ್ಫ್ ಹಗರಣಗಳ ಜೊತೆಗೆ 11 ಇಲಾಖೆಯಲ್ಲಿ 47 ಕೋಟಿ ರೂಪಾಯಿ ದುರುಪಯೋಗ ನಡೆದಿದೆ ಎಂದು ಆರೋಪಿಸಿದರು.
ಮದ್ಯ ವರ್ತಕರಿಂದ ವಸೂಲಿ, ಸ್ಮಾರ್ಟ್ ಮೀಟರ್ ಯೋಜನೆಯಲ್ಲಿ 15,000 ಕೋಟಿ ರೂಪಾಯಿ ಲೂಟಿ, ಕಸ ಗುಡಿಸುವ ಯಂತ್ರಗಳ ಹೆಸರಿನಲ್ಲಿ ದುರುಪಯೋಗ ನಡೆದಿದೆ ಎಂದು ಅವರು ಹೇಳಿದರು.
ಯೋಜನೆಗಳ ಮೇಲೂ ಟೀಕೆ
ಬಿಪಿಎಲ್ ಕಾರ್ಡ್ ಹೊಂದಿದವರನ್ನು ಎಪಿಎಲ್‌ಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಶಕ್ತಿ ಯೋಜನೆಯ ಪರಿಣಾಮವಾಗಿ ಕೆಎಸ್‌ಆರ್‌ಟಿಸಿ ಆರ್ಥಿಕವಾಗಿ ನಿಶ್ಯಕ್ತಿ ಆಗಿದೆ ಎಂದು ಹೇಳಿದರು. “ಇಂದು ಬಸ್ಸುಗಳು ತಳ್ಳುವ ಗಾಡಿಗಳಂತಾಗಿವೆ” ಎಂದು ವ್ಯಂಗ್ಯವಾಡಿದರು.
ಆಡಳಿತ ವೈಫಲ್ಯ ಮತ್ತು ಗೊಂದಲ
ಜನರು ಕಾಂಗ್ರೆಸ್‌ಗೆ 136 ಸ್ಥಾನಗಳನ್ನು ನೀಡಿದ್ದರೂ, ಅಧಿಕಾರ ಹಂಚಿಕೆ ಹಾಗೂ ಕುರ್ಚಿ ರಾಜಕಾರಣದಿಂದ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ ಎಂದು ರವಿ ಆರೋಪಿಸಿದರು. ಜನರು ತಮ್ಮ ಅಹವಾಲು ಹೇಳಲು ಹೋದರೆ ಶಾಸಕರಿಂದಲೇ ಧಮಕಿ ಎದುರಿಸಬೇಕಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಶಾಸಕರ ಕುರಿತ ಆರೋಪ ರಾಜಕೀಯ ಪ್ರೇರಿತ
ಬಿಜೆಪಿ ಶಾಸಕ ಭೈರತಿ ಬಸವರಾಜ್ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದ ಅವರು, ಸುಪ್ರೀಂ ಕೋರ್ಟ್ ಕೇವಲ ಕಾನೂನು ಪ್ರಕ್ರಿಯೆ ಎದುರಿಸಲು ಸೂಚನೆ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಕೊನೆಯಲ್ಲಿ ಮಾತನಾಡಿದ ಅವರು, “ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ರೋಲ್ ಮಾಡೆಲ್ ಆಗಿದೆ. ನಿಮ್ಮ ವೈಫಲ್ಯಗಳಿಗೆ ಕೇಂದ್ರ ಸರ್ಕಾರದ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಡಬೇಕು” ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಜಿಲ್ಲಾ ಪ್ರಧಾನಿ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


