ಪ್ರಧಾನಿ ಮೋದಿಯವರ ಮಾತುಗಳು ಕೇವಲ 10, 12 ನೇ ತರಗತಿಯ ಮಕ್ಕಳಿಗೆ ಮಾತ್ರ ಅಲ್ಲ

Upayuktha
0



"ನನಗೆ ವಿಭಿನ್ನ ರೀತಿಯಲ್ಲಿ ಕೆಲಸ ಮಾಡುವಂತೆ ಸಲಹೆ ನೀಡುತ್ತಾರೆ. ಆದರೆ ಪ್ರತಿಯೊಬ್ಬರೂ ತಮ್ಮದೇ ಆದ ಮಾದರಿಯನ್ನು ಅನುಸರಿಸುತ್ತಾರೆ. ನಾನೂ ಕೂಡ ಸ್ವಂತ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತೇನಾದರೂ, ಇತರರು ನೀಡುವ ಸಲಹೆಗಳನ್ನು ಕೇಳುತ್ತೇನೆ.


ಕೆಲವರು ಬೆಳಗಿನ ಸಮಯದಲ್ಲಿ ಉತ್ತಮವಾಗಿ ಅಧ್ಯಯನ ಮಾಡುತ್ತಾರೆ. ಇನ್ನೂ ಕೆಲವರು ರಾತ್ರಿಯ ವೇಳೆ ಅಧ್ಯಯನಕ್ಕೆ ಕೂರುತ್ತಾರೆ. ನಿಮಗೆ ಯಾವುದು ಸರಿಹೊಂದುತ್ತದೆಯೋ ಅದನ್ನು ನಂಬಿರಿ. ಆದರೆ ಈ ಬಗ್ಗೆ ಇತರರು ನೀಡುವ ಸಲಹೆ ಯನ್ನು ಸ್ವೀಕರಿಸಿ, ಆ ಸಲಹೆ ನಿಮಗೆ ಪ್ರಯೋಜನ ನೀಡಿದರೆ, ಅದನ್ನು ನಿದ್ದು ಜೀವನದಲ್ಲಿ ಅಳವಡಿಸಿ ಕೊಳ್ಳಿ.  ಜೀವನದಲ್ಲಿ ಯಶಸ್ಸು ಸಾಧಿಸಲು ಒಂದು ಸೂತ್ರವನ್ನು ಅನುಸರಿಸಬೇಕು ಮತ್ತು ಸೂತ್ರದ ಮೇಲೆ ಅಚಲವಾದ ವಿಶ್ವಾಸ ಹೊಂದಿರಬೇಕು." ಇದು ಮೋದಿ ಅಜ್ಜನ ಮಾತುಗಳು.  


ನಿನ್ನೆ ಮೋದಿ ಅಜ್ಜ ಅಸ್ಸಾಮಿನ ಸಾಂಪ್ರದಾಯಿಕ ಕೆಂಪು ಬಣ್ಣದ ವಿಶಿಷ್ಟವಾದ ಕಸೂತಿಯ ಅಸ್ಸಾಮೀಸ್ ಗಮೋಸಾ ಹೊದ್ದು, ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ರಾಷ್ಟ್ರದ 6.76 ಕೋಟಿ ವಿದ್ಯಾರ್ಥಿಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತಾಡಿದಂತೆ ಆಪ್ತರಾಗಿ ಮಾತಾಡ್ತಾ ಇದ್ರೆ, ಕೆಲವರಿಗೆ ಚಿಕ್ಕವರಿದ್ದಾಗ ಮನೆಯಲ್ಲಿದ್ದ ಅಜ್ಜನೋ, ದೊಡ್ಡಪ್ಪನೋ, ಮಾವನೋ ಹೀಗೆ ಮಾತಾಡ್ತಾ ಇದ್ದ ಚಿತ್ರಗಳು ನೆನಪಾಗಬಹುದು.


**


ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರುರವರಿಗೆ  ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ ಇತ್ತಂತೆ. ಮಕ್ಕಳೊಡನೆ ಆಟವಾಡುವುದೆಂದರೆ ಅವರಿಗೆ ಆನಂದವಾಗಿತ್ತಂತೆ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತ ವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ಸಭೆ ಸಮಾರಂಭಗಳಲ್ಲೂ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರಂತೆ. "ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಿದ್ದರು" ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಉಲ್ಲೇಖಿಸಿದ್ದಾರೆ. ಬಹುಷಃ ಅವರ ಈ ಗುಣಕ್ಕಾಗಿಯೇ ಜವಾಹರ್‌ಲಾಲ್ ನೆಹರು ಅವರ ಜನ್ಮದಿನ ನವೆಂಬರ್ 14ನ್ನು 'ಮಕ್ಕಳ ದಿನ' ಎಂದು ಮಾಡಿ, ಈಗಲೂ ಆಚರಿಸಲಾಗುತ್ತಿದೆ.


ಅದೇ ರೀತಿ, ಡಾ.ಅಬ್ದುಲ್ ಕಲಾಂ ಮಕ್ಕಳೊಂದಿಗೆ ಅತ್ಯಂತ ಆತ್ಮೀಯರಾಗಿದ್ದ ವಿಜ್ಞಾನಿ ಮತ್ತು ಜನಪ್ರಿಯ ರಾಷ್ಟ್ರಪತಿ. ಅವರು ಮಕ್ಕಳಲ್ಲಿನ ಮಗುವಿನ ಮನಸ್ಸನ್ನು ಅರ್ಥಮಾಡಿಕೊಂಡು, ಅವರ ಜ್ಞಾನ ಮತ್ತು ಕನಸುಗಳನ್ನು ಪೋಷಿಸಲು ಆದ್ಯತೆ ನೀಡುತ್ತಿದ್ದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ದೇಶದ ವಿವಿಧ ಭಾಗಗಳ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರದ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ತರಲಾಗಿದೆ. "ಚಿಲ್ರೆನ್ ಆಸ್ಕ್ ಕಲಾಂ" ಪುಸ್ತಕವು ಶಿಕ್ಷಣ, ವಿಜ್ಞಾನ, ಕನಸುಗಳು, ರಾಷ್ಟ್ರ ಮತ್ತು ಆಧ್ಯಾತ್ಮಿಕತೆಯಂತಹ ವಿಷಯಗಳ ಕುರಿತು ಮಕ್ಕಳ ಜಿಜ್ಞಾಸೆಗೆ ಕಲಾಂ ಅವರ ಸರಳ ಮತ್ತು ಸ್ಪೂರ್ತಿದಾಯಕ ಉತ್ತರಗಳನ್ನು ಒಳಗೊಂಡಿದೆತಂತೆ.



ಬಹುಷಃ, ನೆಹರು ಮತ್ತು ಕಲಾಂ ನಂತರ ಮಕ್ಕಳ ಜೊತೆ ಆಪ್ತತೆಯಿಂದ ಬೆರೆಯುವ ರಾಜಕಾರಣಿ ಅಂದರೆ ಈಗಿನ ಪ್ರಧಾನಿ ಮೋದಿ.


ಏನೇ ಇರಲಿ, ನಿನ್ನೆಯ ಪರೀಕ್ಷಾ ಪೇ ಚರ್ಚಾ ರಿಯಲಿ ವಂಡರ್‌ಫುಲ್ ಕಾರ್ಯಕ್ರಮ.  


ಇವತ್ತು ಪೇಪರ್‌ಲ್ಲಿ ಪರೀಕ್ಷಾ ಪೇ ಚರ್ಚಾದ ಸುದ್ಧಿ ಪ್ರಕಟವಾಗಿದ್ದನ್ನು ಓದಿದ ಒಬ್ಬರು "ಪರೀಕ್ಷಾ ಪೇ ಚರ್ಚಾ ಕೂಡ ಮೋದಿಯವರ ರಾಜಕಾರಣದ ಒಂದು ತಂತ್ರ" ಅಂದರು!! ಅವರ ಅಭಿಪ್ರಾಯದಲ್ಲಿ "ದೇಶದ 10 ಮತ್ತು 12ನೇ ತರಗತಿಯ ಮಕ್ಕಳಿಗೆ ಈ ರೀತಿ ಕೌನ್ಸಿಲಿಂಗ್ ಕಾರ್ಯಕ್ರಮ ಮಾಡಿ, ಮಕ್ಕಳ ಮನಸ್ಸಿನಲ್ಲಿ ಆಪ್ತ ಭಾವದ ಛಾಪನ್ನು ಮೂಡಿಸಿದರೆ, ಈಗ 16-18 ವರ್ಷ ಇರುವ ಆ ಆರುವರೆ ಕೋಟಿ ಮಕ್ಕಳು, ಮತದಾನದ ಹಕ್ಕು ಪಡೆದ ನಂತರ ಖಂಡಿತವಾಗಿ ಅವರು ಮೋದಿಗೆ ಮತದಾನ ಮಾಡುತ್ತಾರೆ" ಅಂದರು. ಲಾಜಿಕ್ ಅಸಹಜ ಅಂತ ಅನ್ನಿಸಿದರೂ, ಒಂದಿಷ್ಟು ಮಕ್ಕಳು ಮೋದಿಗೆ ಮತ ಹಾಕುವ ಮತದಾರರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಅನ್ನುವುದು ಸತ್ಯ.  


ಮೋದಿಯವರ ಮನ್‌ಕೀ ಬಾತ್, ರಾಷ್ಟ್ರದ ಉನ್ನತ ಪ್ರಶಸ್ತಿಗಳಿಗೆ ನಿಜವಾದ ಸಾಧಕರನ್ನು ಗುರುತಿಸುವ ಪ್ರಕ್ರಿಯೆ, ಪರೀಕ್ಷಾ ಪೆ ಚರ್ಚಾದಂತಹ ಕಾರ್ಯಕ್ರಮಗಳ ಹಿಂದೆ ಮತ ಬ್ಯಾಂಕ್ ರಾಜಕಾರಣದ ಸಾಧ್ಯತೆ ಇದೆ ಅಂತ ಅನಿಸುವುದಿಲ್ಲ. ಒಂದು ವೇಳೆ ಇಂತಹ ಸತ್ಕರ್ಮಾನುಷ್ಠಾನ ಕಾರ್ಯಗಳೂ ಮತಗಳನ್ನು ತಂದು ಕೊಡುತ್ತವೆ ಅಂತಾದರೆ.... ಜನರಿಗೆ, ಸಮಾಜಕ್ಕೆ ಒಳ್ಳೆಯದಾಗುವ ಸತ್ಕರ್ಮಾನುಷ್ಠಾನಗಳು ಹೆಚ್ಚಾಗಲಿ, ಮತವನ್ನೂ ತಂದುಕೊಡಲಿ.   


**


ಇನ್ನು, ಯಾವುದೇ ಪಕ್ಷದ ಯಾವುದೇ ರಾಜಕಾರಣಿಗಳನ್ನು ಯಾವುದೇ ಸಂದರ್ಭದಲ್ಲಿ ಗಮನಿಸಿದರೂ, ಹತ್ತಿರದ ಸಂಪರ್ಕಕ್ಕೆ ಬಂದರೂ.. ಬಹುತೇಕ ಎಲ್ಲರೂ ಯಾವುದೋ ಒಂದು ದಾವಂತದಲ್ಲಿ ಇದ್ದಂತೆ ಇರುತ್ತಾರೆ. ಒಂದು ಕೃತಕ ನಾಟಕೀಯತೆಯೂ ಕಾಣಿಸುತ್ತಿರುತ್ತದೆ. ಎಷ್ಟೇ ಮುಖ್ಯ ಕಾರ್ಯಕ್ರಮ ಆದರೂ, ಸಮಯಕ್ಕೆ ಸರಿಯಾಗಿ ಅವರು ಬರುವುದಿಲ್ಲ. ಬಂದ ಮೇಲೂ ಇನ್ಯವುದೋ ಕಾರ್ಯಕ್ರಮಕ್ಕೆ ಹೋಗುವ ಗಡಿಬಿಡಿಯೇ ಅವರ ಮುಖ, ದೇಹ, ಮಾತುಗಳಲ್ಲಿ ಇದ್ದಂತೆ ಕಾಣುತ್ತಿರುತ್ತದೆ. ಕಡಿಮೆ ಗೊತ್ತಿದ್ದರೂ 'ನನಗೆಲ್ಲ ಗೊತ್ತು' ಅನ್ನುವ ಸಣ್ಣ (ದೊಡ್ಡ!?) ಅಹಂಕಾರ, ನನ್ನ ಹೊರತಾಗಿ ಉಳಿದವರೆಲ್ಲರೂ ಬೌದ್ಧಿಕವಾಗಿ ಸಣ್ಣವರು ಅನ್ನುವಂತೆ ಅವರ ಕಣ್ಣು, ಧ್ವನಿ, ನಿರ್ಣಯಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ಆದರೆ, ಗಮನಿಸಿದಂತೆ ಮೋದಿಯವರು ಇದಕ್ಕೊಂದು ಅಪವಾದದಂತೆ ಕಾಣುತ್ತಾರೆ.  ಮೋದಿಯವರ ಎಲ್ಲಾ ಕಾರ್ಯಕ್ರಮಗಳಲ್ಲೂ ಅವರ ಮುಖ ಭಾವ, ಮಾತು, ಬಾಡಿ ಲಾಂಗ್ವೇಜ್‌ಗಳಲ್ಲಿ ಈಗ ಭಾಗವಹಿಸುತ್ತಿರುವ ಕಾರ್ಯಕ್ರಮವೇ ಉತ್ಕೃಷ್ಟವಾದ ಕಾರ್ಯಕ್ರಮ ಎಂದು ತೊಡಗಿಸಿಕೊಂಡಂತೆ ಕಾಣುತ್ತದೆ.  ಕಾರ್ಯಕ್ರಮದ ಒಳಗಡೆ ಸಂಪೂರ್ಣ ಇನ್ವಾಲ್ ಆಗಿರುತ್ತಾರೆ. ನಿನ್ನೆ ನೆಡೆದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಬೇರೆ ಯಾವುದೇ ಒತ್ತಡ ಇಲ್ಲದೆ ನಿವೃತ್ತಿ ಜೀವನದಲ್ಲಿರುವ ಹಿರಿಯ ಅಜ್ಜನಂತೆ ಸಮಾಧಾನದ ಭಾವದಲ್ಲಿ ಮಾತಾಡ್ತಾ ಇದ್ದರು. ಹಿಂದಿನ ದಿನ ಸಂಸತ್‌ನ ಮೇಲ್ಮನೆಯಲ್ಲಿ ಮತ್ಸದ್ಧಿ, ಕುಶಲ ರಾಜಕಾರಣಿಯಾಗಿ ಅಬ್ಬರದ ಮಾತಾಡಿದ್ದು ಇದೇ ಮೋದಿಯವರಾ? ಎನ್ನುವಂತಿತ್ತು ಪರೀಕ್ಷಾ ಪೇ ಚರ್ಚಾದ ಮಾತುಗಳಲ್ಲೂ ನಾಟಕೀಯತೆ ಕಾಣಿಸಲಿಲ್ಲ.  


ನೆಹರುರವರನ್ನು ನೋಡಿಲ್ಲ. ಕಲಾಂರವರನ್ನು, ಅವರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದನ್ನು, ಅದರಲ್ಲೂ ಮುಖ್ಯವಾಗಿ ಮಕ್ಕಳ ಜೊತೆ ಬೆರೆಯುವುದನ್ನು ನಾವು ಮಾಧ್ಯಮಗಳಲ್ಲಿ ಕಂಡಿದ್ದೇವೆ, ಓದಿದ್ದೇವೆ.  ಮೋದಿಯವರ ಮನ್‌ಕೀ ಬಾತ್, ಪರೀಕ್ಷಾ ಪೆ ಚರ್ಚಾದಂತಹ ಕಾರ್ಯಕ್ರಮಗಳಲ್ಲಿ ಮೋದಿಯವರಲ್ಲಿ ಅಬ್ದುಲ್ ಕಲಾಂ ಕಾಣಿಸುತ್ತಾರೆ. 'ನನ್ನ ಸತ್ಯಾನ್ವೇಷಣೆ' ಪುಸ್ತಕದೊಳಗಿನ ಗಾಂಧಿ ಕಾಣಿಸುತ್ತಾರೆ.


ಇಡೀ ರಾಷ್ಟ್ರವನ್ನು ನಾಯಕರುಗಳು ಸೇರಿದ ವರ್ತಮಾನದ ಒಂದು ಕೊಠಡಿ ಎಂದು ಭಾವಿಸಿ.... ರಾಜಕೀಯ, ರಾಜಕಾರಣದ ಕೆಲಸ, ಅವರುಗಳ ನಿರ್ಣಯಗಳು, ನುಡಿ, ವಿಚಾರಗಳನ್ನು ಬದಿಗಿಟ್ಟು, ವ್ಯಕ್ತಿಯ ನಾಯಕತ್ವ ಗುಣ, ವ್ಯಕ್ತಿತ್ವ, ಸಾಧನೆ, ಜ್ಞಾನ, ಧಾರ್ಮಿಕ (ರಿಲಿಜಿಯನ್ ಅಲ್ಲ) ಮನೋಭಾವ, ಒಳಗಿರುವ ಚಿಂತನೆಗಳನ್ನು ಪರೀಕ್ಷಾ ಪೇ ಚರ್ಚಾದ ಸಿಲಬಸ್‌ಗೆ ತಂದು ಚರ್ಚಿಸಿ, ಮಾಪನ ಮಾಡಿದರೆ... ಸದ್ಯಕ್ಕೆ ರಾಷ್ಟ್ರವ್ಯಾಪಿಯಾಗಿ ಮೋದಿಗೆ ಸಮಾನಾಗಿ ಮತ್ತೊಬ್ಬ ನಾಯಕ ಕೊಠಡಿಯಲ್ಲಿ ಕಾಣಿಸುತ್ತಿಲ್ಲ. ಕೊಠಡಿ ಬಿಟ್ಟು ವಿಶ್ವ ಕಾಲೇಜ್‌ನಲ್ಲೂ ಕಾಣಿಸುತ್ತಿಲ್ಲ.


***



ನಿನ್ನೆಯ ಈ ಕಾರ್ಯಕ್ರಮ ನೋಡದೇ ಇರುವ ಮಕ್ಕಳಿದ್ದರೆ ಅವರಿಗೆ ಮೇಲಿನ ಲಿಂಕ್ ಬಳಸಿ ಈ ಕಾರ್ಯಕ್ರಮ ತೋರಿಸಬಹುದು.


ಪ್ರಧಾನಿ ಮೋದಿಯವರ ಮಾತುಗಳು ಕೇವಲ 10, 12 ನೇ ತರಗತಿಯ ಮಕ್ಕಳಿಗೆ ಮಾತ್ರ ಅಲ್ಲ, ನಮಗೂ, ನಿಮಗೂ, ಎಲ್ಲರಿಗೂ ಅಗತ್ಯವಾದುದು.

ನಮಸ್ಕಾರ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top