ಆಕಸ್ಮಿಕ ವೈಕಲ್ಯವನ್ನು ಮೀರಿ ಔದ್ಯಮಿಕ ಶಿಖರ ತಲುಪಿದ ಸಾಧಕ

Upayuktha
0

ಅಕಾಲಿಕವಾಗಿ ಅಗಲಿದ ಮಧ್ವಮೂರ್ತಿ ಆಚಾರ್ಯರಿಗೆ ಅಕ್ಷರ ನಮನ





ನಿನ್ನೆ ಶುಕ್ರವಾರ ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಔದ್ಯಮಿಕ ಕ್ಷೇತ್ರದ ಒಬ್ಬ ಅಪರೂಪದ ಸಾಧಕನನ್ನು ಕಳೆದುಕೊಂಡ ದುಃಖಕರ ಘಟನೆ ಸಮಾಜವನ್ನು ಮೌನಗೊಳಿಸಿದೆ.

ಉಡುಪಿ–ಪುತ್ತೂರಿನ ಪ್ರಸಿದ್ಧ ಧಾನ್ಯಲಕ್ಷ್ಮೀ ರೈಸ್ ಮಿಲ್‌ನ ಆಡಳಿತ ಪಾಲುದಾರರಾಗಿದ್ದ ಶ್ರೀ ಮಧ್ವಮೂರ್ತಿ ಆಚಾರ್ಯರು ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು.


ಸುಮಾರು 62 ವರ್ಷ ವಯಸ್ಸಿನ ಆಚಾರ್ಯರು, ಭಾನುವಾರ ನಡೆಯಲಿದ್ದ ವಿಕಲಚೇತನರ ಮ್ಯಾರಥಾನ್ ಓಟಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ತಮ್ಮ ವಿಶೇಷ ತ್ರಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ, ಪುತ್ತೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಬಂದ ದ್ವಿಚಕ್ರವಾಹನ ಭೀಕರವಾಗಿ ಗುದ್ದಿದ ಪರಿಣಾಮ ರಸ್ತೆಗೆ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.


ಆಚಾರ್ಯರ ಜೀವನಪಥವನ್ನು ತಿಳಿದಂತೆ ಅನೇಕ ಉಲ್ಲೇಖನೀಯ ಸಂಗತಿಗಳು ಮನಸ್ಸನ್ನು ಬೆಚ್ಚಿಬೀಳಿಸುತ್ತವೆ. ಬಾಲ್ಯದಿಂದಲೇ ಅತ್ಯಂತ ಉತ್ಸಾಹಿ, ಶಿಸ್ತಿನ ವಿದ್ಯಾರ್ಥಿಯಾಗಿದ್ದ ಅವರು ಉತ್ತಮ ಈಜುಗಾರರೂ ಹೌದು. ಸಂಸ್ಕಾರವಂತ ಕುಟುಂಬದಲ್ಲಿ ಬೆಳೆದ ಕಾರಣ, ಮೌಲ್ಯಗಳು ಅವರ ಜೀವನದ ನಿತ್ಯಸಾಥಿಯಾಗಿದ್ದವು.


ತರುಣ ವಯಸ್ಸಿನಲ್ಲಿ ಮರವೊಂದನ್ನು ಹತ್ತುವಾಗ ಸಂಭವಿಸಿದ ಅಪಘಾತದಿಂದ ಅವರು ಜೀವಪರ್ಯಂತ ವೈಕಲ್ಯವನ್ನು ಅನುಭವಿಸಬೇಕಾದ ದುರಂತ ಎದುರಾಯಿತು. ಆದರೆ ಆ ವೈಕಲ್ಯ ಅವರ ಆತ್ಮಸ್ಥೈರ್ಯವನ್ನು ಮಣಿಸಲಿಲ್ಲ. ಅಲ್ಪಕಾಲದಲ್ಲೇ ಸಾವರಿಸಿಕೊಂಡು, ಎದೆಗುಂದದೆ ಬದುಕನ್ನು ಹೊಸದಾಗಿ ಕಟ್ಟಿಕೊಂಡ ಧೈರ್ಯವೇ ಅವರ ವ್ಯಕ್ತಿತ್ವದ ದೊಡ್ಡ ಶಕ್ತಿ.


ತಮ್ಮ ತೀರ್ಥರೂಪರು ಸ್ಥಾಪಿಸಿದ್ದ ಧಾನ್ಯಲಕ್ಷ್ಮೀ ರೈಸ್ ಮಿಲ್‌ನ ಜವಾಬ್ದಾರಿಯನ್ನು ಹೊತ್ತು, ಅಪಾರ ಶ್ರಮ–ಸಾಹಸದಿಂದ ಅದನ್ನು ದೊಡ್ಡ ಉದ್ಯಮವಾಗಿ ರೂಪಿಸಿದ ಸಾಧನೆ ಅನಿರ್ವಚನೀಯ. ಸಹೋದರರ ಸಹಕಾರದೊಂದಿಗೆ, ಇಂದಿನ ಸಂಕೀರ್ಣ ಕಾಲಘಟ್ಟದಲ್ಲಿ- ಭತ್ತದ ಕೃಷಿಯೇ ಹಿನ್ನಗ್ಗುತ್ತಿರುವ ಸಂದರ್ಭದಲ್ಲಿ- ರೈಸ್ ಮಿಲ್‌ನ್ನು ಯಶಸ್ಸಿನ ದಾರಿಯಲ್ಲಿ ಕೊಂಡೊಯ್ದು, ನೂರಾರು ಕುಟುಂಬಗಳಿಗೆ ಜೀವನಾಧಾರ ಒದಗಿಸಿದರು.


ಆಚಾರ್ಯರಿಗೆ ಕೃಷಿಯ ಮೇಲಿನ ಗೌರವ ಮತ್ತು ಆಸಕ್ತಿ ಅಪಾರ. ತಮ್ಮದೇ ಗದ್ದೆಗಳಷ್ಟೇ ಅಲ್ಲದೆ, ಊರವರ ಹಲವು ಗದ್ದೆಗಳಲ್ಲಿ ನಾಟಿ ಕಾರ್ಯಗಳನ್ನು ಮುಂದುವರಿಸುತ್ತಿದ್ದರು. ಆಸಕ್ತ ಕೃಷಿಕರಿಗೆ ನೇಜಿ ತಯಾರಿಸಿ ನೀಡುವ ಮೂಲಕ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದರು.


ಉಡುಪಿಯಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಕೇದಾರೋತ್ಥಾನ ಟ್ರಸ್ಟ್ ಸಾವಿರಾರು ಯುವಕರ ಸಹಕಾರದಿಂದ ನೂರಾರು ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ನಡೆಸಿದಾಗ, ಬಂದ ಇಳುವರಿಯನ್ನು ಯಾವುದೇ ಲಾಭ–ನಷ್ಟ ಲೆಕ್ಕಾಚಾರವಿಲ್ಲದೆ ಸೇವಾಭಾವದಿಂದ ಅಕ್ಕಿಯಾಗಿ ಪರಿವರ್ತಿಸಿಕೊಟ್ಟವರೂ ಇದೇ ಮಧ್ವಮೂರ್ತಿ ಆಚಾರ್ಯರು.


ಪಡುಬಿದ್ರೆಯಲ್ಲೂ ಧಾನ್ಯಲಕ್ಷ್ಮೀ ರೈಸ್ ಮಿಲ್‌ನ ದೊಡ್ಡ ಘಟಕವನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಅವರು, ಸಮಾಜದ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಮನಮುಟ್ಟುವ ನೆರವು ನೀಡಿದ್ದರು.


ಜೀವನದಲ್ಲಿ ಅಕಾಲಿಕವಾಗಿ ಒದಗಿದ ವೈಕಲ್ಯದ ನೋವನ್ನು ನುಂಗಿ ಇಂತಹ ಸಾಧನೆ ಮತ್ತು ಸೇವೆಯನ್ನು ನಡೆಸಿದುದು ಹೆಮ್ಮೆಯ ಸಂಗತಿಯೇ ಸರಿ; ಆದರೆ ಅವರಿಗೂ ಮರಣವೂ ಅಕಾಲಿಕವಾಗಿ ಬಂದಿರುವುದು ತೀವ್ರ ವಿಷಾದನೀಯ.


ಅವಿವಾಹಿತರಾಗಿದ್ದ ಮಧ್ವಮೂರ್ತಿ ಆಚಾರ್ಯರು ವೃದ್ಧ ತಾಯಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.


ಮಧ್ವಮೂರ್ತಿ ಆಚಾರ್ಯರೇ, ಹೋಗಿ ಬನ್ನಿ…

ನೀವು ಜೀವನದಲ್ಲಿ ಎದುರಿಸಿದ ಸವಾಲುಗಳ ನಡುವೆಯೂ ಗಳಿಸಿದ ಸಾಧನೆ ಸಮಾಜಕ್ಕೆ ಶಾಶ್ವತ ಸ್ಫೂರ್ತಿಯಾಗಲಿ.

ನಿಮ್ಮನ್ನು ಇನ್ನೂ ಬಹುಕಾಲ ಉಳಿಸಿಕೊಳ್ಳಲಾಗದೇ ಹೋದದ್ದಕ್ಕೆ ಕ್ಷಮೆ ಕೋರುತ್ತೇವೆ. ನಿಮಗೆ ಸದ್ಗತಿ ದೊರೆಯಲಿ. ಓಂ ಶಾಂತಿಃ 


- ಜಿ. ವಾಸುದೇವ ಭಟ್, ಪೆರಂಪಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top