ಔಷಧೀಯ ವಲಯ ಸಾರ್ವಜನಿಕ ಆರೋಗ್ಯದ ಪ್ರಮುಖ ಆಧಾರಸ್ತಂಭ: ಡಾ. ಬಿ.ಸಿ. ಭಗವಾನ್

Upayuktha
0



ಬೆಂಗಳೂರು: ಔಷಧೀಯ ವಲಯ ಇಂದು ಕೇವಲ ವಾಣಿಜ್ಯೋದ್ಯಮವಾಗಿ ಉಳಿದಿಲ್ಲ; ಅದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ಆಧಾರಸ್ತಂಭವಾಗಿ ಬೆಳೆಯುತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಹೇಳಿದರು.


ಅವರು ನಿಟ್ಟೆ ಕಾಲೇಜ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್‌ನ ದ್ವಿತೀಯ ಘಟಿಕೋತ್ಸವವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಾ, “ರೋಗಕ್ಕೆ ಚಿಕಿತ್ಸೆ ನೀಡುವುದು ನಾಣ್ಯದ ಒಂದು ಮುಖವಾದರೆ, ರೋಗ ತಡೆಗಟ್ಟುವಿಕೆ ಇನ್ನೊಂದು ಮುಖ. ಸಿಡುಬಿನ ನಿರ್ಮೂಲನೆ, ಏಡ್ಸ್‌ನಂತಹ ಮಾರಕ ರೋಗಗಳ ನಿಯಂತ್ರಣ ಹಾಗೂ ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಔಷಧೀಯ ವಲಯ ನೀಡಿದ ಕೊಡುಗೆ ಅದರ ಸಾಮರ್ಥ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಈ ವಲಯ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತಂದಿದೆ,” ಎಂದರು.


ಮುಂದುವರಿದು ಮಾತನಾಡಿದ ಅವರು, “ನೂತನ ಪದವೀಧರರು ಬಹುಶಿಸ್ತೀಯ ಹಾಗೂ ವಿನೂತನ ಪಠ್ಯಕ್ರಮದಲ್ಲಿ ವಿದ್ಯಾಭ್ಯಾಸ ಮಾಡಿರುವುದು ಅವರ ಭಾಗ್ಯ. ಭವಿಷ್ಯದಲ್ಲಿ ಈ ಔಷಧ ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಹೊಸ ಆಯಾಮಗಳನ್ನು ನೀಡಲಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಸಂಶೋಧನಾ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಂಶೋಧನಾ ನಿಧಿಯನ್ನು ಒದಗಿಸುತ್ತಿದೆ. ಇದುವರೆಗೆ ಅನೇಕ ವಿದ್ಯಾರ್ಥಿಗಳು ಸಂಶೋಧನಾ ಸಂಪ್ರಬಂಧಗಳನ್ನು ಮಂಡಿಸಿರುವುದು ಹೆಮ್ಮೆಯ ವಿಷಯ. ಈ ಯುವ ಸಂಶೋಧಕರು ಮುಂದಿನ ದಿನಗಳಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದ್ದಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟು 63 ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್ ಪದವಿ ಸ್ವೀಕರಿಸಿದರು. ಇವರಲ್ಲಿ ಬಹುತೇಕರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಲಾವಣ್ಯ ವಿಶ್ವವಿದ್ಯಾಲಯ ಮಟ್ಟದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಹಿನ್ನೆಲೆಯಲ್ಲಿ ಚಿನ್ನದ ಪದಕ ಪಡೆದರು.


ಘಟಿಕೋತ್ಸವದ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡಿದ್ದ ತೇಜನಾ ಕನ್ಸಲ್ಟಿಂಗ್ ಎಲ್‌ಎಲ್‌ಪಿ ಸಂಸ್ಥಾಪಕ ಡಾ. ಕ್ರತೀಶ್ ಭೋಪಣ್ಣ ಮಾತನಾಡಿ, “ಎರಡು ದಶಕಗಳ ಹಿಂದೆ ಭ್ರೂಣಾವಸ್ಥೆಯಲ್ಲಿದ್ದ ಭಾರತೀಯ ಔಷಧೀಯ ಉದ್ಯಮ ಇಂದು ಜಾಗತಿಕ ಶಕ್ತಿಕೇಂದ್ರಗಳಲ್ಲೊಂದು ಆಗಿದೆ. ವಿಸ್ತಾರದಲ್ಲಿ ವಿಶ್ವದ ಮೂರನೇ ಸ್ಥಾನ ಹಾಗೂ ಮೌಲ್ಯದಲ್ಲಿ 14ನೇ ಸ್ಥಾನವನ್ನು ಈ ಉದ್ಯಮ ಪಡೆದುಕೊಂಡಿದೆ. ಪ್ರಸ್ತುತ ಸುಮಾರು 50 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ಹೊಂದಿರುವ ಭಾರತೀಯ ಔಷಧೋದ್ಯಮ 2030ರೊಳಗೆ 130 ಬಿಲಿಯನ್ ಡಾಲರ್ ಗಡಿ ದಾಟಲಿದೆ,” ಎಂದು ವಿಶ್ಲೇಷಿಸಿದರು.


ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, “ಔಷಧ ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನಗಳ ಅಧ್ಯಯನದ ಮೂಲಕ ಸಂಶೋಧನೆಯ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನೆಯ ಬೆನ್ನೆಲುಬಾಗಿ ಪರಿಣಮಿಸಿದೆ,” ಎಂದು ಹೇಳಿದರು.


ಈ ಸಂದರ್ಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಕರುಣಾಕರ ರೈ, ನೂತನ ಪದವೀಧರರ ಪೋಷಕರು ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿವಿಧ ಮುಖ್ಯಸ್ಥರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಆರಂಭದಲ್ಲಿ ನಿಟ್ಟೆ ಕಾಲೇಜ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್‌ನ ಪ್ರಾಂಶುಪಾಲೆ ಡಾ. ವಿ. ಕುಸುಮ್ ದೇವಿ ಸ್ವಾಗತಿಸಿದರು. ಕೊನೆಯಲ್ಲಿ ಪ್ರಾಧ್ಯಾಪಕಿ ವೇದಾ ಬಿ. ಹಚ್ಚೊಳ್ಳಿ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top