ಮಂಜುನಾಥ್ ಅವರಿಗೆ ರಾಜ್ಯಮಟ್ಟದ ಅನಿತಾ ಕೌಲ್ ಪ್ರಶಸ್ತಿ

Upayuktha
0



ಹಾಸನ: ಶಿಕ್ಷಕ ವೃತ್ತಿಯನ್ನು ಸೇವಾ ಧ್ಯೇಯವಾಗಿ ಸ್ವೀಕರಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಗಮನಾರ್ಹ ಕೊಡುಗೆ ನೀಡುತ್ತಿರುವ ಉಪಪ್ರಾಂಶುಪಾಲ ಮಂಜುನಾಥ್ ಅವರಿಗೆ ಕರ್ನಾಟಕ ಜ್ಞಾನ–ವಿಜ್ಞಾನ ಸಮಿತಿ ವತಿಯಿಂದ ರಾಜ್ಯಮಟ್ಟದ ಅನಿತಾ ಕೌಲ್ ಪ್ರಶಸ್ತಿಯನ್ನು ಭಾನುವಾರ (ಫೆ.22) ಪ್ರದಾನ ಮಾಡಲಾಗುವುದು..


ಚನ್ನರಾಯಪಟ್ಟಣ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ನಿವಾಸಿಗಳಾದ ನಿಂಗೇಗೌಡ ಹಾಗೂ ನಂಜಮ್ಮ ದಂಪತಿಗಳ ಪುತ್ರರಾದ ಮಂಜುನಾಥ್ ಅವರು 1994ರಲ್ಲಿ ಸರ್ಕಾರಿ ಪ್ರೌಢಶಾಲೆ, ನವಿಲೆ–ನಾಗೇಶ್ವರ ಗ್ರಾಮದಲ್ಲಿ ಸಹ ಶಿಕ್ಷಕರಾಗಿ ತಮ್ಮ ಸೇವಾ ಜೀವನವನ್ನು ಆರಂಭಿಸಿದರು. ನಂತರ ಸರ್ಕಾರಿ ಪ್ರೌಢಶಾಲೆ, ಬಾಗೂರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, 2021ರಿಂದ ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಧಾನ ಪ್ರೌಢಶಾಲೆ ವಿಭಾಗದಲ್ಲಿ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗುರುತಿಸಿ 2012–13ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಕೆಂಗಲ್ ಹನುಮಂತಯ್ಯ ಪ್ರಶಸ್ತಿಯನ್ನು ಪಡೆದಿರುವುದು ಅವರ ವೃತ್ತಿಪರ ಬದುಕಿನ ಮಹತ್ವದ ಮೈಲಿಗಲ್ಲಾಗಿದೆ. ಉಪಪ್ರಾಂಶುಪಾಲರಾಗಿ ಅವರು ದಕ್ಷ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದು, ಸೃಜನಶೀಲ ನಾಯಕತ್ವ, ಪಾರದರ್ಶಕ ಹಾಗೂ ನ್ಯಾಯಪರ ಆಡಳಿತ, ಶಿಸ್ತುಬದ್ಧ ಕಾರ್ಯವಿಧಾನದ ಮೂಲಕ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.


ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಬದುಕಿನ ಮಾರ್ಗದರ್ಶನ ನೀಡುವಲ್ಲಿ ಮುಂಚೂಣಿಯಲ್ಲಿರುವ ಮಂಜುನಾಥ್ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಅವರ ಮಾರ್ಗದರ್ಶನ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಸರ್ಕಾರಿ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅವರ ಶೈಕ್ಷಣಿಕ ಸೇವೆಯ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ.


ಶೈಕ್ಷಣಿಕ ಕ್ಷೇತ್ರದಲ್ಲಿ ಸಂಘಟನಾ ಚಾತುರ್ಯ, ಕರ್ತವ್ಯನಿಷ್ಠೆ ಮತ್ತು ಸಮಾಜಮುಖಿ ದೃಷ್ಟಿಕೋನವನ್ನು ಪರಿಗಣಿಸಿ ರಾಜ್ಯಮಟ್ಟದ ಅನಿತಾ ಕೌಲ್ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಗೌರವ ಲಭಿಸಿರುವುದಕ್ಕೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದು, ಅಧಿಕಾರಿಗಳು, ಹಿತೈಷಿಗಳು ಮತ್ತು ಆತ್ಮೀಯರು ಅಭಿನಂದನೆ ಹಾಗೂ ಶುಭಾಶಯಗಳನ್ನು ಸಲ್ಲಿಸಿದ್ದಾರೆ.


ಈ ಪ್ರಶಸ್ತಿ ತಮ್ಮ ಮೇಲಿನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದ್ದು, ಮುಂದೆಯೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಮಂಜುನಾಥ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top