ಭಾರತದ ಇತಿಹಾಸದ ವೀರಾಧಿವೀರರ ಸಾಲಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಅಗ್ರಗಣ್ಯವಾಗಿದೆ. ಹಿಂದವಿ ಸ್ವರಾಜ್ಯದ ಕನಸನ್ನು ನನಸು ಮಾಡಿದ ಮಹಾನ್ ನಾಯಕನಾಗಿ ಅವರು ಭಾರತೀಯ ಚರಿತ್ರೆಯಲ್ಲಿ ಅಮರರಾಗಿದ್ದಾರೆ. ಶಿವಾಜಿಯವರ ಆಗಮನವಾಗದೇ ಇದ್ದಿದ್ದರೆ, ಇಡೀ ಭಾರತ ಇಸ್ಲಾಮೀಕರಣದ ಅಲೆಗೆ ಒಳಗಾಗುತ್ತಿತ್ತೆಂಬುದು ಅತಿಶಯೋಕ್ತಿ ಅಲ್ಲ.
ಧರ್ಮ ರಕ್ಷಣೆಗೆ ಸಂಕಲ್ಪ ತೊಟ್ಟು, ಶೌರ್ಯ ಮತ್ತು ಚಾತುರ್ಯದಿಂದ ಹೋರಾಡಿದ ಶಿವಾಜಿ ಮಹಾರಾಜರು ಹಿಂದೂ ಸಮಾಜದ ಹೃದಯದಲ್ಲಿ ಶಾಶ್ವತ ಸಾಮ್ರಾಟರಾಗಿದ್ದಾರೆ.
ಶ್ರೇಷ್ಠ ಸಂಘಟಕ ಮತ್ತು ತಂತ್ರಜ್ಞ
ಶಿವಾಜಿ ಮಹಾರಾಜರು ವಿಶ್ವದ ಶ್ರೇಷ್ಠ ಸಂಘಟಕರಲ್ಲಿ ಒಬ್ಬರು. ಮರಾಠರನ್ನು ರಾಷ್ಟ್ರಪ್ರೇಮದ ಶಕ್ತಿಯನ್ನಾಗಿ ರೂಪಿಸಿದ ಅವರು ಗೆರಿಲ್ಲಾ ಯುದ್ಧದಲ್ಲಿ ನಿಪುಣರಾಗಿದ್ದು, ಅಪ್ರತಿಮ ಸೇನಾ ತಂತ್ರಜ್ಞರು, ಪ್ರಬುದ್ಧ ಆಡಳಿತಗಾರರು, ದೂರದೃಷ್ಟಿಯ ರಾಜತಾಂತ್ರಿಕರೂ ಆಗಿದ್ದರು.
1630ರಲ್ಲಿ ಪುಣೆ ಜಿಲ್ಲೆಯ ಜುನ್ನಾರ್ ಬಳಿ ಶಹಾಜಿ ಭೋಂಸ್ಲೆ ಹಾಗೂ ಜೀಜಾಬಾಯಿ ದಂಪತಿಗಳಿಗೆ ಪುತ್ರನಾಗಿ ಜನಿಸಿದ ಶಿವಾಜಿ ಬಾಲ್ಯದಲ್ಲಿಯೇ ಶೌರ್ಯ ಮತ್ತು ಧರ್ಮಭಾವವನ್ನು ಮೈಗೂಡಿಸಿಕೊಂಡರು.
ಶಿವಾಜಿಗೂ ಬೆಂಗಳೂರಿಗೂ ಇರುವ ಅಪರೂಪದ ನಂಟು
ಶಿವಾಜಿಯ ತಂದೆ ಶಹಾಜಿ ಭೋಂಸ್ಲೆ 1632ರಲ್ಲಿ ಬಿಜಾಪುರ ಸುಲ್ತಾನರ ಸೇವೆಯಲ್ಲಿ ಬೆಂಗಳೂರು ಪ್ರದೇಶಕ್ಕೆ ಬಂದಿದ್ದು ಸುಮಾರು 25 ವರ್ಷಗಳ ಕಾಲ ಇಲ್ಲಿಯೇ ವಾಸವಿದ್ದರು. ಈ ಅವಧಿಯಲ್ಲಿ ಶಿವಾಜಿಯವರ ಬಾಲ್ಯಾದ ಶಸ್ತ್ರಾಭ್ಯಾಸ ಬೆಂಗಳೂರಿನಲ್ಲಿಯೇ ನಡೆಯಿತು.
ಇಂದಿನ ಚಿಕ್ಕಪೇಟೆಯ ಗೌರಿ ಮಹಲ್ ಅರಮನೆಯಲ್ಲಿ 12ನೇ ವಯಸ್ಸಿನಲ್ಲಿ ಸಹೀಬಾಯಿ ಅವರೊಂದಿಗೆ ಶಿವಾಜಿಯ ವಿವಾಹ ನಡೆದಿತ್ತೆಂದು ಇತಿಹಾಸಕಾರರು ದಾಖಲಿಸಿದ್ದಾರೆ. ಇಂದಿನ ವಿಜಯಲಕ್ಷ್ಮೀ ಚಿತ್ರಮಂದಿರವೇ ಆ ಸ್ಥಳವೆಂದು ಹೇಳಲಾಗುತ್ತದೆ.
ಶಿವಾಜಿ ಮಹಾರಾಜರು ಕೆಲವು ವರ್ಷಗಳು ಬೆಂಗಳೂರಿನಲ್ಲೇ ವಾಸವಿದ್ದು, ನಂತರ ಕರ್ನಾಟಕದ ಹಲವು ಪ್ರದೇಶಗಳನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ಅವರಿಗೆ ಕನ್ನಡ ಭಾಷೆಯ ಪರಿಚಯವೂ ಇದ್ದಿತು. ಅವರು ಬಳಕೆಗೆ ತಂದ ನಾಣ್ಯಕ್ಕೆ “ಹೊನ್ನ” ಮತ್ತು ಕೃಷಿಕರನ್ನು “ರಯತ್” ಎಂದು ಕರೆಯುತ್ತಿದ್ದರು.
ಬೆಂಗಳೂರಿನ ಗೌರಿಮಹಲ್, ಗವಿಗಂಗಾಧರೇಶ್ವರ ದೇವಾಲಯದ ಸಮೀಪದ ಗೋಸಾಯಿ ಮಠ ಹಾಗೂ ಕಾಡುಮಲ್ಲೇಶ್ವರ ದೇವಸ್ಥಾನಗಳ ನಿರ್ಮಾಣಕ್ಕೂ ಶಿವಾಜಿಯವರ ನೆರವಿತ್ತು ಎಂಬುದು ಇತಿಹಾಸದ ಸಾಕ್ಷ್ಯ.
ಕಡಲ ಶಕ್ತಿಯ ಸ್ಥಾಪಕ
ಡಚ್ ಮತ್ತು ಪೋರ್ಚುಗೀಸರ ನೌಕಾಬಲದ ಅಪಾಯವನ್ನು ಮೊದಲೇ ಗುರುತಿಸಿದ ಶಿವಾಜಿ ಮಹಾರಾಜರು 1664ರಲ್ಲಿ ಕೊಂಕಣ ಕರಾವಳಿಯಲ್ಲಿ ಸಿಂಧುದುರ್ಗ ಕೋಟೆ ಸ್ಥಾಪಿಸಿ ಶಕ್ತಿಶಾಲಿ ನೌಕಾಪಡೆಯನ್ನು ನಿರ್ಮಿಸಿದರು.
ವಿಜಯದುರ್ಗ, ಸುವರ್ಣದುರ್ಗ, ಕಲ್ಯಾಣ್ ಮೊದಲಾದ ಕೋಟೆಗಳು ಸಮುದ್ರದ ದಾಳಿಯಿಂದ ದೇಶವನ್ನು ರಕ್ಷಿಸುವ ಕವಚಗಳಾಗಿದ್ದವು. ಬಸ್ರೂರು ಬಂದರನ್ನು ವಶಪಡಿಸಿಕೊಂಡು ಕರಾವಳಿ ರಕ್ಷಣೆಯನ್ನು ಬಲಪಡಿಸಿದರು.
ಸ್ವರಾಜ್ಯದ ರಾಜಾಭಿಷೇಕ
1674ರ ಜೂನ್ 6ರಂದು ರಾಯಗಢ ಕೋಟೆಯಲ್ಲಿ ಶಿವಾಜಿ ಮಹಾರಾಜರಿಗೆ ಮರಾಠ ಸ್ವರಾಜ್ಯದ ರಾಜನಾಗಿ ಪಟ್ಟಾಭಿಷೇಕ ನೆರವೇರಿತು.
ಅವರಿಗೆ ಛತ್ರಪತಿ – ಪರಮಾಧಿಕಾರಿ ಸಾರ್ವಭೌಮ; ಶಕಕರ್ತಾ – ಹೊಸ ಯುಗದ ಸ್ಥಾಪಕ; ಹೈಂದವ ಧರ್ಮಧಾರಕ್– ಹಿಂದೂ ಧರ್ಮದ ರಕ್ಷಕ ಎಂಬ ಮಹತ್ವದ ಬಿರುದುಗಳು ಲಭಿಸಿದವು.
ಪರಂಪರೆಯನ್ನು ಮುಂದುವರೆಸಿದ ವೀರರು:
ಶಿವಾಜಿಯ ನಂತರ ವೀರ ಸಾಂಬಾಜಿ ಮತ್ತು ರಾಜಾರಾಂ ಮಹಾರಾಜರು ತಂದೆಯ ಮಾರ್ಗವನ್ನು ಅನುಸರಿಸಿ ಹಿಂದವಿ ಸ್ವರಾಜ್ಯದ ಜ್ಯೋತಿಯನ್ನು ನಂದಿಸದೆ ಮುಂದುವರೆಸಿದರು. ಅವರ ಹೋರಾಟಗಳಿಂದ ಹಿಂದೂ ಸಮಾಜ ಮತ್ತೆ ತಲೆಯೆತ್ತಿ ನಿಲ್ಲುವ ಶಕ್ತಿ ಪಡೆದುಕೊಂಡಿತು.
ಸ್ವಾತಂತ್ರ್ಯ ಹೋರಾಟಕ್ಕೂ ಪ್ರೇರಣೆ
ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಶಿವಾಜಿಯವರ ಸಾಹಸಗಾಥೆಗಳು ಜನಮನಕ್ಕೆ ಪ್ರೇರಣೆಯಾಗಿದ್ದವು. ಲಾವಣಿಗಳು, ಜಾನಪದ ಗೀತೆಗಳು ಹೋರಾಟಗಾರರನ್ನು ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದವು.
ಕನ್ನಡನಾಡಿನಲ್ಲಿ ಮರಾಠರು 11–12ನೇ ಶತಮಾನದಿಂದಲೇ ನೆಲೆಸಿದ್ದು ಕನ್ನಡಿಗರೊಂದಿಗೆ ಸಹಜ ಸಹಬಾಳ್ವೆಯಲ್ಲಿ ಬದುಕಿದ್ದಾರೆ. ಈ ಹಿನ್ನೆಲೆಯೊಂದಿಗೆ “ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ” ಎಂಬ ಕಿರುಸಂಪುಟವನ್ನು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು ಪ್ರಕಟಿಸಿದೆ.
ಡಾ. ಪ್ರಕಾಶ್ ಆರ್. ಪಾಗೋಜಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಸಂಪಾದಕತ್ವದಲ್ಲಿ ಈ ಕೃತಿ ಸಿದ್ಧವಾಗಿದೆ.
- ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಸಂಸ್ಕೃತಿ ಚಿಂತಕರು, ಬೆಂಗಳೂರು | 9739369621
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


