- ಟಿ. ದೇವಿದಾಸ್
ಕೆಲವೇ ಕೆಲವು ವರ್ಷಗಳ ಅನಂತರ ಈ ಜಗತ್ತು ಹೇಗಿರುತ್ತದೆ? ನೋ ಬಡಿ ನೂಸ್. ಆದರೆ ಇಂದು ಶಾಲಾ ಕಾಲೇಜುಗಳು ಮಕ್ಕಳನ್ನು ಅಂಥ ಭವಿಷ್ಯಕ್ಕಾಗಿ ಸಿದ್ಧಗೊಳಿಸುತ್ತಿವೆ ಎಂಬುದು ಅಚ್ಚರಿಯ ಅಥವಾ ಕುತೂಹಲದ ಸಂಗತಿಯಾಗಿ ಉಳಿದಿಲ್ಲ. ಸರಿಹೊತ್ತಿನವರೆಗೂ ಅಸ್ತಿತ್ವದಲ್ಲೇ ಇಲ್ಲದ ಉದ್ಯೋಗಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಿದ್ದೇವೆ ಎಂಬುದು ಕೂಡ ಪ್ರಾಯಃ ಸತ್ಯವೇ ಆಗಿರಬಹುದು. ಜಗತ್ತು ತಂತ್ರಜ್ಞಾನದ ಸುಳಿಯಲ್ಲಿ ಕಳೆದುಹೋಗಿದೆ.
ಈ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ವಿಚಾರವೆಂದರೆ, ಸ್ಮಾರ್ಟ್ ಕಂಪ್ಯೂಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಕಾರಣದಿಂದ ಭವಿಷ್ಯದಲ್ಲಿ ಅನೇಕ ಉದ್ಯೋಗಗಳು ಕಾಣೆಯಾಗಬಹುದು. ಆಫ್ ಕೋರ್ಸ್ ಕಾಣೆಯಾಗುತ್ತದೆ.
2008ರಲ್ಲಿ ವಿಶ್ವ ದೊಡ್ಡ ಆರ್ಥಿಕ ಸಂಕಷ್ಟ ಉಂಟಾದಾಗ ಸಾವಿರಾರು ಲಕ್ಷ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು. ಕೆಲವರ ಬಳಿ ಕಾರುಗಳಿದ್ದವು. ಅಂಥವರು ಹೊಸ ಅವಕಾಶವನ್ನು ಕಂಡರು. ಅವರು ಉಬರ್‌ನಲ್ಲಿ ಚಾಲಕರಾಗಿ ಹಣ ಸಂಪಾದಿಸಲು ಪ್ರಾರಂಭಿಸಿದರು. ಆಪ್ ಗಳನ್ನು ಬಳಸುವುದನ್ನು ಕಲಿತು, ತಮ್ಮ ಚಾಲನಾ ಕೌಶಲ್ಯಗಳನ್ನು ಹೊಸ ರೀತಿಯಲ್ಲಿ ಕಂಡುಕೊಂಡರು. ಇದರಿಂದ ಟ್ಯಾಕ್ಸಿ ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಉಂಟಾಯಿತು. ಸಾಂಪ್ರದಾಯಿಕ ಟ್ಯಾಕ್ಸಿ ಉದ್ಯೋಗಗಳು ನಿಧಾನವಾಗಿ ಕಡಿಮೆಯಾಗತೊಡಗಿದವು. ಉಬರ್ ಎಂಬ ಮೊದಲ ರೈಡ್-ಶೇರಿಂಗ್ ಕಂಪನಿ ಜನಪ್ರಿಯವಾದದ್ದೇ ಹೀಗೆ! ಸರಿಯಾದ ಸಮಯದಲ್ಲಿ ಸರಿಯಾದುದನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಯಶಸ್ಸು ಖಂಡಿತ.
ದುಡಿಯುವ ಜಗತ್ತೇ ಹಾಗೆ. ಬಲು ವಿಚಿತ್ರ. ಈಗ ಇದ್ದದ್ದು ನಾಳೆ ಹಳತಾಗಿ ಮಾಸಬಹುದು. ತುಂಬಾ ವೇಗವಾಗಿ ಕೆಲಸದ ವಿನ್ಯಾಸಗಳು ಬದಲಾಗಬಹುದು. ಕೆಲವೇ ವರ್ಷಗಳಲ್ಲಿ ಸಂಪೂರ್ಣ ಕೈಗಾರಿಕೆಗಳ ಸ್ವರೂಪ ಬದಲಾಗಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಯಬೇಕಾದ ಅತ್ಯಂತ ಮುಖ್ಯ ಕೌಶಲ್ಯ ಯಾವುದೆಂದರೆ, ಕೇವಲ ತಂತ್ರಜ್ಞಾನವನ್ನು ತಿಳಿದುಕೊಳ್ಳುವುದಲ್ಲ, ಬದಲಿಗೆ ಹೊಸ ವಿಷಯಗಳನ್ನು ಕಲಿಯುವುದು, ಬದಲಾವಣೆಗಳಿಗೆ ಹೊಂದಿಕೊಳ್ಳುವುದು. ಹೊಸ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು. ಇಹಾಗಂದರೆ, ಕಲಿಯುವುದನ್ನು ಕಲಿಯುವುದು ಎಂದರ್ಥ.
ಹಾಗಂತ ಮೂಲಭೂತ ಕೌಶಲ್ಯಗಳು ಎಂದಿಗೂ ಹಳತಾಗುವುದಿಲ್ಲ. ಮುಂದಿನ ದಿನಗಳಲ್ಲಿ ಓದುವುದು, ಬರೆಯುವುದು ಮತ್ತು ಗಣಿತ ಇವು ಇನ್ನೂ ಅತ್ಯಂತ ಮುಖ್ಯವಾಗುತ್ತದೆ. ಇವು ಉಳಿದೆಲ್ಲ ಕಲಿಕೆಗೆ ಆಧಾರವಾಗಿವೆ. ಹೊಸ ವಿಷಯಗಳನ್ನು ಕಲಿಯುವುದು ಅಥವಾ ಯಾವುದೇ ಉದ್ಯೋಗದಲ್ಲಿ ಯಶಸ್ವಿಯಾಗುವುದು ಇದರ ಮೇಲೆಯೇ ಅವಲಂಬಿತವಾಗಿದೆ. ಅಡಿಪಾಯವೇ ದುರ್ಬಲವಾಗಿದ್ದರೆ, ಸಂಪೂರ್ಣ ಮನೆ ಅಸ್ಥಿರವಾಗುತ್ತದೆ.
A I ತಂತ್ರಜ್ಞಾನದಲ್ಲಿ ಮಕ್ಕಳನ್ನು ಸಿದ್ಧಗೊಳಿಸುವುದರ ಮೇಲೆ ಗಮನ ಕೊಡಬೇಕೆಂದು ಶಾಲೆಗಳು ಪ್ರಯತ್ನಿಸುತ್ತವೆ. ಆದರೆ A I - ಸಿದ್ಧರಾಗಿರುವುದು ಎಂದರೆ ಕೇವಲ ಹೊಸ ತಂತ್ರಜ್ಞಾನ ಉಪಕರಣಗಳನ್ನು ಬಳಸುವುದಷ್ಟೇ ಅಲ್ಲ. ಅದು ಜೀವನಪರ್ಯಂತ ಕಲಿಯುವುದನ್ನು ಕಲಿಯುವುದು ಎಂದು ಅರ್ಥವಾಗುತ್ತದೆ. ಅಂದರೆ, ಕುತೂಹಲ ಹೊಂದಿರುವುದು, ಒಳ್ಳೆಯ ಪ್ರಶ್ನೆಗಳು ಕೇಳುವುದು, ಆಲೋಚಿಸಿ ಸ್ವ ನಿರ್ಧಾರ ತೆಗೆದುಕೊಳ್ಳುವುದು. ವಿಷಯಗಳು ಎಷ್ಟೇ ಕಠಿಣವಾದಾಗಲೂ ಮುಂದುವರಿಯುವ ಧೈರ್ಯ ಹೊಂದಿರುವುದು.
ಅಂದರೆ, ಶಾಲೆಗಳು ತಂತ್ರಜ್ಞಾನವನ್ನು ನಿರ್ಲಕ್ಷಿಸಬೇಕು ಎಂದಲ್ಲ. ವಿದ್ಯಾರ್ಥಿಗಳು ಕೋಡಿಂಗ್ ಕಲಿಯುವುದು. AI ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದೇ. ಆದರೆ ತಂತ್ರಜ್ಞಾನ ಕೌಶಲ್ಯಗಳು ಮನೆಯ ಎರಡನೇ ಮಹಡಿಯಂತೆ. ಅವು ಮುಖ್ಯವೇ ಹೌದು, ಆದರೆ ಅದು ಅಡಿಪಾಯದ ಮೇಲೆಯೇ ನಿಂತಿರುತ್ತದೆ. ಗಣಿತ ತಿಳಿದ ವಿದ್ಯಾರ್ಥಿ ಕೋಡಿಂಗ್ ಕಲಿಯಬಹುದು. ಚೆನ್ನಾಗಿ ಓದಲು ಬಲ್ಲ ವಿದ್ಯಾರ್ಥಿ A I ಸಾಧನ ತಪ್ಪು ಅಥವಾ ಅನ್ಯಾಯದ ಉತ್ತರವನ್ನು ನೀಡಿದರೆ ಗುರುತಿಸಬಹುದು. ತಂತ್ರಜ್ಞಾನ ವೇಗವಾಗಿ ಬದಲಾಗಬಹುದು, ಆದರೆ ಓದುವುದು, ಆಲೋಚಿಸುವುದು ಮತ್ತು ಸಮಸ್ಯೆ ಪರಿಹರಿಸುವುದು ಯಾವತ್ತೂ ಬದಲಾಗುವುದಿಲ್ಲ. ಅದು ಉಪಯುಕ್ತವೇ ಆಗಿರುತ್ತದೆ.
ಬಹುಮುಖ್ಯವಾಗಿ, ಶಾಲೆಗಳು ಓದು, ಬರಹ ಮತ್ತು ಗಣಿತದಲ್ಲಿ ಬಲವಾದ ಅಡಿಪಾಯವನ್ನು ನಿರ್ಮಿಸಬೇಕು. ವಿದ್ಯಾರ್ಥಿಗಳನ್ನು ಜೀವನಪೂರ್ತಿ ಕಲಿಯುವಂತೆ ಅವರನ್ನು ಸಿದ್ಧಗೊಳಿಸಬೇಕು. ಇದಕ್ಕೆ ಬೇಕಾಗಿ, ಕುತೂಹಲವುಳ್ಳ, ದೃಢ ಮನೋಭಾವದ ಮತ್ತು ಯಾವುದೇ ಬದಲಾವಣೆಗೆ ಸಿದ್ಧರಾಗುವಂತೆ ಅವರನ್ನು ರೂಪಿಸಬೇಕು. ಹೀಗೆ ಮಾಡಿದರೆ, ಉದ್ಯೋಗಗಳು ಹೇಗೆ ಬದಲಾದರೂ, ನಮ್ಮ ಮಕ್ಕಳು ಭವಿಷ್ಯದ ದಿನಗಳಿಗೆ ಸಿದ್ಧರಾಗಿರುತ್ತಾರೆ. ಇದರ ಜೊತೆಯಲ್ಲಿ ಬದುಕಿನ ಮೌಲ್ಯಗಳನ್ನು ಕಲಿಸಬೇಕು. ಎಂಥ ಸ್ಥಿತಿಯಲ್ಲೂ ಅವಗಳನ್ನು ಕಳೆದುಕೊಳ್ಳದಂತೆ ಅವರನ್ನು ತಯಾರು ಮಾಡುವ ಹೊಣೆಗಾರಿಕೆ ಶಾಲೆಯದಷ್ಟೇ ಅಲ್ಲದೆ ಮನೆಯದ್ದೂ ಪ್ರಧಾನವಾಗಿರುತ್ತದೆ ಎಂಬುದು ಶಿಕ್ಷಣದ ಆಕೃತಿಯಾಗಬೇಕು. ಕಲಿಯುವುದನ್ನು ಕಲಿಯುವುದು ಮುಖ್ಯ. ಯಾವ ಜೀವನ ಮೌಲ್ಯಗಳೇ ಇಲ್ಲದಿದ್ದರೆ ಏನು ಕಲಿತು ಏನು ಪ್ರಯೋಜನ?
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


