ಕರ್ನಾಟಕ ಪ್ರದೇಶ ಈಡಿಗರ ಸಂಘದ ಸಮಾಜ ದ್ರೋಹಿ ಕೆಲಸದ ವಿರುದ್ಧ ಹೋರಾಟಕ್ಕೆ ಸಜ್ಜು: ಮಾಲೀಕಯ್ಯ ಗುತ್ತೇದಾರ್

Upayuktha
0

ಈಡಿಗ ನಾಯಕರ ಮಹತ್ವದ ಸಭೆಯಲ್ಲಿ ನಿರ್ಣಯ ಅಂಗೀಕಾರ 




ಗಂಗಾವತಿ: ರಾಜ್ಯದ ಈಡಿಗ ಸೇರಿದಂತೆ 26 ಪಂಗಡಗಳ ಪ್ರಾತಿನಿಧ್ಯ ಹೊಂದಿದ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಮಾಜ ದ್ರೋಹಿ ಕೆಲಸ ಹಾಗೂ ಸ್ವಾರ್ಥ ಸಾಧನೆ ಮಾಡುವುದರ ವಿರುದ್ಧ ಮತ್ತು ಅಧ್ಯಕ್ಷರಾದ ತಿಮ್ಮೇಗೌಡ ಪದಚ್ಯುತಿ ಜೊತೆಗೆ ಎಲ್ಲ ಅಕ್ರಮಗಳ ವಿರುದ್ಧ ಹೋರಾಟ ಆರಂಭಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವರು ಹಾಗೂ ಸಮಾಜದ ಹಿರಿಯ ಮುಖಂಡರಾದ ಮಾಲೀಕಯ್ಯ ವಿ ಗುತ್ತೇದಾರ್ ತಿಳಿಸಿದರು.


ಗಂಗಾವತಿ ಸಮೀಪದ ಕಿಷ್ಕಿಂದ ರೆಸಾರ್ಟ್ ಸಭಾಂಗಣದಲ್ಲಿ ಫೆ.23ರಂದು ಡಾ. ಪ್ರಣವಾನಂದ ಶ್ರೀಗಳ ಸಮ್ಮುಖದಲ್ಲಿ ನಡೆದ ಸಮಾಜದ ಹಿರಿಯ ಮುಖಂಡರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಂಡು ರಾಜ್ಯದ 26 ಪಂಗಡಗಳ ಕಲ್ಯಾಣಕ್ಕಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಹಿರಿಯ ಮುಖಂಡರಾದ ಎಚ್. ಆರ್ ಶ್ರೀನಾಥ್, ಲಕ್ಷ್ಮಿ ನರಸಯ್ಯ ಮುಂತಾದವರ ಉಪಸ್ಥಿತಿಯಲ್ಲಿ ರಾಜ್ಯದಾದ್ಯಂತದಿಂದ ಆಗಮಿಸಿದ ಈಡಿಗ ಸಮುದಾಯದ ಮುಖಂಡರ ಸಭೆಯಲ್ಲಿ ಹಲವು ನಿರ್ಣಯ ಅಂಗೀಕರಿಸಲಾಗಿದೆ ಎಂದು ಮಾಲೀಕಯ್ಯ ಗುತ್ತೇದಾರ್ ಸುದ್ದಿಗಾರರಿಗೆ ತಿಳಿಸಿದರು.


ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘವು ತನ್ನ ಸಂಘದ ನೀತಿ ನಿಯಮಾವಳಿಗೆ ವಿರುದ್ಧವಾಗಿ ಸ್ವಾರ್ಥ ಪರವಾಗಿ ಮತ್ತು ತಮ್ಮ ಉದ್ಯಮಗಳ ಬೆಳವಣಿಗೆಗೆ ಮಾತ್ರ ಸಂಘದ ಹೆಸರನ್ನು ಬಳಸಿ ಮುಂದುವರಿಯುತ್ತಿದೆ. ಸೋಲೂರು ಮಠದಲ್ಲಿ ಸಂಘಕ್ಕೆ ಉದಾರಿಗಳು ನೀಡಿದ ದೇಣಿಗೆ ಮತ್ತು ಸರಕಾರದಿಂದ ಕೊಡಮಾಡಿದ ಅನೇಕ ಸೌಲಭ್ಯಗಳ ದುರುಪಯೋಗ ಸೇರಿದಂತೆ ಸಮಾಜಕ್ಕೆ ತೀವ್ರತರವಾದ ದ್ರೋಹವೆಸಗಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ಕಟುವಾಗಿ ಆರೋಪಿಸಿದ್ದಾರೆ. ರಾಜ್ಯದ ಈಡಿಗ ಸಮಾಜವನ್ನು ಕತ್ತಲೆಯಲ್ಲಿಟ್ಟು ತಮ್ಮ ಉದ್ಯಮ ಮತ್ತು ಸ್ವಾರ್ಥಲಾಲಸೆಗಾಗಿ ಸಮಾಜದ ಹೆಸರಿನಲ್ಲಿರುವ ಸಂಘವನ್ನು ಬಳಸಿಕೊಳ್ಳಲಾಗುತ್ತಿದೆ. ಸಮಾಜದ ಪರವಾಗಿ ಯಾವುದೇ ಬೇಡಿಕೆ, ಹೋರಾಟಗಳಿಗೆ ಬೆಂಬಲ ನೀಡದೆ ಸಮಾಜದ ಮುಖಂಡರ ನಡುವೆ ವೈ ಮನಸ್ಸು ಹುಟ್ಟು ಹಾಕುವ ಹಾಗೂ ಆಡಳಿತದಲ್ಲಿರುವ ಮುಖ್ಯಮಂತ್ರಿಗಳಿಗೆ ಸಚಿವರುಗಳಿಗೆ ತಪ್ಪು ಮಾಹಿತಿ ನೀಡಿ ಸಮಾಜ ಒಡೆಯುವ ಕೆಲಸದಲ್ಲಿ ನಿರತ ಅಧ್ಯಕ್ಷ ತಿಮ್ಮೇಗೌಡ ಹಾಗೂ ಅವರ ಆಪ್ತಕೂಟದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಲು ರೂಪರೇಷೆ ಹಾಕಲಾಗಿದೆ ಎಂದು ಗುತ್ತೇದಾರ್ ಹೇಳಿದರು.


ಡಾ. ಪ್ರಣವಾನಂದ ಶ್ರೀಗಳು ಸಮಾಜದ ಅಭಿವೃದ್ಧಿಗಾಗಿ 18 ಬೇಡಿಕೆಗಳನ್ನು ಒತ್ತಾಯಿಸಿ ಜನವರಿ 6 ರಿಂದ ಫ್ರೀಡಂ ಪಾರ್ಕ್ ವರೆಗೆ 700 ಕಿ. ಮೀ. ಕೈಗೊಂಡ ಪಾದಯಾತ್ರೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಫೆಬ್ರವರಿ 28ರ ಮೊದಲು ಮಾತುಕತೆಗೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭೇಟಿ, ಕುಲಕಸುಬು ಸೇಂದಿ ಪುನರಾರಂಭಿಸಲು ಕಾನೂನಾತ್ಮಕ ಹೋರಾಟ, ಕುಲ ಶಾಸ್ತ್ರೀಯ ಅಧ್ಯಯನ ಸಮರ್ಪಕವಾಗಿ ನಡೆಯಲು ಶೀಘ್ರದಲ್ಲೇ ತಮ್ಮ ನೇತೃತ್ವದಲ್ಲಿ ಸಮಾಜದ 15 ಮಂದಿ ತಜ್ಞರನ್ನು ಸೇರಿಸಿ ಮೈಸೂರಿನ ಕುಲಶಾಸ್ತ್ರೀಯ ಅಧ್ಯಯನ ಸಂಶೋಧನಾ ತಂಡದ ಜೊತೆ ಸಂವಾದ ನಡೆಸಲು ನಿರ್ಧರಿಸಲಾಗಿದೆ. ಪ್ರತಿ ತಿಂಗಳು ಸಭೆ ಸೇರಿ ಕೈಗೊಂಡ ನಿರ್ಣಯಗಳ ಅನುಷ್ಠಾನದ ಪ್ರಗತಿ ಹಾಗೂ ರಾಜ್ಯಾದ್ಯಂತ ಶ್ರೀ ಪ್ರಣವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಹಿರಿಯ ಮುಖಂಡರ ತಂಡ ಪ್ರವಾಸ ಮಾಡಿ ಈಡಿಗ ಸಂಘ ಹಾಗೂ 26 ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಜಾಗೃತಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಗುತ್ತೇದಾರ್ ಸಭೆಯ ಪೂರ್ಣ ಮಾಹಿತಿ ನೀಡಿದರು.


ಈ ಸಭೆಯಲ್ಲಿ ಜಿ.ಎನ್ ಸಂತೋಷ್ ಕುಮಾರ್ ಬೆಂಗಳೂರು, ವೆಂಕಟೇಶ ಗುಂಡನೂರ್ ಯಾದಗಿರಿ, ಅಶೋಕ್ ಗುತ್ತೇದಾರ್ ಸಿರವಾರ, ಸುರೇಶ್ ಗುತ್ತೇದಾರದ ಶ್ರೀಮತಿ ರಾಧಾ ಉಮೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top