ಬೆಂಗಳೂರು: ಬಸವನಗುಡಿಯ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ವತಿಯಿಂದ ‘ಜಾನಪದ ಜಾತ್ರೆ 2026- ಜನಪದ ಆಶಯಗಳ ಹುಡುಕಾಟ’ ಕಾರ್ಯಕ್ರಮವನ್ನು ಬುಧವಾರ (ಫೆ.4) ಬೆಳಿಗ್ಗೆ 11:30ಕ್ಕೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದರು ಹಾಗೂ ಕನ್ನಡ ವಿದ್ವಾಂಸರಾದ ಪ್ರೊ. ಕೃಷ್ಣೇಗೌಡರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಾನಪದ ಎಂದರೆ ಒಟ್ಟಾರೆ ಒಂದು ಜೀವನ ಶೈಲಿ, ಜ್ಞಾನವೆಂದರೆ ಅದು ಕೇವಲ ಅಕ್ಷರವಲ್ಲ ಅದು ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯಿಸುವುದು. 4500 ಭಾಷೆಗಳಲ್ಲಿ ಕನ್ನಡಕ್ಕೆ ಮೇಲ್ಪಂಕ್ತಿಯ 25 ಭಾಷೆಗಳಲ್ಲಿ ಒಂದು ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಕನ್ನಡವು ಅತ್ಯಂತ ಉತ್ಕೃಷ್ಠ ಮತ್ತು ತಾರ್ಕಿಕ ಭಾಷೆಗಳಲ್ಲಿ ಕನ್ನಡಕ್ಕೆ ಪ್ರಧಾನ ಸ್ಥಾನವಿದೆ. ಗ್ರಾಮೀಣ ಜನಪದರು ಸೃಷ್ಠಿಸಿದ ಕಲೆ ಮತ್ತು ಸಾಹಿತ್ಯವನ್ನು ಇಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನದ ವಿಷಯವಾಗಿದೆ ಎಂದು ವರ್ಣಿಸಿದರು. ಜಾನಪದ ಜಾತ್ರೆಯ ಮಹತ್ವವನ್ನು ವಿವರಿಸುತ್ತಾ, ಕಾಲೇಜು ಶಿಕ್ಷಣ ಪೂರ್ಣಗೊಳಿಸಿ, ಹೊರಡುವಾಗ ಜೀವನ ಕೌಶಲ್ಯವನ್ನು ಜೊತೆಯಲ್ಲಿ ಕೊಂಡೊಯ್ಯುವುದು ನಿಮ್ಮೆಲ್ಲರ ಜವಾಬ್ದಾರಿ ಎಂಬ ಕಿವಿಮಾತನ್ನು ಹೇಳಿದರು.
ಬೆಳಿಗ್ಗೆ 9.00 ಗಂಟೆಗೆ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಂದ ಮೆರವಣಿಗೆಯ ಚಾಲನೆ ನೀಡಲಾಯಿತು. ಸುಮಾರು ಎರಡು ಸಾವಿರ ವಿದ್ಯಾರ್ಥಿನಿಯರ ಕರಗ, ಯಕ್ಷಗಾನ, ಲಂಬಾಣಿ ನೃತ್ಯ, ಕಂಸಾಳೆ, ಸುಗ್ಗಿ ಕುಣಿತ, ಕೋಲಾಟ ಇತ್ಯಾದಿ ಜಾನಪದ ನೃತ್ಯ ತಂಡಗಳಾಗಿ ಹಾಡುತ್ತಾ-ಕುಣಿಯುತ್ತಾ ಬಸವನಗುಡಿ- ಗಾಂಧಿಬಜಾರ್ ಮುಖ್ಯ ರಸ್ತೆಗಳಲ್ಲಿ ಮೆರೆವಣಿಗೆ ಹೊರಟು, ಸಾರ್ವಜನಿಕರ ಕಣ್ಮನ ಸೆಳೆದರು.
ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಘುಕುಮಾರ ಎನ್ ರವರು ಕಾರ್ಯಕ್ರಮದಲ್ಲಿ ಜಾನಪದರ ಪ್ರಧಾನ ದೈವ ಭೂಮಿ ತಾಯಿಯನ್ನು ಸ್ಮರಿಸುತ್ತಾ, ಪ್ರಸ್ತಾವಿಕ ನುಡಿಗಳೊಂದಿಗೆ ಗಣ್ಯರನ್ನು ಸ್ವಾಗತಿಸಿದರು.
ಬಿ.ಎಂ.ಎಸ್. ಶಿಕ್ಷಣ ದತ್ತಿಯ ದಾನಿಗಳು ಹಾಗೂ ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷರು ಆದ ಡಾ. ಬಿ. ಎಸ್. ರಾಗಿಣಿ ನಾರಾಯಣ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಹಾಗೂ ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಹೊಂಬಾಳೆ ಬಿಡಿಸಿ, ನಗಾರಿ ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಸಂಗೀತ ನಿರ್ದೇಶಕರು ಹಾಗೂ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕರಾದ ಕಂಬದ ರಂಗಯ್ಯ ಅವರು ಜಾನಪದ ಜಾತ್ರೆಗೆ ಶುಭಾಶಯಗಳನ್ನು ಕೋರಿ, ತಮ್ಮ ತಂಡದೊಂದಿಗೆ ವಿವಿಧ ಜಾನಪದ ಗೀತೆಗಳನ್ನು ಹಾಡಿ ಸಭಿಕರನ್ನು ಮನರಂಜಿಸಿದರು.
ಸುಮಾರು 20 ಜಾನಪದ ಖಾದ್ಯಗಳ, ಉಡುಗೆ ತೊಡುಗೆಗಳ ಸ್ಟಾಲ್‌ಗಳನ್ನು ಆಯೋಜಿಸಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರ 20 ವಿವಿಧ ರೀತಿಯ ತರಕಾರಿಗಳನ್ನು ಹೊಂದಿದ್ದ ಮಾರಾಟ ಮಳಿಗೆಯು ಎಲ್ಲರ ಗಮನ ಸೆಳೆಯಿತು.
ಚೌಕಾಬಾರ, ಪಗಡೆ, ಅಳುಗುಳಿಮನೆ ಸೇರಿದಂತೆ ವಿವಿಧ ಆಟಗಳಲ್ಲಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ವಿದ್ಯಾರ್ಥಿನಿಯರು, ಬೋಧಕ- ಬೋಧಕೇತರ ವರ್ಗದವರಿಂದ ಭರತನಾಟ್ಯ ನೃತ್ಯ, ಜನಪದ ಗೀತ ಗಾಯನ ಸೇರಿದಂತೆ ಇನ್ನಿತರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಗೌರವಾನ್ವಿತ ಅತಿಥಿಗಳಾಗಿ ಬಿ.ಎಂ.ಎಸ್. ಶಿಕ್ಷಣ ದತ್ತಿಯ ಆಜೀವ ಧರ್ಮದರ್ಶಿಗಳಾದ ಡಾ. ಪಿ. ದಯಾನಂದ ಪೈ, ಧರ್ಮದರ್ಶಿಗಳಾದ ಶ್ರೀ ಅವಿರಾಮ್ ಶರ್ಮ, ಶಿಕ್ಷಣ ದತ್ತಿಯ ನಿರ್ದೇಶಕರಾದ ವಿಂಗ್ ಕಮಾಂಡರ್ ರಾಘವನ್ ಆರ್. ಎ, ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಘುಕುಮಾರ ಎನ್, ಬಿ.ಎಂ.ಎಸ್. ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುರೇಶ ಪಿ. ಹೆಚ್, ಉಪ ಪ್ರಾಂಶುಪಾಲರಾದ ಶ್ರೀಮತಿ ಸುನೀತ ಕೆ, ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯದ ಶೈಕ್ಷಣಿಕ ಡೀನ್, ಐ.ಕ್ಯೂ.ಎ.ಸಿ ಸಂಚಾಲಕರು, ಬೋಧಕ- ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


