ನೇಪಾಳದಿಂದ ಕಾರ್ಯಾಚರಿಸುತ್ತಿದ್ದ ಅಂತಾರಾಷ್ಟ್ರೀಯ ಹೂಡಿಕೆ ವಂಚನಾ ಜಾಲ ಬಯಲಿಗೆ

Upayuktha
0

ಮಂಗಳೂರು ಸೆನ್ ಕ್ರೈಂ ಪೊಲೀಸರಿಂದ 11 ಆರೋಪಿಗಳ ಬಂಧನ; ನೂರಾರು ಕೋಟಿ ರೂ. ಹಣ ವಹಿವಾಟು ಪತ್ತೆ




ಮಂಗಳೂರು: ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಭಾರತೀಯರನ್ನು ಗುರಿಯಾಗಿಸಿಕೊಂಡು ನೂರಾರು ಕೋಟಿ ರೂಪಾಯಿ ಹೂಡಿಕೆ ವಂಚನೆ ನಡೆಸುತ್ತಿದ್ದ ಅಂತಾರಾಷ್ಟ್ರೀಯ ವಂಚನಾ ಜಾಲವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯವರು ಭೇದಿಸಿ, ಒಟ್ಟು 11 ಆರೋಪಿಗಳನ್ನು ಬಂಧಿಸಿರುವ ಮಹತ್ವದ ಸಾಧನೆ ಮಾಡಿದ್ದಾರೆ.


ಈ ವಂಚಕರ ತಂಡದಲ್ಲಿ 16 ಮಂದಿ ಭಾರತೀಯರು ಹಾಗೂ ಚೀನಾದ ನಾಗರಿಕರು ಸೇರಿದ್ದು, ಚೀನಾದ ಆರೋಪಿಗಳನ್ನು ನೇಪಾಳ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 05 ಮಂದಿ ಭಾರತೀಯ ಆರೋಪಿಗಳು ತಲೆಮರಿಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.


624 ಬ್ಯಾಂಕ್ ಖಾತೆಗಳು, 4580ಕ್ಕೂ ಹೆಚ್ಚು ದೂರುಗಳು

ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳ ತಾಂತ್ರಿಕ ವಿಶ್ಲೇಷಣೆಯಲ್ಲಿ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಪತ್ತೆಯಾಗಿವೆ. ಈ ಖಾತೆಗಳ ವಿರುದ್ಧ ದೇಶಾದ್ಯಂತ NCRP Portal ನಲ್ಲಿ 4580ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಒಂದು ಬ್ಯಾಂಕ್ ಖಾತೆಯಲ್ಲೇ ರೂ.167 ಕೋಟಿ ಹಣ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.


ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ವಂಚಕರು ಬಳಸಿದ 10 ಬ್ಯಾಂಕ್ ಖಾತೆಗಳ ಮೂಲಕ ರೂ.30,70,26,725/- ಹಣ ವರ್ಗಾವಣೆ ಆಗಿರುವುದು ದೃಢಪಟ್ಟಿದೆ. ಉಳಿದ 623 ಖಾತೆಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ.


ಪ್ರಕರಣದ ಹಿನ್ನೆಲೆ

ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆ ಅ.ಕ್ರ. 02/2026

ಕಲಂ: 66(ಸಿ), 66(ಡಿ) ಐಟಿ ಕಾಯ್ದೆ ಹಾಗೂ 318(4), 308(5) ಬಿಎನ್‌ಎಸ್


ಫಿರ್ಯಾದಿದಾರರಿಂದ ರೂ.1 ಕೋಟಿ 38 ಲಕ್ಷ ಹಣವನ್ನು 10 ವಿಭಿನ್ನ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿತ್ತು. ತಾಂತ್ರಿಕ ವಿಶ್ಲೇಷಣೆ ಹಾಗೂ ತನಿಖೆಯ ಮೂಲಕ ವಂಚಕರು ನೇಪಾಳದಲ್ಲಿ ಕುಳಿತು ಈ ವಂಚನಾ ಜಾಲವನ್ನು ನಿಯಂತ್ರಿಸುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.


ವಂಚನೆಯ ಕಾರ್ಯವಿಧಾನ:

ವಂಚಕರ ಒಂದು ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಬ್ಯಾಂಕ್ ಖಾತೆದಾರರು ಮತ್ತು ಏಜೆಂಟ್‌ಗಳನ್ನು ನೇಮಕ ಮಾಡಿಕೊಂಡು, ವಂಚನೆಯ ಹಣವನ್ನು ವಿವಿಧ ಖಾತೆಗಳ ಮೂಲಕ ವರ್ಗಾಯಿಸಿ USDT (ಕ್ರಿಪ್ಟೋ ಕರೆನ್ಸಿ)ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸುತ್ತಿತ್ತು.


ಇನ್ನೊಂದು ತಂಡವು ಕಾಂಬೋಡಿಯಾ, ದುಬೈ ಸೇರಿದಂತೆ ಇತರ ದೇಶಗಳಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸಿ, ಹೆಚ್ಚಿನ ಲಾಭದ ಆಮಿಷ ಒಡ್ಡಿ ಹಣ ಹೂಡಿಕೆ ಮಾಡಿಸುತ್ತಿತ್ತು. ಈ ಸಂಪೂರ್ಣ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವೇ ನಿಯಂತ್ರಿಸುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸುವ ತಂತ್ರ:

ವಂಚಕರು ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಮೂಲಕ ನಕಲಿ ಕಂಪನಿಗಳ ಹೆಸರಿನಲ್ಲಿ ಜಾಹೀರಾತು ನೀಡಿ, ಕಾರ್ಪೋರೇಟ್ ಖಾತೆ, ಚಾಲ್ತಿ ಖಾತೆ, USDT–INR ಎಕ್ಸ್‌ಚೇಂಜ್, OTP ವರ್ಕರ್‌ಗಳು ಬೇಕೆಂದು ಸಂಪರ್ಕಿಸುತ್ತಿದ್ದರು. 5ರಿಂದ 10 ಶೇಕಡಾ ಕಮಿಷನ್, ವಿಮಾನ ಟಿಕೆಟ್, ಹೋಟೆಲ್ ವ್ಯವಸ್ಥೆಯ ಆಮಿಷ ನೀಡಿ ಜನರನ್ನು ದುಬೈ, ನೇಪಾಳಕ್ಕೆ ಕರೆಸಿಕೊಂಡು, ಅವರ ಸಿಮ್ ಹಾಗೂ ನೆಟ್ ಬ್ಯಾಂಕಿಂಗ್ ಬಳಸಿ ಹಣ ವರ್ಗಾವಣೆ ಮಾಡುತ್ತಿದ್ದರು.


ಪ್ರತಿದಿನ ಕೋಟಿ ರೂ. ಮಟ್ಟದ ವಂಚನೆ:

ನಕಲಿ ಆ್ಯಪ್‌ಗಳ ಮೂಲಕ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭ ಬಂದಂತೆ ತೋರಿಸಿ, ಆರಂಭದಲ್ಲಿ ಸ್ವಲ್ಪ ಹಣ ನೀಡುವ ಮೂಲಕ ನಂಬಿಕೆ ಹುಟ್ಟಿಸಲಾಗುತ್ತಿತ್ತು. ನಂತರ ಹೆಚ್ಚಿನ ಹಣ ಹೂಡಿಕೆ ಮಾಡಲು ಒತ್ತಾಯಿಸಲಾಗುತ್ತಿತ್ತು. ಈ ರೀತಿ ಪ್ರತಿದಿನ ರೂ.60 ಲಕ್ಷದಿಂದ 1 ಕೋಟಿ ರೂಪಾಯಿ ವರೆಗೆ ಹೂಡಿಕೆ ವಂಚನೆ ನಡೆಯುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.


ಡಿಜಿಟಲ್ ಸ್ಲೇವರಿ ಬಗ್ಗೆ ಎಚ್ಚರಿಕೆ:

ವಿದೇಶಗಳಲ್ಲಿ ಉದ್ಯೋಗದ ಆಮಿಷ ನೀಡಿ ಯುವಕರನ್ನು ಟೂರಿಸ್ಟ್ ವೀಸಾದಲ್ಲಿ ಕರೆದುಕೊಂಡು ಹೋಗಿ, ಪಾಸ್‌ಪೋರ್ಟ್ ಹಾಗೂ ದಾಖಲೆಗಳನ್ನು ಕಬಳಿಸಿ ಅವರನ್ನು ಬಲವಂತವಾಗಿ ಸೈಬರ್ ವಂಚನೆಗೆ ಬಳಸುತ್ತಿರುವ ಪ್ರಕರಣಗಳೂ ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 06 ಜನರನ್ನು ಇಂತಹ ಸೈಬರ್ ಸ್ಲೇವರಿಯಿಂದ ರಕ್ಷಿಸಲಾಗಿದ್ದು, ಅವರ ದೂರಿನ ಮೇರೆಗೆ ಪ್ರಕರಣಗಳು ದಾಖಲಾಗಿವೆ.


ಪೊಲೀಸರು ನೀಡಿರುವ ಎಚ್ಚರಿಕೆ:

ಕಮಿಷನ್ ಆಸೆಗೆ ಬ್ಯಾಂಕ್ ಖಾತೆ ನೀಡಿದವರೂ ಕಾನೂನು ಪ್ರಕಾರ ಆರೋಪಿಗಳಾಗುತ್ತಾರೆ.

ಹೆಚ್ಚಿನ ಲಾಭದ ಆಮಿಷ ನೀಡುವ ಸಾಮಾಜಿಕ ಜಾಲತಾಣದ ಹೂಡಿಕೆ ಜಾಹೀರಾತುಗಳಿಂದ ದೂರವಿರಿ.

ಹೂಡಿಕೆ ಮಾಡುವಾಗ ಕಡ್ಡಾಯವಾಗಿ SEBI ನೋಂದಾಯಿತ ಸಂಸ್ಥೆ ಅಥವಾ ಬ್ರೋಕರ್‌ಗಳ ಮೂಲಕವೇ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ತೆರೆಯಬೇಕು.

ಸೈಬರ್ ವಂಚನೆಯಾದರೆ ತಕ್ಷಣ ಕ್ರಮ.

ವಂಚನೆಯಾದ ಒಂದು ಗಂಟೆಯೊಳಗೆ 1930 ಗೆ ಕರೆ ಮಾಡಿ.

ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣ ದೂರು ಸಲ್ಲಿಸಬೇಕು.


ಯಾವುದೇ ಸರ್ಕಾರಿ ಇಲಾಖೆಯೂ ವೀಡಿಯೋ ಕಾಲ್ ಮೂಲಕ ದಸ್ತಗಿರಿ ಮಾಡುವುದಿಲ್ಲ – ಇಂತಹ ಕರೆಗಳು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top