ಕಲ್ಪನಾ ಕೊರವಡಿಯವರ ‘ನೀರೆಯರಿಮೆ’ ಸ್ತ್ರೀ ಸಂವೇದನೆಯ ಕೈಗನ್ನಡಿ: ಪ್ರೊ. ಉಪೇಂದ್ರ ಸೋಮಯಾಜಿ

Upayuktha
0



ಕುಂಭಾಶಿ: ಕುಂದಾಪುರದ ಕುಂಭಾಶಿ ಗ್ರಾಮ ಪಂಚಾಯತ್‌ನ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ವಿಶಿಷ್ಟವಾಗಿ ನೆರವೇರಿದ್ದು ಈ ಸಂದರ್ಭದಲ್ಲಿ ಶ್ರೀಮತಿ ಕಲ್ಪನಾ ಕೊರವಡಿ ಅವರ ಸ್ತ್ರೀವಾದಿ ವೈಚಾರಿಕ ವಿಮರ್ಶಾ ಲೇಖನಗಳ ಸಂಕಲನ ‘ನೀರೆಯರಿಮೆ' ಕೃತಿಯು ಲೋಕಾರ್ಪಣೆಗೊಂಡಿತು.


ಹಿರಿಯ ವಿದ್ವಾಂಸರೂ, ಸಾಹಿತಿಗಳೂ, ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಆದ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರು ತಮ್ಮ ಶಿಷ್ಯೆಯ ಕೃತಿಯನ್ನು ಅನಾವರಣಗೊಳಿಸಿ ಮಾತನಾಡುತ್ತಾ “ಕನ್ನಡ ಸಾಹಿತ್ಯ ಲೋಕದಲ್ಲಿ ಸ್ತ್ರೀವಾದಿ ಚಿಂತನೆಗಳು ಹೊಸ ಆಯಾಮ ಪಡೆಯುತ್ತಿರುವ ಈ ಕಾಲಘಟ್ಟದಲ್ಲಿ ‘ನೀರೆಯರಿಮೆ' ಒಂದು ಅತ್ಯಂತ ಪ್ರಮುಖ ಸಂಕಲನವಾಗಿದೆ. ಸ್ತ್ರೀವಾದವು ಕೇವಲ ಪ್ರತಿರೋಧವಲ್ಲ, ಅದು ಸಮಾಜದ ಸಮತೋಲನದ ದೃಷ್ಟಿಕೋನ ಎಂಬುದನ್ನು ಇಲ್ಲಿನ ಹನ್ನೊಂದು ಲೇಖನಗಳು ಮನವರಿಕೆ ಮಾಡುತ್ತವೆ. ಇದು ಸ್ತ್ರೀ ಜ್ಞಾನ ಜಾಗೃತಿಯ ಪ್ರತೀಕ, ಸ್ತ್ರೀ ಸಂವೇದನೆಯ ಕೈಗನ್ನಡಿ. ಕಲ್ಪನಾ ಅವರು ಅಪಾರ ಶ್ರಮ ವಹಿಸಿ, ಸಿದ್ಧಾಂತ ಮತ್ತು ವಾಸ್ತವದ ನಡುವಿನ ಕೊಂಡಿಯನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಲೇಖಕಿಯ ಗಂಭೀರ ಅಧ್ಯಯನಶೀಲತೆ ಪ್ರತಿ ಪುಟದಲ್ಲೂ ಎದ್ದು ಕಾಣುತ್ತಿದೆ. ಹೀಗಾಗಿಯೇ ಮುನ್ನುಡಿಯಲ್ಲಿ ಹಿರಿಯ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಅವರು ‘ಅಪಾರ ಪರಿಶ್ರಮ ವಹಿಸಿ ಗಂಭೀರವಾಗಿ ಚಿಂತಿಸಿ ಬರೆದ ಉತ್ತಮ ಗುಣಮಟ್ಟದ ಈ ಕೃತಿಯ ಬಗ್ಗೆ ನನಗೆ ಹೆಮ್ಮೆಯೆನ್ನಿಸುತ್ತದೆ’ ಎಂದಿದ್ದಾರೆ, ಸ್ತ್ರೀ ಸಂವೇದನೆಯನ್ನು ಅರ್ಥಮಾಡಿಕೊಳ್ಳಬಯಸುವ ವಿದ್ಯಾರ್ಥಿಗಳಿಗೆ ಹಾಗೂ ಚಿಂತಕರಿಗೆ ಇದೊಂದು ಅತ್ಯುತ್ತಮ ಪರಾಮರ್ಶನ ಗ್ರಂಥವಾಗಿ ಮುಂದಿನ ದಿನಗಳಲ್ಲಿ ಬಳಕೆಯಾಗುವುದರಲ್ಲಿ ಸಂದೇಹವಿಲ್ಲ” ಎಂದು ಶ್ಲಾಘಿಸಿದರು.




ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಆನಂದ ಪೂಜಾರಿ ಅವರು ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಗ್ರಂಥಾಲಯ ಕಟ್ಟಡ, ಅಂಬೇಡ್ಕರ್ ಭವನ, ಗ್ರಾಮೀಣ ಅಂಗವಿಕಲರ ಪುನರ್ವಸತಿ ಕಚೇರಿಗಳನ್ನು ಉದ್ಘಾಟಿಸಿ ಕೊರವಡಿ ಹಾಗೂ ಕುಂಭಾಶಿ ಅಂಗನವಾಡಿಗಳ ಶಿಲಾನ್ಯಾಸವನ್ನು ನೆರವೇರಿಸಿದರು.


ಪ್ರಸ್ತುತ ಬೆಂಗಳೂರಿನ ಕಾಡುಗುಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿರುವ ಲೇಖಕಿ ಶ್ರೀಮತಿ ಕಲ್ಪನಾ ಕೊರವಡಿ ಅವರು ತಮ್ಮ ಹುಟ್ಟೂರಿನಲ್ಲಿ ಜ್ಞಾನದ ಹಸಿವನ್ನು ನೀಗಿಸುವ ಗ್ರಂಥಾಲಯಕ್ಕೆ ಚಾಲನೆ ಸಿಕ್ಕ ದಿನವೇ, ಈ ಕೃತಿ ಬೆಳಕು ಕಂಡ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು. ಅವರು ತಮ್ಮ ಕೃತಿಯ ಆಶಯವನ್ನು ವಿವರಿಸುತ್ತಾ ಈ ನಿಟ್ಟಿನಲ್ಲಿ ತಾನು ಸಂಶೋಧನೆಯಲ್ಲಿ ತೊಡಗಿರುವ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಂ.ಎಸ್. ದುರ್ಗಾಪ್ರವೀಣ ಅವರ ಮಾರ್ಗದರ್ಶನವನ್ನು ಕೃತಜ್ಞತೆಯಿಂದ ಸ್ಮರಿಸಿದರು.


ಶ್ರೀ ಶಂಕರ ದೇವಾಡಿಗ ಅಂಕದಕಟ್ಟೆ ಅವರು ಮಾತನಾಡುತ್ತಾ “ಪ್ರಸ್ತುತ ಕೃತಿಯು ನಮ್ಮನಗಲಿದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ, ಲೇಖಕಿಯ ತಮ್ಮ ಶ್ರೀನಿಧಿ ಉಪಾಧ್ಯ ಅವರಿಗೆ ಅರ್ಪಣೆಯಾಗಿರುವುದು ಅರ್ಥಪೂರ್ಣವಾಗಿದೆ” ಎಂದರು.


ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಕನ್ಯ ಶೆಟ್ಟಿ, ಸದಸ್ಯರಾದ ಶ್ರೀಮತಿ ರಾಧಾದಾಸ್, ಶ್ರೀಮತಿ ಪುಷ್ಪಲತಾ, ಶ್ರೀ ರಾಘವೇಂದ್ರ, ಶ್ರೀ ಶ್ರೀನಿವಾಸ ರಾವ್, ಶ್ರೀ ಗಣೇಶ ಬಾರ್ಕೂರ್, ಶ್ರೀ ರಾಮಚಂದ್ರ ಉಪಾಧ್ಯ, ಶ್ರೀಮತಿ ಶ್ವೇತಾ ಶ್ರೀನಿಧಿ ಉಪಾಧ್ಯ ಉಪಸ್ಥಿತರಿದ್ದರು. ಅರ್ಜುನ್ ದಾಸ್ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಲಲಿತ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶ್ರೀ ಶಿವಾನಂದ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top