ಬಳ್ಳಾರಿ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು ಸಮಾಜದ ಸಮಸ್ಯೆಗಳನ್ನು ಬಿಂಬಿಸುವಲ್ಲಿ ಅವರ ಸತತ ಪರಿಶ್ರಮ ಶ್ಲಾಘನೀಯ ಎಂದು ಬಿಜೆಪಿ ಹಿರಿಯ ಧುರೀಣ ಮಾಜಿ ಸಚಿವ ಬಿ. ಶ್ರೀರಾಮುಲು ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್ ಯೊಂದರಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದೊಂದಿದೆ ಎರಡು ದಿನಗಳ ಕಾಲ ನಡೆಯುವ ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸಭೆಯ ಎರಡನೇ ದಿನದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ಹೇಳುವಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಾವು ಮಾಡುವ ಕೆಲಸದ ಫಲ ಸಿಗುವಂತಿದ್ದರೆ ಆ ಕೆಲಸವನ್ನು ನಿರ್ಭಯದಿಂದ ಮಾಡಿ ಎಂಬ ಮಾತನ್ನು ಪತ್ರಕರ್ತರು ನೆನಪಿಡಬೇಕು. ಇವತ್ತು ಸಮಾಜ ಅತ್ಯಂತ ಸೂಕ್ಷ್ಮವಾಗಿದೆ. ಇಲ್ಲಿನ ಆಗುಹೋಗುಗಳನ್ನು ಎಲ್ಲರೂ ಗಮನಿಸುತ್ತಿರುತ್ತಾರೆ. ಹಾಗಾಗಿ ಪತ್ರಕರ್ತರ ಜವಾಬ್ದಾರಿ ಇವತ್ತು ಹೆಚ್ಚಿದೆ ಎಂದರು.
ಇಂಗ್ಲೀಷ್ ಪತ್ರಿಕೆಗಳ ಓದುಗರು ಕಡಿಮೆ. ಆದರೂ ಇಂಗ್ಲೀಷ್ ಬಲ್ಲವರು ಇಂಗ್ಲೀಷ್ ಬಾರದ ಅತ್ಯಂತ ದೊಡ್ಡ ಸಮೂಹವನ್ನು ಆಳುತ್ತಾರೆ ಮತ್ತು ನೀತಿ ನಿರೂಪಣೆಗಳನ್ನು ರೂಪಿಸುವಂತಾಗಿದೆ. ಹಾಗಾಗಿ ಕೆಲವೊಮ್ಮೆ ಸರ್ವಾಧಿಕಾರಿ ಧೋರಣೆಯ ಅಪಾಯವೂ ಇದೆ. ಹಾಗಾಗಿ ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಹೆಚ್ಚಬೇಕಿದೆ. ಅಲ್ಲದೇ ಬಹುದೊಡ್ಡ ಜನ ಸಮುದಾಯದ ಬೇಕು ಬೇಡಗಳನ್ನು ನಿರ್ಧರಿಸಲು ಕನ್ನಡ ಬಲ್ಲ ಅಧಿಕಾರಿ ವರ್ಗವೂ ಮುಖ್ಯವಾಗುತ್ತದೆ. ಪತ್ರಿಕೆಗಳು ಧನಾತ್ಮಕ ಅಂಶಗಳನ್ನು ವರದಿ ಮಾಡುವಂತೆ, ಸಮಾಜವನ್ನು ತಿದ್ದುವ ಕೆಲಸವನ್ನು ಸಹ ಮಾಡಬೇಕು. ಜನಪ್ರತಿನಿಧಿಗಳಿಗೆ ಸಮಸ್ಯೆಗಳನ್ನು ತಲುಪಿಸಲು ಅಧಿಕಾರಿಗಳ ಧ್ವನಿಗಿಂತ ಪತ್ರಕರ್ತರ ಧ್ವನಿ ಗಟ್ಟಿಯಾದುದು ಎಂದು ಶ್ರೀರಾಮುಲು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಬಿ. ಪಂಡಿತ್, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಶಿವುಪೂಜಿ, ಬಿಹಾರದ ರಾಜ್ಯಸಭಾ ಸದಸ್ಯ ಅನಿಲ್ ಪ್ರಸಾದ್ ಹೆಗಡೆ, ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಪಂಜಾಬಿನ ರಾಜ್ಯಾಧ್ಯಕ್ಷರಾದ ಜಸ್ಬೀರ್ ಸಿಂಗ್ ಪಟ್ಟಿ, ಬಿಹಾರ್ ರಾಜ್ಯದ ಅಧ್ಯಕ್ಷರಾದ ನವೀನ್ ಕುಮಾರ್, ಬಳ್ಳಾರಿ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಸೇರಿದಂತೆ ದೇಶದ ಹದಿನಂಟು ರಾಜ್ಯಗಳ ಪತ್ರಕರ್ತರ ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


