-ಟಿ. ದೇವಿದಾಸ್
ಅಪ್ಪ ಅಮ್ಮನಿಗಿಂತ ದೊಡ್ಡದು ಯಾವುದೂ ಇಲ್ಲ. ಆದರೆ ಸತ್ಯ ಅದಕ್ಕಿಂತಲೂ ದೊಡ್ಡದು ಎಂದೂ, ಅದನ್ನೇ ಜೀವನ ಮೌಲ್ಯವನ್ನಾಗಿ ಉಳಿಸಿಕೊಂಡು ಬಾಳಿ ಬದುಕಿದ ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ಕಲಿಸಿದ ಜೀವನ ಪಾಠವೆಂದರೆ ಅವರನ್ನು ಹೊರತುಪಡಿಸಿಯೂ ಅವರ ಮಕ್ಕಳು ಹೇಗೆ ಬದುಕಬೇಕೆಂಬುದನ್ನು! ಹಿರಿಯರಿಗೆ ಗೊತ್ತಿತ್ತು: ಜೀವನ ಎಂದರೆ ನಿರಂತರವಾಗಿ ಕಲಿಯುವುದು. ಕಲಿಯುತ್ತಲೇ ಇರುವುದು ಅಂತ. ಯಾರು ಕಲಿಯಲಾರರೋ ಅವರಿಗೆ ಕಲಿಸುವ ಅಗತ್ಯವನ್ನು, ಆವಶ್ಯವನ್ನು ತಾವು ಕಲ್ಪಿಸಬೇಕು, ಕಲಿಸಬೇಕು. ಹೇಗೆಂದರೆ, ಕೊರತೆ ಮತ್ತು ಕಷ್ಟವನ್ನು ಅ-ಪರೋಕ್ಷವಾಗಿ ನೀಡುವ ಮೂಲಕ. ಮಕ್ಕಳನ್ನು ಲಾಲಿಸುವ, ಪಾಲಿಸುವ, ಮುದ್ದಿಸುವ, ಪೋಷಿಸುವ ಪ್ರಧಾನ ಜೀವನಿಷ್ಠೆ ಪ್ರಕ್ರಿಯೆಯಲ್ಲಿ ವಸ್ತುನಿಷ್ಠವಾಗಿ, ಭಾವನಾತ್ಮಕವಾಗಿ, ವೈಚಾರಿಕವಾಗಿ, ಬೌದ್ಧಿಕವಾಗಿ ಹಿರಿಯರು ನಿಷ್ಠೆಯನ್ನು ಉಳಿಸಿಕೊಂಡರೇ ವಿನಾ ಯಾವ ಶ್ರಮವನ್ನೂ ಪ್ರತ್ಯೇಕವಾಗಿ ಪಟ್ಟವರಲ್ಲ. ಮಕ್ಕಳನ್ನು ಮಕ್ಕಳಂತೆಯೇ ಕಂಡು ಬೆಳೆಸಿದರು. ಮಕ್ಕಳ ಸ್ವಾತಂತ್ರ್ಯಕ್ಕೆ ಯಾವ ತೊಂದರೆಯೂ ತಮ್ಮಿಂದಾಗದಂತೆ ಬದುಕನ್ನು ರೂಢಿಸಿಕೊಂಡರು. ಯಾವ ಕೊರತೆಯೂ ಇಲ್ಲದೆ ಮಕ್ಕಳನ್ನು ಬೆಳೆಸಬಾರದೆಂಬ ಪ್ರಜ್ಞೆಯೇ ಅವರಿಲ್ಲದೆಯೂ ಅವರ ಮಕ್ಕಳು ಬದುಕುವುದನ್ನು ಕಲಿತಿದ್ದರು. ಅದನ್ನೇ ತಮ್ಮ ಮಕ್ಕಳಿಗೂ ಕಲಿಸಿದರು. ಬದುಕೆಂದರೆ ಹೀಗೆ ಎಂದು ಅ-ಪರೋಕ್ಷವಾಗಿ ಮಕ್ಕಳಿಗೆ ಹೇಳಿಕೊಟ್ಟರು. ಹೆತ್ತವರು ತಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಶಕ್ತಿಯೆಂದರೆ ತಮ್ಮನ್ನು ಅಗಲಿಯೂ ತಮ್ಮ ಮಕ್ಕಳು ಬದುಕುವುದನ್ನು ಕಲಿಯುವುದು. ಹಿರಿಯರಿಗೆ ಗೊತ್ತಿತ್ತು; ಕಷ್ಟ ಕೊರತೆಗಳು ನಮ್ಮನ್ನು ಬೆಳೆಸಿದರೆ, ಕರುಣೆ ಮತ್ತು ದುಃಖ ಮಾನವೀಯಗೊಳಿಸುವುದೆಂದು!
ಇಂದಿನ ಪೋಷಕರಲ್ಲಿ ಬಹುತೇಕರು ತಮ್ಮ ಮಕ್ಕಳಿಗೆ ತೋರುವ ಅತಿಯಾದ ಪ್ರೀತಿ, ಸ್ವಾತಂತ್ರ್ಯ, ಸವಲತ್ತು ಸೌಲಭ್ಯ, ಎಚ್ಚರ, ಅತಿಯಾದ ನಂಬಿಕೆ, ಮಕ್ಕಳನ್ನು ಪ್ರಶ್ನಿಸದ ಧೋರಣೆ, ಆ ಮೂಲಕ ಮಕ್ಕಳಲ್ಲಿ ಹುಟ್ಟಿಕೊಳ್ಳುವ ಸ್ವೇಚ್ಛೆ- ಇವೆಲ್ಲ ಅವರನ್ನು ವೈಚಾರಿಕವಾಗಿ ಬೌದ್ಧಿಕವಾಗಿ ಭಾವನಾತ್ಮಕವಾಗಿ ಸಾಮಾಜಿಕವಾಗಿ ಪ್ರಬುದ್ಧಗೊಳಿಸದೆ ಅವರಲ್ಲಿ ಅಸಹನೀಯ ಹಠ, ಮೊಂಡುತನ, ಅಗೌರವ, ಧಾರ್ಷ್ಟ್ಯ, ಕೀಳರಿಮೆ, ಮೇಲರಿಮೆ, ಕಲಿಕೆಯ ಬಗ್ಗೆ ಅನಾಸಕ್ತಿ, ತಿರಸ್ಕಾರ, ಗಾಸಿಪಿಂಗ್, ಅಣಕು, ಅಪಹಾಸ್ಯ, ಟೀಕೆ-ವಿಮರ್ಶೆ, ಕೀಳಭಿರುಚಿಯ ಕಮೆಂಟ್ಸ್, ಕುಹಕ ನಗು, ಅಣಕು, ಅಪಹಾಸ್ಯ, ಅಸಡ್ಢೆ, ಹಣದ ಸೊಕ್ಕು, ದುರುಳುತನದ ಅಭಿವ್ಯಕ್ತಿ, ನಿರ್ಲಕ್ಷ್ಯ, ತಿರಸ್ಕಾರ, ಉಡಾಫೆ, ಉದಾಸೀನ ಭಾವ- ಹೆಚ್ಚುತ್ತಿದೆ. ಇದಕ್ಕೆಲ್ಲ ಪೋಷಕರಲ್ಲದೆ ಮತ್ಯಾರು ಕಾರಣವಾಗುತ್ತಾರೆ? ವಯೋಗುಣಕ್ಕನುಗುಣವಾಗಿ ಅವರಲ್ಲಿ ಬೆಳೆಯಬೇಕಾದ ಅರಿವಿನ ಬಗ್ಗೆ ಪೋಷಕರಲ್ಲಿಯೇ ಸರಿಯಾದ ಜ್ಞಾನವಿಲ್ಲ. ತಂದೆಯ ದುಡಿಮೆ, ಸಂಪಾದನೆ, ಸಾಮಾಜಿಕ ಸ್ಥಾನಮಾನ, ಅಸ್ತಿತ್ವ, ಮತ್ತು ಒಟ್ಟೂ ಬದುಕಿನ ಇತಿಮಿತಿಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಹೆತ್ತವರು ಮೂಡಿಸುವುದು ಸಾಧ್ಯವಾಗದೇ ಇದ್ದಾಗ ಮಕ್ಕಳು ಮಕ್ಕಳಾಗಿ ಇರುವುದಿಲ್ಲ. ಅವರ ನಡೆವಳಿಕೆ ಅಥವಾ ವರ್ತನೆ ಎಲ್ಲ ಸಂದರ್ಭಗಳಲ್ಲೂ ದಾರಿ ತಪ್ಪುತ್ತದೆ. ಮುಖ್ಯವಾಗಿ, ಕಲಿಯುವ ಹಂತದಲ್ಲಿ ದಾರಿ ತಪ್ಪುತ್ತದೆ. ಕೊನೆಗೆ ಶಾಲಾ ಕಾಲೇಜುಗಳನ್ನು ದೂರುವುದು ಮಾಮೂಲಿಯಾಗಿ ಬಿಟ್ಟಿದೆ ಈ ದಿನಮಾನಗಳಲ್ಲಿ! ಮಕ್ಕಳನ್ನು ತಿದ್ದಿ ತೀಡುವ ಕಾರ್ಯದಲ್ಲಿ ಶಾಲೆಗಳು ಸಣ್ಣಪುಟ್ಟ ಶಿಕ್ಷೆಗಳನ್ನು ನೀಡಿದರೆ ಶಾಲೆಯ ವಿರುದ್ಧ ಕಾನೂನು ಕ್ರಮಕ್ಕಾಗಿ ಮುಂದಾಗುವ ಪೋಷಕರು ಮಕ್ಕಳ ಭವಿಷ್ಯವನ್ನು ಕುರಿತು ಚಿಂತಿಸುವುದೇ ಇಲ್ಲ.
ನೆನಪಿಡಬೇಕಾದ ಸಂಗತಿಯೇನೆಂದರೆ, ಕಷ್ಟಗಳನ್ನು ಎದುರಿಸಿ ಗೆಲ್ಲುವುದರಲ್ಲಿ, ನೋವನ್ನು ನುಂಗಿ ನಗುವನ್ನು ತಂದುಕೊಳ್ಳುವುದರಲ್ಲಿಯೇ ಬದುಕಿನ ಥ್ರಿಲ್ ಇರುವುದು! ಮಕ್ಕಳಿಗೆ ಇದನ್ನು ಕಲಿಸಬೇಕಿದೆ. ಎಲ್ಲವನ್ನೂ ದೇವರು ಮಾಡಿ ಬಿಡುತ್ತಾನೆಂಬ ಬಲಹೀನತೆಗೆ ಒಳಗಾಗಬಾರದು. ದೇವರಿಗೂ ನಾವಂದುಕೊಂಡಷ್ಟು ಒಳ್ಳೆಯದನ್ನು ಮಾಡಿಬಿಡುವಷ್ಟು ಶಕ್ತಿಯಿಲ್ಲ. ಒಳ್ಳೆಯದನ್ನು ಮಾಡುವುದಕ್ಕೆ ಅವನು ಕಾಯುತ್ತಾನೆ; ತನ್ನ ಸರದಿಗಾಗಿ! ದೇವರ ಮೇಲೆಯೇ ಎಲ್ಲ ಭಾರವನ್ನೂ ಹಾಕಿ ಏನೂ ಶ್ರಮಪಡದೆ ಎಲ್ಲವೂ ತನಗೇ ದಕ್ಕಲೆಂಬ ಹಂಬಲದಿಂದ ನಮ್ಮ ಮಕ್ಕಳು ಬೆಳೆಯುವುದನ್ನು ತಪ್ಪಿಸಬೇಕಿದೆ. ಕೊರತೆಯನ್ನು ತುಂಬಿಸಿಕೊಳ್ಳುವ ದಾರಿಯನ್ನು, ಸವಾಲನ್ನು ಎದುರಿಸುವ ಶಕ್ತಿಯನ್ನು ಮಕ್ಕಳಿಗೆ ತೋರಬೇಕಿದೆ. ಹೆತ್ತವರು ಆ ಶಕ್ತಿಯನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ಮನೆಯ ಸದಸ್ಯರನ್ನು, ಬಂಧು ಬಾಂಧವರನ್ನು, ಆತ್ಮೀಯರನ್ನು, ನೆರೆಹೊರೆಯವರನ್ನು, ಶಿಕ್ಷಕರನ್ನು, ಹಿರಿಯರನ್ನು ಗೌರವಿಸುವ ಪಾಠ ಮನೆಯಿಂದಲೇ ಆಗಬೇಕಿದೆ. ಶಾಲೆಗಳಲ್ಲಿ ಇದಕ್ಕೆ ಅವಕಾಶಗಳು ಯಥೇಚ್ಛವಾಗಿ ಇರುವುದಾದರೂ ಸಮಯ ಅಷ್ಟಾಗಿ ಇರುವುದಿಲ್ಲ. ಮೇಲಾಗಿ, ಮಕ್ಕಳ ವರ್ತನೆಯಲ್ಲಿ, ನಡೆವಳಿಕೆಯಲ್ಲಿ ಏನೇ ಉದ್ಧಟತನವಿದ್ದರೂ ಶಾಲೆಗಳಲ್ಲಿ ಮಕ್ಕಳನ್ನು ತಿದ್ದಿ ಬುದ್ಧಿಯ ಮಾತನ್ನು ಹೇಳುವಂತಿಲ್ಲ. ದುರ್ವರ್ತನೆ ದುಃಶೀಲಗಳು ಮಿತಿಮೀರಿದರೂ ಮಕ್ಕಳನ್ನು ಸಣ್ಣದಾಗಿ ಶಿಕ್ಷಿಸುವಂತೆಯೂ ಇಲ್ಲ. ಮುಖ್ಯಾಧ್ಯಾಪಕರನ್ನು, ಶಿಕ್ಷಕರನ್ನು ಅತಿಕೆಟ್ಟ ಪದಗಳಿಂದ ಏಕವಚನದಲ್ಲಿ ಆಡಿಕೊಂಡರೂ ಅಣಕಿಸಿದರೂ ನಾಕು ಪೆಟ್ಟು ಕೊಟ್ಟು ಅವರನ್ನು ತಿದ್ದುವಂತಿಲ್ಲ. ಹಾಗೆ ಮಾಡಿದರೆ ಪೋಷಕರು ಮಕ್ಕಳ ಆಯೋಗಕ್ಕೆ ದೂರು ಕೊಡುತ್ತಾರೆ. ಆಮೇಲೆ ಶಾಲೆ ಪೋಷಕ-ಸಮಾಜದ ಸಂಬಂಧದಲ್ಲಿ ಶೈಥಿಲ್ಯತೆ ಹುಟ್ಟಿಕೊಳ್ಳುತ್ತದೆ. ಪರಿಸ್ಥಿತಿ ಏನೇನೆಲ್ಲ ಆಗಬಹುದಾದ ಸಾಧ್ಯತೆಗಳಿರುತ್ತವೆ. ಇದರಿಂದ ಆಗುವ ಸಾಧನೆಯಾದರೂ ಏನು ಎಂಬುದನ್ನು ಮುಖ್ಯವಾಗಿ ಮಕ್ಕಳ ಪೋಷಕರು ಅರಿಯಬೇಕಿದೆ. ಅರ್ಥೈಸಿಕೊಳ್ಳಬೇಕಿದೆ. ಯಾಕೆಂದರೆ, ಸರಿಹೊತ್ತಿನ ಸಂದರ್ಭದಲ್ಲಿ ಮಕ್ಕಳು ಮಕ್ಕಳಾಗಿಲ್ಲ ಎಂಬುದಂತೂ ಸತ್ಯ!
ಪೋಷಕರು ತಮ್ಮ ಶ್ರೀಮಂತಿಕೆ, ಸ್ಥಾನಮಾನ, ಪ್ರಭಾವ, ವರ್ಚಸ್ಸು, ಹೊಂದಿರುವ ಐಹಿಕ ಸಂಪತ್ತು ಎಲ್ಲವೂ ತಮ್ಮ ಮಕ್ಕಳ ಗುಣ ಸ್ವಭಾವ, ಸಹಬಾಳ್ವೆ, ಕೂಡಿ ಆಡುವುದು, ಹೊಂದಾಣಿಕೆ, ಕಲಿಕೆಯ ಮೇಲೆ ಯಾವ ಪರಿಣಾಮ ಮತ್ತು ಪ್ರಭಾವವನ್ನು ಬೀರುತ್ತದೆಂದು ಯೋಚಿಸಲಾರರು. ಮಕ್ಕಳ ಬದುಕಿನಲ್ಲಿ ತಾವೇ ನಿಂತು ಎಲ್ಲವನ್ನೂ ಎದುರಿಸುವ ಪೋಷಕರಿಗೆ ಇವು ಬೀರುವ ಯಾವ ಪರಿಣಾಮವೂ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ತಮ್ಮ ಮಕ್ಕಳಿಗೆ ಕಲಿಸುವ ಶಿಕ್ಷಕರನ್ನು ಏಕವಚನದಲ್ಲಿ ಅಂದಾಜಿಸಿ ಮಾತನಾಡುವ ಪೋಷಕರಲ್ಲಿ ಯಾವ ಮಟ್ಟದ ಜ್ಞಾನ, ಪರಿಜ್ಞಾನ ಇರಲು ಸಾಧ್ಯ? ನಿಮಗೆಷ್ಟು ಸಂಬಳ ಕೊಡ್ತಾರೆ ಎಂದು ಕೀಳಂದಾಜಿಸುವ ಪೋಷಕರು ತಮ್ಮ ಮಕ್ಕಳಿಗೆ ಕೊಡಿಸುವ ವಸ್ತುಗಳ ಬೆಲೆಗಿಂತಲೂ ಕಡಿಮೆಯಾಗಿ ಪರಿಹಾಸ್ಯ ಮಾಡುವುದನ್ನು ನಾನು ನೋಡಿದ್ದೇನೆ. ತಮ್ಮ ಮಕ್ಕಳಿಗೆ ಚೆನ್ನಾಗಿ ಅಂಕಗಳು ಬಾರದಿದ್ದಾಗ ಸಂಬಂಧಪಟ್ಟ ಶಿಕ್ಷಕನನ್ನೂ ಕೊನೆಗೆ ಶಾಲೆಯನ್ನೂ ಬಾಯಿಗೆ ಬಂದಂತೆ ಅವಮಾನಿಸುವುದು ಈಗೀಗ ಸಾಮಾನ್ಯ. ಕಲಿಕೆಯಲ್ಲಿ ಶೂನ್ಯ ಗ್ರಹಿಕೆಯೂ ಇಲ್ಲದೇ ಹೋದ ಮಕ್ಕಳಿಗೂ ತೊಂಬತ್ತಕ್ಕಿಂತ ಹೆಚ್ಚಿನ ಅಂಕಗಳನ್ನು ಕೊಡಬೇಕೆಂದು ತಾಕೀತು ಮಾಡಿದ ಪೋಷಕರಿಗೆ ತಮ್ಮ ಮಕ್ಕಳ ವರ್ತನೆಯ ಬಗ್ಗೆ ಯಾವ ಕಾಳಜಿಯೂ ಇರುವುದಿಲ್ಲ. ಅಂಕಗಳು ಹಣದಿಂದಲೋ, ಧಮಕಿಯಿಂದಲೋ ಸಿಗುವುದಾದರೆ ಶಾಲೆಗಳು ಯಾಕೆ ಬೇಕು? ಶಿಕ್ಷಕರು ಯಾಕೆ ಬೇಕು? ಓದು ಯಾಕೆ ಬೇಕು? ಹಣದಲ್ಲಿ ಕೊಂಡುಕೊಳ್ಳಲು ವಿದ್ಯೆಯೇನು ಸಂತೆಯಲ್ಲೋ ಜಾತ್ರೆಯಲ್ಲೋ ಮಾರುವ ಸರಕೇ? ನಾನ್ ಸೆನ್ಸ್ ಒಯ್ತಂದು!
ತಾಯಿಯಾದವಳು ಸಂಸ್ಕಾರವನ್ನು, ಸಭ್ಯತೆಯನ್ನು, ಸಜ್ಜನಿಕೆಯನ್ನು ನೀಡುತ್ತಾಳಾದರೆ, ತಂದೆ ಈ ಸಮಾಜವನ್ನು ಎದುರಿಸುವುದನ್ನು ಕಲಿಸುತ್ತಾನೆಂದು ನಂಬಿದ ಸಮಾಜ ನಮ್ಮದು. ಮನೆಯ ಹೆಣ್ಣು ಮಕ್ಕಳು ಅಂಗಳದಲ್ಲಿ ನಿಂತು ದೊಡ್ಡ ಗಂಟಲಲ್ಲಿ ಮಾತನಾಡುವುದನ್ನು ಸಹಿಸದ ಪರಂಪರೆಯ ಈ ನೆಲದ ಹೆಣ್ಣು ಮಕ್ಕಳು ಇಂದು ಬೀದಿ ಬದಿಯಲ್ಲಿ ನಿಂತು ಹರಟುವುದು, ಕುಡಿದು ಮಜಾ ಉಡಾಯಿಸುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ,ದ ಹೆಸರಲ್ಲಿ ಸ್ವೇಚ್ಛೆಯಾಗಿ ವ್ಯವಹರಿಸಲು ಅನುಕೂಲ ಮಾಡುತ್ತಿದೆ. ಆಫ್ ಕೋರ್ಸ್ ವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಹರಣ ಮಾಡುವಂತಿಲ್ಲ. ಆದರೆ ಯಾವ ಬಂಧವೂ ಇಲ್ಲದೆ ಈ ಬದುಕಿಗೊಂದು ಚೌಕಟ್ಟು ಬರಲು ಹೇಗೆ ಸಾಧ್ಯ? ಬಂಧನವೇ ಇಲ್ಲದೆ ಸ್ವಾತಂತ್ರ್ಯಕ್ಕೇನು ಅರ್ಥ? ಬಂಧನವೇ ಇಲ್ಲದೆ ಬದುಕಿಗೇನು ಅರ್ಥ? ಜೀವನಕ್ಕೂ ಒಂದು ಸಂಹಿತೆ ಬೇಡವೇ? ಎಳವೆಯಲ್ಲೇ ಸಂಸ್ಕಾರ ಸಂಸ್ಕೃತಿಹೀನರನ್ನಾಗಿಸುವ ಅವಕಾಶಗಳನ್ನು ನಿಯಂತ್ರಿಸದಿದ್ದರೆ, ಅತಿಯಾದ ನಂಬಿಕೆ ಮತ್ತು ಪ್ರೀತಿಯನ್ನು ತೋರದಿದ್ದರೆ ಯಾವ ಅಪದ್ಧಗಳೂ ಮಕ್ಕಳಲ್ಲಿ ಹುಟ್ಟಲಾರದು. ಮಕ್ಕಳನ್ನು ಮಕ್ಕಳ ಹಾಗೆ ಬೆಳೆಸುವುದೂ ಒಂದು ಕಲೆ. ಆ ಕಲೆ ನಮ್ಮ ಹಿರಿಯರಲ್ಲಿ ಕರಗತವಾಗಿತ್ತು. ಆ ಕಾಲವೂ ಹಾಗೇ ಇತ್ತು. ಮಕ್ಕಳೊಂದಿಗೇ ಇರುತ್ತಿದ್ದರೂ ಅವರು ಮಕ್ಕಳನ್ನು ಅಗಲಿ ಬದುಕುತ್ತಿದ್ದರು. ಅಂದಿನ ದಿನಮಾನಗಳಲ್ಲಿ ಶಾಲೆಗಳೂ ಹಾಗೇ ಇದ್ದವು. ಸಮಾಜವೂ ಹಾಗೇ ಇತ್ತು. ಬಿಟ್ಟು ಬದುಕುವ, ಸೌಕರ್ಯಗಳಿಂದ ದೂರವಿರುವ ಶಕ್ತಿಯನ್ನು, ತಿರಸ್ಕರಿಸುವ ಸಾಮರ್ಥ್ಯವನ್ನು ಮಕ್ಕಳಿಗೆ ಕಲಿಸುವ ರೀತಿಯೇ ಇಂದಿನ ಪೋಷಕರಿಗೆ ಗೊತ್ತಿಲ್ಲ. ಮಕ್ಕಳನ್ನು ಅತಿಯಾಗಿ ನಂಬುವ ಪೋಷಕರಿಗೆ ಮಕ್ಕಳು ಹೇಳುವ ಸುಳ್ಳು ಗೊತ್ತಾಗುವುದಿಲ್ಲ. ಗೊತ್ತಾದರೂ ಮಕ್ಕಳ ತಪ್ಪನ್ನು ತಿದ್ದುವುದಿಲ್ಲ. ಕಾರಣ ಮಕ್ಕಳ ಮೇಲಿನ ವ್ಯಾಮೋಹ. ಈ ವ್ಯಾಮೋಹ ವೈಯಕ್ತಿಕ ದೌರ್ಬಲ್ಯವೇ ಹೊರತು ವಾಸ್ತವವಲ್ಲ. ಇದರಿಂದಾಗಿ ಮಕ್ಕಳು ಯಾರಿಗೂ, ಯಾವುದಕ್ಕೂ ಕ್ಯಾರ್ ಮಾಡುವುದಿಲ್ಲ; ಕೊನೆಗೆ ಹೆತ್ತವರನ್ನೂ!
ಮಕ್ಕಳು ತಪ್ಪು ಮಾಡಿದಾಗ ಅವರನ್ನು ಶಿಕ್ಷಿಸಿದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವುದು ಈ ದಿನಗಳಲ್ಲಿ ಶಾಲೆಗಳಲ್ಲಿ ಸರ್ವೇಸಾಮಾನ್ಯ. ಶಿಕ್ಷಕರನ್ನು ಏಕವಚನದಲ್ಲಿ ನಿಂದಿಸಿ ಹೀನವಾಗಿ ನಡೆಸಿಕೊಳ್ಳುವುದನ್ನು ಹೇಗೆ ಅರ್ಥೈಸುವುದು? ಪೋಷಕರೇ ಮಕ್ಕಳ ಮೌಲ್ಯಹೀನ ಬದುಕಿಗೆ ನಾಂದಿ ಹಾಡುತ್ತಾರೆ. ಮಕ್ಕಳು ಹೇಳಿದ್ದಕ್ಕೆಲ್ಲ ಹೆಜ್ಜೆ ಹಾಕುತ್ತಾರೆ. ಹಾಗಂತ ನಮ್ಮ ಹಿರಿಯರೆಲ್ಲರೂ ಸುಭಗರಾಗಿದ್ದರೇ? ನೋ ಚಾನ್ಸ್. ಸೂಕ್ಷ್ಮವಾಗಿ ಅವಲೋಕಿಸಿದರೆ ಅವರಲ್ಲೂ ಮೊಂಡುತನ, ಹಠದ ಸ್ವಭಾವ, ಉಡಾಫೆಯಿತ್ತು. ಆದರೆ ಅವರಲ್ಲಿ ಮಾನವೀಯತೆಯಿತ್ತು, ಜೀವಪರ ದಯೆಯಿತ್ತು. ಅದಕ್ಕೆ ಕಾರಣ ಅವರಲ್ಲಿದ್ದ ತಿರಸ್ಕಾರದ ಭಾವ. ಯಾವ ಅಮಿಷಕ್ಕೂ ಒಳಗಾಗದ ಮನೋಸ್ಥಿರತೆಯಿತ್ತು. ಬದುಕಿನ ಬಗ್ಗೆ ಪ್ರಾಮಾಣಿಕವಾದ ಪ್ರೀತಿಯಿತ್ತು. ಬದುಕನ್ನು ಬಂದ ಹಾಗೆ ಎದುರಿಸುವ ಎದೆಗಾರಿಕೆಗೆ ಕಾರಣ ಅವರಲ್ಲಿದ್ದ ತಿರಸ್ಕಾರದ ಶಕ್ತಿ. ಯಾವುದಕ್ಕೂ ಅಂಟಿಕೊಳ್ಳದ, ಅತಿಯಾಸೆಪಡದ, ಹಂಬಲಿಸದ, ಇಲ್ಲದ್ದನ್ನು ಇಲ್ಲವೆಂದು, ಇದ್ದುದರಲ್ಲಿಯೇ ಹೊಂದಿಕೊಳ್ಳುವ, ಯಾರ ಕರುಣೆಗೂ, ಸಿಂಪಥಿಗೂ ಚಾಚದ ಮನೋಭಾವವಿತ್ತು.
ಎಲ್ಲವೂ ಇದ್ದೂ, ಎಲ್ಲರೂ ಇದ್ದು ನಾವು ಖಿನ್ನತೆಯನ್ನು ಅನುಭವಿಸುತ್ತೇವೆ. ಬದುಕು ಏಕತಾನತೆಯಿಂದ ಕೂಡಿದೆಯೆಂದು ಗೊಣಗುತ್ತೇವೆ. ಇನ್ಯಾವುದಕ್ಕೋ ಹಂಬಲಿಸಿ ಕೊರಗುತ್ತೇವೆ. ಮಕ್ಕಳಿದ್ದರೂ ಇಲ್ಲದಿದ್ದರೂ ದುಃಖಿಸುತ್ತೇವೆ. ಮಕ್ಕಳಿಗೆ ಅಂಟಿಕೊಂಡು ಬದುಕುತ್ತೇವೆ. ಅವರ ಭವಿಷ್ಯದ ಬಗ್ಗೆ ಹಂಬಲಿಸಿ ಕನವರಿಸುತ್ತೇವೆ. ಆಗದಿದ್ದಾಗ ಹತಾಶೆಗೊಳ್ಳುತ್ತೇವೆ. ನಿರೀಕ್ಷೆಗಳನ್ನು ಅತಿಗೊಳಿಸಿಕೊಳ್ಳುತ್ತೇವೆ, ಆದರೆ, ಮಕ್ಕಳನ್ನು ಬೆಳೆಸುವುದರಲ್ಲಿ ಎಡವುತ್ತೇವೆ. ನಮ್ಮ ಮಾತನ್ನು ಮಕ್ಕಳು ಕೇಳದಿದ್ದಾಗ ಅವರ ಮಾತನ್ನು ಕೇಳುವಂತಾಗುತ್ತೇವೆ. ಮಕ್ಕಳಿಗಾಗಿ ಏನೆಲ್ಲ ಮಾಡುತ್ತೇವೆ, ಏನೆಲ್ಲ ಆಗುತ್ತೇವೆ. ಆದರೆ ಮಕ್ಕಳಿಗೆ ಬೇಕಾದ್ದುದನ್ನು ಬೇಕಾದ ಸಮಯದಲ್ಲಿ ಕೊಡಬೇಕೆನ್ನುವ ಪ್ರಜ್ಞೆ ಮಾತ್ರ ನಮ್ಮಲ್ಲಿ ಹುಟ್ಟುವುದೇ ಇಲ್ಲ. ಬೇಡವಾದುದನ್ನು ಅತಿಯಾಗಿ ಕೊಟ್ಟು ಅವರನ್ನು ಹಾಳುಮಾಡಿ ಕೊನೆಗೆ ಕಣ್ಣೀರಿಡುತ್ತೇವೆ. ಬದುಕನ್ನು ಮತ್ತಷ್ಟು ಜಟಿಲ ಮಾಡಿಕೊಂಡು ಅದರ ಬಲೆಯಿಂದ ತಪ್ಪಿಸಿಕೊಳ್ಳಲಾಗದೆ ಒದ್ದಾಡುತ್ತೇವೆ. ಮಕ್ಕಳನ್ನು ಸರಿಯಾಗಿ ಬೆಳೆಸುವುದಲ್ಲ, ಸಹಜವಾಗಿ ಬೆಳೆಸುವುದು ಎಂಬರಿವು ಮೂಡುವ ಹೊತ್ತಿಗೆ ಮಕ್ಕಳಿಗೆ ಮದುವೆಯ ವಯಸ್ಸು ಬಂದಿರುತ್ತದೆ. ಕೊನೆಗೆ ಅವರಿಗೆ ಮಕ್ಕಳಾಗುತ್ತವೆ. ನಾವು ಅನುಭವಿಸಿದ ಯಾತನೆಗಳನ್ನು ಅವರು ಅನುಭವಿಸುವುದನ್ನು ನೋಡುತ್ತ ದುಃಖಿಸುತ್ತೇವೆ. ವಿಚಿತ್ರವಲ್ಲವೆ ಬಿಡುಗಡೆಯೇ ಇಲ್ಲದ ಬದುಕಿನ ಈ ಪಾಡುಗಳಿಗೆಲ್ಲ?! ನಾವು ಕಳೆದ ದಿನಗಳನ್ನು ಅವರೂ ಹಾಗೆಯೇ ಕಳೆಯಬಾರದೆಂಬ ಎಚ್ಚರದಲ್ಲೇ ಬದುಕತೊಡಗುತ್ತೇವೆ.
ಐಏಎಸ್ಸೋ, ಇಂಜಿನಿಯರೋ, ಡಾಕ್ಟರೋ ಆಗಬೇಕೆಂಬ ಹಂಬಲದಲ್ಲಿ ಅಗತ್ಯಕ್ಕೂ ಮೀರಿ ಹಣವನ್ನು ವ್ಯಯಿಸಿ ವಿದ್ಯೆಯನ್ನು ಕೊಡಿಸುವ ಪೋಷಕರು ಮಕ್ಕಳನ್ನು ಸರಿಯಾಗಿ ಬೆಳೆಸಿದ್ದೇವೆಂದು ಅಹಂ ಪಡುತ್ತಾರೆ. ಹಾಗಾಗದಿದ್ದಾಗ ನೊಂದುಕೊಳ್ಳುತ್ತಾರೆ. ಆದರೆ, ಮಕ್ಕಳನ್ನು ಜೀವನಮೌಲ್ಯಗಳಿಗೆ ನಿಷ್ಠರಾಗುವಂತೆ ಬೆಳೆಸಬೇಕೆಂಬ ಪ್ರಜ್ಞೆ ಹುಟ್ಟುವುದೇ ಇಲ್ಲ. ಒಳ್ಳೆಯ ಶಿಕ್ಷಕರು ನಮ್ಮ ಮಕ್ಕಳಿಗೆ ಪಾಠ ಹೇಳಿಕೊಡಲು ಬೇಕು, ಭದ್ರತೆಗೆ ಪೋಲಿಸರು ಬೇಕು, ನಂಬಿಗಸ್ಥನೊಬ್ಬ ಮನೆಗೆಲಸಕ್ಕೆ ಬೇಕು ಅಂತ ಹುಡುಕಾಡುತ್ತೇವೆ. ಆದರೆ ನಮ್ಮ ಮಕ್ಕಳನ್ನು ಶಿಕ್ಷಕರನ್ನಾಗಿಯೋ, ಪೋಲಿಸರನ್ನಾಗಿಯೋ ಮಾಡಲು ನಾವು ಒಪ್ಪುವುದಿಲ್ಲ. ಇವುಗಳ ಬಗ್ಗೆ ನಮ್ಮಲ್ಲಿರುವ ನಿಕೃಷ್ಟ ಭಾವವನ್ನು ಮಕ್ಕಳಲ್ಲೂ ಬೆಳೆಸುತ್ತೇವೆ. ಇಂಥದ್ದೇ ಉದ್ಯೋಗವನ್ನು ಮಾಡಬೇಕೆಂದು ತಾಕೀತು ಮಾಡುವ ಪೋಷಕರು ಮಕ್ಕಳನ್ನು ಸರಿಯಾಗಿ ಬೆಳೆಸಿದ್ದೇವೆಂಬ ದೊಡ್ಡಸ್ಥಿಕೆಯ ಭಾವದಲ್ಲಿ ಜೀವನಮೌಲ್ಯಗಳನ್ನು ಕಲಿಸುವುದನ್ನು ಮರೆಯುತ್ತಾರೆ.
ಹೆತ್ತವರು, ಸಂಬಂಧಿಕರು, ಗೆಳೆಯರು, ಶಿಕ್ಷಕರು, ಸಮಾಜವನ್ನು ಅರ್ಥೈಸಿಕೊಳ್ಳುವ ಬಗೆಯಲ್ಲಿ ದೊಡ್ಡವರು ತುಳಿದ ಹಾದಿಯನ್ನು ಮಕ್ಕಳು ಅನುಕರಿಸುತ್ತಾರೆ, ಅನುಸರಿಸುತ್ತಾರೆಯೇ ವಿನಾ ಹೇಳಿದ್ದನ್ನಲ್ಲ! ಶ್ರೀಮಂತಿಕೆಯ ದರ್ಪದಿಂದಾಗುವ ಕೆಡುಕುಗಳಿಂದ ನಮ್ಮ ಮಕ್ಕಳನ್ನು ಕಾಪಾಡಕೊಳ್ಳಬೇಕೆಂಬ ಪ್ರಜ್ಞೆ ಹೆತ್ತವರಲ್ಲಿರಬೇಕು. ಮಕ್ಕಳು ಏನೇ ಆದರೂ ಸರಿಮಾಡುತ್ತೇನೆಂಬ ಉದ್ಧಟತನ, ಧೋರಣೆಯಿಂದ ಹೆತ್ತವರು ಹೊರಬರಬೇಕು. ಕಡಿಮೆ ಅಂಕ ತೆಗೆದಾಗಲೂ, ಅನುಚಿತವಾಗಿ ವರ್ತಿಸಿದಾಗ ನಾಕು ಪೆಟ್ಟು ಕೊಟ್ಟು ಶಾಲೆಯಲ್ಲಿ ತಿದ್ದಿದಾಗ ವಿರೋಧಿಸುವಾಗಲೂ ಹಣದಿಂದ ಎಲ್ಲವನ್ನೂ ಸರಿಮಾಡುತ್ತೇನೆಂಬ ಧಾರ್ಷ್ಟ್ಯದಿಂದ ಕಳಚಿಕೊಳ್ಳಬೇಕು. ಅಂಕಗಳಿಗಾಗಿ ಮಕ್ಕಳನ್ನು ಕಾಡಬಾರದೆಂಬ ಅರಿವನ್ನು ಬೆಳೆಸಿಕೊಳ್ಳಬೇಕು. ಸೋಲನ್ನು ಅವಮಾನವನ್ನು ಕಷ್ಟವನ್ನು ಎದುರಿಸುವ ಮನೋಸ್ಥೈರ್ಯವನ್ನು ಎಳವೆಯಲ್ಲೇ ಬೆಳೆಸಬೇಕು. ಶ್ರಮಗೌರವ, ಸಹನೆಯನ್ನು ಬೆಳೆಸಿಕೊಳ್ಳುವಂತೆ ದೊಡ್ಡವರು ನಡೆನುಡಿಯಲ್ಲಿ ಅಭಿವ್ಯಕ್ತಿಸಬೇಕು. ಮುಖ್ಯವಾಗಿ ದೊಡ್ದವರ ಭಾಷೆ ಸರಿಯಾಗಬೇಕು. ಅನಾಗರಿಕ, ಅಸಂಸ್ಕೃತಿಯ ರೂಢಿಗತ ಮೌಲ್ಯಗಳಿಂದ ಮಕ್ಕಳನ್ನು ದೂರವಿರುವಂತೆ ಮಕ್ಕಳನ್ನು ಸರಿಯಾಗಿ ಅಲ್ಲ, ಸಹಜವಾಗಿ ಬೆಳೆಸಬೇಕು; ನಮ್ಮ ಹಿರಿಯರು ನಮ್ಮನ್ನು ಬೆಳೆಸಿದಂತೆ!
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


