'ಎಲ್ಲರಿಗೂ' ವಿಶ್ವ ಶುಭ ವಿವಾಹ ದಿನದ ಶುಭಾಶಯಗಳು

Upayuktha
0

ಇವತ್ತು {ಫೆಬ್ರ'ವರಿ' ಎರಡನೇ ಭಾನುವಾರ} ತಿಂಗಳ ವಿಶ್ವ ವಿವಾಹ ದಿನವಂತೆ





ಈ ಪುಣ್ಯ ವಿಶೇಷ ದಿನದ ಸಂದರ್ಭದಲ್ಲಿ ವಿವಾಹಕ್ಕೆ 'ಸಂಬಂಧ' ಇರುವ ಒಂದೆರಡು 'ಜೊತೆ' ಹಳೇ ಜೋಕ್ಸ್‌ಗಳನ್ನು ಇಲ್ಲಿ ಲಿಂಕ್ ಮಾಡುವುದಾದರೆ... {"ಹಳೇ ಜೋಕ್ಸ್‌ಗೆ ಮತ್ತೆ ನಗಬೇಕಾ?" ಅಂತ ಓದುಗರು ಮುಖ ಹಾಗಲಕಾಯಿ ಮಾಡಿಕೊಂಡರೆ ಅದು ಈ ಕಡೆ ಮೆಸೇಜ್ ಕಳಿಸಿದವನಿಗೆ ಗೊತ್ತಾಗುತ್ತೆ!! ಒತ್ತಾಯಕ್ಕೆ ಹುಳ್ಹುಳ್ಳುಗೆ ನಕ್ಕರೂ ಗೊತ್ತಾಗುತ್ತೆ. ಅದು ಹೇಗೆ? ಅದು ಹೇಗೇಂದ್ರೆ ಮೆಸೇಜ್‌ಗೆ AI 'ಜೋಡಿ'ಸಲಾಗಿದೆ!!}:


ಪ್ರೀತಿ ಒಂದು ದೀರ್ಘ ಸಿಹಿ ಕನಸು, ವಿವಾಹ- ಸಿಹಿ ಕನಸಿರಲಿ, ನಿದ್ದೆಯೂ ಬಾರದಂತೆ ಎಚ್ಚರಗೊಳಿಸುವ ಅಲಾರಾಂ!.

{ಅದಕ್ಕೆ ಈ ಹಿಂದೆ ಸಾಂಕೇತಿಕವಾಗಿ ಮದುವೆಯಲ್ಲಿ ಗಡಿಯಾರಗಳನ್ನೇ ಉಡುಗೋರೆ ಕೊಡ್ತಾ ಇದ್ರು. ಫ್ಯಾನ್ಸಿ ಅಂಗಡಿಗೆ ಹೋಗಿ "ಹೊಸ ಮದು ಮಕ್ಕಳಿಗೆ ಒಂದು ಇಳ್ಳೆ ಗಿಫ್ಟ್ ತೋರ್ಸಪ್ಪ ಅಂದ್ರೆ, ಆತ ಹೆಚ್ಚಾಗಿ ತಿಳಿ ಹಳದಿ ಬಣ್ಣದ ಅಜಂತಾ ಗೋಡೆ ಗಡಿಯಾರವನ್ನು ಟೇಬಲ್ ಮೇಲೆ ಇಟ್ಟು "ಈಗ ಇದೇ ಟ್ರೆಂಡ್ ಸಾರ್" ಅಂತಿದ್ದ!!}


ಮದುವೆ ಎಂದರೆ ವಿವಾಹ ದಿನವನ್ನು ಎಂದಿಗೂ ನೆನಪಿಸಿಕೊಳ್ಳದ ವ್ಯಕ್ತಿ ಮತ್ತು ಅವುಗಳನ್ನು ಎಂದಿಗೂ ಮರೆಯದ ವ್ಯಕ್ತಿಯ ನಡುವಿನ ಬಂಧ!

{ಮದುವೆ ಸ್ವರ್ಗದಲ್ಲೇ ಆಗಿರುತ್ತಂತೆ. ಅದರ ನವೀಕರಣ ತಿರುಪತಿ ಛತ್ರದಲ್ಲಿ ಆಗುವುದು!! ಮದುವೆ ಸ್ವರ್ಗದಲ್ಲೇ ಆಗಿರುತ್ತದೆ ಅಂತಾದಾಗ, ನಾವು ಹಿಂದಿನ ಜನ್ಮದಲ್ಲಿ ಸ್ವರ್ಗಸ್ತರಾಗಿದ್ದೆವು ಅಂತಾಯ್ತು!! ಅಲ್ಲಿ ಮದುವೆ ಮಾಡಿಕೊಂಡ ಕರ್ಮ ಫಲ, ನಾವು ಇಲ್ಲಿಗೆ ಬಂದಿದ್ದಾ!!? ಮದುವೆ ಅಥವಾ ಸ್ವರ್ಗ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶದಲ್ಲಿ ನಾವು ಅಲ್ಲಿಯೂ ತಪ್ಪು ನಿರ್ಧಾರ ಮಾಡಿದ್ದಾ? ಬಂಗಾರದ ರೇಟು ಆಕಾಶ ದಾಟಿ, ಸ್ವರ್ಗದವರೆಗೆ ಏರಿದ್ದರಿಂದ ಕರಿಮಣಿ ಮಾಲಿಕರೆಲ್ಲರಿಗೂ ಹೀಗೆಲ್ಲ ಯೋಚನೆ ಬರ್ತಿರಾಬಹುದಾ!?}


ಗಂಡಸರಿಗೆ ತಮ್ಮ ವಿವಾಹ ದಿನವನ್ನು ನೆನಪಿಟ್ಟುಕೊಳ್ಳಲು ಸುಲಭ ಉಪಾಯ ಒಮ್ಮೆ ಅದನ್ನು ಮರೆತು ಬಿಡುವುದು! {ಮರೆವಿನ ಪರಿಣಾಮದ ಆ ಒಂದು ದಿನದ ಹಾಗಲ ಕಹಿ ನೆನಪು, ಪ್ರತೀ ವರ್ಷ ಅಲಾರಾಂ ಆಗಿ ಕೆಲಸ ಮಾಡುತ್ತೆ. ಅವತ್ತು ಮನೆಗೆ ಯಾರನ್ನೂ ಕರೆಯಬಾರದು, ಮತ್ತೆ ಅದೇ ಅಜಂತಾ ಗಡಿಯಾರವನ್ನೇ ಗಿಫ್ಟ್ ಮಾಡ್ತಾರೆ!!}


ಒಬ್ಬ ಪುರುಷನು ತನ್ನ ಹೆಂಡತಿಗಾಗಿ ಕಾರಿನ ಬಾಗಿಲು ತೆರೆದಾಗ, ನೀವು ಒಂದು ವಿಷಯದ ಬಗ್ಗೆ ಖಚಿತವಾಗಿರಬಹುದು: ಅವನ ಕಾರು ಹೊಸದಾಗಿರಬೇಕು ಅಥವಾ ಹೆಂಡತಿ ಹೊಸದಾಗಿರಬೇಕು. {ಇದಕ್ಕೊಂದು ಅಪವಾದ ಇದೆ: ಹಳೇ ಡಬ್ಬ ಕಾರಾಗಿದ್ದು, ಹಳೇ ಹೆಂಡತಿಗೆ ಕಾರಿನ ಬಾಗಿಲು ತೆರೆಯಲು ಆಗದಷ್ಟು ಕಾರಿನ ಬಾಗಿಲೂ ಡಬ್ಬಾ ಆಗಿರುವುದು!!}


ಪ್ರೀತಿ ಕುರುಡು, ಆದರೆ ಮದುವೆ ನಿಜಕ್ಕೂ ಕಣ್ಣು ತೆರೆಸುತ್ತದೆ!!

{ಹಾಗಂತ ಆದ ವಿವಾಹವನ್ನು ಸುಲಭವಾಗಿ ರದ್ದುಗೊಳಿಸಲಾಗಲ್ಲ!! ಜೀವನಾಂಶ EMI ಈಗ ಬಹಳ ದುಬಾರಿ. ಇರೋ ದಾರಿ ಅಂದರೆ, ಹಾಗಲ ಕಾಯಿಗೆ ಬೆಲ್ಲ ಸೇರಿಸಿ, ಸಿಹಿ ಗೊಜ್ಹುಳಿ ಮಾಡಿ ಜೀವನ ಮುಂದುವರಿಸುವುದು!!}


ಮದುವೆಯಾಗುವುದು ಖಂಡಿತ ಒಳ್ಳೆಯದೆ. ಒಳ್ಳೆಯ ಹೆಂಡತಿ/ಗಂಡ ಸಿಕ್ಕರೆ ಸಂತೋಷವಾಗಿರುತ್ತಾರೆ. ಕೆಟ್ಟ ಹೆಂಡತಿ/ಗಂಡ ಸಿಕ್ಕರೆ ತತ್ವಜ್ಞಾನಿಯಾಗುತ್ತಾರೆ. ಹಾಗಂತ ಹೇಳಿದ್ದು ಸಾಕ್ರಟೀಸ್. {ಸಾಕ್ರಟಿಸ್ ಯಾರು ಅಂತ ಕೇಳಬೇಡಿ!! ಅವರೊಬ್ಬರು ತತ್ವಜ್ಞಾನಿ!!}

{ನೈತಿಕತೆ, ಆತ್ಮವಿಮರ್ಶೆ ಹಾಗೂ ಜ್ಞಾನದ ಅನ್ವೇಷಣೆಗೆ ಜೀವನ ಮುಡಿಪಾಗಿಟ್ಟ ಸಾಕ್ರಟಿಸ್‌ರವರನ್ನು "ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂಬ ಆರೋಪದ ಮೇಲೆ ಅವರಿಗೆ ವಿಷಪ್ರಾಶನ ಶಿಕ್ಷೆ ವಿಧಿಸಲಾಯಿತು ಅಂತ ಗೂಗಲ್ ಬೈಬಲ್‌ನಲ್ಲಿದೆ. ತತ್ವಜ್ಞಾನದ ಜೋಕ್ಸ್ ಹೇಳಿದ್ದರಿಂದಲೇ ಅವತ್ತು ಯುವಕರು ದಾರಿ ತಪ್ಪಿದರಾ? ಎನ್ನುವುದು ಇನ್ನೂ ಗೊತ್ತಾಗಿಲ್ಲ}


ಕಾಲ್ಪನಿಕ ಸಣ್ಣ ಕತೆ: ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆದರು ಮತ್ತು ಅವರು ಅನಂತರ ಸದಾ ಸುಖ-ನೆಮ್ಮದಿಯಿಂದ ದೀರ್ಘ ಕಾಲ ಬದುಕಿದರು.  

{ದಂಪತಿಗಳು ದೀರ್ಘ ಕಾಲ ನೆಮ್ಮದಿಯಿಂದ ಬದುಕಿದರು ಅಂತಾದರೆ ಅದು ಸಣ್ಣ ಕತೆ ಆಗುವುದು ಹೇಗೆ!!? ಅಲ್ವಾ?}


ಹೊಸದಾಗಿ ಮದುವೆಯಾದವರು ಸಂತೋಷವಾಗಿ ಇದ್ದರೆ ಅದಕ್ಕೆ ಕಾರಣ ಬೇಡ. ಆದರೆ, ಹತ್ತು ವರ್ಷ ಆದ ಮೇಲೂ ದಂಪತಿಗಳು ಸಂತೋಷವಾಗಿ ಇದ್ದರೆ, ಉಳಿದವರಿಗೆ ಅದು ಆಶ್ಚರ್ಯ ತರುತ್ತದೆ.

{ಆ್ಯಕ್ಚುವಲಿ, ಇದು ಜೋಕ್ಸ್ ಅಲ್ವೇ ಅಲ್ಲ!! ಆಶ್ಚರ್ಯದೊಂದಿಗೆ ಮಾಡಬೇಕಾದ ಅಧ್ಯಯನ ಮತ್ತು ಸಂಶೋಧನಾ ಪ್ರಬಂಧದ ಸಬ್ಜೆಕ್ಟ್!!}


ಪ್ರೀತಿ ಒಂದು ದೀರ್ಘ ಸಿಹಿ ಕನಸು, ಮದುವೆ, ಸಿಹಿ ಕನಸಿರಲಿ, ನಿದ್ದೆಯೂ ಬಾರದಂತೆ ಎಚ್ಚರಗೊಳಿಸುವ ಅಲಾರಾಂ!.

{ಅರೆ, ಈ ಜೋಕ್ ಮತ್ತೆ ರಿಪೀಟ್ ಆಗಿದೆ ಅಂತ ಸ್ಕ್ರೋಲ್ ಅಪ್ {Scroll Up} ಮಾಡಿ, ಮೊದಲ ಪ್ಯಾರ ವೀಕ್ಷಿಸುವುದು ಬೇಡ! ರಿಪೀಟ್ ಆಗಿರುವುದು ಸತ್ಯ!! ಈ ಜೋಕ್ ಒಂದಕ್ಕಿಂತ ಹೆಚ್ಚು ಮದುವೆ ಆದವರಿಗೆ ರಿಪೀಟ್ ಅಲಾರಾಂ! ಗಡಿಯಾರವೂ ಬೇರೆ, ಅಲಾರಾಂ ಬೇರೆ, ಆಲ್ಬಮ್ ಕೂಡ ಬೇರೆ!!}


Before finish, ಲಾಸ್ಟ್ ಒಂದು ಜೋಕ್ ಹೇಳಿ complete ಮಾಡೋದಾದರೆ...

Man is incomplete until he has married, After that, he is finished

{ನೊ ಕಾಮೆಂಟ್ಸ್!!}


{ಮೇಲಿನ ಜೋಕ್ಸ್‌ಗಳು ಸಂಗ್ರಹದಿಂದ.  ಅದಕ್ಕೆ ಬ್ರಾಕೇಟ್ ಪುಷ್ಪಾವರಣ ಬಾಷ್ಯ ಬರೆದಿದ್ದು ಬಲಗೈ ಹೆಬ್ಬೆರಳು!! ಸಹಕಾರ ಮೊಬೈಲನ್ನು ಪಾಣಿಗ್ರಹಣ ಮಾಡಿದ್ದ ಎಡಗೈ!!}


ಎಲ್ಲರಿಗೂ ವಿಶ್ವ ಶುಭ ವಿವಾಹ ದಿನದ ಶುಭಾಶಯಗಳು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top