A Sound Mind in sound Body. ಶರೀರ ಸದೃಢವಾಗಿದ್ದರೆ ಮನಸ್ಸು ಕೂಡ ಸದೃಢವಾಗಿರಲು ಸಾಧ್ಯ.
"ಬದುಕಿನಲಿ ಎಲ್ಲರಿಗೂ ತೆರೆದ ದಾರಿ ಶ್ರುತಿಗೊಂಡಾಗ ಹೊಮ್ಮುವುದು ಹಾಡಿನ ಲಹರಿ" ಎಂಬ ಕವಿವಾಣಿಯಂತೆ ಬದುಕಿನ ಸುಂದರ ಕ್ಷಣಗಳನ್ನು ನಿರಂತರ ವಾಗಿ ಸವಿಯ ಬೇಕಾದ ಯುವ ಮನಸ್ಸುಗಳು 'ಚಟ' ಎಂಬ ಅಪಶ್ರುತಿಯಿಂದ ಬಾಳಿನ ಹಾಡಿನ ಲಹರಿಯನ್ನೇ ಕಳೆದುಕೊಳ್ಳುತ್ತಾರೆ.
ಇಂದಿನ ದಿನಗಳಲ್ಲಿ ಮಾದಕ ವಸ್ತುಗಳನ್ನು ಮಾರುವ ಹಾಗೂ ಖರೀದಿಸುವ ಸೇವಿಸುವ ದೊಡ್ಡ ಜಾಲಗಳೇ ಇದ್ದು ಸರಕಾರಿ ವ್ಯವಸ್ಥೆ ಅದರ ಹತೋಟಿಗೆ ಮತ್ತು ನಿವಾರಣೆ ಸಾಕಷ್ಟು ಪ್ರಯತ್ನ ನಡೆಸುತ್ತಿದೆ.
"ಕಂಡ ಕಂಡುದನೆಲ್ಲ ಗುದ್ದುತಿದೆ ಮರಿಗೂಳಿ" ಎಂಬಂತೆ ಯುವ ಮನಸ್ಸು ದಶ ದಿಕ್ಕಿನ ಗಾಳಿಯ ಮೊರೆತಕ್ಕೆ ಸಿಲುಕಿ ಚಟಗಳ ದಾಸರಾಗುವ ವಿಪರ್ಯಾಸ ನಮ್ಮ ಮುಂದಿದೆ.
ಭಾರತದಲ್ಲಿ ಸುಮಾರು ಎಂಟು ಕೋಟಿಯಷ್ಟು ಮಂದಿ ಮಾದಕ ವ್ಯಸನಿಗಳಿರಬಹುದೆಂದು ಅಂದಾಜಿಸಲಾಗಿದೆ. ಮಂಗಳೂರು ನಗರದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ 62 ಮಂದಿ ಡ್ರಗ್ಸ್ ಸೇವಿಸಿದವರನ್ನು ಮತ್ತು 21 ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಮಾದಕ ವಸ್ತುಗಳ ಸೇವನೆಯ ವಿರುದ್ಧದ ಕಾರ್ಯಾಚರಣೆ ಎಷ್ಟು ತೀವ್ರ ಗತಿಯಲ್ಲಿ ನಡೆಯಬೇಕು ಎಂಬುದನ್ನು ಎಚ್ಚರಿಸುತ್ತದೆ.
ಸಮಾಜದಲ್ಲಿ ಪ್ರತಿಷ್ಟಿತರೆಂದೆನಿಸಿಕೊಂಡವರು ಇಂದು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಅವರನ್ನು ಅನುಕರಿಸುವ ಮಧ್ಯಮ, ಕೆಳ ಮಧ್ಯಮ ವರ್ಗದ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ.
ಹೊರ ರಾಜ್ಯದ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿದ್ದ ಮಾದಕ ದ್ರವ್ಯ ಜಾಲ, ಈಗ ಹಳ್ಳಿ ಹಳ್ಳಿಗಳಿಗೂ ಪಸರಿಸಿದೆ. ಸಾಮಾಜಿಕ ಜಾಲ ತಾಣಗಳನ್ನು ಇದಕ್ಕಾಗಿ ಬಳಸುವ ಹಂತಕ್ಕೆ ತಲುಪಿದೆ.
'ಗುಂಡಿನ ಗಮ್ಮತ್ತು' ತಿಳಿದುಕೊಳ್ಳುವ ಮನಸ್ಸಿನ ಯುವ ಜನತೆ ಮುಂದಿನ ಆಪಾಯಗಳ ಬಗ್ಗೆ ಅರಿತುಕೊಂಡಿಲ್ಲ. ಚಟಕ್ಕೆ ಬಲಿಯಾದವರು ಮಾನಸಿಕ ಅಭದ್ರತೆ ಮತ್ತು ಕಸಿವಿಸಿಗಳಿಂದ ಮತ್ತೆ ಮತ್ತೆ ಮಾದಕ ವಸ್ತು ಹಾಗೂ ಕುಡಿತಗಳಿಗೆ ಬಲಿಯಾಗುತ್ತಾರೆ.
ಚಟಗಳಿಗೆ ಕಾರಣವಾಗುವ ಸಂದರ್ಭಗಳನ್ನು ಗುರುತಿಸಿ ಅವುಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಂದು ಕಾಲೇಜು, ಹೈಸ್ಕೂಲ್ ಗಳಲ್ಲಿಯೂ ಮಾದಕ ದ್ರವ್ಯ, ಡ್ರಗ್ಸ್ ಸೇವನೆ ವಿರೋಧಿ ಘಟಕಗಳನ್ನು ಸ್ಥಾಪಿಸಬೇಕು. ಪ್ರತಿಯೊಂದು ತಿಂಗಳು ಸಭೆ ನಡೆಸಿ ವಿದ್ಯಾರ್ಥಿಗಳ ಚಲನವಲನ ಗಮನಿಸುವುದರೊಂದಿಗೆ ಆಪ್ತ ಸಲಹೆಗಾರರ ಮೂಲಕ ವಿದ್ಯಾರ್ಥಿಗಳ ಭಾವನೆಗಳನ್ನು ಅರಿತುಕೊಳ್ಳುವ ಪ್ರಯತ್ನ ನಡೆಸಬೇಕು.
ವಿಭಕ್ತ ಕುಟುಂಬದ ಇಂದಿನ ದಿನಗಳಲ್ಲಿ ಭಾವನಾತ್ಮಕ ಪ್ರೀತಿಯ ಕೊರತೆ ಯುವ ಸಮುದಾಯವನ್ನು ಕಾಡುತ್ತಿದೆ. ತೀವ್ರ ಒತ್ತಡದ ಬದುಕಿಗೆ ಸಿಲುಕಿ ಕೊಳ್ಳುವ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸುವ ಜಾಲಗಳು ಬೆಳೆಯುತ್ತಿವೆ. ಈ ನಿಟ್ಟಿನಲ್ಲಿ ಜೀವನ ಮೌಲ್ಯಗಳ ಅರಿವನ್ನು ಮೂಡಿಸುವ ಕಾರ್ಯಗಳು ನಡೆಯಬೇಕಾಗಿದೆ. ವಿದ್ಯಾರ್ಥಿಗಳ ಸಣ್ಣ ಸಮೂಹವನ್ನು ರೂಪಿಸಿ ಗುಂಪು ಚರ್ಚೆಗಳ ಮೂಲಕ ಅರೋಗ್ಯ ಪೂರ್ಣ ಬದುಕಿಗೆ ವ್ಯಸನ ಮುಕ್ತ ಬದುಕಿಗೆ ಮುಂದಡಿ ಇಡುವ ರೀತಿಯನ್ನು ಅವರಿಂದಲೇ ಒಡ ಮೂಡುವಂತೆ ಮಾಡಬಹುದಾಗಿದೆ.
ಔಷಧ ಚಿಕಿತ್ಸೆ, ಮನೋಚಿಕಿತ್ಸೆ ಮತ್ತು ಸಾಮಾಜಿಕ ಚಿಕಿತ್ಸೆಗಳೆಂಬ ವಿಧಾನಗಳಲ್ಲಿ ವಿದ್ಯಾರ್ಥಿಗಳನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು.
ರೋಟರಿ ಸಂಸ್ಥೆ, ಲಯನ್ಸ್ ಕ್ಲಬ್ ಜೆಸಿಐ ಮೊದಲಾದ ಸಮಾಜ ಸೇವಾ ಸಂಸ್ಥೆಗಳು ಯುವಕ ಯುವತಿ ಮಂಡಲಗಳು ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಬಹುದಾಗಿದೆ. ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ ನಡೆಸುವುದರೊಂದಿಗೆ ಜಿಲ್ಲಾಡಳಿತದೊಂದಿಗೆ ಸಹಾಭಾಗಿಗಳಾಗಬೇಕಾಗಿದೆ.
ಮಾನವನ ಪತನ ಶ್ರೇಯಸ್ಸುಗಳಿಗೆ ಮನಸ್ಸೇ ಮೂಲ. ಮನಸ್ಸಿನ ನಿಯಂತ್ರಣದ ಕಡೆಗೆ ಗಮನ ಹರಿಸುವಂತೆ ಮಾಡುವ ಸಂಕಲ್ಪ ಇಂದಾಗಬೇಕಾಗಿದೆ. ಬೋಧನೆಯೊಂದು ಉತ್ತಮ ಸಾಧನ. ಅದರಿಂದ ಸಾವಿರಾರು ಜನರಿಗೆ ಜ್ಞಾನದ ವಿತರಣೆ ಸಾಧ್ಯ ಎಂಬ ಮಹಾತ್ಮರ ನುಡಿಯಂತೆ ಸಮಾಜದ ಸರ್ವಸ್ತರದ ಜನತೆ ಒಗ್ಗೂಡಿ ಮಾದಕ ದ್ರವ್ಯ ಸೇವನೆ ಮತ್ತು ಕುಡಿತ ಎಂಬ ಅಸುರರನ್ನು ಒದ್ದೋಡಿಸಲು ಕಂಕಣಬದ್ಧರಾಗಬೇಕಿದೆ.
- ಕೃಷ್ಣಮೂರ್ತಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


