120ಕ್ಕೂ ಅಧಿಕ ರೈತರಿಗೆ ಪ್ರತಿಷ್ಠಿತ ಕೃಷಿ ಪ್ರಶಸ್ತಿಯ ಗೌರವ
ಬೆಂಗಳೂರು: ಎರಡನೇ ವರ್ಷದ ಪ್ರತಿಷ್ಠಿತ ಭೂಮಿ ರೈತ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಈ ಬಾರಿ 120ಕ್ಕೂ ಅಧಿಕ ರೈತರಿಗೆ ಪ್ರತಿಷ್ಠಿತ ಭೂಮಿ ರೈತ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆನ್ಲೈನ್ ಮೂಲಕ ಅರ್ಜಿ ಸ್ವೀಕಾರ ಮಾಡಿ, ಪರಿಣಿತರನ್ನು ಒಳಗೊಂಡ ಆಯ್ಕೆ ಸಮಿತಿ ಮೂಲಕ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಲಾಗಿದೆ.
ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ನಿರ್ದೇಶಕ ಡಾ. ಜಿ ಟಿ ಪುತ್ರ ಹಾಗೂ ರಾಜ್ಯ ಕೃಷಿ ಉತ್ಪನ್ನಗಳ ಸಂರಕ್ಷಣೆ ಮತ್ತು ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ ಎನ್ ಶಿವಪ್ರಸಾದ್ ಸೇರಿದಂತೆ ಹಲವು ಕೃಷಿ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು 'ಭೂಮಿ, ಡಿಜಿಟಲ್ ಕೃಷಿ ವೇದಿಕೆಯ ಮಾಧ್ಯಮ ಸಲಹೆಗಾರ ಹನುಮೇಶ್ ಕೆ ಯಾವಗಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ, ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳಿಗೆ ಲಭ್ಯವಿರುವ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡುವ ವಿಶೇಷ ರೈತ ಅಧಿವೇಶನ ಸಹ ನಡೆಯಲಿದ್ದು, ಕೃಷಿ ಕ್ಷೇತ್ರದ ಪರಿಣಿತರು ಈ ಕುರಿತು ಮಾತನಾಡಲಿದ್ದಾರೆ.
ಕೇಂದ್ರ ಸರ್ಕಾರದ 'ಪಿ ಎಂ ಎಫ್ ಎಂ ಇ' ಯೋಜನೆಯ ವಿವರಗಳನ್ನು ಕೃಷಿಕರಿಗೆ ತಿಳಿಸಲಾಗುತ್ತಿದ್ದು, ಸುಮಾರು ಆರುನೂರಕ್ಕೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದೇ ವೇಳೆ, ನಗರ ಪ್ರದೇಶದ ಜನರು ಗ್ರಾಮೀಣ ಭಾಗದ ರೈತರಿಗೆ ನೈತಿಕ ಸ್ಥೈರ್ಯ ತುಂಬುವ ಹಾಗೂ ಅನ್ನದಾತನ ಜೊತೆಗೆ ಸದಾ ನಾವು ನಿಲ್ಲುತ್ತೇವೆ ಎಂದು ಸಾರುವ ಉದ್ದೇಶದಿಂದ, "ಐ ಸಪೂರ್ಟ ಫಾರ್ಮರ್" (I Support Farmer.Com) ಎಂಬ ವಿಶಿಷ್ಟ ಯೋಜನೆಯನ್ನು ಭೂಮಿ, ಕೃಷಿ ಡಿಜಿಟಲ್ ವೇದಿಕೆ ವತಿಯಿಂದ ಆರಂಭಿಸಲಾಗುತ್ತಿದೆ ಎಂದು ಹನುಮೇಶ್ ಕೆ ಯಾವಗಲ್ ವಿವರಿಸಿದ್ದಾರೆ.
ಸಹಜಾನಂದ ಕಂಪ್ಯೂಟರ್ ಆಧಾರಿತ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ರೈತರಿಗೆ ಸಾರಿಗೆ, ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಟ್ರಸ್ಟ್ ಮೂಲಕ ಮಾಡಲಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಸಹ ರೈತರಿಂದಲೇ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, 'ಅನ್ನದಾತನೇ ಸೆಲೆಬ್ರಿಟಿ' ಎಂದು ಸಮಾಜಕ್ಕೆ ಸಾರಿ ಹೇಳುವ ಮೂಲಕ ಯುವ ಜನಾಂಗಕ್ಕೆ ಕೃಷಿ ಕ್ಷೇತ್ರದ ಮಹತ್ವ ತಿಳಿಸುವ ಪ್ರಯತ್ನ ಇದಾಗಿದೆ.
ಶನಿವಾರ ಬೆಳಗ್ಗೆ ಹತ್ತು ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿ ಪ್ರದಾನ, ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


