ನಾಟಕಗಳು ಸಮಾಜವನ್ನು ಎಚ್ಚರಿಸುತ್ತವೆ: ತಲ್ಲೂರು ಶಿವರಾಮ ಶೆಟ್ಟಿ

Upayuktha
0

ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ನಾಲ್ಕನೇ ದಿನದ ಕಾರ್ಯಕ್ರಮ




ಉಡುಪಿ: ತಪ್ಪು ಯಾವುದು, ಸರಿ ಯಾವುದು ಎಂದು ತಿಳಿಸಿಕೊಡುವ ನಾಟಕಗಳು ಸಮಾಜವನ್ನು ಸದಾ ಎಚ್ಚರಿಸುತ್ತಿರುತ್ತವೆ. ಸರಿದಾರಿಯಲ್ಲಿ ನಡೆಯಲು ಬೆಳಕು ತೋರುತ್ತವೆ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.


ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ನಾಲ್ಕನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಯಾವುದೇ ಸಂಘಟನೆಯು ಅದರ ಸದಸ್ಯರ ಒಗ್ಗಟ್ಟಿನ ಆಧಾರದಲ್ಲಿ ಮುಂದುವರಿಯುತ್ತದೆ. ಬೆಳೆಯುತ್ತದೆ. ಒಗ್ಗಟ್ಟಿಲ್ಲದೇ ಹೋದರೆ ಬೆಳೆಯಲು ಸಾಧ್ಯವಿಲ್ಲ. ಸಂಘಟನೆ ಮಾಡುವುದು ಯಾವಾಗಲೂ ಕಷ್ಟದ ವಿಚಾರ. ಶ್ರಮವಹಿಸುವ ಸದಸ್ಯರು ಇರಬೇಕು. ಹಣ ಬೇಕು. ಪ್ರೇಕ್ಷಕರ ಪ್ರೋತ್ಸಾಹವೂ ಇರಬೇಕು. ಆಗ ಮಾತ್ರ ಸಂಘ ಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ರಂಗಸಾಧಕ ಗೌರವ ಸ್ವೀಕರಿಸಿದ ಯಕ್ಷಗುರು ನಿತ್ಯಾನಂದ ಶೆಟ್ಟಿಗಾರ್ ಮಾತನಾಡಿ, ತುಳುಕೂಟದವರು ನಡೆಸುವ ತುಳು ನಾಟಕ ಸ್ಪರ್ಧೆಯಿಂದಾಗಿ ಅನೇಕ ತಂಡಗಳು ಉಳಿದು ಬೆಳೆದಿವೆ. ತುಳುನಾಡಿನಲ್ಲಿರುವ ಕಲೆ ಬೇರೆಲ್ಲೂ ಸಿಗುವುದಿಲ್ಲ. ಅಭಿಮಾನಿಗಳ ಪ್ರೋತ್ಸಾಹದಿಂದ ಕಲಾವಿದರು ಬೆಳೆದಿದ್ದಾರೆ ಎಂದು ಹೇಳಿದರು.


ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ನಾಟಕ ಅಂದರೆ ಮನರಂಜನೆ ಮಾತ್ರವಲ್ಲ, ನಮ್ಮ ಬದುಕಿನ ಆಗುಹೋಗುಗಳನ್ನು ದುಃಖ ದುಮ್ಮಾನಗಳನ್ನು, ಸುಖ ಕಷ್ಟಗಳನ್ನು, ಪ್ರೀತಿ ವಿರಹಗಳನ್ನು ಬಿಂಬಿಸುವ ವೇದಿಕೆ. ಸಿನಿಮಾ ತಾರೆಯರಿಗಿಂತ ನಾಟಕ ಕಲಾವಿದರ ಶ್ರಮ ಅಪಾರವಾದುದು. ನಾಟಕ ಕಲೆ ಶ್ರೇಷ್ಠ ಕಲೆ. ಯುವಜನರು ಇದರಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.


ನಗರಸಭೆಯ ಮಾಜಿ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಮಾತನಾಡಿ, ಸ್ವತಃ ರಂಗಕಲಾವಿದರಾಗಿರುವ ಸುಮನಸಾದವರು ಬೇರೆ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಸ್ತುತ್ಯರ್ಹ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎಂದು ಹಾರೈಸಿದರು, 


ಡೆಂಟಾಕೇರ್ ಉಡುಪಿಯ ಡಾ. ವಿಜಯೇಂದ್ರ ಮಾತನಾಡಿ, ಮೊಬೈಲ್, ಡಿಜಿಟಲ್, ಆನ್‍ಲೈನ್ ಯುಗದಲ್ಲಿ ಕಲೆ, ಕಲಾವಿದನ ಅಂತ್ಯ ಆಗಿದೆಯಾ ಎಂಬ ಪ್ರಶ್ನೆ ಬಂದಾಗ ಸುಮನಸಾ ಸಂಘಟನೆಯು ಇಲ್ಲ ಎಂಬುದನ್ನು ಸಾಬೀತು ಮಾಡುತ್ತಾ ಬಂದಿದೆ. ಕಲೆಯೊಳಗೆ ಪ್ರಕೃತಿ, ಸಂಸ್ಕೃತಿ, ವಿಕೃತಿ ಇರುತ್ತದೆ. ಸ್ವರ್ಗಕ್ಕೂ ಮಿಗಿಲಾದ ಅನುಭವ ನೀಡುತ್ತಾ ಬಂದಿರುವ ಸುಮನಸಾ ಕಲಾವಿದರು ಪ್ರಕೃತಿ ಮತ್ತು ಸಂಸ್ಕøತಿಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಆರೋಗ್ಯ ಅಂದರೆ ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಸರಿ ಇರಬೇಕು. ಈ ಇವೆಲ್ಲವೂ ಆರೋಗ್ಯವಾಗಿರಬೇಕಿದ್ದರೆ ರಂಗಭೂಮಿ ಅಗತ್ಯ ಎಂದು ಅಭಿಪ್ರಾಯಪಟ್ಟರು. ದೈಹಿಕ ಆರೋಗ್ಯಕ್ಕೆ ಔಷಧ ದಿನದ 24 ಗಂಟೆ ಸಿಗಬಹುದು. ಸಂತೋಷಕ್ಕೆ ಬಾರ್ ದಿನವಿಡಿ ಸಿಗಬಹುದು. ಆದರೆ, ಮಾನಸಿಕ ಆರೋಗ್ಯಕ್ಕೆ ಬೇಕಾದ ನಾಟಕಗಳು ಯಾವಾಗಲು ಸಿಗುವುದಿಲ್ಲ. ಪ್ರದರ್ಶನ ಇರುವಾಗ ವೀಕ್ಷಿಸಬೇಕು ಎಂದು ಸಲಹೆ ನೀಡಿದರು.


ಸೌಹಾರ್ದ ಸಂಘ ನಿಯಮಿತದ ಅಧ್ಯಕ್ಷ ಬಿ.ಜಿ. ಸುಬ್ಬರಾವ್, ಮಲ್ಪೆ ಮತ್ಶ್ಯರಾಜ್ ಗ್ರೂಪ್‍ನ ಅಭಿನಂದನ್ ಕೆ. ಕೋಟ್ಯನ್, ಸುಮನಸಾ ಕೊಡವೂರು ಸಾಂಸ್ಕøತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.


ವಿದ್ದು ಉಚ್ಚಿಲ್ ಸ್ವಾಗತಿಸಿದರು. ರಾಗಿಣಿ ಹರೀಶ್ ವಂದಿಸಿದರು, ಕಾರ್ತಿಕ್ ಪ್ರಭು, ಸೌಭಾಗ್ಯ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top