ಡಾ. ಪ್ರಣವಾನಂದ ಶ್ರೀ ಪಾದಯಾತ್ರೆ ನಾಳೆ ಫ್ರೀಡಂ ಪಾರ್ಕ್‌ಗೆ ಆಗಮನ

Upayuktha
0

10 ಸಾವಿರ ಈಡಿಗ- ಬಿಲ್ಲವರಿಂದ ವಿರಾಟ್ ಶಕ್ತಿಪ್ರದರ್ಶನ





ಕಲಬುರಗಿ: ಕಳೆದ 40 ದಿನಗಳಿಂದ ಆರಂಭಿಸಿದ ಡಾ ಪ್ರಣವಾನಂದ ಶ್ರೀಗಳ ಐತಿಹಾಸಿಕ 700 ಕಿ.ಮೀ ಪಾದಯಾತ್ರೆ ಗುರುವಾರ (ಜ.12ರಂದು) ಬೆಳಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ಆಗಮಿಸಲಿದ್ದು ವಿರಾಟ್ ಶಕ್ತಿ ಪ್ರದರ್ಶನಕ್ಕೆ ಭಾರಿ ಸಿದ್ಧತೆ ಪೂರ್ಣಗೊಂಡಿದೆ.


ಕಲಬುರಗಿಯ ಚಿತ್ತಾಪುರದ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜ. 6ರಂದು ಪ್ರಾರಂಭಗೊಂಡ ಸ್ವಾಮೀಜಿಗಳ ಪಾದಯಾತ್ರೆಯು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳನ್ನು ದಾಟಿ ಚಿತ್ರದುರ್ಗ- ತುಮಕೂರು ಮೂಲಕ ಬೆಂಗಳೂರಿಗೆ ಆಗಮಿಸಿದ್ದು ಸಾವಿರಾರು ಸಂಖ್ಯೆಯ ಸಮಾಜ ಬಾಂಧವರು ಮತ್ತು ಅತಿ ಹಿಂದುಳಿದ ಸಮುದಾಯದವರು ಭಾಗವಹಿಸಿ ಇತಿಹಾಸ ನಿರ್ಮಾಣಗೊಂಡಿದೆ. ಗುರುವಾರ ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಸುಮಾರು 10 ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು "ಮಾಡು ಇಲ್ಲವೇ ಮಡಿ" ಈ ಹೋರಾಟದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ ಎಂದು ಶಕ್ತಿಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ದಾಬಸ್ ಪೇಟೆಯಿಂದ ಬುಧವಾರ ಆರಂಭಗೊಂಡ ಪಾದಯಾತ್ರೆಯು ದಾಸರಹಳ್ಳಿ 8ನೇ ಮೈಲಿ ಶ್ರೀ ಸಾಯಿ ಕಲ್ಯಾಣ ಮಂಟಪಕ್ಕೆ ತಲುಪಿದೆ. ಗುರುವಾರ ಬೆಳಗ್ಗೆ ಡಾ. ಪ್ರಣವಾನಂದ ಶ್ರೀಗಳು ನೇರವಾಗಿ ಫ್ರೀಡಂ ಪಾರ್ಕಿಗೆ ಆಗಮಿಸಲಿದ್ದು ಮಧ್ಯದಲ್ಲಿ ಯಾವುದೇ ಪಾದಯಾತ್ರೆ ಇರುವುದಿಲ್ಲ. ಉತ್ತರ ಕರ್ನಾಟಕದಿಂದ ಆಗಮಿಸುವ ಸಮಾಜ ಬಾಂಧವರು ನೆಲಮಂಗಲ ಮತ್ತು ದಾಸರಹಳ್ಳಿ ಕಲ್ಯಾಣ ಮಂಟಪಗಳಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿ ನೇರವಾಗಿ ಫ್ರೀಡಂ ಪಾರ್ಕ್‌ಗೆ ಆಗಮಿಸಲು ಸ್ವಾಮೀಜಿಯವರು ಮನವಿ ಮಾಡಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲದವರೆಗೆ ಹೋರಾಟ ನಡೆಯಲಿದೆ.


ಕನಿಷ್ಠ ಐದು ಬೇಡಿಕೆ ಇತ್ಯರ್ಥ ಪಡಿಸಲು ಆಗ್ರಹ

ಡಾ. ಪ್ರಣವಾನಂದ ಶ್ರೀಗಳು 18 ಬೇಡಿಕೆಗಳನ್ನು ಒತ್ತಾಯಿಸಿ ಆರಂಭಿಸಿದ ಪಾದಯಾತ್ರೆಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದ್ದು ತಕ್ಷಣ ಸರಕಾರವು ಕನಿಷ್ಠ ಐದು ಬೇಡಿಕೆಗಜನ್ನಾದರೂ ಪರಿಗಣಿಸಿ ಆದ್ಯತೆಯ ಮೇಲೆ ಈಡೇರಿಸಿದರೆ ಮುಂದಿನ ನಿರಶನ ಸತ್ಯಾಗ್ರಹ ಕೈಬಿಡುವು ದಾಗಿ ಡಾ. ಪ್ರಣವಾನಂದ ಶ್ರೀಗಳು ಈಗಾಗಲೇ ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಸರಕಾರವು ಬೇಡಿಕೆ ಈಡೇರಿಸಲು ವಿಫಲವಾದರೆ ಶುಕ್ರವಾರದಿಂದ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.


ನ್ಯಾಯಾಲಯ ನಿರ್ದೇಶನ ಪಾಲಿಸಲು ಒಪ್ಪಿದ ಸ್ವಾಮೀಜಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಧರಣಿ, ಸತ್ಯಾಗ್ರಹ, ಪಾದಯಾತ್ರೆ ಹಾಗೂ ಮೆರವಣಿಗೆ ಗಳಿಗೆ ನಿಷೇಧ ಹೇರಿ ನ್ಯಾಯಾಲಯ ಆದೇಶಿಸಿರುವುದರಿಂದ ದಾಸರಹಳ್ಳಿಯಿಂದ ನೇರವಾಗಿ ಫ್ರೀಡಂ ಪಾರ್ಕಿಗೆ ಸ್ವಾಮೀಜಿಗಳು ಆಗಮಿಸಲಿದ್ದು ಕೋರ್ಟ್ ಆದೇಶವನ್ನು ಪಾಲಿಸುವುದಾಗಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. 


ಸ್ವಾಮೀಜಿ ಭೇಟಿಯಾಗಲು ನಾಯಕರ ದಂಡು

ಐತಿಹಾಸಿಕ ಪಾದಯಾತ್ರೆಯಲ್ಲಿ 700 ಕಿ. ಮೀ ಕಾಲ್ನಡಿಗೆಯಲ್ಲಿ ಆಗಮಿಸಿದ ಡಾ. ಪ್ರಣಾನಂದ ಶ್ರೀಗಳ ಹೋರಾಟಕ್ಕೆ ಬೆಂಬಲ ಸೂಚಿಸಲು ತೆಲಂಗಾಣದ ಮಾಜಿ ಸಚಿವರಾದ ವಿ ಶ್ರೀನಿವಾಸ ಗೌಡ, ವಿಧಾನಸಭೆಯ ಉಪನಾಯಕ ಸುನಿಲ್ ಕುಮಾರ್ ಕಾರ್ಕಳ, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಚ್ ಆರ್ ಶ್ರೀನಾಥ್ ಧಣಿ, ಕೆಪಿಎಸ್ಸಿ ಮಾಜಿ ಸದಸ್ಯ ಲಕ್ಷ್ಮೀ ನರಸಯ್ಯ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ವಿ ಗುತ್ತೇದಾರ್, ಹೋರಾಟ ಸಮಿತಿಯ ಕಾರ್ಯದರ್ಶಿ ವೆಂಕಟೇಶ ಕಡೇಚೂರ್, ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ್, ರಾಷ್ಟ್ರೀಯ ಈಡಿಗ ಮಹಾ ಮಂಡಲದ ರಾಜ್ಯ ಅಧ್ಯಕ್ಷ ತಿಪ್ಪೇಶ್, ನಾರಾಯಣ ಗುರು ಶಕ್ತಿ ಪೀಠದ ಟ್ರಸ್ಟಿಗಳು ಹಾಗೂ ವಿವಿಧ ಸಂಘಟನೆಯ ಪ್ರಮುಖರು ಸಮಾವೇಶದಲ್ಲಿ ಮಾತನಾಡಲಿದ್ದಾರೆ ಎಂದು ಡಾ. ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top