ಮಂಗಳೂರು: ಸಿಐಎಸ್‍ಎಫ್ ವತಿಯಿಂದ “ಸಿಐಎಸ್‍ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್–2026 (VMCC–2026)” ಎಂಬ ಐತಿಹಾಸಿಕ ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಫೆಬ್ರವರಿ 18ರಂದು ಮಂಗಳೂರಿಗೆ ಆಗಮಿಸಲಿದೆ.
ವಂದೇ ಮಾತರಂ 150ನೇ ವಾರ್ಷಿಕೋತ್ಸವದ ಅಂಗವಾಗಿ ಸೈಕ್ಲೋಥಾನ್–2026 ಹಮ್ಮಿಕೊಳ್ಳಲಾಗಿದೆ. ಈ ಸೈಕ್ಲೋಥಾನ್ ರಾಷ್ಟ್ರೀಯ ಏಕತೆ, ಕರಾವಳಿ ಭದ್ರತೆ ಹಾಗೂ ಕರಾವಳಿ ಪ್ರದೇಶಗಳ ಸದೃಢ ಮತ್ತು ಸತತ ಅಭಿವೃದ್ಧಿಯತ್ತ ಸಮೂಹ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ವರ್ಷಪೂರ್ತಿ ನಡೆಯುವ ಈ ಜನಜಾಗೃತಿ ಕಾರ್ಯಕ್ರಮದಲ್ಲಿ ದೈಹಿಕ ಸಾಮಥ್ರ್ಯದ ಜೊತೆಗೆ ಸಾಮಾಜಿಕ ಜಾಗೃತಿ, ಪರಿಸರ ಸಂರಕ್ಷಣೆ ಹಾಗೂ ಭಾರತದ ವಿಶಾಲ ಕರಾವಳಿಯ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ನೀಡಲಾಗುತ್ತದೆ.
2025ರಲ್ಲಿ ಆಯೋಜಿಸಲಾದ ಕೋಸ್ಟಲ್ ಸೈಕ್ಲೋಥಾನ್‍ನ ಯಶಸ್ಸಿನ ಮುಂದುವರಿಕೆಯಾಗಿ ಸುಮಾರು 6,553 ಕಿ.ಮೀ. ದೂರವನ್ನು ಕ್ರಮಿಸಿ, ಸುಮಾರು 30 ಲಕ್ಷ ನಾಗರಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ಹಾಗೂ 2.5 ರಿಂದ 2.9 ಕೋಟಿ ಜನರಿಗೆ ಡಿಜಿಟಲ್ ಮೂಲಕ ತಲುಪಿದ ಅನುಭವದ ಆಧಾರದ ಮೇಲೆ 2026ರ ಆವೃತ್ತಿ ಕರಾವಳಿ ಸಮುದಾಯಗಳೊಂದಿಗೆ ಇನ್ನಷ್ಟು ಆಳವಾದ ಸಂಪರ್ಕವನ್ನು ಬೆಳೆಸಿ, ಅವರನ್ನು ಸಮುದ್ರ ಹಿತಾಸಕ್ತಿಗಳ ರಕ್ಷಣೆಯಲ್ಲಿ “ತಟ್ ಪ್ರಹರಿಗಳು”ಯಾಗಿ ಸಬಲೀಕರಿಸುವ ಉದ್ದೇಶ ಹೊಂದಿದೆ.
ಈ ಅಭಿಯಾನದಲ್ಲಿ ಸುಮಾರು 130 ಸಿಐಎಸ್‍ಎಫ್ ಸಿಬ್ಬಂದಿ, ಅದರಲ್ಲಿ ಸುಮಾರು 65 ಮಹಿಳಾ ಸೈಕ್ಲಿಸ್ಟ್‍ಗಳು ಭಾಗವಹಿಸುತ್ತಿದ್ದಾರೆ. ಸೈಕ್ಲೋಥಾನ್ ಜನವರಿ 28 ರಂದು ಪ್ರಾರಂಭಗೊಂಡಿದ್ದು, 21 ಫೆಬ್ರವರಿ 2026ರಂದು ಕೊಚ್ಚಿಯಲ್ಲಿ ಸಮಾರೋಪಗೊಳ್ಳಲಿದೆ.
ಈ ಸೈಕ್ಲೋಥಾನ್ ಸುಮಾರು 6,600 ಕಿ.ಮೀ. ಉದ್ದದ ಭಾರತದ ಕರಾವಳಿಯನ್ನು ಎರಡು ಸಮಾಂತರ ಮಾರ್ಗಗಳ ಮೂಲಕ ಸಂಚರಿಸಲಿದೆ. ಪೂರ್ವ ಕರಾವಳಿ ಮಾರ್ಗದಲ್ಲಿ ಪಶ್ಚಿಮ ಬಂಗಾಳದ ಬಖಾಲಿ ಗ್ರಾಮದಿಂದ ಪ್ರಾರಂಭಗೊಂಡಿದ್ದು, ಪಶ್ಚಿಮ ಕರಾವಳಿಯಲ್ಲಿ ಗುಜರಾತಿನ ಲಖ್‍ಪತ್ ಬಂದರಿನಿಂದ ಆರಂಭವಾಗಿದೆ.
ಈ ಸೈಕ್ಲೋಥಾನ್ ಭೇಟಿ ಸಂದರ್ಭದಲ್ಲಿ 52 ಕರಾವಳಿ ಕೇಂದ್ರೀಕೃತ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಖ್ಯವಾಗಿ, ಕರಾವಳಿ ಭದ್ರತೆ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ವೃದ್ಧಿ ಮತ್ತು ಮಹಿಳಾ ಸಬಲೀಕರಣ, ಯುವಕರನ್ನು ಸಶಸ್ತ್ರ ಪಡೆಗಳು ಮತ್ತು ಇತರ ವೇಷಭೂಷಿತ ಸೇವೆಗಳಿಗೆ ಸೇರಲು ಪ್ರೇರೇಪಣೆ, ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು, ಮ್ಯಾಂಗ್ರೋವ್ ನೆಡುವಿಕೆ, ಮಣ್ಣು ಕೊಚ್ಚಿಹೋಗುವಿಕೆ ತಡೆ ಹಾಗೂ ವೆಟಿವರ್ ನೆಡುವಿಕೆ, ಪರಿಸರ ಸಂರಕ್ಷಣೆಗೆ ಪ್ರಕೃತಿ ಆಧಾರಿತ ಪರಿಹಾರಗಳಿಗೆ ಉತ್ತೇಜನ ಮತ್ತಿತರ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಸೈಕ್ಲೋಥಾನ್ 18 ಫೆಬ್ರವರಿ 2026ರಂದು ಮಂಗಳೂರು ತಲುಪಲಿದ್ದು, ಅಂದು ಸಂಜೆ 7 ಗಂಟೆಗೆ ಪಣಂಬೂರು ಬೀಚ್‍ನಲ್ಲಿ ತಂಡವನ್ನು ಸ್ವಾಗತಿಸಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ಮಾರಿಟೈಂ ಕ್ಷೇತ್ರದ ಪ್ರತಿನಿಧಿಗಳು, ಹಾಗೂ ಸ್ಥಳೀಯ ಪ್ರತಿನಿಧಿಗಳು ಭಾಗವಹಿಸಲಿದ್ದು, ಭಾರತದ ಸಮುದ್ರ ಭದ್ರತಾ ವ್ಯವಸ್ಥೆಯಲ್ಲಿ ಮಂಗಳೂರು ನಗರದ ತಂತ್ರಾತ್ಮಕ ಮಹತ್ವವನ್ನು ಉಲ್ಲೇಖಿಸಲಿದ್ದಾರೆ.
ಫೆಬ್ರವರಿ 19ರಂದು ಮಂಗಳೂರಿನಿಂದ ಸೈಕ್ಲೋಥಾನ್ ಮುಂದುವರೆಯಲಿದೆ ಎಂದು ಸಿಐಎಸ್‍ಎಫ್ ಎನ್.ಎಂ.ಪಿ.ಎ. ಘಟಕದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


