ಪೆರ್ನಾಜೆ: ಗ್ರಾಮದಲ್ಲಿ ಗಜರಾಜನ ದಾಳಿ ಮರುಕಳಿಸುತ್ತಿರುವುದರಿಂದ ರೈತರು ಹಾಗೂ ಗ್ರಾಮಸ್ಥರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಫೆಬ್ರವರಿ 17ರಂದು ಮುಂಜಾನೆ ಸುಮಾರು 3.30ರ ವೇಳೆಗೆ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿದ ಆನೆ, 10ಕ್ಕೂ ಹೆಚ್ಚು ಬಾಳೆ ಗಿಡಗಳು ಹಾಗೂ 3 ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿದೆ.
ಗುಡ್ಡಡ್ಕ–ಆನೆಗುಂಡಿ ಪ್ರದೇಶದಿಂದ ಬಂದಿರುವ ಈ ಆನೆ, ತೋಟದಲ್ಲಿ ದಾಂಧಲೆ ನಡೆಸಿದ ಬಳಿಕ ರಸ್ತೆಯ ಮೂಲಕ ಹಿಂತಿರುಗಿದೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಇದೇ ಆನೆ ಪೆರ್ನಾಜೆ ಪರಿಸರಕ್ಕೆ ಮರುಮರು ಪ್ರವೇಶಿಸುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಆನೆ ದಾಳಿಯನ್ನು ತಡೆಯುವ ಉದ್ದೇಶದಿಂದ ಅಳವಡಿಸಲಾದ ಸೋಲಾರ್ ಬೇಲಿಗಳು ಯಾವುದೇ ಪರಿಣಾಮಕಾರಿತ್ವ ತೋರದೆ ವಿಫಲವಾಗಿವೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಆನೆಗೆ ತಕ್ಕ ಶಾಶ್ವತ ಪರಿಹಾರ ಕಂಡುಹಿಡಿಯದೆ ಹೋದರೆ, ಬೆಳೆ ನಾಶ ಮುಂದುವರಿಯುವುದಷ್ಟೇ ಅಲ್ಲ, ಮಾನವ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ,” ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಆನೆ ರಂಪಾಟ ಪದೇಪದೇ ನಡೆಯುತ್ತಿದ್ದರೂ, ಇದುವರೆಗೆ ಸಮರ್ಪಕ ಪರಿಹಾರ ಅಥವಾ ನಷ್ಟಪೂರಣ ದೊರಕಿಲ್ಲ ಎಂಬುದು ರೈತರ ಆರೋಪವಾಗಿದೆ. ಸಂಬಂಧಿಸಿದ ಅರಣ್ಯ ಇಲಾಖೆ ಹಾಗೂ ಸರ್ಕಾರ ತಕ್ಷಣ ಸ್ಪಂದಿಸಿ, ಗಜರಾಜವನ್ನು ಹಿಡಿದು ದಟ್ಟ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಗ್ರಾಮಸ್ಥರ ಆಕ್ರೋಶ ತೀವ್ರಗೊಳ್ಳುವ ಸಾಧ್ಯತೆ ಇದೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಹಸ್ತಕ್ಷೇಪ ಮಾಡಬೇಕು ಎಂದು ಊರವರು ಹಾಗೂ ರೈತರು ಆಗ್ರಹಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

