ಕಾಲ್ಗೆಜ್ಜೆ ಒಂದು ಆಭರಣವಲ್ಲ , ಅದು ಕಾಲಿನ ಜೊತೆಗಲ್ಲ, ಕಾಲದ ಜೊತೆ ನಡೆಯುವ ಸಂಸ್ಕೃತಿ. ಬೆಳ್ಳಿಯ ವಲಯದಲ್ಲಿ ಬಂಧಿತವಾದ ಈ ಸಣ್ಣ ಆಭರಣ, ಹೆಣ್ಣಿನ ಜೀವನದ ದೊಡ್ಡ ಕಥೆಯನ್ನು ಮೌನವಾಗಿ ಹೊತ್ತುಕೊಂಡಿದೆ. ಅದರ ಝಂಝಣ ಧ್ವನಿ ಕೇಳಿದ ಕ್ಷಣದಲ್ಲೇ ಮನಸ್ಸಿನೊಳಗೆ ನೆನಪುಗಳ ಬಾಗಿಲು ತೆರೆಯುತ್ತದೆ.
ಕಾಲ್ಗೆಜ್ಜೆ ಎಂದರೆ ಒಂದು ಸಂತೋಷ . ಕಾಲಿಗೆ ಧರಿಸಿದಾಗ ಅದರ ಗೆಜ್ಜೆ ಸಪ್ಪಳ್ಳ ಕೇಳುವುದೇ ಒಂದು ಖುಷಿ . ಹೆಣ್ಣಿನ ದೇಹದ ಒಂದೊಂದು ಭಾಗವನ್ನು ಸುಂದರಗೊಳಿಸಲು ಆಭರಣಗಳು ಇರುವ ಹಾಗೆಯೇ ಕಾಲಿನ ಅಂದವನ್ನು ಹೆಚ್ಚಿಸಲೆಂದೇ ಇರುವುದು ಈ ಕಾಲ್ಗೆಜ್ಜೆ . ನಡೆದುಕೊಂಡು ಓಡಾಡುವಾಗ ಉಂಟಾಗುವ ಮೃದುವಾದ ನಾದವು ವಿಶೇಷ ಆಕರ್ಷಣೆಯನ್ನು ನೀಡುತ್ತದೆ .
ಕಾಲ್ಗೆಜ್ಜೆ ಎಂದರೆ ಕೇವಲ ಕಾಲಿಗೆ ಧರಿಸುವ ಆಭರಣವಲ್ಲ; ಅದು ಮನಸ್ಸಿಗೆ ತಟ್ಟುವ ಒಂದು ಸಂತೋಷ. ಹೆಜ್ಜೆ ಇಡುತ್ತಿದ್ದಂತೆ ಕೇಳಿಸುವ ಅದರ ಮೃದುವಾದ ನಾದ, ಹೃದಯದೊಳಗೆ ಅಚ್ಚಳಿಯದ ಹರ್ಷವನ್ನು ಮೂಡಿಸುತ್ತದೆ. ಮಾತಿಲ್ಲದೇ ನಗು ತರಿಸುವ ಅಪರೂಪದ ಆನಂದ ಕಾಲ್ಗೆಜ್ಜೆಯಲ್ಲಿದೆ.
ಮಹಿಳೆ ಕಾಲ್ಗೆಜ್ಜೆ ಧರಿಸಿದ ಕ್ಷಣದಿಂದಲೇ ಆಕೆಯ ನಡೆ ಬದಲಾಗುತ್ತದೆ. ನಡಿಗೆಯಲ್ಲಿ ಒಂದು ಲಾಲಿತ್ಯ, ಮನಸ್ಸಿನಲ್ಲಿ ಒಂದು ಉಲ್ಲಾಸ ಹುಟ್ಟುತ್ತದೆ. ಮನೆಯೊಳಗೆ ಕೇಳಿಸುವ ಕಾಲ್ಗೆಜ್ಜೆಯ ಸದ್ದು, ಆ ಮನೆಗೆ ಜೀವಂತಿಕೆಯ ಭಾವವನ್ನು ತರುತ್ತದೆ. ಅದು ಸಂತೋಷ ಮನೆಮಾಡಿದ ಸೂಚನೆಯಂತೆ ಭಾಸವಾಗುತ್ತದೆ.
ಒಟ್ಟಿನಲ್ಲಿ, ಕಾಲ್ಗೆಜ್ಜೆ ಎಂದರೆ ಧ್ವನಿಯಾಗಿಯೇ ಅರಳುವ ಸಂತೋಷ. ಅದು ಕಾಣಿಸುವ ಆಭರಣವಲ್ಲ, ಅನುಭವಿಸುವ ಹರ್ಷ. ಹೆಜ್ಜೆ ಹೆಜ್ಜೆಗೆ ಜೀವನದ ಸಿಹಿಯನ್ನು ನೆನಪಿಸುವ ಚಿಕ್ಕದಾದರೂ ಆಳವಾದ ಆನಂದವೇ ಕಾಲ್ಗೆಜ್ಜೆ.
ಹಳೆಯ ಮನೆಗಳ ಅಂಗಳದಲ್ಲಿ, ಮಣ್ಣಿನ ನೆಲದ ಮೇಲೆ ಹೆಜ್ಜೆ ಇಡುತ್ತಿದ್ದಂತೆಯೇ ಕೇಳಿಸುವ ಕಾಲ್ಗೆಜ್ಜೆಯ ನಾದ, ಮನೆಗೆ ಬಂದ ಹೆಣ್ಣಿನ ಸೌಮ್ಯ ಘೋಷಣೆಯಾಗುತ್ತಿತ್ತು. ಅದು ಜೋರಾಗಿ ಮಾತನಾಡುವುದಿಲ್ಲ; ಆದರೆ ಕೇಳಿದವರಿಗೆ ಆತ್ಮೀಯತೆಯನ್ನು, ಸುರಕ್ಷೆಯನ್ನು ನೀಡುತ್ತದೆ. ಆ ಧ್ವನಿಯಲ್ಲೇ ಶಿಸ್ತು, ಸಂಯಮ ಮತ್ತು ಸಂಸ್ಕಾರ ಅಡಗಿವೆ.
ಕಾಲ್ಗೆಜ್ಜೆ ಹೆಣ್ಣಿನ ಬದುಕಿನ ವಿವಿಧ ಹಂತಗಳಲ್ಲಿ ವಿಭಿನ್ನ ಅರ್ಥಗಳನ್ನು ಪಡೆಯುತ್ತದೆ. ಬಾಲ್ಯದ ಕಾಲಿನಲ್ಲಿ ಅದು ಆಟದ ಸಂಗಾತಿ. ಯೌವನದ ಕಾಲಿಗೆ ಬಂದಾಗ ಸೌಂದರ್ಯದ ಸಂಕೇತ. ಮದುವೆಯ ಹೆಜ್ಜೆಗಳಲ್ಲಿ ಅದು ಸೌಭಾಗ್ಯದ ಗುರುತು. ತಾಯಿಯಾದ ಮೇಲೆ ಅದೇ ಕಾಲ್ಗೆಜ್ಜೆ ಜವಾಬ್ದಾರಿಯ ಭಾರವನ್ನೂ ಮೌನವಾಗಿ ಹೊರುತ್ತದೆ. ಹೀಗೆ ಕಾಲ್ಗೆಜ್ಜೆ ಹೆಣ್ಣಿನೊಂದಿಗೆ ಬೆಳೆದು, ಅವಳ ಜೊತೆಗೆ ಬದುಕನ್ನು ಕಲಿಯುತ್ತದೆ.
ಸಾಹಿತ್ಯದಲ್ಲಿ ಕಾಲ್ಗೆಜ್ಜೆ ಒಂದು ಸಂಕೇತ. ಕವಿಗಳ ಕಾವ್ಯದಲ್ಲಿ ಅದು ಪ್ರೀತಿಯ ನಾದವಾಗಿ ಕೇಳುತ್ತದೆ. ಕಥೆಗಳಲ್ಲಿ ಅದು ಹೆಣ್ಣಿನ ಮೌನ ಭಾಷೆಯಾಗಿ ಮಾತನಾಡುತ್ತದೆ. ನೃತ್ಯಕಲೆಯಲ್ಲಿ ಕಾಲ್ಗೆಜ್ಜೆ ದೇಹದ ಚಲನೆಗೆ ಲಯ ನೀಡುವ ಆತ್ಮವಾಗುತ್ತದೆ. ಹೆಜ್ಜೆಗಳಲ್ಲೇ ಮಾತಾಡುವ ಈ ಆಭರಣ, ಪದಗಳಿಗಿಂತ ಆಳವಾಗಿ ಅರ್ಥವನ್ನು ಹೇಳುತ್ತದೆ.
ಕಾಲ್ಗೆಜ್ಜೆ ನಮಗೆ ನೆನಪಿಸುವುದು ಒಂದೇ ಸಂಗತಿ...
ಜೀವನದಲ್ಲಿ ಮುಂದೆ ಸಾಗುವುದು ಮುಖ್ಯ, ಆದರೆ
ಹೆಜ್ಜೆಗಳಲ್ಲೂ ಸಂಸ್ಕೃತಿ ಇರಬೇಕು.
ಮೌನದಲ್ಲೂ ಧ್ವನಿ ಇರಬೇಕು.
-ವಿದ್ಯಾ
ಎಸ್ ಡಿ ಎಂ ಕಾಲೇಜ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



