ಬಳ್ಳಾರಿ ಬ್ಯಾನರ್ ವಿವಾದ: ಪಾಲಿಕೆ ಆಡಳಿತದ ಹೊಣೆಗಾರಿಕೆಗೆ ಸಾರ್ವಜನಿಕ ಆಕ್ರೋಶ

Upayuktha
0


ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಇದೀಗ ಕೇವಲ ಇಬ್ಬರು ರಾಜಕೀಯ ನಾಯಕರ ಬೆಂಬಲಿಗರ ನಡುವಿನ ಸಂಘರ್ಷಕ್ಕೆ ಸೀಮಿತವಾಗಿಲ್ಲ. ಈ ರಕ್ತಪಾತಕ್ಕೆ ಕಾರಣವಾದ ‘ಬ್ಯಾನರ್ ಸಂಸ್ಕೃತಿ’ಗೆ ಕಡಿವಾಣ ಹಾಕಲು ವಿಫಲವಾದ ಮಹಾನಗರ ಪಾಲಿಕೆಯ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾಗುತ್ತಿದೆ.


ಕೇವಲ ಪೊಲೀಸ್ ಅಧಿಕಾರಿಗಳನ್ನು ಹೊಣೆಮಾಡಿ ವರ್ಗಾವಣೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಘಟನೆಗೆ ಮೂಲ ಕಾರಣವಾದ ಪಾಲಿಕೆ ಆಡಳಿತ, ವಿಶೇಷವಾಗಿ ಪಾಲಿಕೆ ಆಯುಕ್ತರ ಮೇಲೂ ಕ್ರಮ ಜರುಗಬೇಕು ಎಂಬ ಆಗ್ರಹ ನಗರದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.


ಬಳ್ಳಾರಿಯ ಸಂಗಮ್ ಸರ್ಕಲ್ ಸೇರಿದಂತೆ ನಗರದಲ್ಲಿನ 17 ಪ್ರಮುಖ ವೃತ್ತಗಳಲ್ಲಿ ಬ್ಯಾನರ್ ಅಳವಡಿಕೆಯನ್ನು ನಿಷೇಧಿಸಿ ಸ್ವತಃ ಪಾಲಿಕೆ ಆಯುಕ್ತರೇ ಈ ಹಿಂದೆ ಆದೇಶ ಹೊರಡಿಸಿದ್ದರು. ಆದರೂ ಜನಾರ್ದನ ರೆಡ್ಡಿ ಅವರ ನಿವಾಸದ ಮುಂಭಾಗ ಮತ್ತು ಪ್ರಮುಖ ರಸ್ತೆಗಳಲ್ಲಿ ಅಕ್ರಮವಾಗಿ ಬ್ಯಾನರ್‌ಗಳು ಅಳವಡಿಸಲ್ಪಟ್ಟಿರುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಇದಕ್ಕೆ ಪಾಲಿಕೆಯ ಮೌನಸಮ್ಮತಿ ಕಾರಣವೇ ಎಂಬ ಅನುಮಾನವೂ ವ್ಯಕ್ತವಾಗಿದೆ.


ಇನ್ನು, ಕೆಲ ತಿಂಗಳ ಹಿಂದೆ ಅಕ್ರಮ ಬ್ಯಾನರ್ ತೆರವುಗೊಳಿಸಿದ್ದ ಪಾಲಿಕೆಯ ಎಇಇ (AEE) ಅಧಿಕಾರಿಯನ್ನು ವರ್ಗಾವಣೆ ಮಾಡಲು ಪಾಲಿಕೆ ಆಯುಕ್ತರು ಶಿಫಾರಸ್ಸು ಮಾಡಿದ್ದ ಪ್ರಕರಣದಲ್ಲಿ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಛೀಮಾರಿ ಹಾಕಿತ್ತು. ಇದನ್ನು ಉಲ್ಲೇಖಿಸುತ್ತಿರುವ ನಾಗರಿಕರು, “ನಿಯಮ ಪಾಲಿಸಿದ ಅಧಿಕಾರಿಗಳಿಗೆ ಶಿಕ್ಷೆ, ನಿಯಮ ಮೀರಿದವರಿಗೆ ರಕ್ಷಣೆ” ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ.


ಈ ಎಲ್ಲ ಬೆಳವಣಿಗೆಗಳ ನಡುವೆ, ಬ್ಯಾನರ್ ಸಂಸ್ಕೃತಿಗೆ ಅಂತ್ಯಗೊಳಿಸಲು ಹಾಗೂ ಆಡಳಿತಾತ್ಮಕ ಹೊಣೆಗಾರಿಕೆಯನ್ನು ಖಚಿತಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ.


Post a Comment

0 Comments
Post a Comment (0)
To Top