ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ಧನ್ವಂತರಿ ಪೂಜಾ ಮಹೋತ್ಸವ, ಶಿಷ್ಯೋಪನಯನ ಸಂಸ್ಕಾರ, ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಮತ್ತು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಬುಧವಾರ ಕಾಲೇಜಿನ ಆವರಣದಲ್ಲಿ ನಡೆಯಿತು.
ಸಮಾರಂಭದಲ್ಲಿ ನಾರಾವಿಯ ಪ್ರಸಿದ್ಧ ಆಯುರ್ವೇದ ವೈದ್ಯ ಡಾ. ಎನ್. ಶೀತಲ್‌ಕುಮಾರ್, ಬೆಂಗಳೂರಿನ ಭಾರತೀಯ ಆಯುರ್ವೇದ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ರಸಶಾಸ್ತ್ರ ಹಾಗೂ ಭೈಷಜ್ಯ ಕಲ್ಪನಾ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರು ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಡಾ. ಜಗದೀಶ್ ಕೋನರೆಡ್ಡಿ, ಕೇರಳದ ಕೊಟ್ಟಕ್ಕಲ್ ಆರ್ಯ ವೈಧ್ಯ ಶಾಲೆಯ ಗುಣಮಟ್ಟ ಭರವಸೆ ವಿಭಾಗದ ವೈದ್ಯಾಧಿಕಾರಿ ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಜಿತೇಶ್ ಎಂಕೆ ಅವರಿಗೆ ಶಾಲು, ಹಾರ, ಪ್ರಶಸ್ತಿ ಫಲಕ ಹಾಗೂ ರೂ.10,000 ನಗದು ಸಹಿತ ಆಳ್ವಾಸ್ ಧನ್ವಂತರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಧನ್ವಂತರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎನ್. ಶೀತಲ್‌ಕುಮಾರ್, ಆಳ್ವಾಸ್ ಸಂಸ್ಥೆ ರೂಪಿಸಿರುವ ಸಾಂಸ್ಕೃತಿಕ ಚಳವಳಿಗಳು, ಕಲೆಗಳ ಉತ್ತೇಜನ ಹಾಗೂ ಜನಪದ–ಭಾರತೀಯ ಸಂಸ್ಕೃತಿ ಸಂರಕ್ಷಣೆಗೆ ನೀಡಿರುವ ಕೊಡುಗೆಗಳು ಅತ್ಯಂತ ಶ್ಲಾಘನೀಯವಾಗಿವೆ ಎಂದರು. ಆಯುರ್ವೇದ, ನ್ಯಾಚುರೋಪತಿ ಮತ್ತು ಹೋಮಿಯೋಪಥಿ ಕ್ಷೇತ್ರಗಳಲ್ಲಿ ಸಂಸ್ಥೆ ಸ್ಥಾಪಿಸಿರುವ ಮಹಾವಿದ್ಯಾಲಯಗಳು ದೇಶದ ಮಟ್ಟದಲ್ಲಿ ಮಾದರಿಯಾಗಿವೆ. ಜಾಗತಿಕ ವೇದಿಕೆಯಲ್ಲಿ ಭಾರತೀಯ ವೈದ್ಯಕೀಯ ಪರಂಪರೆಯ ಸ್ಥಾನವನ್ನು ಬಲಪಡಿಸುವಲ್ಲಿ ಇಲ್ಲಿ ನಡೆಯುತ್ತಿರುವ ಶಿಕ್ಷಣ ಹಾಗೂ ಸಂಶೋಧನಾ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಸಂಶೋಧನೆಯ ಅಗತ್ಯತೆಯನ್ನು ಉಲ್ಲೇಖಿಸಿದ ಅವರು, ಇಂದಿನ ವೈದ್ಯಕೀಯ ಕ್ಷೇತ್ರದ ಬೆಳವಣಿಗೆ ಸಂಶೋಧನೆ ಆಧಾರಿತವಾಗಿದ್ದು, ವಿದ್ಯಾರ್ಥಿಗಳು ಕೇವಲ ಪಾಠಪುಸ್ತಕಗಳಿಗೆ ಸೀಮಿತರಾಗದೆ ನವೀಕೃತ ಜ್ಞಾನ, ಕ್ಲಿನಿಕಲ್ ಅಧ್ಯಯನ ಹಾಗೂ ಎವಿಡೆನ್ಸ್ ಬೇಸ್‌ಡ್ ಪ್ರಾಕ್ಟೀಸ್‌ಗಳತ್ತ ಗಮನ ಹರಿಸಬೇಕು ಎಂದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಲಭ್ಯವಿರುವ ವಿದ್ಯಾರ್ಥಿ ಸಂಶೋಧನಾ ಅನುದಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಆಯುರ್ವೇದ ವಿದ್ಯಾಭ್ಯಾಸವು ಕೇವಲ ಪದವಿ ಪಡೆಯುವ ಮಾರ್ಗವಲ್ಲ; ಮೌಲ್ಯ, ಶಿಸ್ತು ಮತ್ತು ಸೇವೆಯನ್ನು ಅಳವಡಿಸಿಕೊಳ್ಳುವ ಜೀವನಪಥವಾಗಿದೆ ಎಂದರು. ಇಂದಿನ ಯುಗದಲ್ಲಿ ಹೊಸ ರೋಗಗಳು, ಜೀವನಶೈಲಿ ಬದಲಾವಣೆಗಳು ಹಾಗೂ ತಂತ್ರಜ್ಞಾನಾಧಾರಿತ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದ್ದು, ಆಯುರ್ವೇದ ವೈದ್ಯರು ಮತ್ತು ವಿದ್ಯಾರ್ಥಿಗಳು ಸಾಂಪ್ರದಾಯಿಕ ಜ್ಞಾನಕ್ಕೆ ಜೊತೆಗೆ ಅದರ ವೈಜ್ಞಾನಿಕ ದೃಢೀಕರಣ ಮತ್ತು ಆಧುನಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದರು.
ಅಲಂಗಾರಿನ ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ಧನ್ವಂತರಿ ಪೂಜಾ ಮಹೋತ್ಸವ ಮತ್ತು ಶಿಷ್ಯೋಪನಯನ ಸಂಸ್ಕಾರ ನೆರವೇರಿತು. ಕಾಲೇಜಿನ ಪ್ರಥಮ ವರ್ಷದ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದ 160 ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಸಂಸ್ಕಾರ ನಡೆಯಿತು.
ಹಿಮಾಲಯ ವೆಲ್‌ನೆಸ್ ಕಂಪೆನಿಯ ವತಿಯಿಂದ 2019–20ನೇ ಸಾಲಿನ ಜೀವಕಾ ಪ್ರಶಸ್ತಿಯನ್ನು ಡಾ. ಪ್ರಭು ಆರ್.ಎಚ್. ಅವರಿಗೆ ಹಾಗೂ ಆಯುರ್ವಿಶಾರದಾ ಪ್ರಶಸ್ತಿಯನ್ನು ಡಾ. ಅಮೂಲ್ಯ ಜಿ. ಶೆಟ್ಟಿ ಅವರಿಗೆ ನೀಡಲಾಯಿತು. 2020–21ನೇ ಸಾಲಿನ ಜೀವಕಾ ಪ್ರಶಸ್ತಿಯನ್ನು ಡಾ. ಸ್ಪಂದನಾ ಪಟೇಲ್ ಅವರಿಗೆ ಹಾಗೂ ಆಯುರ್ವಿಶಾರದಾ ಪ್ರಶಸ್ತಿಯನ್ನು ಡಾ. ಮನೀಶಾರಿಗೆ ತಲಾ ರೂ.15,000 ಮತ್ತು ರೂ.10,000 ನಗದು ಬಹುಮಾನಗಳೊಂದಿಗೆ ನೀಡಿ ಗೌರವಿಸಲಾಯಿತು.
ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸ್ನಾತಕ ವಿಭಾಗದ ಡೀನ್ ಡಾ. ಸ್ವಪ್ನಾ ಕುಮಾರಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಂಜುನಾಥ ಭಟ್ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಡಾ. ಗೀತಾ ಮಾರ್ಕೆಂಡೆ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಶೀಲ್ ಶೆಟ್ಟಿ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಂಜುನಾಥ ಭಟ್ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

