ಸ್ನೇಹ ಅಂದರೆ ಎಷ್ಟು ಚಂದ ಅಲ್ಲವಾ? ಎರಡು ಮನಸ್ಸುಗಳ ಪ್ರತಿಯೊಂದು ಭಾವನೆಗಳ ಮಿಡಿತವೇ ಸ್ನೇಹ. ನಮಗೆ ಪರಿಚಯವಿಲ್ಲದ ವ್ಯಕ್ತಿಯೊಂದಿಗಿನ ಒಂದು ಸಣ್ಣ ಪರಿಚಯವೇ ಮುಂದೆ ಸುಂದರವಾದ ಸ್ನೇಹವಾಗಿ ಬೆಳೆಯುವ ಅನೇಕ ಕ್ಷಣಗಳಿಗೆ ಕಾರಣವಾಗುತ್ತದೆ. ಸ್ನೇಹಕ್ಕೆ ಜಾತಿ, ಲಿಂಗ, ವಯಸ್ಸು ಎಂಬ ಬೇಧಗಳ ಅಗತ್ಯವಿಲ್ಲ. ನಮ್ಮ ಮನಸ್ಥಿತಿಗೆ ಹೊಂದಿಕೊಳ್ಳುವ ವ್ಯಕ್ತಿ ಇದ್ದರೆ ಸಾಕು. ಸ್ನೇಹಕ್ಕೆ ಸಮಯದ ಪರಿಮಿತಿಯೂ ಇಲ್ಲ. ಯಾವ ಕಾಲಘಟ್ಟದಲ್ಲಾದರೂ ನಿರ್ಮಾಣವಾಗಿ, ಮರೆಯಲಾಗದ ಬಂಧವಾಗಿ ಉಳಿಯುವ ಸಂಬಂಧವೇ ಸ್ನೇಹ.
ಪ್ರೀತಿ ಜೀವನಕ್ಕೆ ನೀತಿ ಪಾಠ ಕಲಿಸಿದರೆ, ಸ್ನೇಹವು ಸಂಬಂಧಗಳ ಬೆಲೆಯನ್ನು ತಿಳಿಸಿಕೊಡುತ್ತದೆ. ಎಲ್ಲಿ ಶುರುವಾಯಿತು ಎಂದು ಅರಿಯುವ ಮುನ್ನವೇ ಎಲ್ಲ ಮಿತಿಗಳನ್ನು ಮೀರಿ ಬೆಳೆದಿರುವ ಸಂಬಂಧವೇ ಸ್ನೇಹ.
ಮಾನವನು ಸಮಾಜಜೀವಿ. ಏಕಾಂಗಿಯಾಗಿ ಬದುಕುವುದು ಸಾಧ್ಯವಿಲ್ಲ. ಒಂದು ವೇಳೆ “ನಾನು ಒಬ್ಬನೇ ಈ ಸಮಾಜವನ್ನು ಎದುರಿಸುತ್ತೇನೆ” ಎಂಬ ಮನಸ್ಥಿತಿ ಇದ್ದರೆ, ಅದು ತಪ್ಪುಕಲ್ಪನೆ ಮಾತ್ರ. ಏಕಾಂಗಿಯಾಗಿ ಬದುಕಿದರೂ, ಮನಸ್ಸಿನೊಳಗಿನ ನೂರಾರು ಆಲೋಚನೆಗಳು, ಭಾವನೆಗಳು, ವಿಚಾರಧಾರೆಗಳು ಮೌಲ್ಯವಿಲ್ಲದಂತಾಗುತ್ತವೆ. ನಮ್ಮ ದಿನನಿತ್ಯದ ಜೀವನದ ಏರುಪೇರುಗಳನ್ನು ಹಂಚಿಕೊಳ್ಳಲು- ತಂದೆತಾಯಿಯಾಗಿರಲಿ ಅಥವಾ ಸ್ನೇಹಿತರಾಗಿರಲಿ- ಜೀವನದಲ್ಲಿ ಒಬ್ಬರಾದರೂ ಅಗತ್ಯ.
ನನ್ನ ಜೀವನದಲ್ಲಿ ಸ್ನೇಹಕ್ಕೆ ನಾನು ನೀಡುವ ಮಹತ್ವ ಅಮೂಲ್ಯ. ಅವಳು ನನ್ನ ಆಪ್ತ ಗೆಳತಿಯೇನೂ ಅಲ್ಲ. ಆದರೂ ನಮ್ಮಿಬ್ಬರ ಸ್ನೇಹ ಹತ್ತು ವರ್ಷಗಳ ಪಯಣದ್ದು. ಸ್ನೇಹ ಚಿಗುರೊಡೆಯಲು ಒಂದೇ ಒಂದು ನಂಬಿಕೆ ಸಾಕು; ಆ ನಂಬಿಕೇ ಮುಂದುವರಿಯುವ ಸ್ನೇಹಕ್ಕೆ ಬಲವಾದ ಅಡಿಪಾಯವಾಗುತ್ತದೆ.
ಮಾತುಗಳಿಗೆ ಕೊನೆಯೇ ಇಲ್ಲದಂತೆ ಮಾತನಾಡುವ ನಮ್ಮಿಬ್ಬರ ನಡುವೆ, ಬೇರೆಯವರಿಗೆ ನಮ್ಮ ಮಾತುಗಳು ಕಿರಿಕಿರಿಯಾಗಿದ್ದರೂ ಅದನ್ನು ಗಮನಿಸುವ ಮನಸ್ಥಿತಿ ನಮ್ಮದಲ್ಲ. ಮಾತುಗಳ ನಡುವೆ ನಗುವನ್ನು ಬೆರೆಸಿ, ಆ ನಗುವಿನಲ್ಲೇ ಮಾತುಗಳಿಗೆ ವಿರಾಮ ಕೊಡುವ ಹುಚ್ಚು ಮನಸ್ಸು ನಮ್ಮಿಬ್ಬರದ್ದು. ಜಗತ್ತಿನ ಎಲ್ಲರ ನಗುವನ್ನೇ ನಾವು ಕಿತ್ತುಕೊಂಡೆವೋ ಎಂಬ ಸಂಶಯ, ನಮ್ಮ ಜೋರಾದ ನಗುವಿನಿಂದ ಸಹಜವಾಗಿ ಮೂಡುತ್ತದೆ.
ಆಕೆಯ ಬರವಿಕೆಗಾಗಿ ನನ್ನ ಮನಸ್ಸು ಪ್ರತಿಕ್ಷಣವೂ ಕಾದಿರುತ್ತದೆ. ಕೆಲವೊಮ್ಮೆ ಒಂಟಿತನ ಕಾಡಿದಾಗ, ಬಸ್ಸಿನ ಕಿಟಕಿಯಿಂದ ಬೀಸುವ ಗಾಳಿಯ ಸ್ಪರ್ಶದಲ್ಲಿ ನಮ್ಮಿಬ್ಬರ ಸ್ನೇಹದ ನೆನಪುಗಳು ಮನಸ್ಸನ್ನು ಮೆಲಕು ಹಾಕುತ್ತವೆ. ಅಜ್ಞಾತವಾಗಿ ಒಂದು ನಗು ತುಟಿಗಳ ಬಳಿ ಬಂದು ಮರೆಮಾಡಿಕೊಳ್ಳುತ್ತದೆ. ಮಾತುಗಳ ನಡುವೆ ಜಗಳವಾಡಿದರೂ, ಆ ಜಗಳವನ್ನು ತಮಾಷೆಯಾಗಿಯೇ ಉಳಿಸಿಕೊಳ್ಳುವ ಪ್ರಯತ್ನ ನಮ್ಮಿಬ್ಬರದ್ದು. ಆಕೆಯ ಮಾತುಗಳು ಕೈ ತಪ್ಪಿದಾಗ, ನನ್ನದೊಂದು ಕಿವಿಮಾತು ಆಕೆಗೆ.
ಬೊಗಸೆಯಲ್ಲಿ ಎಷ್ಟೇ ನೋವಿದ್ದರೂ, ಕ್ಷಣಮಾತ್ರದಲ್ಲಿ ಆ ನೋವುಗಳನ್ನು ಮರೆತು, ಜೀವನದ ಆ ದಿನವನ್ನು ಒಬ್ಬರಿಗೊಬ್ಬರು ನೆನಪಿಸಿಕೊಂಡು ಸಂಭ್ರಮಿಸುತ್ತೇವೆ. ಹಂಚಿಕೊಳ್ಳಲು ವಿಷಯಗಳೇ ಇಲ್ಲದಿದ್ದರೂ, ಅನುಭವಗಳನ್ನು ವ್ಯಕ್ತಪಡಿಸುತ್ತ ಮುಖಾಮುಖಿಯಾಗಿ ನಗುತ್ತೇವೆ. ನಗುವಿನಿಂದಲೇ ನೋವನ್ನು ಮರೆಸುವ ಶಕ್ತಿ ಆಕೆಯದ್ದು. “ಬಯಸಿದಂತೆ ಸಿಕ್ಕ ಗೆಳತಿ” ಎಂಬ ಸಾಲುಗಳು ನಿಜಕ್ಕೂ ಆಕೆಗೆ ಸೂಕ್ತ.
ನಮ್ಮಿಬ್ಬರ ಜಾತಿ ಬೇರೆಬೇರೆಯಾಗಿರಬಹುದು; ಆದರೆ ರಕ್ತ ಒಂದೇ. ಪ್ರತಿಕ್ಷಣ ಆಕೆಯೊಂದಿಗೆ ಸಮಯ ಕಳೆಯುವಾಗ, ಆಕೆಯ ನಗುವೇ ನನ್ನನ್ನು ಮತ್ತೆ ಮತ್ತೆ ಪ್ರೇರೇಪಿಸುತ್ತದೆ. ಬದುಕನ್ನು ಪ್ರೀತಿಸಲು ನಾನು ಕಲಿತಿದ್ದು ಆಕೆಯಿಂದ. ಕನಸಿನಲ್ಲಿ ಕಂಡ ಸ್ನೇಹದ ಸುಂದರ ದಿನಗಳನ್ನು ಮರಳಿ ಕೊಡಬೇಕೆಂದು ಕೇಳುವ ಮುನ್ನವೇ, ದೇವರು ನನಗೆಂದೇ ಈಕೆಯನ್ನು ಸ್ನೇಹಿತಳಾಗಿ ನೀಡಿದ್ದಾನೆ ಎಂಬ ಭಾವನೆ ಕೆಲವೊಮ್ಮೆ ಮೂಡುತ್ತದೆ.
ಅರಳುವ ಹೂವು ಬಾಡುವ ಮುನ್ನ, ಜೀವನವನ್ನು ಇಷ್ಟು ಬೇಗ ಕಳೆದುಕೊಂಡೆನೋ ಎಂಬ ಚಿಕ್ಕ ಬೇಸರ ಕಾಡಬಹುದು. ಆದರೆ ನನ್ನ ಜೀವನದಲ್ಲಿ ಅರಳಿದ ಹೂವು ಅವಳಾಗಿದ್ದರೆ, ಅದು ಬಾಡುವ ಮುನ್ನವೇ ನೀರು ಸುರಿದು ಮತ್ತೆ ಚಿಗುರಿಸುವ ಕರ್ತವ್ಯ ನನ್ನದೆಂದು ಭಾವಿಸುತ್ತೇನೆ. ನನ್ನ ಜೀವನಕ್ಕೆ ಬೆಳಕಿನಂತೆ ಆಗಮಿಸಿದ ನಿನಗೆ, ನಾನು ನೀಡಬಲ್ಲದ್ದು ಕೇವಲ ಪ್ರೀತಿ. ನನ್ನ ಜೀವನಕ್ಕೆ ಪರಿಪೂರ್ಣ ಅರ್ಥ ನೀಡಿದ ನಿನಗೆ ಹೃದಯಪೂರ್ವಕ ಧನ್ಯವಾದ.
- ಶಿಲ್ಪಾ ಆದಪ್ಪ ಗೌಡ, ದಿಡುಪೆ
ಎಸ್‌ಡಿಎಂ ಕಾಲೇಜು ಉಜಿರೆ



