ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ

Upayuktha
0

ಶಿವರಾಜ್‌ಕುಮಾರ್ ಸೇರಿ ತಾರೆಯರ ದಂಡೇ ಭಾಗಿ





ಮಂಗಳೂರು:‌ ಅಖಿಲ ಭಾರತೀಯ ಬಿಲ್ಲವರ ಯೂನಿಯನ್ ಆಶ್ರಯದಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವವು ಜ.18ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಕ್ರೀಡೋತ್ಸವದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯ ತಾರೆಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತೀಯ ಬಿಲ್ಲವರ ಯೂನಿಯನ್ (ರಿ.) ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅವರು ತಿಳಿಸಿದರು.


ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 7.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ನೆಹರೂ ಮೈದಾನದವರೆಗೆ ಕ್ರೀಡಾ ಜ್ಯೋತಿ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ಹೇಳಿದರು.


ತಾರಾ ಆಕರ್ಷಣೆಯಾಗಿ ಡಾ. ಶಿವರಾಜ್‌ಕುಮಾರ್, ವಿಜಯ ರಾಘವೇಂದ್ರ, ಧನ್ಯ ರಾಮ್ ಕುಮಾರ್, ಯುವ ರಾಜ್ ಕುಮಾರ್, ಪೃಥ್ವಿ ಅಂಬರ್ ಹಾಗೂ ಅನುಶ್ರೀ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಸಂಜೆ 5.30ಕ್ಕೆ ಪ್ರಕಾಶ್ ಮಹಾದೇವನ್ ಹಾಗೂ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ನವೀನ್ ಚಂದ್ರ ಸುವರ್ಣ ಮಾಹಿತಿ ನೀಡಿದರು.


1912ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಮಾರ್ಗದರ್ಶನದಲ್ಲಿ ಕುದ್ರೋಳಿಯಲ್ಲಿ ಸ್ಥಾಪಿತವಾದ ಅಖಿಲ ಭಾರತೀಯ ಬಿಲ್ಲವರ ಯೂನಿಯನ್ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ ಹಾಗೂ ಸಂಘಟಿತವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಲ್ಕಿಯಲ್ಲಿ ನಡೆದ ಪ್ರಪ್ರಥಮ ಬಿಲ್ಲವ ಸಮ್ಮೇಳನ, ನಾರಾಯಣ ಗುರು ವಿದ್ಯಾಸಂಸ್ಥೆಗಳು, ಮಹಿಳಾ ಸಮ್ಮೇಳನ ಹಾಗೂ ಬಿಲ್ಲವ ಮಹಿಳಾ ಹಾಸ್ಟೆಲ್‌ಗಳು ಸಂಘಟನೆಯ ಪ್ರಮುಖ ಸಾಧನೆಗಳಾಗಿವೆ ಎಂದು ಹೇಳಿದರು.


ಯುವ ಸಮುದಾಯವನ್ನು ಸಂಘಟಿಸುವ ಉದ್ದೇಶದೊಂದಿಗೆ ಈ ಜಾಗತಿಕ ಕ್ರೀಡೋತ್ಸವವನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 8 ಗಂಟೆಗೆ ವಿಶ್ವಕಪ್ ಮಹಿಳಾ ಕಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಆಟಗಾರ್ತಿ ಕು. ಧನಲಕ್ಷ್ಮೀ ಪೂಜಾರಿಯವರ ನೇತೃತ್ವದಲ್ಲಿ ಕ್ರೀಡಾ ಜ್ಯೋತಿ ಮೆರವಣಿಗೆ ಕುದ್ರೋಳಿಯಿಂದ ನಾರಾಯಣ ಗುರು ವೃತ್ತ, ಲಾಲ್‌ಭಾಗ್, ಕೆ.ಎಸ್. ರಾವ್ ರಸ್ತೆ ಮೂಲಕ ನೆಹರೂ ಮೈದಾನ ತಲುಪಲಿದೆ ಎಂದು ನವೀನ್ ಚಂದ್ರ ಸುವರ್ಣ ತಿಳಿಸಿದರು.


ಬೆಳಿಗ್ಗೆ 9 ಗಂಟೆಗೆ ದಾಮೋದರ ಆರ್. ಸುವರ್ಣ ವೇದಿಕೆಯಲ್ಲಿ ಸಾಗರ್ ಗ್ರೂಪ್ ಆಫ್ ಹೋಟೆಲ್ಸ್‌ನ ಛೇರ್‌ಮ್ಯಾನ್ ಜಯರಾಮ್ ಬನಾನ್ ಹಾಗೂ ಪೂಜಾರಿ ಫಿಶ್ ಲ್ಯಾಂಡ್‌ನ ಮಾಲಿಕ ಎಲ್. ಸುಧಾಕರ ಪೂಜಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಮಹಿಳೆಯರಿಗೆ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ, ಪುರುಷರಿಗೆ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸೇರಿದಂತೆ ಮಕ್ಕಳಿಗೂ ಮಹಿಳೆಯರಿಗೂ ವಿವಿಧ ಕ್ರೀಡಾವಳಿಗಳು ನಡೆಯಲಿವೆ ಎಂದು ನವೀನ್ ಚಂದ್ರ ಸುವರ್ಣ ವಿವರಿಸಿದರು.


ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕೇಂದ್ರ ಸಚಿವ ಶ್ರೀಪದ್ ನಾಯಕ್, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಚಿವ ಮಧು ಬಂಗಾರಪ್ಪ, ಸಂಸದರು ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬೃಜೇಶ್ ಚೌಟ ಸೇರಿದಂತೆ ಶಾಸಕರು ಹಾಗೂ ಚಿತ್ರರಂಗ–ಕ್ರೀಡಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಕ್ರೀಡೋತ್ಸವವನ್ನು ಯಶಸ್ವಿಗೊಳಿಸಲು ಸಮಾಜದ ಸರ್ವ ಬಂಧು–ಮಿತ್ರರು ಸಹಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನವೀನ್ ಚಂದ್ರ ಸುವರ್ಣ ಅವರು ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಸಂಚಾಲಕ ಸದಾನಂದ ಪೂಜಾರಿ, ಖಜಾಂಚಿ ಜಯಪ್ರಕಾಶ್, ಮಹಿಳಾ ವಿಭಾಗದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top