ಮಾಘ ಮಾಸ ಶುಕ್ಲ ಪಕ್ಷದ ಪಂಚಮಿಯಂದು ವಿದ್ಯಾರ್ಥಿಗಳಲ್ಲಿ ಜ್ಞಾನ, ಬುದ್ಧಿವಂತಿಕೆ, ಸೃಜನಶೀಲತೆ, ಆಧ್ಯಾತ್ಮಿಕತೆ, ಕಲಿಕೆಗೆ, ಸಂವಹನಕ್ಕೆ, ಸ್ವಯಂಶಿಸ್ತು ಆಚರಣೆಗೆ ಸದಾ ಹರಸುವ ದೇವತೆ ಸರಸ್ವತಿಯ ಜಯಂತಿಯನ್ನು ಈ ಪಂಚಮಿಯಂದು ಆಚರಿಸಲಾಗುತ್ತದೆ. ವಸಂತ ಮಾಸದ ಆಗಮನಕ್ಕೆ ಸ್ವಾಗತವ ಕೋರುವ ವಸಂತ ಪಂಚಮಿ ಎಂದೂ ಹೇಳುತ್ತಾರೆ. ಈ ಹಬ್ಬ, ಪೂಜೆ, ಆಚರಣೆ ಬುಧ ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ್ದು ಎಂದು ಉಲ್ಲೇಖವಿದೆ. ಪ್ರಾತಃಕಾಲ ಪ್ರಶಸ್ತವಂತೆ ಈ ಪಂಚಮಿ ಪೂಜೆಗೆ. ಪಾಣಿಪೀಠದ ಮೇಲೆ ಬಿಳಿಯ ವಸ್ತ್ರವನುಟ್ಟ, ಹಳದಿ ವಸ್ತ್ರ ಆಭರಣ ತೊಟ್ಟ ಸರಸ್ವತಿಯ ಭಾವಚಿತ್ರ ಅಥವಾ ಮೂರ್ತಿಯನ್ನಿಟ್ಟು ವೈವಿಧ್ಯ ಪುಷ್ಪಗಳಿಂದ ಅರ್ಚಿಸಿ, ಧೂಪ ದೀಪ ಬೆಳಗಿ, ಹಣ್ಣು ಸಿಹಿತಿಂಡಿಗಳ ನೈವೇದ್ಯ ಮಾಡಿ ವಿಶೇಷವಾಗಿ ಪ್ರಾರ್ಥಿಸುವರು.
ಸಂಗೀತ ತರಬೇತಿ, ಹೊಸ ವ್ಯವಹಾರ ಪ್ರಾರಂಭಿಸಲು, ವೇದಮಂತ್ರ ಕಲಿಕೆ ಆರಂಭಿಸಲು ಈ ದಿನ ಒಳ್ಳೆಯದಂತೆ.ವಿದ್ಯಾ ಮಾತೆಯ ಆಶೀರ್ವಾದ ಸದಾ ಇದೆಯೆಂಬ ನಂಬಿಕೆ ಭಕ್ತರದ್ದಾಗಿದೆ.ಶ್ವೇತ ಕಮಲದಳದ ಮೇಲೆ ಕುಳಿತ ದೇವಿಗೆ 'ಗಾಯತ್ರಿ ಮಂತ್ರ'ಹೇಳಿ ಆರಾಧಿಸುವುದಿದೆ. ಸಕಲ ಕಷ್ಟಗಳ ನಿವಾರಣೆಗೆ ಗಾಯತ್ರಿ ಮಂತ್ರ ಪಠಣ ಒಳ್ಳೆಯದು.
ಹೊಸ ಹೊಸ ಜ್ಞಾನದ ಅನ್ವೇಷಣೆಗೆ,ಬುದ್ಧಿಯ ಮಟ್ಟದ ವಿಸ್ತಾರಕ್ಕೆ, ಆತ್ಮಬಲಕ್ಕೆ, ಮೃದುವಾದ ಧೋರಣೆಗೆ ಮನಸ್ಸು ಜಾಗ್ರತವಾಗಲು ಈ ಸರಸ್ವತಿ ಆರಾಧನೆ ಸೂಕ್ತವಾದ್ದು.'ಓಂ ಐಂ ಸರಸ್ವತ್ಯೈ ನಮ:'ಪಠಣ ಮಾಡುವುದು ಶ್ರೇಯಸ್ಕರ. ಗಣೇಶ ಪ್ರಾರ್ಥನೆ, ಪೂಜೆ ಆರಂಭದಲ್ಲಿ ಮಾಡಿ, ಪುಸ್ತಕಗಳು, ಸಂಗೀತ ಪರಿಕರಗಳನ್ನಿಟ್ಟು ಆರಾಧಿಸಬಹುದು. ಬಾಹ್ಯ ವಿಕಸನದೊಂದಿಗೆ, ಆಂತರಿಕ ಜ್ಞಾನವೂ ವೃದ್ಧಿಸಲು ಸಹಕಾರಿ. ನಮ್ಮ ಪರಿಸರದ ಮಕ್ಕಳೊಂದಿಗೆ ಆಡಂಬರ ರಹಿತವಾಗಿ ಆಚರಿಸಿ, ಪೂಜೆಯ, ಹಬ್ಬದ ಮಹತ್ವವನ್ನು ತಿಳಿಸೋಣ, ಸರಸ್ವತಿ ಮಾತೆ ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ ಎಂದು ಬೇಡಿಕೊಂಡು ಪಾದಪದ್ಮಗಳಿಗೆ ಶಿರಬಾಗೋಣ.
- ರತ್ನಾ ಕೆ ಭಟ್ಟ, ತಲಂಜೇರಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


