ಶೀರೂರು ಮಠದ ಪರ್ಯಾಯೋತ್ಸವ: ರಾಜಾಂಗಣದಲ್ಲಿ ‘ಆಭಾ’ ನೃತ್ಯ ಕಾರ್ಯಕ್ರಮಕ್ಕೆ ಮೆಚ್ಚುಗೆ

Upayuktha
0


ಉಡುಪಿ: ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ನಡೆಯುತ್ತಿರುವ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಗುರುವಾರ ರಾತ್ರಿ ರಾಮಾಯಣ ಕಥಾವಸ್ತುವನ್ನು ಆಧರಿಸಿದ ‘ಆಭಾ’ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿತು.


ಖ್ಯಾತ ನೃತ್ಯಗುರು ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯೆ ಅವರ ಮಾರ್ಗದರ್ಶನದಲ್ಲಿ ಶ್ರುತಿ ಗೋಪಾಲ್ ಹಾಗೂ ಆದಿತ್ಯ ಪಿ.ವಿ. ಅವರು ಭಾವಾಭಿವ್ಯಕ್ತಿ, ಲಯ ಮತ್ತು ಅಭಿನಯದ ಸಮನ್ವಯದೊಂದಿಗೆ ನೃತ್ಯವನ್ನು ಮನೋಜ್ಞವಾಗಿ ಪ್ರದರ್ಶಿಸಿದರು. ರಾಮಾಯಣದ ವಿವಿಧ ಪ್ರಸಂಗಗಳನ್ನು ನೃತ್ಯದ ಮೂಲಕ ಜೀವಂತವಾಗಿ ಮೂಡಿಸಿ ಪ್ರೇಕ್ಷರನ್ನು ಮಂತ್ರಮುಗ್ಧಗೊಳಿಸಿದರು.


ಹಾಡುಗಾರಿಕೆಯಲ್ಲಿ ರೋಹಿತ್ ಭಟ್ ಉಪ್ಪೂರು, ಮೃದಂಗದಲ್ಲಿ ಹರ್ಷ ಸಾಮಗ ಮಲ್ಪೆ, ವಯೋಲಿನ್‌ನಲ್ಲಿ ಪ್ರಾದೇಶ್ ಆಚಾರ್, ಕೊಳಲಿನಲ್ಲಿ ಮಹೇಶ್ ಸ್ವಾಮಿ, ತಾಳದಲ್ಲಿ ಶೋಭಿತ್ ರಮೇಶ್ ಅವರು ಸಮರ್ಥ ವಾದ್ಯ ಸಹಕಾರ ನೀಡಿದರು. ಸಂಗೀತ ಮತ್ತು ನೃತ್ಯದ ಸಮರ್ಪಕ ಸಂಯೋಜನೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.


ಈ ಸಂದರ್ಭದಲ್ಲಿ ನೃತ್ಯಗುರು ಸುಧೀರ್ ಕೊಡವೂರು ಅವರು ಶ್ರೀಕೃಷ್ಣ ಮಠದ ಪರವಾಗಿ ಎಲ್ಲ ಕಲಾವಿದರನ್ನು ಸ್ವಾಗತಿಸಿ, ಪ್ರೇಕ್ಷಕರಿಗೆ ಪರಿಚಯಿಸಿದರು. ರಾಜಾಂಗಣದಲ್ಲಿ ಜಮಾಯಿಸಿದ್ದ ಭಕ್ತರು ಹಾಗೂ ಕಲಾರಸಿಕರು ಕಾರ್ಯಕ್ರಮವನ್ನು ಮನಸಾರೆ ಆಸ್ವಾದಿಸಿದರು.


Post a Comment

0 Comments
Post a Comment (0)
To Top