ನಿಟ್ಟೆ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Upayuktha
0


ಬೆಂಗಳೂರು: ‘ಪ್ರಾಚೀನ ಭಾರತೀಯರು ಮನುಕುಲದ ಒಳಿತಿಗಾಗಿ ವಿವಿಧಜ್ಞಾನ ಶಾಖೆಗಳಲ್ಲಿ ಗಂಭೀರ ಅಧ್ಯಯನ ಮಾಡಿ ಜಗತ್ತಿನ ಗಮನ ಸೆಳೆದಿದ್ದರು. ವಿಜ್ಞಾನ, ಗಣಿತ ಹಾಗೂ ಅನ್ವಯಿಕ ವೈದ್ಯವಿಜ್ಞಾನ ಇವುಗಳಲ್ಲಿ ಪ್ರಮುಖವಾದವು. ಗಿಡಮೂಲಿಕೆಗಳ ಔಷಧಗಳ ಅನ್ವೇಷಣೆಯ ಮೂಲ ಪ್ರವರ್ತಕರು ಭಾರತೀಯರೇ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಮತ್ತೆ ಗಿಡಮೂಲಿಕೆಗಳ ಔಷಧಗಳು ಮುನ್ನೆಲೆಗೆ ಬರುತ್ತಿವೆ. ಇದಕ್ಕೆ ಕಾರಣ ಇವುಗಳಲ್ಲಿರುವ ಸಹಜ ನೈಸರ್ಗಿಕ ಅಂಶಗಳು, ದೇಹಕ್ಕೆ ಹಾನಿ ಮಾಡದ ಗುಣಾಂಶಗಳು ಹಾಗೂ ಕ್ಷಿಪ್ರಗತಿಯ ಚಿಕಿತ್ಸಕಾ ಸಾಮಥ್ರ್ಯ. ಈಗ ಸುಧಾರಿತ ತಂತ್ರಜ್ಞಾನ ಮತ್ತು ಜೈವಿಕಮಾಹಿತಿ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ಗಿಡಮೂಲಿಕೆಗಳ ಔಷಧಗಳನ್ನು ಸಮರ್ಪಕವಾಗಿ ಜನರ ಆರೋಗ್ಯ ಸುಧಾರಣೆಗಾಗಿ ವ್ಯಾಪಕವಾಗಿ ಬಳಸಲು ಶರವೇಗದಲ್ಲಿ ಅನ್ವೇಷಣೆಗಳು ನಡೆಯುತ್ತಿವೆ. ಹೀಗಾಗಿ ಪ್ರಾಚೀನ ಗಿಡಮೂಲಿಕೆಗಳ ಔಷಧಗಳು ಅತ್ಯಾಧುನಿಕ ಔಷಧ ವಿಜ್ಞಾನದ ವ್ಯಾಪ್ತಿಯಲ್ಲಿ ವಿಶ್ವಾದ್ಯಂತ ಗಣನೀಯ ಸ್ಥಾನ ಗಳಿಸಿವೆ’, ಎಂದು ಫ್ಲೋ‍ಕೆಮ್‌ ಫಾರ್ಮಾ ಪ್ರೈವೇಟ್ ಲಿಮಿಟೆಡ್‍ನ ಅಂಜನ್ ರಾಯ್ ನುಡಿದರು. ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆ ಬೆಂಗಳೂರಿನ ನಿಟ್ಟೆ ಕಾಲೇಜ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್, ರಾಜೀವ್ ಗಾಂಧಿ ಆರೋಗ್ಯವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕರ್ನಾಟಕರಾಜ್ಯ ಫಾರ್ಮೆಸಿ ಕೌನ್ಸಿಲ್‍ಗಳ ಸಹಯೋಗದಲ್ಲಿ ಏರ್ಪಡಿಸಿದ್ದ ‘ಗಿಡಮೂಲಿಕೆಗಳ ಔಷಧಗಳ ಬಗ್ಗೆ ಅರಿವು ಹಾಗೂ ಅವುಗಳನ್ನು ಜನಬಳಕೆಗೆ ಸಜ್ಜುಗೊಳಿಸುವ ಸಂಶೋಧನೆ’, ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


ಮುಂದುವರಿದು ಶ್ರೀಯುತರು, ‘ಭಾರತೀಯರೇ ಗಿಡಮೂಲಿಕೆಗಳ ಔಷಧೀಯ ಗುಣಗಳ ಮೂಲ ಅನ್ವೇಷಕರು ಹಾಗೂ ಪ್ರವರ್ತಕರಾಗಿದ್ದರೂ ಜಾಗತಿಕ ಮಟ್ಟದಲ್ಲಿ ನಾವು ಇನ್ನೂ ನಿರೀಕ್ಷಿತ ಗುಣಮಟ್ಟದ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿಲ್ಲ. ಈಗ ಈ ಗುರುತರ ಹೊಣೆಯನ್ನು ಔಷಧ ವಿಜ್ಞಾನದ ಯುವ ವಿದ್ಯಾರ್ಥಿಗಳು ಹೊರಬೇಕಾಗಿದೆ. ಗಿಡಮೂಲಿಕಾ ಔಷಧಿಗಳನ್ನು ತಮ್ಮ ಆಧುನಿಕ ಸಂಶೋಧನೆಗಳಿಂದ ಪ್ರಮಾಣಬದ್ಧಗೊಳಿಸಬೇಕಿದೆ’, ಎಂದು ಕರೆ ನೀಡಿದರು.


ಪ್ರಸಿದ್ಧ ಔಷಧ ತಯಾರಿಕಾ ಉದ್ಯಮಿ ಡಾ. ಅಮಿತ್ ಅಗರ್ವಾಲ್ ಗೌರವಾನ್ವಿತ ಅತಿಥಿಗಳಾಗಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ – ‘ಪ್ರಾಚೀನ ಭಾರತದ ಜ್ಞಾನವ್ಯವಸ್ಥೆ, ಜಾಣ್ಮೆ, ಪ್ರಾತ್ಯಕ್ಷಿಕೆಗಳು ಹಾಗೂ ವೈಜ್ಞಾನಿಕ ಅರ್ಥೈಸುವಿಕೆಗಳ ಸಮಗ್ರ ಅರಿವನ್ನು ಆಧರಿಸಿರುವಂಥದ್ದು. ಇದಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಈ ಅಪಾರ ಸಂಪತ್ತನ್ನು ಜನರ ಒಳಿತಿಗೆ ಬಳಸಬೇಕಾದ ಜವಾಬ್ದಾರಿ ನಮ್ಮೆಲರ ಮೇಲಿದೆ. ಇದರಿಂದ ನಾವು ‘ಆರೋಗ್ಯ ಭಾರತ’ವನ್ನಷ್ಟೇ ಅಲ್ಲ, ‘ಆರೋಗ್ಯ ಜಗತ್ತ’ನ್ನೂ ನಿರ್ಮಿಸುತ್ತೇವೆ’, ಎಂದು ವಿಶ್ಲೇಷಿಸಿದರು.


ನಿಟ್ಟೆ ಕಾಲೇಜ್ ಆಫ್‌ ಫಾರ್ಮಸಿಟಿಕಲ್ ಸೈನ್ಸಸ್‍ನ ಪ್ರಾಂಶುಪಾಲೆ ಡಾ. ವಿ. ಕುಸುಮ್ ದೇವಿ, ರಾಷ್ಟ್ರೀಯ ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಎನ್.ವಿ.ಎಲ್. ಸಿರಿಷ ಮುಲುಕುರಿ, ದೇಶದ ವಿವಿಧೆಡೆಗಳಿಂದ ಬಂದಿದ್ದ ವಿವಿಧ ಔಷಧ ವಿಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕೈಗಾರಿಕೆಗಳ ಉದ್ಯಮಿಗಳು ಉಪಸ್ಥಿತರಿದ್ದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top