ಅಲೋಶಿಯಸ್ ವಿ.ವಿ.ಯ ʼಸಿರಿಗನ್ನಡ ಮತ್ತು ಸಿಲಿಕಾನ್ ಮಿದುಳುʼ ಕಾರ್ಯಕ್ರಮ
ಮಂಗಳೂರು: ಆಧುನಿಕ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ (AI) ಮತ್ತು ಭಾಷಾ ವಿಶ್ಲೇಷಣಾ ತಂತ್ರಗಳನ್ನು ಬಳಸಿಕೊಂಡು ಕನ್ನಡ ಸಂಶೋಧನೆಯನ್ನು ಹೊಸ ದಿಕ್ಕಿಗೆ ಕೊಂಡೊಯ್ಯಬಹುದು. ಒಬ್ಬ ಲೇಖಕನ ಬರವಣಿಗೆಯ ವಿಶಿಷ್ಟ ಶೈಲಿಯನ್ನು ಗುರುತಿಸುವ ಮೂಲಕ, ಹೆಸರಿಲ್ಲದ ಯಾವುದೋ ಒಂದು ಲೇಖನವು ಅದೇ ಲೇಖಕನದ್ದೇ ಅಥವಾ ಅಲ್ಲವೇ ಎಂಬುದನ್ನು ಕಂಪ್ಯೂಟರ್ ಪ್ರೋಗ್ರಾಂ ಮೂಲಕ ನಿಖರವಾಗಿ ಪತ್ತೆಹಚ್ಚಬಹುದು. ಹಾಗೆಯೇ ಒಂದು ಲೇಖನವನ್ನು ಮತ್ತೊಂದು ಲೇಖನದಿಂದ ನಕಲು ಮಾಡಲಾಗಿದೆಯೇ ಎಂಬುದನ್ನು ಪತ್ತೆಹಚ್ಚುವುದು, ಮೂಲ ಲೇಖನ ಮತ್ತು ಸಂಶಯಾಸ್ಪದ ಲೇಖನಗಳನ್ನು ಪ್ರೋಗ್ರಾಂ ಮೂಲಕ ತುಲನೆ ಮಾಡಿ, ಅವುಗಳ ನಡುವಿನ ಸಾಮ್ಯತೆಯನ್ನು ಪತ್ತೆಹಚ್ಚುವುದು ಕೂಡ ಸಾಧ್ಯ ಎಂದು ಬೆಂಗಳೂರು ವಿಶ್ವಕನ್ನಡ ಫೌಂಡೇಶನ್ ನಿರ್ದೇಶಕರು, ಕರಾವಳಿ ವಿಕಿಮೀಡಿಯನ್ಸ್ ಕಾರ್ಯದರ್ಶಿ ಡಾ ಯು ಬಿ ಪವನಜ ಹೇಳಿದ್ದಾರೆ.
ಅವರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ವಿ.ವಿ.ಯ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ , ಕನ್ನಡ ವಿಭಾಗ , ಕರಾವಳಿ ವಿಕಿಮೀಡಿಯನ್ಸ್ (ರಿ) , ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (9/1/2025) ನಡೆದ ʼಸಿರಿಗನ್ನಡ ಮತ್ತು ಸಿಲಿಕಾನ್ ಮಿದುಳುʼ ಕನ್ನಡ ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆಯ ಹೊಸ ಆಯಾಮಗಳನ್ನು ಪರಿಚಯಿಸುವ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ (AI) ಮತ್ತು ಭಾಷಾ ವಿಶ್ಲೇಷಣಾ ತಂತ್ರಗಳನ್ನು ಬಳಸಿಕೊಂಡು ಕಂಪ್ಯೂಟರ್‌ಗೆ ಭಾಷೆಯನ್ನು ಅರ್ಥಮಾಡಿಸುವುದು ಮತ್ತು ಪದಗಳ ಬಳಕೆಯನ್ನು ಗುರುತಿಸುವುದು ಹೇಗೆ ಎಂಬ ಮೂಲಭೂತ ವಿಷಯಗಳನ್ನು ಸಂಶೋಧಾನಾರ್ಥಿಗಳು ಮತ್ತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ನಿವೃತ್ತ ಪ್ರಾಧ್ಯಾಪಕರು ಹಾಗೂ ಕರಾವಳಿ ವಿಕಿಮೀಡಿಯನ್ಸ್‌ನ ಅಧ್ಯಕ್ಷರಾದ ಡಾ. ವಿಶ್ವನಾಥ ಬದಿಕಾನ ಅಧ್ಯಕ್ಷತೆ ವಹಿಸಿದ್ದರು. ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನದ ಡೀನ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರು ಡಾ.ಮಹಾಲಿಂಗ ಭಟ್, ಪ್ರಾಧ್ಯಾಪಕರು ಮತ್ತು ಕನ್ನಡ ಸಂಘದ ಮೇಲ್ವೀಚಾರಕರಾದ ವಿನಯದುರ್ಗಾ, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ದಿನೇಶ್ ನಾಯಕ್ ಉಪಸ್ಥಿತರಿದ್ದರು.
ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತಿ ಬಿ. ಸ್ವಾಗತಿಸಿದರು. ಬಿ.ಎಸ್ಸಿ ವಿದ್ಯಾರ್ಥಿನಿ ಕು. ವಚನ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


