ಪುರಂದರ ದಾಸರು, ಕರ್ನಾಟಕದ ಭಕ್ತಿ ಪರಂಪರೆ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಒಂದು ದೊಡ್ಡ ಹೆಸರು ಅಂದರೆ ತಪ್ಪಾಗಲಾರದು. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಂದು ಹೊಸ ರೂಪ ಕೊಟ್ಟು, ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಸಂಗೀತವನ್ನು ಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಇವರದು. ಅದಕ್ಕೆ ಇವರನ್ನು ʼಕರ್ನಾಟಕ ಶಾಸ್ತ್ರೀಯ ಸಂಗೀತʼದ ಪಿತಾಮಹ ಎಂದು ಕರೆಯುತ್ತಾರೆ. ಇವರು ಕವಿಗಳು, ಸಂಗೀತಗಾರರು, ತತ್ವಜ್ಞಾನಿಗಳು ಮತ್ತು ದಾಸ ಪರಂಪರೆಯ ಅನುಸರಿಸಿದ ಪ್ರಮುಖರಲ್ಲಿ ಒಬ್ಬರು. ನವಕೋಟಿ ನಾರಾಯಣ, ಶ್ರೀನಿವಾಸ ನಾಯಕ ಎಂಬುದು ಇವರ ಮೂಲ ಹೆಸರು. ಇವರ ಕೀರ್ತನೆಗಳು ಮತ್ತು ದೇವರನಾಮಗಳು ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಕನ್ನಡದಲ್ಲಿವೆ. ಶ್ರೀಕೃಷ್ಣನ ಪರಮಭಕ್ತರು, ಅದಕ್ಕೆ ಅವರ ಕಾವ್ಯನಾಮವು ಸಹ ಶ್ರೀಕೃಷ್ಣನ ಹೆಸರು “ಪುರಂದರ ವಿಠಲ” ನೆಂದು.
ಇವರ ಮೂಲ ಹೆಸರು ಶ್ರೀನಿವಾಸ ನಾಯಕ, ಜನ್ಮಸ್ಥಳ ಕ್ಷೇಮಪುರ, ತೀರ್ಥಹಳ್ಳಿ ಹತ್ತಿರ, ಶಿವಮೊಗ್ಗ ಜಿಲ್ಲೆ, ಕರ್ನಾಟಕ. ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಶ್ರೀನಿವಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯನ್ನು ನಡೆಸುತ್ತಿದ್ದರು. ದಂಪತಿಗಳಿಗೆ ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಮೊರೆಹೊದರು. ಅದರ ಫಲವಾಗಿ ಕ್ರಿ.ಶ 1484, ಗಂಡು ಮಗುವೊಂದು ಜನಿಸಿತು ಎಂಬ ಮಾತಿದೆ. ಶ್ರೀನಿವಾಸನ ದೇವರ ಆಶೀರ್ವಾದದಿಂದ ಜನಿಸಿದ ಕಾರಣ ಮಗುವಿಗೆ ಶ್ರೀನಿವಾಸ ನಾಯಕನೆಂದು ನಾಮಕರಣ ಮಾಡಿದರೆಂಬ ಮಾತಿದೆ.
ಶ್ರೀನಿವಾಸ ಬೆಳೆದಂತೆ, ಒಳ್ಳೆಯ ಶಿಕ್ಷಣವನ್ನು ಪಡೆದನು ಮತ್ತು ಅವನು ಕನ್ನಡ, ಸಂಸ್ಕೃತ ಮತ್ತು ಸಂಗೀತದಲ್ಲಿ ಬಹಳ ಪ್ರವೀಣನಾಗಿದ್ದನು. ತನ್ನ ತಂದೆಯ ಲೇವಾದೇವಿ ವೃತ್ತಿಯನ್ನು ಇವನು ಮುಂದುವರೆಸಿಕೊಂಡು ಹೋದನು. ಶ್ರೀನಿವಾಸ ನಾಯಕ ಅತ್ಯಂತ ಜಿಪುಣನಾಗಿದ್ದನು. ಹಸಿದವರಿಗೆ ಒಂದು ತುತ್ತು ಅನ್ನವಾಗಲಿ, ಬೇಡಿ ಬಂದವರಿಗೆ ಒಂದು ಬಿಡಿಗಾಸಾಗಲಿ ನೀಡುತ್ತಿರಲ್ಲಿ. ಸಾಲ ಬೇಕಾದರೆ ಏನಾದರ ಅಡಮಾನವಾಗಿ ನೀಡಬೇಕಿತ್ತು. ಇಲ್ಲದಿದ್ದರೆ, ಸಾಲ ಸಿಗುತ್ತಿರಲಿಲ್ಲ. ತಂದೆ ಅನಾರೋಗ್ಯ ಪೀಡಿತರಾದಾಗಲ್ಲು ಹಣ ನೀಡಲು ಹಿಂದೆಮುಂದೆ ನೋಡುತ್ತಿದ್ದನಂತೆ. ಆದರೆ, ಶ್ರೀನಿವಾಸ ನಾಯಕ ಪತ್ನಿ ಸರಸ್ವತೀಬಾಯಿ ಸಾದ್ವಿಯು, ಮಹಾನ್ ದೈವ,ಭಕ್ತಳಾಗಿದ್ದಳು ಹಾಗೂ ಬಡವರ ಬಗ್ಗೆ ಅನುಕಂಪ ಮತ್ತು ದಾನಧರ್ಮಮಾಡುದುವರಲ್ಲಿ ಮುಂದಿದ್ದಳು. ಇದು ಗಂಡನಿಗೆ ತಿಳಿದಾಗ, ಅವನ ಕೋಪಕ್ಕೆ ಬಲಿಯಾಗಿ ಕಷ್ಟಗಳನ್ನು ಅನುಭವಿಸಿದ್ದು ಇದೆ.
ಅತ್ಯಂತ ಜಿಪುಣಾಗ್ರೇಸನಾದ, ಶ್ರೀನಿವಾಸ ನಾಯಕನಿಗೆ, ಅವನ ಜೀವನದಲ್ಲಿ ನಡೆದ ಒಂದು ಘಟನೆಯು ಕಣ್ಣನ್ನು ತೆರೆಸಿ, ಎಲ್ಲವನ್ನು ದಾನಕೊಟ್ಟು ದಾಸನನ್ನಾಗಿಸಿತು.
ಒಮ್ಮೆ ವಿಠ್ಠಲನ್ನು ಶ್ರೀನಿವಾಸ ನಾಯಕನ್ನು ಪರೀಕ್ಷಿಸುವಸಲುವಾಗಿ, ಬಡ ಬ್ರಾಹ್ಮಣನ ವೇಷ ಧರಿಸಿ, ಇವನಲ್ಲಿಗೆ ಬಂದನು. ಶ್ರೀನಿವಾಸನ ಅಂಗಡಿಗೆ ಬಂದು, ತನ್ನೆಲ್ಲ ಕಷ್ಟಗಳನ್ನು ಎಳೆ ಎಳೆಯಾಗಿ ಹೇಳಿಕೊಂಡು, ಮಗನ ಉಪನಯನಕ್ಕೆ ಹಣದ ಬೇಡಿಕೆಯಿಟ್ಟನು. ಆದರೆ, ಅಡಮಾನವಿಡಲು ಬ್ರಾಹ್ಮಣನ ಬಳಿ ಏನು ಇಲ್ಲದ ಕಾರಣ, ಹಿಂದೆಮುಂದೆ ನೊಡಿದ ಶ್ರೀನಿವಾಸ ನಾಯಕ, ನಿರಾಕರಿಸದೆ, ನಾಳೆ ಬಾ ಎಂದನಂತೆ. ಆ ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನವು ಬ್ರಾಹ್ಮಣನಿಗೆ ಬರುವಂತೆ ಹೇಳುತ್ತಿದ್ದನು. ಒಂದಷ್ಟು ದಿನಗಳು ಕಳೆದಂತೆ ನಂತರ, ಬ್ರಾಹ್ಮಣನಿಗೆ ಉಪಯೋಗಕ್ಕೆ ಬಾರದ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಆ ಬ್ರಾಹ್ಮಣ ವೇಷಧಾರಿ ಶ್ರೀನಿವಾಸನ ಮನೆಗೆ ತೆರಳಿ, ಅವನ ಹೆಂಡತಿ ಸರಸ್ವತಿಯ ಬಳಿ ಬಂದು ತನ್ನ ಮಗನ ಉಪನಯನದ ಬಗ್ಗೆ ಹೇಳಿ ಮತ್ತು ತನ್ನೆಲ್ಲ ಕಷ್ಟಗಳನ್ನು ತಿಳಿಸಿ ಅವಳಿಂದ ಸಹಾಯ ಯಾಚಿಸುತ್ತಾನೆ. ಅವನ ಕಷ್ಟಗಳನ್ನು ಕೇಳಿ, ಸರಸ್ವತಿಯ ಮಾನವು ಕರಗಿ, ಕಣ್ಣಂಚಲಿ ಬಂದ ನೀರನ್ನು ಸೆರಗಿನಲ್ಲಿ ಒರೆಸಿಕೊಂಡು, ತನ್ನ ನಿಸ್ಸಾಹಯಕ ಸ್ಥಿತಿಯ ಬಗ್ಗೆ ತನ್ನನ್ನು ತಾನೆ ಶಪಿಸಿಕೊಳ್ಳುತ್ತಾಳೆ. ತನ್ನ ಪರಿಸ್ಥತಿಯು ಇದಕ್ಕೆ ಹೊರತಾಗಿಲ್ಲ. ತನ್ನ ಪತಿರಾಯ ಎಲ್ಲ ಧನಕನಕಗಳನ್ನು, ಹಣವನ್ನು, ಭದ್ರಪಡಿಸಿಕೊಂಡಿದ್ದನು. ಯಾರನ್ನು ನಂಬುತ್ತಿರಲಿಲ್ಲ, ಕೀಲಿಗಳನ್ನು ತನ್ನ ಬಳಿಯೆ ಇಟ್ಟಿಕೊಳ್ಳುತ್ತದ್ದನು. ತನ್ನ ಈ ದೈನ್ಯ ಸ್ಥಿತಿಯನ್ನು ಅವನ ಬಳಿ ಹೇಳಿಕೊಳ್ಳಲಾಗದೆ, ಮರುಗಿದಳು. ಅವಳು ಹೀಗೆಂದಳು, ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ನಾನಿಲ್ಲವೆಂದು ಬೇಸರ ವ್ಯಕ್ತಪಡಿಸುತ್ತಾಳೆ.
ಇವಳ ಈ ದಯನೀಯ ಸ್ಥಿತಿಯನ್ನು ಕಂಡು, ಮರುಗದ ಬ್ರಾಹ್ಮಣ ವೇಷಧಾರಿ ಮನೆಯ ಮೂಲೆ ಮೂಲೆಯನ್ನು ನೊಡಿ, ತಾಯಿ ಹೊಟ್ಟೆ ಹಸಿಯುತ್ತಿದೆ, ಒಂದು ತುತ್ತು ಅನ್ನವನ್ನಾದರು ನೀಡೆಂದು ಅರಿಕೆ ಮಾಡಿಕೊಳ್ಳುತ್ತಾನೆ. ಸರಸ್ವತಿಯು, ತನ್ನ ಪಾಲಿನ ಊಟವನ್ನು ಅವನಿಗೆ ಬಡಿಸುತ್ತಾಳೆ. ಯಾಕಂದರೆ, ಶ್ರೀನಿವಾಸನ ನಾಯಕನು ಊಟವನ್ನು ಲೆಕ್ಕ ಇಟ್ಟಿರುತ್ತಿದ್ದನು. ಊಟವಾದ ಮೇಲೆ, ಬ್ರಾಹ್ಮಣ ವೇಷಧಾರಿಯು, ಅವಳ ಮೂಗುತಿಯನ್ನು ನೊಡುತ್ತಾನೆ. ತಾಯಿ, ತಪ್ಪು ತಿಳಿಯಬೇಡ, ನಿನ್ನ ಬಳಿ ನನಗೆ ನೀಡಲು ನಿನ್ನ ಗಂಡನ ಮನೆಯ ಯಾವುದೇ ವಸ್ತು ಇಲ್ಲದಿದ್ದರು, ನಿನ್ನ ತವರು ಮನೆಯಿಂದ ಬಂದ, ನಿನ್ನ ಒಡವೆ ಕೊಡು ಎಂದ. ಅದು ಸಹ ತನ್ನ ಪತಿಯ ಬಳಿಯಿದೆ ಎಂದು ಅಂದಳು. ತಾಯಿ ನಿನ್ನ ಮೂಗುತಿ ಇದೆಯಲ್ಲ ಅದನ್ನೆ ಕೊಡು ಎಂದಾಗ, ಅಳುಕಿದ್ದರು, ಇಲ್ಲ ಎನ್ನಲಾಗದೆ, ಮೂಗುತಿಯನ್ನು ಬಿಚ್ಚಿಕೊಡುತ್ತಾಳೆ. ಬ್ರಾಹ್ಮಣ ವೇಷಧಾರಿಯು ಖುಷಿಯಿಂದ ಅದನ್ನು ತೆಗದುಕೊಂಡು ಶ್ರೀನಿವಾಸ ನಾಯಕನ ಅಂಗಡಿಯ ಬಳಿ ಬಂದು ದರ್ಪದಿಂದ ತೆಗೆದಿಕೊ ಚಿನ್ನದ ಮೂಗುತಿ, ಈಗಲಾದರು ಹಣ ಕೊಡುವೆಯಾ ಅಂದ. ಶ್ರೀನಿವಾಸ ನಾಯಕನು, ಮೊದಲು ಅನುಮಾನ ವ್ಯಕ್ತ ಪಡಿಸಿ, ಮೂಗುತಿಯನ್ನು ಕಳ್ಳ ಮಾಲಿರಬಹುದೆಂದು ಪರೀಕ್ಷಿಸಿದ. ಆ ಮೂಗುತಿಯನ್ನು ಎಲ್ಲೊ ನೋಡಿದ ಹಾಗನಿಸಿ ಮತ್ತೆ ನೊಡಿದಾಗ, ಅದು ತನ್ನ ಹೆಂಡತಿಯದೆಂದು ಗುರುತಿಸಿದ. ಅದನ್ನು ಸಾಭೀತು ಪಡಿಸಿ, ಇವನ್ನು ಸೈನಿಕರಿಗೆ ಒಪ್ಪಿಸ ಬೇಕೆಂದು ಮನಸ್ಸಿನಲ್ಲೆ ಲೆಕ್ಕ ಹಾಕಿದ. ಆಗ ಶ್ರೀನಿವಾಸ ನಾಯಕನು, ಬ್ರಾಹ್ಮಣನಿಗೆ ಅಭ್ಯಂತರವಿಲ್ಲದಿದ್ದರೆ, ನಾಳೆ ಬಂದು ವ್ಯವಹಾರ ಮುಗಿಸಿ, ಹಣ ಕೊಡುವುದಾಗಿ ಹೇಳಿದ. ಆಗಲಿ, ನಿನ್ನ ಮೇಲೆ ನನಗೆ ನಂಬಿಕೆ ಇದೆ, ಮೂಗುತಿ ನಿನ್ನ ಬಳಿಯೇ ಇರಲಿ, ನಾನು ನಾಳೆ ಬರುತ್ತೇನೆ ಎಂದು ಹೇಳಿ ಆ ಬ್ರಾಹ್ಮಣ ವೇಷಧಾರಿಯು ಹೊರಟು ಹೋದ. ತಕ್ಷಣವೇ ಅಂಗಡಿಯ ಬಾಗಿಲನ್ನು ಭದ್ರಪಡಿಸಿ, ಮನೆಗೆ ತೆರಳಿದ. ಮನೆಗೆ ಬಂದವನೆ, ತನ್ನ ಹೆಂಡತಿಯನ್ನು ಎತ್ತರದ ದನಿಯಲ್ಲಿ ಕರೆದ. ಅವಳ ಮುಖವನ್ನು ನೊಡಿದಾಗ, ಮೂಗುತಿ ಕಾಣುತ್ತಿಲ್ಲ. ಕುಪಿತಗೊಂಡ ಶ್ರೀನಿವಾಸ, ಹೆಂಡತಿಯ ಬಳಿ ಮೂಗುತಿಯ ವಿಷಯ ಕೇಳಿದಾಗ, ಅವಳು ಭಯದಿಂದ ನಡಗುತ್ತ, ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋದಳು. ಏನು ಮಾಡುವುದು, ತನ್ನ ಗಂಡನ ಹಠ ಮತ್ತು ಜಿಪುಣ ಸ್ವಭಾವ ಅರಿತಿದ್ದ ಅವಳು ಮುಂದಾಗುವ ಅನಾಹುತವನ್ನು ಮನಗಂಡು, ಭಯಭೀತಳಾಗಿ, ದೇವರ ಕೊಣೆಯಲ್ಲಿ, ತನ್ನ ವಜ್ರದ ಉಂಗುರವನ್ನು ಹಾಲಿನಲ್ಲಿ ಹಾಕಿ, ಸೇವಿಸಿ, ಪ್ರಾಣಬಿಡಲು ಪ್ರಯತ್ನಿಸುತ್ತಾಳೆ, ಆಗ ಹಾಲಿನಲ್ಲಿ ಏನೋ ಬಿದ್ದ ಶಬ್ಧವಾದ ಹಾಗೆ ಅನ್ನಿಸಿ ನೋಡಿದಾಗ, ಅದು ತನ್ನ ಮೂಗುತಿ. ತಾನು ನಂಬಿದ ದೈವ ತನ್ನ ಕಾಪಾಡಿತು ಎಂದು, ಸಂತಸಗೊಂಡು, ಗಂಡನ ಬಳಿ ಬಂದು, ಅವನ ಮುಂದೆ ಹಿಡಿಯುತ್ತಾಳೆ. ಅವನಿಗೆ ಆಶ್ಚರ್ಯವಾಗಿ, ಆ ಮೂಗುತಿಯನ್ನು ತೆಗೆದುಕೊಂಡು, ಮತ್ತೆ ಅಂಗಡಿಗೆ ಹೋಗಿ, ಪೆಟ್ಟಿಗೆಯಲ್ಲಿ ನೋಡಲು ಆಶ್ಚರ್ಯ, ತಾನು ಇಟ್ಟಿದ್ದ ಮೂಗುತಿ ಅಲ್ಲಿ ಇರಲಿಲ್ಲ. ಹಾಕಿದ ಬೀಗ ಹಾಕಿದ ಹಾಗೆ ಇದೆ, ಅದರೆ ಮೂಗುತಿ ಇಲ್ಲ. ಶ್ರೀನಿವಾಸ ಚಿಂತೆಗೀಡಾಗುತ್ತಾನೆ ಬ್ರಾಹ್ಮಣನಿಗೆ ಏನು ಹೇಳ ಬೇಕೆಂದು ತೋಚದೆ.
ಮಾರನೆಯ ದಿನ ಬ್ರಾಹ್ಮಣ ಬರುತ್ತಾನೆ, ತನಗೆ ಹಣ ಸಿಕ್ಕಿದೆ, ಮೂಗುತಿಯನ್ನು ಹಿಂದಿರುಗಿಸು ಎಂದಾಗ, ತಡವರಿಸುತ್ತಾ, ಅದು ಮೂಗುತಿ ಎಲ್ಲೊ ಕಣುತ್ತಿಲ್ಲ, ಬದಲಾಗಿ ಹಣವನ್ನು ಕೊಡುತ್ತೇನೆ ಅಂದಾಗ, ಒಪ್ಪದ ಬ್ರಾಹ್ಮಣ, ಇಲ್ಲ ನನಗೆ, ಮೂಗುತಿಯೇ ಬೇಕು ಎಂದು ಹಠ ಹಿಡಿಯುತ್ತಾನೆ. ಇಲ್ಲದ ಮೂಗುತಿಯನ್ನು ಎಲ್ಲಿಂದ ತರಲಿ ಎಂದಾಗ, ಬ್ರಾಹ್ಮಣ ಮತ್ತೋಮ್ಮೆ ಸರಿಯಾಗಿ ನೋಡು ಎನ್ನುತ್ತಾನೆ. ಆಗ, ಶ್ರೀನಿವಾಸ ಪೆಟ್ಟಿಗೆಯನ್ನು ತೆಗೆದು ನೊಡಿದರೆ, ಅವನ ಕಣ್ಣು ಅವನೆ ನಂಬದಾದನು. ಮೂಗುತಿಯು ಅಲ್ಲೇ ಇದೆ. ಸರಿ ತೆಗೆದುಕೋ ನಿನ್ನ ಮೂಗುತಿ ಎಂದು ಶ್ರೀನಿವಾಸ ಬ್ರಾಹ್ಮಣನ ಕಡೆ ತಿರುಗಿದಾಗ, ಮತ್ತೊಂದು ಆಶ್ಚರ್ಯ, ಆ ಬ್ರಾಹ್ಮಣ ವೇಷಧಾರಿಯು ಅಲ್ಲಿ ಇರಲಿಲ್ಲ. ಅತ್ತ ಇತ್ತ ಹುಡುಕುತ್ತಾನೆ, ಅವನ ಸುಳಿವೇ ಇಲ್ಲ. ಮನೆಗೆ ಬಂದು, ಸರಸ್ವತಿಯ ಮುಂದೆ ಹೇಳಿದಾಗ ಆಗ ಅವರಿಬ್ಬರಿಗೆ ಅನ್ನಿಸಿದ್ದು ಬಂದದ್ದು ಬೇರೆ ಯಾರು ಅಲ್ಲ ತಾವು ನಿತ್ಯವು ಪೂಜಿಸುವ, ತನ್ನನ್ನು ಪರೀಕ್ಷಿಸಲು ಬಂದ ನಾರಾಯಣನೇ ಎಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ. ಮನದಲ್ಲಿ ವೈರಾಗ್ಯ ಭಾವಮೂಡಿ, ತನ್ನ ಶ್ರೀಮಂತಿಕೆಯ ಬಗ್ಗೆ ಬೇಸರವೆನಿಸಿತು. ತನ್ನ ಶ್ರೀಮಂತಿಕೆಯನ್ನು ದೀನ ದಲಿತರಿಗೆ ನೀಡಿ, ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ.
ತನ್ನೆಲ್ಲ ಸಿರಿತನವನ್ನು ದಾನ ಮಾಡಿದಿ ಮೇಲೆ ಶ್ರೀನಿವಾಸ ನಾಯಕನು, ತಂಬೂರಿಯನ್ನು ಪಿಡಿದು, ತಾವೇ ರಚಿಸಿ ಸಂಯೋಜನೆ ಮಾಡಿದ ಪದಗಳನ್ನು ಹಾಡುತ್ತಾ, ಭಿಕ್ಷಾಟನೆಯನ್ನು ಮಾಡುವುದು ಅವರ ದಿನಚರಿಯಾಯಿತು. ದೇವರನ್ನು ಕಾಣಲು ಕಾರಣಳಾದ ತನ್ನ ಹೆಂಡತಿಗೆ ಕೃತಜ್ಞತೆಯನ್ನು ಹೇಳಿ, ಅದರ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಸಹ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ ‘ಪುರಂದರದಾಸ’ ನಾಗುತ್ತಾನೆ. ದಾಸರು ಸ್ವಸ್ಥಳವನ್ನು ಬಿಟ್ಟು ತಮ್ಮ ಹೆಂಡತಿ ಮಕ್ಕಳೊಂದಿಗೆ ವಿಜಯನಗರಕ್ಕೆ ಬಂದಾಗ ಅವರಿಗೆ ಮಧ್ಯವಯಸ್ಸು. ವಿಜಯನಗರದ ಯತಿವರ್ಯರಾದ ವ್ಯಾಸರಾಯರು ಪುರಂದರರ ಅಸಾಧಾರಣ ವ್ಯಕ್ತಿತ್ವವನ್ನು ಗುರುತಿಸಿ ದೀಕ್ಷೆ ಮತ್ತು ಅಂಕಿತವನ್ನು ಕರುಣಿಸಿದರು. ಆದದ್ದೆಲ್ಲಾ ಒಳಿತೇ ಆಯಿತು ಎಂಬ ಕೀರ್ತನೆಯಲ್ಲಿ ತಮ್ಮ ಆಶ್ಚರ್ಯಕರ ತಿರುವಿಗೆ ಕಾರಣಳಾದ ಪತ್ನಿಯ ಬಗ್ಗೆ ದಾಸರು ತಮ್ಮ ಗೌರವಾದರಗಳನ್ನು ತುಂಬು ಹೃದಯದಿಂದ ವ್ಯಕ್ತಪಡಿಸಿದ್ದಾರೆ.
ಪುರಂದರದಾಸರ ಕೀರ್ತನೆಗಳಲ್ಲಿ ತಿರುಪತಿ, ಶ್ರೀರಂಗ, ಕಳಸ, ಬೇಲೂರು, ನಂಜನಗೂಡು, ಶ್ರೀರಂಗಪಟ್ಟಣ, ಉಡುಪಿ, ಪಂಡರಾಪುರ ಕ್ಷೇತ್ರಗಳನ್ನು ತಾವು ಸಂದರ್ಶಿಸಿದ ಬಗ್ಗೆ ಪ್ರಸ್ತಾಪ ಬರುವುದರಿಂದ ಹರಿದಾಸ ದೀಕ್ಷೆಯನ್ನು ಪಡೆದನಂತರ ಸಂಪ್ರದಾಯದಂತೆ ಪುರಂದರದಾಸರು ದಕ್ಷಿಣ ಭಾರತದಾದ್ಯಂತ ಪ್ರವಾಸ ಮಾಡಿ ಲೋಕ ಜೀವನವನ್ನೂ, ಧರ್ಮ ಸಂಸ್ಕೃತಿಗಳನ್ನೂ ಸೂಕ್ಷ್ಮವಾಗಿ ಅಭ್ಯಾಸ ಮಾಡಿರಬೇಕೆಂದು ಸ್ಪಷ್ಟವಾಗುವುದು.
ಭಕ್ತಿಯ ನಿರ್ಭರತೆ, ವಯಸ್ಸಿನ ಪಕ್ವತೆ, ಅನುಭವದ ಹಿರಿತನ ದಾಸರ ಕೃತಿಗಳಿಗೆ ಒಂದು ಅಪೂರ್ವವಾದ ಗಾಂಭೀರ್ಯವನ್ನೂ, ನಿಲುವನ್ನೂ, ತನ್ಮಯತೆಯನ್ನೂ ಒದಗಿಸುವುದು ಸಾಧ್ಯವಾಯಿತು. ವ್ಯಾಸರಾಯರಂಥ ಹಿರಿಯರ ಮಾರ್ಗದರ್ಶನ, ಕನಕದಾಸ, ವಾದಿರಾಜ, ಕುಮಾರವ್ಯಾಸರಂಥ ಮಹಾವ್ಯಕ್ತಿಗಳ ಸಹವಾಸ, ಸದ್ಗೃಹಿಣಿಯ ಸಹಕಾರಗಳ ಫಲವಾಗಿ ಪುರಂದರದಾಸರ ಬದುಕು ಹಿರಿದಾಗುತ್ತಾ ಬಂತು. ಮುಂದೆ ಅವರ ಗಂಡು ಮಕ್ಕಳೂ ದಾಸದೀಕ್ಷೆ ಪಡೆದರಂತೆ.
ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ ‘ಪಿಳ್ಳಾರಿ ಗೀತೆಗಳು’ (ಉದಾ: ಲಂಬೋದರ ಲಕುಮಿಕರ…., ಕೆರೆಯ ನೀರನು ಕೆರೆಗೆ ಚೆಲ್ಲಿ…..ಇತ್ಯಾದಿ) ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ “ಪ್ರಹ್ಲಾದ ಭಕ್ತಿ ವಿಜಯಮ್” ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ.
ಶ್ರೀಯುತರು ಸುಮಾರು 5 ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು 4,75,000 ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ 25,000 ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ. ಪುರಂದರದಾಸರ ಪ್ರಸನ್ನ ವಾಣಿ ದಾಸ ಸಾಹಿತ್ಯಕ್ಕೆ ಅಮರತ್ವವನ್ನೂ ವೈವಿಧ್ಯವನ್ನೂ, ವೈಶಿಷ್ಟ್ಯವನ್ನೂ, ವೈಶಾಲ್ಯವನ್ನೂ ದೊರಕಿಸಿಕೊಟ್ಟಿತು. ಹಿರಿಯರಾದ ಶ್ರೀಪಾದರಾಯರು ಮತ್ತು ಶ್ರೀವ್ಯಾಸರಾಯರ ದಾರಿಯಲ್ಲೇ ಮುಂದುವರಿದು ಆತ್ಮಾನುಭವವನ್ನೂ, ಭಕ್ತಿವೈಭವವನ್ನೂ ವಿಶದಪಡಿಸಿದರಲ್ಲದೆ, ಜನ ಜೀವನದ ವಿವಿಧ ಮುಖಗಳನ್ನೂ ಪರಿಚಯಮಾಡಿಕೊಡುವ ಪುರಂದರದಾಸರ ಲೋಕಾನುಭವ ತುಂಬಾ ಅಸದೃಶವಾದದ್ದು. ಪುರಂದರದಾಸರ ರಚನೆಗಳಲ್ಲಿ ಸಂಗೀತದ ಮಾಧುರ್ಯವೂ, ಸಾಹಿತ್ಯದ ಸ್ವಾರಸ್ಯವೂ, ಧರ್ಮದ ಸಂದೇಶವೂ ಸರಿಸಮನಾಗಿ ಬೆರೆತು ಎಲ್ಲರಿಗೂ ಪ್ರಿಯವಾದುವು. ಹರಿದಾಸ ಸಾಹಿತ್ಯದ ಹೊನಲು ತುಂಬಿ ತುಳುಕಿ ಸುತ್ತಲೂ ಮೆರೆಯತೊಡಗಿತು.
ಪುರಂದರದಾಸರ ಭಕ್ತಿಗೀತೆಗಳಲ್ಲಿ ಭಾವಗೀತೆಯ ತೀವ್ರತೆಯೂ ವಿಚಾರಗೀತೆಗಳಲ್ಲಿ ವೈಚಾರಿಕತೆಯ ತೀಕ್ಷಣತೆಯೂ ಕಂಡುಬಂದವು. ಇದು ಅವರ ಬದುಕಿನಲ್ಲಿ ವಿರೋಧಾಭಾಸವೆನಿಸಲಿಲ್ಲ. ಏಕೆಂದರೆ ಜಿ.ಎಸ್. ಶಿವರುದ್ರಪ್ಪನವರು ಹೇಳುವಂತೆ ಪುರಂದರದಾಸರಂಥ ದಾಸರ ವ್ಯಕ್ತಿತ್ವಕ್ಕೆ ಎರಡು ರೇಖೆಯಿದೆ. “ಒಂದು ತಮಗೂ ತಮ್ಮ ಭಗವಂತನಿಗೂ ಇರುವ ಸಂಬಂಧ. ಇನ್ನೊಂದು ತಮಗೂ ತಮ್ಮ ಸುತ್ತಣಲೋಕಕ್ಕೂ ಇರುವ ಸಂಬಂಧ. ಈ ಎರಡು ಸಂಬಂಧಗಳೂ ಹೊರಡುವ ಒಂದು ಬಿಂದುವಿನಲ್ಲಿದೆ ಇವರ ವ್ಯಕ್ತಿತ್ವ. ತಮ್ಮ ಮತ್ತು ಭಗವಂತನ ಸಂಬಂಧ ಕುರಿತ ಹಾಡುಗಳಲ್ಲಿ ಈ ಅನುಭಾವಿಗಳ ಕಾವ್ಯ ವ್ಯಕ್ತಿನಿಷ್ಟವೂ; ಸಮಾಜ ಮತ್ತು ತಮ್ಮ ನಡುವಿನ ಸಂಬಂಧದ ಪರಿಶೀಲನೆ ನಡೆದಾಗ ವಸ್ತುನಿಷ್ಟವೂ ಆಗುವುದು ಸಹಜವಾಯಿತು. ಮಾರ್ಗನಿರ್ಮಾಣ ಮತ್ತು ಮಾರ್ಗದರ್ಶನ ಈ ಎರಡೂ ಹಂತಗಳಲ್ಲಿ ದಾಸರ ಕ್ರಿಯಾಶಕ್ತಿ ಕಾರ್ಯಪ್ರವೃತ್ತವಾಯಿತು. ಮಾನವಸಹಜ ದೌರ್ಬಲ್ಯಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ಮಿಕ್ಕುನಿಲ್ಲಲು ವ್ಯಕ್ತಿತ್ವಪಡುವ ಪ್ರಯತ್ನದ ಒತ್ತಡ ಇಂಥ ಕವನಗಳಲ್ಲಿ ಭಾವಗೀತೆಗಳ ತೀವ್ರತೆಯಲ್ಲಿ ಮೈಪಡೆಯುತ್ತದೆ. ಇಂಥ ಎಲ್ಲ ಹೊಯ್ದಾಟಗಳಲ್ಲಿ ದೈವನಿಷ್ಠೆ, ಅಚಲವಾದ ಜೀವನಶ್ರದ್ಧೆ, ಸುಸ್ಪಷ್ಟವಾದ ಬೆಳ್ಳಿಗೆರೆಯಾಗಿ ಉದ್ದಕ್ಕೂ ಕಂಡು ಬರುವುದು. ಈ ಮಾದರಿಯ ಹಾಡುಗಳಲ್ಲಿ ಬಿನ್ನಹಕ್ಕೆ ಬಾಯಿಲ್ಲವಯ್ಯ, ನಂಬಿಕೆಟ್ಟವರಿಲ್ಲವೋ, ಕರುಣಾಕರನೀನೆಂಬುವುದೇತಕೋ– ಮೊದಲಾದವು ಗಮನೀಯ ಕೃತಿಗಳು.
ಪುರಂದರದಾಸರು ಶ್ರೀಕೃಷ್ಣನ ಪರಮಭಕ್ತರು. ಕೃಷ್ಣನನ್ನು ನೆನೆದಾಗ ದಾಸರ ಹೃದಯವು ಮುದಗೊಂಡು, ಭಾವಾವೇಶದಿಂದ ತುಂಬಿ ಹೋಗುವುದು. ಅದರಲ್ಲಿಯೂ ಕಷ್ಣನ ಬಾಲಲೀಲೆಗಳನ್ನು ಎಷ್ಟು ವರ್ಣಿಸಿದರೂ ಅವರಿಗೆ ಸಾಲದು. ಕೀರ್ತನಕಾರರಲ್ಲಿ ವಾತ್ಸಲ್ಯಭಾವದ ಶ್ರೇಷ್ಠಗೀತೆಗಳನ್ನು ಬರೆದವರಲ್ಲಿ ಪುರಂದರದಾಸರಿಗೆ ಮೊದಲ ಸ್ಥಾನ ಸಲ್ಲುತ್ತದೆ. ಬಾಲಕೃಷ್ಣನ ಮುರಳೀವಾದನ, ಗೋ ಪಾಲನೆ, ರಾಸಲೀಲೆ, ಕಾಳಿಂಗ ಮರ್ಧನ, ಗೋಪೀ ಪ್ರಸಂಗಗಳು ದಾಸರ ಮನಸ್ಸನ್ನು ತುಂಬಿ ನಿಲ್ಲುವ ಘಟನಾವಳಿಗಳು. ಕೃಷ್ಣನ ಬಾಲಲೀಲೆಗಳನ್ನು ಅವರು ನಾನಾ ಕೋನಗಳಿಂದ ವೀಕ್ಷಿಸುತ್ತಾ ಸಂತೋಷ ತುಂದಿಲರಾಗುವರು. ಆಡಿದನೋ ರಂಗ ಅದ್ಭುತದಿಂದಲಿ, ಗುಮ್ಮನ ಕರೆಯದಿರೆ, ಗೋಪಿಯ ಭಾಗ್ಯವಿದು, ಹರಿಕುಣಿದ – ಈ ಕೀರ್ತನೆಗಳು ಈ ವಿಭಾಗದಲ್ಲಿ ಉಲ್ಲೇಖನೀಯವಾಗಿವೆ.
ವೈಭೊಗ ಜೀನದ ಬಗ್ಗೆ ನಶ್ವರತೆಯನ್ನೂ ಸಾರುವ ಗೀತೆಗಳು ಪುರಂದರದಾಸರಲ್ಲಿ ಹೇರಳವಾಗಿವೆ. ಬದುಕಿನ ಎಲ್ಲ ಭೋಗಗಳನ್ನೂ ಕೊಡವಿಬಂದಿದ್ದ ದಾಸರಿಗೆ ‘ಸಂಸಾರ ಹೇಯಸ್ಥಳ’ ನಿರಂತರವಾಗಿ ಸ್ಪಂದಿಸುವ ವಿಚಾರವಾಗಿದ್ದುದರಲ್ಲಿ ಆಶ್ಚರ್ಯವಿಲ್ಲ. ಅನುಗಾಲವು ಚಿಂತೆ ಜೀವಕ್ಕೆ, ಆರೇನು ಮಾಡುವರು ಅವನಿಯೊಳಗೆ, ಆರು ಹಿತವರು ನಿನಗೆ, ಆರೇನು ಮಾಡುವರು ಆರಿಂದಲೇನಹುದು, ಯಾರಿಗೆ ಯಾರುಂಟು, ರೊಕ್ಕ ಎರಡಕ್ಕೂ ದುಃಖ ಕಾಣಕ್ಕ, ಸಾಕು ಸಾಕಿನ್ನು ಸಂಸಾರ ಸುಖವು– ಈ ಪದಗಳು ಸಂಸಾರ ನಿರಸನವನ್ನು ಬೋಧಿಸುತ್ತವೆ. ಹಾಗೆಂದ ಮಾತ್ರಕ್ಕೆ, ಅವರು ಸಂಸಾರತ್ಯಾಗದ ಪಲಾಯನವಾದವನ್ನು ಹೇಳುತ್ತಾರೆಂದಲ್ಲ. ಸಂಸಾರದಲ್ಲಿ ತೊಡಗಬೇಕು; ಆದರೆ ಮುಳುಗಬಾರದು. ಇದು ದಾಸರ ಬೋಧೆ. ‘ಮಾನವ ಜನ್ಮ ದೊಡ್ಡದು ಅದನು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ’ ಎಂದು ಅವರ ಮೊರೆ. ಈಸಬೇಕು, ಇದ್ದು ಜಯಿಸಬೇಕು. ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನ್ನಬೇಕು. ಬದುಕಿನ ಸುಖ ದುಃಖಗಳನ್ನೆಲ್ಲಾ ಹರಿಸಮರ್ಪಣೆ ಮಾಡಿ ನಿಶ್ಚಿಂತೆಯಿಂದಿರಬೇಕು. ಅಂತಹ ನಿಶ್ಚಿಂತೆ ಪುರಂದರ ವಿಠಲನ ಬಿಡದೆ ಚಿಂತಿಸಿದರೆ ಒದಗುವುದು.
ಪುರಂದರದಾಸರಲ್ಲಿ ಕಂಡುಬರುವ ಸಾಮಾಜಿಕ ಪ್ರಜ್ಞೆ ಕೀರ್ತನಕಾರರಲ್ಲಿ ಕನಕದಾಸರನ್ನು ಬಿಟ್ಟರೆ ಉಳಿದವರಲ್ಲಿ ಕಂಡುಬರುವುದಿಲ್ಲ. ‘ಆಚಾರವಿಲ್ಲದ ನಾಲಗೆ’ ಎಂಬ ಹಾಡು ಮಾತಿನ ಬಗ್ಗೆ ದಾಸರಿಗಿದ್ದ ಎಚ್ಚರವನ್ನು ಸೂಚಿಸುವುದು. ‘ಇಕ್ಕಲಾರದ ಕೈ ಎಂಜಲು’ ಗಾದೆಯ ಮಾತಾಗಿ ಪರಿಣಮಿಸಿದೆ. ‘ಡೊಂಕು ಬಾಲದ ನಾಯಕರೆ’ ಎಂಬ ಇನ್ನೊಂದು ಹಾಡು ತನ್ನ ವ್ಯಂಗ್ಯದ ಚುರುಕಿನಿಂದ ಆಶ್ಚರ್ಯಕರವಾಗಿದೆ. ನಗೆಯು ಬರುತಿದೆ, ನಿಂದಕರಿರಬೇಕು, ಮಡಿಮಡಿಯೆಂದಡಿಗಡಿಗ್ಹಾರುತಿ, ಮಾನಭಂಗವಮಾಡಿ, ರಮಣನಿಲ್ಲದನಾರಿ, ಹೊಲೆಯ ಹೊರಗಿಹನೆ, ಹೊಲೆಯ ಬಂದನೆಂದು – ಈ ಕೃತಿಗಳು ಕನ್ನಡಿಗರಿಗೆ ಚಿರಪರಿಚಿತವಾಗಿವೆ.
ಪುರಂದರ ದಾಸರು, ಜಾತಿ ಪದ್ದತಿ ಮತ್ತು ಅಲ್ಲಿನ ತಾರಾತಮ್ಯ ನೀತಿಗಳ ಬಗ್ಗೆ, ಮೇಲುಕೀಳೆಂಬ ಭಾವನೆಗೆ, ಅವರಿಗೆ ಯಾವಾಗಲೂ ಅಸಮಾಧಾನವಿತ್ತು. ʼಹೊಲೆಯ ಹೊರಗಿಹನೆʼ, ʼಹೊಲೆಯ ಬಂದನೆಂದುʼ ಎಂಬ ಕೃತಿಗಳಲ್ಲಿ ಜಾತಿವ್ಯವಸ್ಥೆಯ ಬಗ್ಗೆ ದಾಸರಿಗಿದ್ದ ಅಸಹನೆ ಸ್ಪಷ್ಟವಾಗುತ್ತದೆ. ಮೊದಲ ಕೃತಿಯಲ್ಲಿ ಹೊಲೆತನ ಎಂಬುದು ಹುಟ್ಟಿನಿಂದಲ್ಲ, ಗುಣಕರ್ಮದಿಂದ ಎಂಬುದನ್ನು ಅನೇಕ ಹೋಲಿಕೆಗಳಿಂದ ಚಿತ್ರಿಸುತ್ತಾರೆ. ಹೀಗೆ ನಡೆದವರು ಹೊಲೆಯ ಎಂದು ಪುರಂದರದಾಸರು ಕೊಡುವ ಪಟ್ಟಿ ಅವರ ದೃಷ್ಟಿಯ ನೈತಿಕ ಮೌಲ್ಗಳನ್ನು ಸೂಚಿಸುತ್ತದೆ. ಬಸವೇಶ್ವರರ ‘ಕೊಲುವನೆ ಮಾದಿಗ’ ಎಂಬ ಪ್ರಸಿದ್ಧವಚನವೂ, ರಾಘವಾಂಕನ ‘ಅತಿಮುನಿವ ಯತಿಹೊಲೆಯ’ ಎಂಬ ಮಾತೂ ಈ ಪುರಂದರದಾಸರ ʼಹೊಲೆಯ ಬಂದನೆಂದು” ಉಗಾಭೋಗ ಓದುವಾಗ ನೆನಪಾಗುತ್ತವೆ. ಆರೋಗ್ಯವಂತ ಮನಸ್ಸುಗಳು ಸಮಾಜದ ಹೊಲಸನ್ನು ತೊಳೆಯ ಹೊರಟಾಗ ಸಮಾನಧಾಟಿಯ ವಿಚಾರಗಳನ್ನು ವ್ಯಕ್ತಪಡಿಸುವುದು ಅನಿವಾರ್ಯವೆಂಬಂತೆ ತೋರುವುದು.
ಶ್ರೀ ತ್ಯಾಗರಾಜರು ಅವನಿಂದ ಬಹಳ ಪ್ರಭಾವಿತರಾದರು ಮತ್ತು ಅವರ ಪ್ರಹ್ಲಾದ ಭಕ್ತಿ ವಿಜಯದಲ್ಲಿ ಅವರಿಗೆ ಗೌರವವನ್ನು ಅರ್ಪಿಸಿದರು. ಪುರಂದರದಾಸರನ್ನು ಕುರಿತು ಈವರೆಗಿನ ವಿವೇಚನೆಯಿಂದ ಇಷ್ಟು ಸ್ಪಷ್ಟವಾಗಬೇಕು. ದಾಸರು ಭಕ್ತ ಶ್ರೇಷ್ಠರು. ಅವರದ್ದು ಕವಿಹೃದಯ. ಭಕ್ತಿಯ ಆವೇಶ ವಿಚಾರದ ವಿವೇಕ ಒಂದು ಹದದಲ್ಲಿ ಸಮಬೆರೆತು ಅವರ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿವೆ. ಪುರಂದರದಾಸರು ಕನ್ನಡ ಸಾಹಿತ್ಯ ಮತ್ತು ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅಪಾರ. "ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ" ಎಂಬ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಭಕ್ತಿ ಮತ್ತು ಜ್ಞಾನದ ಮೂಲಕ ಸಮಾಜವನ್ನು ತಿದ್ದಿದ ಪುರಂದರದಾಸರು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ ಪುರಂದರದಾಸರು ‘ದಾರಿ ಯಾವುದಯ್ಯಾ ವೈಕುಂಠಕೆ?’ ಎಂಬ ಪ್ರಶ್ನೆಯ ಉತ್ತರಕ್ಕಾಗಿ ತಮ್ಮ ಬದುಕನ್ನೇ ಅಗ್ನಿದಿವ್ಯಕ್ಕೊಡ್ಡಿ ದಾರಿ ಕಂಡುಕೊಂಡರು; ಕಂಡುಕೊಂಡ ದಾರಿಯನ್ನು ಜನ ಸಾಮಾನ್ಯಕ್ಕೆ ತೆರೆದು ತೋರಿದರು.
ಅಂಚೆ ಇಲಾಖೆಯು, ಪುರಂದರದಾಸರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು, ನಾವು ಅವರಿಗೆ, ಅವರ ಸಾಧನೆಗೆ ತೊರಿದ ಅಲ್ಪ ಗೌರವ ಅಂದರೆ ತಪ್ಪಾಗಲಾರದು. ಶ್ರೀ ಪುರಂದರ ದಾಸರು ತಮ್ಮ ಕೊನೆಯ ಕಾಲದಲ್ಲಿ ವಿಜಯನಗರದಲ್ಲಿ ವಾಸವಾಗಿದ್ದು, 1564 ರಂದು ಶಾಲಿವಾಹನ ಶಕ ರಕ್ತಾಕ್ಷಿ ಸಂವತ್ಸರ ಪುಷ್ಯ ಬಹುಳ ಅಮವಾಸ್ಯೆ ಭಾನುವಾರ ಶುಭದಿನದಂದು ಇಹಲೋಕವನ್ನು ತ್ಯಜಿಸಿದರು, ಅಂದರೆ ತಾರೀಖು 02.01.1564 ಇರಬಹುದೆಂದು ಅಂದಾಜಿಸಲಾಗಿದೆ. ಅವರು ನಮ್ಮನ್ನು ಅಗಲಿದ ಈ ದಿನ “ಪುರಂದರದಾಸರ ಆರಾಧನೆ” ಯನ್ನು ಮಹಾನ್ ಸಂಗೀತಗಾರರು, ಒಟ್ಟಾಗಿ ಸೇರಿ, ಅವರ ಕೀರ್ತನೆ, ದಾಸರ ಪದಗಳನ್ನು ಹಾಡುವುದರ ಮೂಲಕ, ಅವರ ಸೇವೆಯನ್ನು ನೆನೆಯುತ್ತಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಸಾಮಾಜಿಕ ಬದಲಾವಣೆಗಳಿಗೆ ಅವರು ಮಾಡಿದ ಪ್ರಯತ್ನ, ಅದಕ್ಕೆ ಹಾಡು-ನೃತ್ಯಗಳನ್ನು ಬಳಸಿದ್ದು ಅವರ ಜೀವನ ಪ್ರೀತಿಗೆ ಸಾಕ್ಷಿ. ಮತ್ತೆ ಹರಿಭಕ್ತಿಯನ್ನು ಪ್ರಸರಿಸಲು ಅವರು ಗೆಜ್ಜೆ ಕಟ್ಟಿ ಕುಣಿದಿದ್ದೂ ಹೌದು. ಇನ್ನು ಗೆಜ್ಜೆಯ ಕಟ್ಟುವವರು ಜೀವನದ ತೊಂದರೆಗಳನ್ನು ತೊಂದರೆಗಳನ್ನೂ ಮೆಟ್ಟಿನಿಲ್ಲಬಲ್ಲರು ಎನ್ನುವುದು, ಅದರಿಂದ ವೈಕುಂಠ ಸೇರಬಲ್ಲವರು ಎನ್ನುವಾಗ ನೃತ್ಯವು ಮೋಕ್ಷಕ್ಕೂ ದಾರಿಯಾಗಬಹುದು ಎನ್ನುವ ಅಭಿಪ್ರಾಯವೂ ಕಂಡುಬರುತ್ತದೆ.
ಒಟ್ಟಿನಲ್ಲಿ ಜನಸಾಮಾನ್ಯರನ್ನೂ ಭೌತಿಕ ಜಗತ್ತಿನಿಂದ ಪಾರಮಾರ್ಥದ ಕಡೆಗೆ ಕರೆದೊಯ್ಯುವ ಸಾಧನಗಳಲ್ಲಿ ಸಾಹಿತ್ಯಕ್ಕೆ ಅರ್ಥ ಕೊಡುವಂತಹ ನೃತ್ಯವೂ ಒಂದು ಎನ್ನುವುದು ಅಂದಿಗೂ, ಇಂದಿಗೂ, ಎಂದಿಗೂ ನಿಜವಾಗಿಯೇ ಉಳಿಯುತ್ತದೆ. ಪುರಂದರದಾಸರನ್ನು ಕುರಿತು ಈವರೆಗಿನ ವಿವೇಚನೆಯಿಂದ ಇಷ್ಟು ಸ್ಪಷ್ಟವಾಗಬೇಕು. ದಾಸರು ಭಕ್ತ ಶ್ರೇಷ್ಠರು. ಅವರದ್ದು ಕವಿಹೃದಯ. ಭಕ್ತಿಯ ಆವೇಶ ವಿಚಾರದ ವಿವೇಕ ಒಂದು ಹದದಲ್ಲಿ ಸಮಬೆರೆತು ಅವರ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿವೆ.
- ಹಂ. ಶ್ರೀ. ಸೂರ್ಯ ಪ್ರಕಾಶ್
ಬೆಂಗಳೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



