ಕಡಲ ಕಿನಾರೆಯಲ್ಲಿ ಕುಳಿತಿದ್ದ ನಾನು, ಅವಳ ಕಂಗಳ ಕಡಲಿನಲ್ಲಿ ಸಿಲುಕಿದ್ದೆ. ಸಮುದ್ರದ ಅಲೆಗಳು ಒಂದಾದ ಮೇಲೊಂದರಂತೆ ಅಪ್ಪಳಿಸುತ್ತಿದ್ದವು, ಆ ಅವಳ ಕಣ್ಣಿನ ಕಡಲಿಗೆ ಅವಳ ಕಣ್ರೆಪ್ಪೆಗಳು ಪಟ ಪಟನೆ ಹೊಡೆಯುತ್ತಿದ್ದವು.
ಅಂದು ಸಂಜೆ ಅವಳು ಮುಂಬಯಿಗೆ ಹೋಗಬೇಕಿತ್ತು. ಕಳೆದ ಮೂರು ದಿನಗಳಿಂದ ನಾವಿಬ್ಬರೂ ಜೊತೆ ಜೊತೆಯಲಿ ಸಮಯ ಕಳೆದಿದ್ದೆವು. 72 ಘಂಟೆ ಎಂದರೆ ಇಷ್ಟು ಬೇಗವೇ ಎಂದು ನನಗೆ ಅಂದು ಚೆನ್ನಾಗಿ ಅರ್ಥವಾಗಿತ್ತು.
ಅವಳು ಮುಂಬಯಿಗೆ ಹೋಗುವ ಮೊದಲು ಒಮ್ಮೆ ಕೊನೆಯದಾಗಿ ಕಡಲ ತೀರಕ್ಕೆ ಹೋಗೋಣವೆಂದು ಹಂಬಲಿಸಿದ್ದಳು. ಚಿಕ್ಕಂದಿನಿಂದ ಕಡಲ ತೀರದಲ್ಲಿ ಬೆಳೆದ ಅವಳಿಗೆ ಸಮುದ್ರವೆಂದರೆ ಪಂಚಪ್ರಾಣ.
ಅವಳ ನಸು ನೀಲಿ ಬಣ್ಣದ ಸೀರೆ ತಿಳಿ ಆಕಾಶಕ್ಕೆ ವ್ಯತ್ಯಾಸವಿಲ್ಲದಂತೆ ಅನಿಸಿತು. ಅರಿತೋ ಅರಿಯದೆಯೋ ಕೀಟಲೆ ಮಾಡುತ್ತಿದ್ದ ಅವಳ ಮುಂಗುರುಳನ್ನು ನಾನು ನಿಧಾನಕ್ಕೆ ಹಿಂದಕ್ಕೆ ಸರಿಸಿದೆ. ಅವಳು ನಕ್ಕಳು.
ಅವಳನ್ನು ಮುಂಬಯಿಗೆ ಬೈ ಬೈ ಎಂದು ಬೀಳ್ಕೊಡಲು ನನಗೆ ಸುತಾರಾಂ ಮನಸಿರಲಿಲ್ಲ. ಆದರೆ ಪರಿಸ್ಥಿತಿ, ಅವಳು ಹೋಗಲೇ ಬೇಕಾಗಿತ್ತು.
ನಮ್ಮಿಬ್ಬರಿಗೆ ಮಾತನಾಡಲು ಏನು ಉಳಿದಿರಲಿಲ್ಲ, ಕಳೆದ ಮೂರು ದಿನದಿಂದ ಬರಿಯ ಮಾತುಗಳೇ. ಈಗ ಆ ಕ್ಷಣದಲ್ಲಿ ಬರಿಯ ವೇದನೆ, ಬೀಳ್ಕೊಡಲು ಒಲ್ಲದ ಮನಸಿನ ನೋವು. ಅಷ್ಟೇ.
ಸೂರ್ಯಾಸ್ತವಾಗುತಿದ್ದಂತೆ ಅವಳು ಮರಳ ರಾಶಿಯಿಂದ ಎದ್ದಳು. ನನ್ನ ಕೈ ಹಿಡಿದು ಎಬ್ಬಿಸಲು, ಕೊನೆಯ ಸೂರ್ಯ ಕಿರಣ ಅವಳ ಮೂಗುತಿಯ ಮೇಲೆ ಪ್ರತಿಫಲಿಸಿ ದೇವತೆಯಂತೆ ಕಂಡಳು. ನಾನೋ, ಸುಮ್ಮನೆ ನಿಂತಿದ್ದೆ.
ನನ್ನ ಕೆನ್ನೆಗೆ ತಿವಿದು “ಮೂತಿ ಉದ್ದ ಮಾಡಿ ಕೂರ್ಬೇಡ, ನಾ ಬರ್ತೆ ಬೇಗ, ಆಮೇಲೆ ಇಲ್ಲಿಯೇ ನಿಂಜೊತೆ ಇರ್ತೆ, ಅಲ್ಲಿವರೆಗೆ ತಾಳ್ಮೆಯಿಂದ ಇರು” ಎಂದಳು. ನಾ ಆಯ್ತು ಎಂಬಂತೆ ತಲೆ ಮೇಲೆ ಕೆಳಗೆ ಎರಡು ಬಾರಿ ಮಾಡಿದೆ.
ನನ್ನ ರಾಯಲ್ ಎನ್ಫೀಲ್ಡ್ ಬೈಕ್ ಅಲ್ಲಿ ಕುಳಿತು ಅವಳನ್ನು ಕುಳ್ಳಿರಿಸಿ ಬಸ್ ನಿಲ್ದಾಣಕ್ಕೆ ಹೊರಟೆ. ಹಕ್ಕಿ ಮರಿಯಂತೆ ಹಿಂದಿನಿಂದ ನನ್ನ ತಬ್ಬಿ ಕುಳಿತಳು ಅವಳು.
ಬಸ್ ನಿಲ್ದಾಣದಲ್ಲಿ, ಅವಳು ಕಾಯಬೇಕಾದರೆ ನಾನು ಹೋಗಿ ತಿಂಡಿ ಪೊಟ್ಟಣ ತಗೊಂಡು ಬರುವೆ ಎಂದು ಹೊರಟೆ. ಒಂದೆರಡು ಪ್ಯಾಕೆಟ್ ಚಿಪ್ಸ್, ಸಾಫ್ಟ್ ಡ್ರಿಂಕ್ಸ್ ಬಾಟಲಿ ಜೊತೆ ತಿರುಗಿ ಬಂದೆ. ಆ ಬಸ್ ನಿಲ್ದಾಣದ ಬೆಳಕಿನಲ್ಲಿ ಅವಳ ಕಣ್ಣಂಚಿನಲ್ಲಿ ಮುತ್ತಿನಂತೆ ಪೋಣಿಸಿದ ಹನಿ ನನಗೆ ಸ್ಪಷ್ಟವಾಗಿ ತೋರಿತು. ನಾನವಳ ಕೈ ಅದುಮಿದೆ. ಅಷ್ಟೇ ! ಅಷ್ಟು ಸಾಕಾಗಿತ್ತು, ಹೆಗಲ ಮೇಲೆ ತಲೆ ಇಟ್ಟವಳು ಜೋರಾಗಿ ಅತ್ತಳು, ಶಬ್ದವಿಲ್ಲ ಆದರೆ ರೋದನೆ ಕಣ್ಣೀರಾಗಿ ಧಾರಾಕಾರವಾಗಿ ಇಳಿಯುತ್ತಿತ್ತು.
ನಾನು “ನಿನ್ಯಾಕೆ ಹೋಗುವೆ, ನಿಲ್ಲಬಾರದೆ” ಎಂದೆ. ಅವಳು “ನಾನು ಹೋಗದಿದ್ದರೆ ಅಲ್ಲಿ ಇರುವ ನನ್ನ ತಾಯಿಯನ್ನು ಕೊಲ್ಲುವರು” ಎಂದಳು.
.
ಒಂದು ವಾರ ಮೊದಲು, ಮುಂಬೈಗೆ ಹೋದ ನನಗೆ, ನನ್ನ ಗೆಳೆಯ ರಾತ್ರೆಗೆ ಒಳ್ಳೆಯ ಪರಿಚಯ ಮಾಡಿ ಕೊಡುವೆ ಎಂದು ಕರೆದುಕೊಂಡು ಹೋಗಿ ಪರಿಚಯಿಸಿದ ಹುಡುಗಿ ಇವಳು. ಕಾಮಾಟಿಪುರಕ್ಕೆ ಮೊದಲ ಬಾರಿ ಅವಳು ಬಂದಿದ್ದಳು ಜೀವ ಪಾಡಿಗೋಸ್ಕರ, ನಾನು ಹೋಗಿದ್ದೆ ಮಜಕ್ಕೋಸ್ಕರ. ಪರಿಸ್ಥಿತಿ ಇಬ್ಬರನ್ನೂ ವಿಚಿತ್ರ ಸನ್ನಿವೇಶದಲ್ಲಿ ಒಂದು ಮಾಡಿತ್ತು. ನಾನಂದು ಮುಂಬಯಿಯಲ್ಲಿ ಅವಳ ಕೈ ಹಿಡಿದವನು, ಇನ್ನು ಬಿಡುವುದಿಲ್ಲವೆಂದು ನಿರ್ಧರಿಸಿದ್ದೆನು.
.
ಬಸ್ ಸ್ಟಾಂಡ್ ಅಲ್ಲಿ ಕುಳಿತಿದ್ದ ಅವಳ ಮೊಬೈಲ್ ಮೆಸೇಜ್ ಬಂತೆಂದು ಗೊಣಗಲು ಅವಳು ತೆರೆದಳು.
ಮೆಸೇಜ್ ನ ಸಾರಾಂಶ ಇಷ್ಟೇ, ಅವಳ ಕ್ಯಾನ್ಸರ್ ಪೀಡಿತ ತಾಯಿ ಎರಡು ದಿನದ ಹಿಂದೆಯಷ್ಟೇ ಇಹಲೋಕ ತ್ಯಜಿಸಿದಳು, ನೀನು ಇಲ್ಲಿ ಬಂದು ಆಗಬೇಕಾದ್ದು ಏನು ಇಲ್ಲ, ನೀನೆಲ್ಲಿರುವೆಯೋ ಸುಖವಾಗಿರು, ಎಂದು ಅದರಲ್ಲಿತ್ತು.
ಅಳುತ್ತಿದ್ದ ಅವಳು ನನ್ನನು ಗಟ್ಟಿಯಾಗಿ ತಬ್ಬಿದಳು, ಮೆಲ್ಲನೆ ಧ್ವನಿಯಲ್ಲಿ, “ನಿನ್ನ ಮನದಲ್ಲಿ, ನಿನ್ನ ಮನೆಯಲ್ಲಿ ನಂಗೊಂದಿಷ್ಟು ಜಾಗ ಕೊಡ್ತೀಯ, ನಿನ್ ಮನೆಗೆ ಹೋಗೋಣವ?” ಎಂದಳು. ❤️
- ಸಚಿನ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


