ಕಥೆ: ಮೌನವೇ ಮಾತಾದ ಸಂಜೆ

Upayuktha
0


ನಗೊಬ್ಬಳು ಗೆಳತಿ ಇದ್ದಳು. ನಮ್ಮ ಬಾಂಧವ್ಯ ತುಂಬಾ ಅನ್ಯೋನ್ಯವಾಗಿತ್ತು. ಅವಳು ಯಾವತ್ತೂ ನನ್ನಿಂದ ಏನನ್ನೂ ಬಯಸಲಿಲ್ಲ, ನಾನು ಮಾತ್ರ ಯಾವತ್ತೂ ಅವಳು ನನ್ನ ಜೊತೆ ಇರಬೇಕೆಂದು ಹಂಬಲಿಸಿದ್ದೆ. ಆಸೆಯೇ ದುಃಖಕ್ಕೆ ಮೂಲ ಎಂಬ ಗೌತಮ ಬುದ್ಧನ ಮಾತಿನಂತೆ ನನ್ನ ದುಃಖಕ್ಕೆ ಪರೋಕ್ಷವಾಗಿ ಅವಳು ಕಾರಣವಾದಳು.


ಇದನ್ನರಿಯದ ಅವಳು ಅವಳದ್ದೇ ಆದ ಗುಂಗಿನಲ್ಲಿದ್ದಳು.  ಇತ್ತ ಕಡೆ ನಾನು ಮಾತ್ರ ಅವಳದ್ದೇ ಗುಂಗಿನಲ್ಲಿ ಕೊರಗಿ ಹೋದೆನು. ಮಾತನಾಡಲು ನನಗೆ ಧೈರ್ಯ ಸಾಲದು, ಅವಳಿಗೆ ಸಮಯವಿರಲಾರದು. ದಿನಗಳುರುಳಿದಂತೆ ನಮ್ಮ ಅನ್ಯೋನ್ಯತೆಯ ಬಾಂಧವ್ಯದಲ್ಲಿ ಬಿರುಕೊಂದು ಸಣ್ಣದಾಗಿ ಮೂಡಿತು. ಇಬ್ಬರಿಗೂ ಈಗದರ ಅರಿವುಂಟಾಯಿತು. 


ಸಮಯ ಯಾರಿಗೂ ಯಾವುದಕ್ಕೂ ನಿಲ್ಲುವುದಿಲ್ಲವೆಂಬುದು ನಿಜ ಆದರೆ ಸಮಯಕ್ಕೆ ಸರಿಯಾದ ಮಾತಿನಿಂದ ಸಮಯವನ್ನು ಹಸನಾಗಿಸುವುದು ನಿಜವಾದ ಬುದ್ಧಿವಂತ ನಡೆ.


ಒಂದು ದಿನ ಸಂಜೆ ನನಗೆ ಇನ್ನು ತಡೆಯಲಾರೆನು ಎಂದೆನಿಸಿತು, ಮಾತನಾಡಲೆಂದು ಕರೆದೆನು. ಅವಳು ಅವಳದ್ದೇ ಗುಂಗಿನಲ್ಲಿ ಬಂದಳು. ನಾನವಳ ಕೈ ಹಿಡಿದೆ, ಗೋಗರೆದೆ, ಯಾರೋ ಹೇಳಿದ್ದರು ರಿಯಲ್‌ ಮೆನ್ ಡೋಂಟ್ ಕ್ರೈ (“real men dont cry”) ಅಂತ.


ಆದರೆ ನಾನವತ್ತು ಅತ್ತೆ, ನನ್ನ ದುಃಖವನ್ನು ಅವಲತ್ತುಕೊಂಡೆ. ಅವಳು ಕೇಳಿದಳೋ ಇಲ್ಲವೋ ಅರಿಯಲಿಲ್ಲ ಆದರೆ ಒಂದಂತೂ ನಿಜ, ಅವಳು ಯಾವುದೋ ಗುಂಗಲ್ಲಿ ಇದ್ದಳು. ಇನ್ನೇನು ಮಾಡಲಿ ಎಂದು ಅರಿಯದೆ ಅವಳ ಕೈಯನ್ನು ಹಿಡಿದುಕೊಂಡೇ ನಡೆದೆ, ನನಗೇನು ಮಾಡಬೇಕೆಂದು ತೋಚದೆ ನಾನು ಯಾಂತ್ರಿಕವಾಗಿ ನಡೆದೆ, ನನ್ನ ಕಣ್ಣಿಂದ ಒಂದೇಸಮನೆ ಕಣ್ಣೀರು ಹರಿಯುವುದು ನನ್ನರಿವಿನಲ್ಲಿತ್ತು.


ಅಲ್ಲೀವರೆಗೆ ಸುಮ್ಮನಿದ್ದವಳು ಮಧ್ಯದಾರಿಯಲ್ಲಿ ತನ್ನ ಕೈ ಹಿಡಿತವನ್ನು ಬಿಗಿಗೊಳಿಸಿ ನಿಲ್ಲುವಂತೆ ಸೂಚಿಸಿದಳು. ನಾನು ನಿಂತೆ. ತಿರುಗಿ ನೋಡಿದರೆ ಅವಳ ಮುಖದಲ್ಲಿ ಅಳು. ಅವಳ ಅಳು ನನಗೆ ಸಹಿಸಲಾಗದು, ನನ್ನೆರಡೂ ಕೈಗಳನ್ನು ಬೊಗಸೆಯಂತೆ ಮಾಡಿ ಅವಳ ಮುಖವನ್ನು ಹಿಡಿದೆ. ಯಾಕೆ ನನ್ನನು ಈ ರೀತಿ ಕಾಡುವೆ ಅಂತ ಕೇಳಬೇಕೆನಿಸಿತು, ಆದರೆ ಅವಳ ಆ ಮುಖ ನನ್ನಿಂದ ಸಾಂತ್ವನ ಮಾತ್ರವೆ ಬಯಸಿತು.


ಸಾಂತ್ವನ? ನನ್ನನ್ನು ಸಾಂತ್ವನ ಹೇಳಿ ಸಮಾಧಾನ ಹೇಳಬೇಕಾದ ಅವಳು ಈಗ ನಾನೇ ಅವಳಿಗೆ ಸಾಂತ್ವನ ಹೇಳುವಂತೆ ಬಯಸಿದ್ದಾಳೆ ಎಂದರೆ ಇದಕ್ಕೇನು ಹೇಳಲಿ.


ಕೊನೆಗೂ ಸಾಂತ್ವನ ಹೇಳಿದ್ದು ಯಾರು ಎಂದು ನೀವು ಕೇಳುವಿರಾದರೆ ಅದು ನಾನೇ. ಯಾಕೆಂದರೆ ನನಗೆ ಅವಳ ಅಳು ಕಾಣಲಸಾಧ್ಯ. ನನಗವಳು ಒಬ್ಬ ಪ್ರೀತಿಯ ಗೆಳತಿ, ಅಲ್ಲಿ, ಆ ಮಧ್ಯ ದಾರಿಯಲ್ಲಿ ಅವಳು ನನ್ನ ಕೈ ಹಿಡಿದು ಅಳುವುದು ದಾರಿಹೋಕರಲ್ಲಿ ನಾನೇನೋ ಅಪರಾಧವೆಸಗಿದ ಭಾವನೆ ಉಂಟು ಮಾಡುತ್ತಿತ್ತು. ಒಂದಿಬ್ಬರು ಸೇರಿದರು, ಎಲ್ಲರೂ ಅವಳಿಗೆ ಕೇಳುವವರೇ “ಏನಾಯಿತಮ್ಮ”.


ನಾನಲ್ಲಿ ಏನೂ ಹೇಳದೆ ಸುಮ್ಮನೆ ನಿಂತಿದ್ದೆ. ಪರಿಸ್ಥಿತಿ ಬಿಗಡಾಯಿಸಿತು, ಒಂದು ಹತ್ತು ಮಂದಿ ಸೇರಿದರು. ನನ್ನ ಗೆಳತಿಗೆ ಆಗ ಇಹ ಲೋಕದ ಅರಿವಾಯಿತು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆಯೆಂದು. ಸೇರಿದವರಲ್ಲಿ ಒಬ್ಬ ನನ್ನ ಅಂಗಿ ಕೋಲರ್ ಹಿಡಿಯಲು ಬಂದ. ಪರಿಸ್ಥಿತಿಯ ಗಂಭೀರತೆಯ ಅರಿವಾದ ಅವಳು, ಮುಂದೇನನ್ನು ಯೋಚಿಸದೆ ನನ್ನನ್ನು ಅಪ್ಪಿದಳು.


ನನಗೆ ಏನಾಗುತ್ತಿದೆ ನನ್ನ ಜೀವನದಲ್ಲಿ ಎಂದು ಅರಿವಾಗಲು ಕೆಲವು ಗಳಿಗೆಗಳು ಬೇಕಾಯಿತು. ಅವಳ ಕೈಗಳು ನನ್ನನ್ನು ಸುತ್ತುವರೆದು ಗಟ್ಟಿಯಾಗಿ ಹಿಡಿದಿದ್ದವು, ಅವಳ ಅಳು ಮುಖ ನನ್ನ ಎದೆಯಲ್ಲಿ ಹುದುಗಿಸಿದ್ದಳು, ನನ್ನ ಅಂಗಿಯ ಎದೆ ಭಾಗವು ಅವಳ ಕಣ್ಣೀರಿಂದ ತೋಯ್ದು ಹೋಗಿತ್ತು. 

ಇದೆಲ್ಲದರ ನಡುವೆ, ಸೇರಿದ ಹತ್ತು ಮಂದಿಯಲ್ಲಿ ಒಂದೆರಡು ಹೆಂಗಸರು “ಬನ್ರೀ, ಹೋಗೋಣ ನಾವು, ಈಗಿನ್ ಕಾಲದ್ ಗಂಡ ಹೆಂಡಿರ್ ಅಂದ್ರೆ ಹೀಗೇನೆ, ಹುಚ್ಚಾಟ, ನಡುವೆ ನಾವ್ಯಾಕ್ರಿ” ಎಂದು ಗೊಣಗಿದರು.


ಜನ ಚದುರಿತು, ಅವಳು ಹುದುಗಿಸಿದ ಮುಖವನ್ನು ಹೊರಕ್ಕೆ ತಂದಳು, ನನಗೇನು ಹೇಳಬೇಕೆಂದು ತೋಚದಾಯಿತು. ಅವಳು ನನ್ನ ಕೈ ಹಿಡಿದು ಅಲ್ಲಿಯೇ ಹತ್ತಿರದಲ್ಲಿದ್ದ ಅವಳ ಮನೆಗೆ ಕರೆದೊಯ್ದಳು. ನಾನು ಮೂಕನಾಗಿ ಹಿಂಬಾಲಿಸಿದೆ. ಒಂದನೇ ತರಗತಿಗೆ ಆಗಷ್ಟೇ ಸೇರ್ಪಡೆ ಆದ ಮುಗ್ಧ ಬಾಲಕ ಶಿಕ್ಷಕಿಯ ಮಾತು ಚಾಚೂ ತಪ್ಪದೇ ಪಾಲಿಸುವಂತೆ ನಾನು ಅವಳನ್ನು ಹಿಂಬಾಲಿಸಿದೆ, ಅವಳು ಹೇಳಿದಂತೆ ನಡೆದೆ. ಅವಳ ಮನೆಯಲ್ಲಿ ಕುಳಿತ ನನಗೆ ಅವಳೇ ಚಹಾ ಮಾಡಿ ತಂದಳು, ಜೊತೆಗೆ ಬಿಸ್ಕತ್ ಒಂದೆರಡು. ನನ್ನದೇನು ಮಾತಿಲ್ಲ, ಅವಳದ್ದು ಮಾತಿಲ್ಲ, ಬರಿಯ ಕ್ರಿಯೆ.


ಅವಳು ನನ್ನೆದುರು ಬಂದು ಕುಳಿತಳು, ಕಣ್ಣಿಗೆ ಕಣ್ಣಿಟ್ಟು ನೋಡಿದಳು, ಆ ನೋಟದಲ್ಲಿ ಏನೋ ಹಿತವಾದ ಅನುಭವ, ಆ ನೋಟದಲ್ಲಿ ಏನೋ ಖಚಿತವಾದ ನಿರ್ಧಾರದ ಭಾವನೆ. 


ನನ್ನ ಹತ್ತಿರ ಬಂದು ಬೆಚ್ಚನೆ ಕುಳಿತವಳು, “ಇದೇ ರೀತಿ ದಿನವೂ ನಾನು ಮಾಡಿದ ಚಹಾ ಕುಡೀತೀಯ?!” ಎಂದು ಕೇಳಿದಳು. 




- ಸಚಿನ್ ಕುಳಮರ್ವ, ಸೋಮೇಶ್ವರ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top