ವಸಂತ ಪಂಚಮಿಯಂದು ಜನಿಸಿದ "ಸರಸ್ವತಿ"

Upayuktha
0


ವಿದ್ಯಾಧಿದೇವತೆಯಾದ ಸರಸ್ವತಿಯು ಬ್ರಹ್ಮನ ರಾಣಿ. ವೀಣಾಪಾಣಿ ಎಂದೆಲ್ಲಾ ಹೆಸರನ್ನು ಪಡೆದಿದ್ದಾಳೆ. ಹೇಗೆ ಗಣಪತಿಯ ಆರಾಧನೆಯನ್ನು ಶುಭಕಾರ್ಯಕ್ಕೆ ಮುಂಚಿತವಾಗಿ ಮಾಡಲಾಗುತ್ತದೆ. ದೇವಿ ಪೂಜನದ ಹಬ್ಬವಾದ ನವರಾತ್ರಿಯಲ್ಲಿ ಮಾತ್ರವಲ್ಲದೇ ಎಂದಿಗೆ ಶಿಕ್ಷಣ ಮತ್ತು ವಿದ್ವತ್ತಿನ ವಿಚಾರಗಳು ಹೊರಹೊಮ್ಮುವ ಕಾಲದಲ್ಲಿ ಸರಸ್ವತಿ ಪೂಜೆಯನ್ನು ಮಾಡಲಾಗುತ್ತದೆ. ಅದ್ವೈತ ಸಿದ್ಧಾಂತ ಪ್ರತಿಪಾದಕರಾದ ಆದಿ ಶಂಕರಾಚಾರ್ಯರು ತಮ್ಮ 4 ಪೀಠಗಳಲ್ಲಿ ಶೃಂಗೇರಿಯಲ್ಲಿ ಶಾರದಾ ಪೀಠವನ್ನೇ ಸ್ಥಾಪನೆ ಮಾಡಿದ್ದಾರೆ. ಕೆಲವು ಪುರಾಣಗಳಲ್ಲಿ ಸರಸ್ವತಿಯನ್ನು ಬ್ರಹ್ಮನ ಮಗಳೇ ಇನ್ನುತ್ತಾರೆ ಇನ್ನು ಕೆಲವರು ಶಿವ ಮತ್ತು ಶಕ್ತಿಯ ಪುತ್ರಿ ಎನ್ನುತ್ತಾರೆ.


ಸರಸ್ವತಿ ದೇವಿಯು ಮಾತಿಗೆ ಬುದ್ಧಿವಂತಿಕೆಗೆ ಮತ್ತು ಕಲಿಕೆಗೆ ಪ್ರತಿರೂಪವೇ ಆಗಿದ್ದಾಳೆ.  ಯಾರೇ ಆಗಲೀ ಬಹಳಷ್ಟು ಬುದ್ಧಿವಂತರು ವಿದ್ವತ್ತನ್ನು ಹೊಂದಿದ್ದರೆ ಸರಸ್ವತಿ ಪುತ್ರ/ಪುತ್ರಿ ಎನ್ನಲಾಗುತ್ತದೆ. ಸಾಮಾನ್ಯವಾಗಿ ಸರಸ್ವತಿದೇವಿ ಪ್ರಿಯವಾದ ಬಣ್ಣ ಹಳದಿಯಾಗಿದೆ. ಅವಳಿಗೆ ಹಳದಿ ಹೂವುಗಳಿಂದ ಅಲಂಕರಿಸುತ್ತಾರೆ. ಆದರೆ ಚಿತ್ರದಲ್ಲಿ ಮಾತ್ರ ಸರಸ್ವತಿಯ ಉಡುಪು ಬಿಳಿ ಬಣ್ಣದ್ದಾಗಿದ್ದು ಕೈಯಲ್ಲಿ ವೀಣೆಯನ್ನು ಹಿಡಿದಿರುತ್ತಾಳೆ, ಆ ವೀಣೆಯ ಹೆಸರು ಕಚ್ಛಪಿ. ಬಿಳಿ ಉಡುಪು ಏತಕ್ಕಾಗಿ ಎಂದರೆ ಬಿಳಿ ಬಣ್ಣವು ಸ್ವಚ್ಛತೆ ಮತ್ತು ನಿರ್ಮಲತೆಯ ಪ್ರತೀಕವಾಗಿದೆ. ಜ್ಞಾನವು ಸದಾ ಕಾಲ ನಿರ್ಮಲ ಮತ್ತು ಶುಭ್ರವಾಗಿರುವುದರಿಂದ ಅವಳಿಗೆ ಬಿಳಿ ಉಡುಪಿನೊಂದಿಗೆ ಚಿತ್ರವನ್ನು ಬಿಡಿಸಿ ಪೂಜಿಸುತ್ತಾರೆ. ಸರಸ್ವತಿ ದೇವಿಗೆ ಶಾರದಾ, ಸರಸ್ವತಿ, ಬ್ರಹ್ಮಾಣಿ, ವಾಗ್ದೇವಿ, ಬ್ರಾಹ್ಮಿ, ಮಹಾವಿದ್ಯಾ, ವಾಣಿ, ಭಾರತಿ, ವಾಗೇಶ್ವರಿ, ವರ್ಣೇಶ್ವರಿ, ಕವಿಜಿಹ್ವಾವಾಸಿನಿ, ಧನೇಶ್ವರಿ, ಆರ್ಯಾ ಮೊದಲಾದ ಹೆಸರುಗಳಿಂದ ಸ್ಮರಿಸುತ್ತಾರೆ.



ಸರಸ್ವತಿ ದೇವಿಗೆ ಹಳದಿ ಬಣ್ಣವು ಪ್ರಿಯವೆಂದು ಆಗಲೇ ತಿಳಿದಿದ್ದೇವೆ ಅದೇ ರೀತಿ ಅವಳಿಗೆ ನೈವೇದ್ಯವೂ ಕೂಡ ಹಳದಿ ಬಣ್ಣದ ಪದಾರ್ಥಗಳಾದ ಖಿಚಡಿ (ಹುಗ್ಗಿ), ಪುಲಾವ್‌ ಮೊದಲಾದ ಹಳದಿ ಬಣ್ಣದ ಪದಾರ್ಥಗಳೊಂದಿಗೆ ಬೆಲ್ಲದಿಂದ ತಯಾರಿಸಿದ ಸಿಹಿ ತಿನಸುಗಳೇ ಪ್ರಿಯವಾಗಿವೆ. ಹಣ್ಣುಗಳಲ್ಲಿ ಬೋರೆ ಹಣ್ಣು ಮತ್ತು ಸಿಹಿ ಗೆಣಸುಗಳಂತಹ ಪದಾರ್ಥಗಳು ಪ್ರಿಯವಾಗಿವೆ. ಹಳದಿ ಬಣ್ಣದ ಪುಷ್ಟಗಳು ಪ್ರಿಯವಾದರೂ ಕೂಡ ಬಿಳಿ ಬಣ್ಣದ ಕಮಲ ಬಹಳ ಪ್ರಿಯವಾಗಿದೆ ಏಕೆಂದರೆ ಕಮಲವೂ ಕೂಡ ಜ್ಞಾನದ ಸಂಕೇತವೇ ಆಗಿದೆ. ಹೇಗೆ ಶಿವನನ್ನು ಸೋಮವಾರ, ಪಾರ್ವತಿಯನ್ನು ಮಂಗಳವಾರ ಪೂಜಿಸುತ್ತೇವೆಯೋ ಹಾಗೆ ಸರಸ್ವತಿಯವಾರ ಗುರುವಾರವಾಗಿದೆ, ಬ್ರಹಸ್ಪತಿಯ ವಾರ ಸರಸ್ವತಿ ಹೇಗೆ ವಿದ್ಯೆಯ ಪ್ರತೀಕ ವಾಗೂ ಅಧಿದೇವತೆಯೋ ಹಾಗೆಯೇ ಬ್ರಹಸ್ಪತಿಯು ದೇವತೆಗಳು ಗುರು ಮತ್ತು ಬುದ್ಧಿವಂತಿಕೆಯ ಪ್ರತೀಕವಾಗಿದ್ದು ಗುರುವಾರದ ದಿನವೇ ಸರಸ್ವತಿ ದೇವಿಯನ್ನು ವಿಶೇಷವಾಗಿ ಪೂಜಿಸುವ ಅವಳ ದಿನವಾಗಿದೆ.



ಸರಸ್ವತಿದೇವಿಯು ಮಾಘ ಮಾಸದ ಪಂಚಮಿಯಂದು ಹುಟ್ಟಿದಳು ಎಂದು ಅಂದೇ ಅವಳ ಜಯಂತಿಯನ್ನು ಮಾಡಲಾಗುತ್ತದೆ. ಪರಬ್ರಹ್ಮನನ್ನು ಪಡೆಯುವ ಬ್ರಹ್ಮವಿದ್ಯೆಯು ನಮಗೆ ಸರಿಯಾಗಿ ತಿಳಿಯಲು ಸರಸ್ವತಿಯ ಆರಾಧನೆ ಬಹು ಮುಖ್ಯವಾಗುತ್ತದೆ. ಆದ್ದರಿಂದ ವಿದ್ಯಾರಂಭವನ್ನು ಮಾಡುವಾಗ "ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಮ್‌ ಕರಿಶ್ಯಾಮಿ ಸಿದ್ಧಿರ್‌ ಭವತು ಮೇ ಸದಾ" ಎಂದು ಪ್ರಾರ್ಥಿಸಿಯೇ ವಿದ್ಯಾಭ್ಯಾಸದ ಅರಂಭವನ್ನು ಮಾಡಿಸಲಾಗುತ್ತದೆ. ಸರಸ್ವತಿ ದೇವಿಗೆ ಜೇನು ತುಪ್ಪವನ್ನು ನಿವೇದಿಸುತ್ತಾರೆ ಕಾರಣ ದೇವಿ ಕೊಡುವ ಫಲವೂ ಕೂಡ ಜೇನಿನಂತೆ ಸವಿಯಾಗಿದ್ದು ನಮಗೆ ರುಚಿಸುತ್ತದೆ. ಹಾಗೂ ವಿದ್ಯೆಯನ್ನು ಪಡೆಯಲು ಜೇನು ಸಂಗ್ರಹಣೆ ಮಾಡಿದಂತೆಯೇ ಶ್ರಮ ಪಡಬೇಕು ಎಂಬುದರ ಸಂಕೇತವಾಗಿದೆ. ಋಗ್ವೇದದಲ್ಲಿ ಸರಸ್ವತಿ ಒಂದು ನದಿ ಆದರೆ ವೇದಕಾಲದ ನಂತರ ಅದರ ಮಹತ್ವನ್ನು ಕಳೆದುಕೊಂಡಿತು.


ವಿದ್ಯೆ, ಕಲೆ, ಸಂಗೀತ, ಜ್ಞಾನ, ಸಾಹಿತ್ಯ ಕಲಿಕೆಯ ಪ್ರತೀಕವಾಗಿರುವ  ಸರಸ್ವತಿಯನ್ನು ಕೇವಲ ಹಿಂದುಗಳು ಮಾತ್ರವಲ್ಲದೇ ಜೈನರೂ ಪೂಜಿಸುತ್ತಾರೆ. ಸರಸ್ವತಿ ಬೀಜಮಂತ್ರವು "ಓಂ ಐಂ ಸರಸ್ವತ್ಯೈ ನಮಃ ಅಥವಾ ಓಂ ಸುಂ ಸರಸ್ವತ್ಯೈ ನಮಃ ಎಂದಾಗಿದೆ. ಸರಸ್ವತಿ ಮಂಗಳಾಷ್ಟಕವು ಮಂತ್ರವು " ಓಂ ಸರಸ್ವತ್ಯೈ ಚ ವಿದ್ಮಹೇ ಬ್ರಹ್ಮಪುತ್ರಿಯೇ ಧೀಮಹಿ ತನ್ನೋ ಸರಸ್ವತ್ಯೈ ಪ್ರಚೋದಯಾತ್" ಆಗಿದೆ. ಸರಸ್ವತಿ ದೇವಿಯ ದೇವಸ್ಥಾನಗಳು ದೇಶದಾದ್ಯಂತ ಹರಡಿವೆ. ಬಹಳಷ್ಟು ಕಡೆಗಳಲ್ಲಿ ಪಾರ್ವತಿದೇವಿಯ ಗುಡಿಯ ಪಕ್ಕದಲ್ಲೇ ಸರಸ್ವತಿಯ ದೇವಾಲಯವನ್ನು ಕಾಣಬಹುದಗಿದೆ. ಭಾರತದಲ್ಲಿರುವ ಸರಸ್ವತಿಯ ಪ್ರಮುಖ ದೇವಾಲಯಗಳು ಬಹಳಷ್ಟು ಇವೆ ಅವುಗಳಲ್ಲಿ ಕಾಶ್ಮೀರದಲ್ಲಿರುವ ಸರಸ್ವತಿಯ ದೇವಾಲಯ ಕಾಶ್ಮೀರ ಪುರವಾಸಿನಿ ಎಂದೇ ಸ್ತುತಿಸಲಾಗುತ್ತದೆ.


ಇನ್ನು ಶೃಂಗೇರಿ ಶಾರದಾಂಬಾ ದೇವಿಯ ದೇವಾಲಯವು ಸರಸ್ವತಿ ದೇವಾಲಯವೇ ಇವೆರಡನ್ನು ಬಿಟ್ಟು ಇನ್ನೂ ಅನೇಕ ದೇವಾಲಯಗಳನ್ನು ದೇಶದಾದ್ಯಂತ ಕಾಣಬಹುದಾಗಿದೆ. ತೆಲಂಗಾಣದ ನಿರ್ಮಲ್‌ ಜಿಲ್ಲೆಯ ಗೋದಾವರಿ ತಟದಲ್ಲಿರುವ ಜ್ಞಾನ ಸರಸ್ವತಿ ದೇವಾಲಯವೂ ಒಂದಾಗಿದೆ. ಕೇರಳದ ಎರ್ನಾಕುಲಮ್‌ ಜಿಲ್ಲೆಯಲ್ಲಿರುವ ಪರವೂರು ನಗರದಲ್ಲಿರುವ ದೇವಿಯ ದಕ್ಷಿಣ ಮೂಕಾಂಬಿಕಾ ದೇವಾಲಯವೂ ಕೂಡ ಪ್ರಸಿದ್ಧ ಸರಸ್ವತಿ ದೇವಾಲಯವಾಗಿದೆ. ತಮಿಳುನಾಡಿನ ಕುಂಭಕೋಣಮ್‌ನ ಸಮೀಪದ ಕೋತನೂರಿನಲ್ಲಿಯೂ ಸರಸ್ವತಿ ದೇವಿಯು ಪ್ರಸಿದ್ಧಳಾಗಿದ್ದಾಳೆ. ವಾರಂಗಲ್‌ ಜಿಲ್ಲೆಯ ವಿದ್ಯಾ ಸರಸ್ವತೀ ದೇವಾಲಯವೂ ಕೂಡ ಪ್ರಸಿದ್ಧ ದೇವಾಲಯವಾಗಿದೆ. ತೆಲಂಗಾಣದ ಕಲೇಶ್ವರದ ಮಹಾಸರಸ್ವತಿ ದೇವಾಲಯವೂ ಬಹಳ ಪ್ರಸಿದ್ಧವಾಗಿದ್ದು ಈ ಸ್ಥಳವನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಇವೆಲ್ಲವನ್ನೂ ಬಿಟ್ಟು ದೇಶದಾದ್ಯಂತ ಅನೇಕ ಹೊಸ ಸರಸ್ವತಿಯ ದೇವಾಲಯಗಳೂ ಕೂಡ ಸ್ಥಾಪಿತವಾಗಿವೆ.


ನವರಾತ್ರಿಯಲ್ಲಿ ಸರಸ್ವತಿ ಪೂಜೆಯು ವಿಶೇಷವಾಗಿರುತ್ತದೆ. ಸಪ್ತಮಿಯ ದಿನ ಮೂಲಾ ನಕ್ಷತ್ರವಿರುವಾಗ ಸರಸ್ವತಿಯನ್ನು ಆಹ್ವಾನಿಸಲಾಗುತ್ತದೆ ನಂತರ ಪೂರ್ವಾಷಾಢ ನಕ್ಷತ್ರವಿರುವಾಗ ಪೂಜಿಸಲಾಗುತ್ತದೆ. ಇಲ್ಲಿ ಸರಸ್ವತಿಯ ಮೂತ್ರಿಯ ಪೂಜನವನ್ನು ನಾವು ಮಾಡುವುದಿಲ್ಲ. ವಿದ್ಯಾಧೀದೇವತೆ ಯಾದ್ದರಿಂದ ಪುಸ್ತಕವನ್ನು ಸುಂದರವಾಗಿ ದೇವಿಯ ರೂಪದಂತೆ ಇಲ್ಲವೇ ವೇದವ್ಯಾಸ ಆಕಾರದಲ್ಲಿ ಜೋಡಿಸಿ ಅದರ ಮೇಲೆ ರೇಷ್ಮೆ ವಸ್ತ್ರವನ್ನು ಹೊದಿಸಿ ಪೂಜಿಸಲಾಗುತ್ತದೆ. ಉತ್ತರಾಷಾಢ ನಕ್ಷತ್ರದಲ್ಲಿ ನೈವೇದ್ಯವನ್ನು ಮಾಡಿ, ಶ್ರವಣ ನಕ್ಷತ್ರದಂದು ವಿಸರ್ಜಿಸುತ್ತಾರೆ. ಮೂರು ದಿನಗಳ ಕಾಲ ಅನಧ್ಯಯನವನ್ನು ಮಾಡುತತಾರೆ ಏಕೆಂದರೆ ತಾವು ಓದುತ್ತಿರುವ ಪುಸ್ತಕಗಳನ್ನು ಪೂಜೆಗೆ ಇಟ್ಟ ಕಾರಣ ಹೊಸದಾದ ಅಭ್ಯಾಸವನ್ನು ಮಾಡದೇ ಓದಿರುವ ಮೊದಲೇ ತಿಳಿದಿರುವ ಪಾಠಗಳನ್ನು ಪುನಃ ಪಠಣ, ಮನನ, ಹಾಗೂ ಚಿಂತನೆಗಳನ್ನು ಮಾಡುತ್ತಾರೆ. 


- ಮಾಧುರಿ ದೇಶಪಾಂಡೆ, ಬೆಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top