ಬೆಳ್ಳಿ ಬೆಡಗಿನ ಹಳೆಯ ಗೀತೆಗಳು ಅದೆಷ್ಟು ಚೆಂದ. ಆ ಕಾಲದ ಗೀತೆಗಳನ್ನು ಕೇಳ ಹೊರಟರೆ ಎಲ್ಲವೂ ಸುಮಧುರ, ಎಲ್ಲವೂ ಇಷ್ಟವೇ. ಪೋಸ್ಟ್ ಮಾಸ್ಟರ್ ಚಿತ್ರದ ಪಿ.ಬಿ ಶ್ರೀನಿವಾಸ ಹಾಡಿರುವ "ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ" ಹಾಡು ನನ್ನ ನೆಚ್ಚಿನ ಮೆಚ್ಚಿನ ಹಾಡು. ಸದಾ ನೆನಪಾಗುವ ಹಾಡು, ಸದಾ ಗುನುಗುವ ಹಾಡು. ಈ ಹಾಡು ಕೇಳಿದಾಗ ಆಗುವ ರೋಮಾಂಚನ, ಮನಸ್ಸಿಗೆ ಮುದ, ಒಂಥರಾ ಹಿತವಾದ ಖುಷಿಯ ಭಾವ ಎಲ್ಲವೂ ಅವರ್ಣನೀಯ. ಕೆಲವು ಸಮಾರಂಭಗಳಿಗೆ ಅತಿಥಿಯಾಗಿ ಹೋದಾಗ ಈ ಹಾಡಿನ ಎರಡು ಸಾಲುಗಳನ್ನು ಹಾಡಿ ಮಾತು ಮುಗಿಸಿದ್ದಿದೆ. ನನ್ನ ಬಳಗದ "ಹಾಡು ಹಳೆಯದಾದರೇನು" ಹಳೆಯ ಚಿತ್ರ ಗೀತೆಗಳ ಕಾರ್ಯಕ್ರಮದಲ್ಲಿ ಈ ಹಾಡು ನಿಶ್ಚಿತ ನನ್ನ ಮೊಬೈಲ್ ರಿಂಗ್ ಟೋನ್‌ಗೆ ಕೂಡಾ ಈ ಹಾಡನ್ನು ಹಾಕಿ ಹಾಡಿನ ಸಂಗೀತದ ಮಾಧುರ್ಯವನ್ನು ಸವಿದಿರುವೆ. ಜನರ ಜೊತೆ ಇರುವಾಗ ಮೊಬೈಲ್ ರಿಂಗುಣಿಸಿದಾಗ ಓ ಕನ್ನಡದ ಕುಲದೇವಿ ಅಂತ ನನ್ನನ್ನು ಕರೆದದ್ದೂ ಇದೆ.
ಅರ್ಥ ಪೂರ್ಣವಾದ ಈ ಹಾಡು ಕನ್ನಡಾಂಬೆಯಲ್ಲಿ ಒಂದಾಗಿ ಬಾಳುವ ತತ್ವವನ್ನು ವಿನಮ್ರವಾಗಿ, ವಿಧೇಯವಾಗಿ ನಿವೇದಿಸಿಕೊಳ್ಳುವ ರೀತಿ ಭಾವಪೂರ್ಣವಾಗಿ ಮೂಡಿ ಬಂದಿದೆ. "ಎದೆಯಾಂತರಾಳದಲಿ ಪುಟಿವ ಕಾರಂಜಿಯಲಿ ಒಂದಾಗಿ ಕೂಗಲಿ ಕನ್ನಡಾ ಕನ್ನಡ".
- ತಾರಾ ಹೆಗಡೆ ಸಿರಸಿ


