ಲೇಖಾ ಲೋಕ-63: ಅದ್ಭುತ ಸಂಶೋಧಕ ಮತ್ತು ಶ್ರೇಷ್ಠ ಸಾಹಿತಿ ಡಾ. ಎಂ. ಚಿದಾನಂದಮೂರ್ತಿ

Upayuktha
0


ನ್ನಡ ಭಾಷೆಯ ಪ್ರಸಿದ್ಧ ಸಂಶೋಧಕ, ಶ್ರೇಷ್ಠ ಸಾಹಿತಿ ಹಾಗೂ ಕರ್ನಾಟಕ ಇತಿಹಾಸದ ಆಮೂಲಾಗ್ರ ಪಂಡಿತರಾಗಿದ್ದ ಡಾ. ಎಂ. ಚಿದಾನಂದಮೂರ್ತಿ ಅವರು ಕನ್ನಡ ನಾಡಿಗೆ ದೊರೆತ ಅಪೂರ್ವ ಮಹನೀಯರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಯಶಸ್ಸು ಕಂಡ ವಿದ್ವಾಂಸರು ಇವರು. ಏಕರೂಪ ನಾಗರಿಕ ಸಂಹಿತೆ ಮತ್ತು ಮತಾಂತರ ವಿರೋಧಿ ಕಾನೂನು ಜಾರಿಯಾಗಬೇಕೆಂದು ಸ್ಪಷ್ಟವಾಗಿ ಪ್ರತಿಪಾದಿಸಿದ ಚಿಂತಕರೂ ಹೌದು.


ಜನನ ಮತ್ತು ವಿದ್ಯಾಭ್ಯಾಸ

ಡಾ. ಎಂ. ಚಿದಾನಂದಮೂರ್ತಿ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ ದಿನಾಂಕ 10-05-1931ರಂದು ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹಿರೇಕೋಗಲೂರು ಹಾಗೂ ಸಂತೇಬೆನ್ನೂರಿನಲ್ಲಿ ಪೂರೈಸಿದರು. ಕರ್ನಾಟಕ ರಾಜ್ಯಕ್ಕೆ ಇಂಟರ್ ಪರೀಕ್ಷೆಯಲ್ಲಿ ಹತ್ತನೆಯ ಸ್ಥಾನವನ್ನು ಪಡೆದರು. ನಂತರ ಕನ್ನಡ ಆನರ್ಸ್‌ನಲ್ಲಿ ಪದವಿ ಪಡೆದು, ಪ್ರಸಿದ್ಧ ಅಧ್ಯಾಪಕರ ಮಾರ್ಗದರ್ಶನ ಮತ್ತು ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಆಲ್ ಆನರ್ಸ್ ಚಿನ್ನದ ಪದಕ ಪಡೆದ ಹೆಗ್ಗಳಿಕೆಗೆ ಪಾತ್ರರಾದರು.


ಉನ್ನತ ಶಿಕ್ಷಣ ಮತ್ತು ಸಂಶೋಧನೆ

1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದರು. ಕುವೆಂಪು, ಪು.ತಿ.ನ., ರಾಘವಾಚಾರ್ ಮುಂತಾದ ಮಹನೀಯರ ಪ್ರಭಾವ ಇವರ ಮೇಲೆ ಗಾಢವಾಗಿ ಬಿದ್ದಿತ್ತು. ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯಂತೆ ಆದಿಕವಿ ಪಂಪನ ಚರಿತ್ರೆ ಹಾಗೂ ಶಿಲಾಶಾಸನಗಳ ಸಂಶೋಧನೆ ಮಾಡಿ, “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” ಎಂಬ ಮಹತ್ವದ ಪ್ರಬಂಧವನ್ನು ಮಂಡಿಸಿದರು. ತೀ.ನಂ. ಶ್ರೀಕಂಠಯ್ಯ ಅವರ ಮಾರ್ಗದರ್ಶನದಲ್ಲಿ 1964ರಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದರು. ಈ ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಒಂದು ಪ್ರಮುಖ ಪೂರ್ಣಕೃತಿಯೆಂದು ಪರಿಗಣಿತವಾಗಿದೆ.


ಅಧ್ಯಾಪಕ ವೃತ್ತಿ

ಆರಂಭದಲ್ಲಿ ಮೈಸೂರು ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನಂತರ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ ಕಾರ್ಯನಿರ್ವಹಿಸಿದರು. ಅನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.


ವಿದ್ವತ್ ಕಾರ್ಯ ಮತ್ತು ಸಾಧನೆ

ಡಾ. ಚಿದಾನಂದಮೂರ್ತಿ ಅವರು ಅನೇಕ ವಿದೇಶಗಳಿಗೆ ಭೇಟಿ ನೀಡಿ ಭಾಷಾವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಅಂತರರಾಷ್ಟ್ರೀಯ ಖ್ಯಾತಿ ಪಡೆದರು. ಕನ್ನಡ ಶಕ್ತಿ ಕೇಂದ್ರದಲ್ಲೂ ಸೇವೆ ಸಲ್ಲಿಸಿದರು. ನಾಲ್ಕು ದಶಕಗಳ ಕಾಲ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಸಂಶೋಧನೆ ಮಾಡಲು ಸಹಾಯ ಮಾಡಿದರು.


ಇವರು ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಹಾಗೂ ನಾಲ್ಕು ನೂರಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಛಂದಸ್ಸು, ಸ್ಥಳನಾಮಶಾಸ್ತ್ರ, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನಗಳು ಹಾಗೂ ಕರ್ನಾಟಕ ಇತಿಹಾಸ–ಸಂಸ್ಕೃತಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದ್ದಾರೆ.  “ಭಾಷಾವಿಜ್ಞಾನದ ಮೂಲತತ್ವಗಳು” ಮತ್ತು “ವಾಗರ್ಥ” ಎಂಬ ಎರಡು ಭಾಷಾವಿಜ್ಞಾನ ಸಂಬಂಧಿತ ಕೃತಿಗಳು ಬಹುಮೌಲ್ಯವಾದವು.


ಮೊದಲ ಷಟ್ಪದಿ ಕಾವ್ಯವನ್ನು ಸೊಲ್ಲಾಪುರದ ವಿವಾಹ ಪುರಾಣದಲ್ಲಿರುವ ಶಾಸನದಲ್ಲಿ ಗುರುತಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಕುವೆಂಪು ಹಾಗೂ ಚೆನ್ನವೀರ ಕಣವಿ ಅವರ ಕಾವ್ಯಗಳ ಛಂದಸ್ಸನ್ನು ವಿಶ್ಲೇಷಿಸಿ ಮಹತ್ವದ ಅಧ್ಯಯನವನ್ನು ನೀಡಿದ್ದಾರೆ. ಕವಿರಾಜಮಾರ್ಗ ಕಾಲದಿಂದ ಮುದ್ದಣ ಅವರವರೆಗಿನ ಕನ್ನಡ ಸಾಹಿತ್ಯವನ್ನು ಒಳಗೊಂಡು ಅಪರೂಪದ ಕೃತಿಗಳನ್ನು ರಚಿಸಿದ್ದಾರೆ.


ಕನ್ನಡ ಚಳುವಳಿ ಮತ್ತು ಸಂಸ್ಥಾನಿಕ ಕೊಡುಗೆ

ಕನ್ನಡ ಚಳುವಳಿಯಲ್ಲಿ ಸಕ್ರಿಯವಾಗಿ ಹೋರಾಟ ಮಾಡಿದ ಇವರು, ಕನ್ನಡ ಶಕ್ತಿ ಕೇಂದ್ರವನ್ನು ಅಸ್ತಿತ್ವಕ್ಕೆ ತಂದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಒತ್ತಾಯ ತಂದು, ಅದು ಕಾರ್ಯಾರಂಭವಾಗಲು ಮಹತ್ವದ ಪಾತ್ರ ವಹಿಸಿದರು.


ಪ್ರಶಸ್ತಿಗಳು ಮತ್ತು ಗೌರವಗಳು

ಡಾ. ಎಂ. ಚಿದಾನಂದಮೂರ್ತಿ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಭಾಜನರಾಗಿದ್ದಾರೆ.


ನಿಧನ

ಕನ್ನಡ ನಾಡಿಗೆ ಅನೇಕ ಸಂಶೋಧನಾತ್ಮಕ ಕೃತಿಗಳು, ಪ್ರಬಂಧಗಳು, ಜಾನಪದ ಮತ್ತು ಚಾರಿತ್ರಿಕ ಬರಹಗಳನ್ನು ನೀಡಿದ ಈ ಮಹನೀಯರು ದಿನಾಂಕ 11-01-2020ರಂದು ಬೆಂಗಳೂರಿನ ಹಂಪಿನಗರದಲ್ಲಿ ನಿಧನರಾದರು. ಅವರ ವಿದ್ವತ್ ಪರಂಪರೆ ಕನ್ನಡ ಸಂಸ್ಕೃತಿಯಲ್ಲಿ ಶಾಶ್ವತವಾಗಿ ಉಳಿಯಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top