ಕುಂದೇಶ್ವರ ಸಮ್ಮಾನ್, ಕಲಾಭೂಷಣ ಪ್ರಶಸ್ತಿ ಪ್ರದಾನ

Upayuktha
0


ಕಾರ್ಕಳ: ಹಿರ್ಗಾನದ ಕುಂದೇಶ್ವರ ಉತ್ಸವದಲ್ಲಿ ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಮತ್ತು ರಂಗಭೂಮಿ ಕಲಾವಿದ ಉಮೇಶ್ ಮಿಜಾರು ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಯಕ್ಷಗಾನ, ತಾಳಮದ್ದಲೆಗಳನ್ನು ಆಯೋಜಿಸಿ ಸಾಧಕ ಕಲಾವಿದರನ್ನು ಗೌರವಿಸುವ ಕೆಲಸ ಶ್ಲಾಘನೀಯ ಎಂದರು. 


ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಮಾತನಾಡಿ, ಕುಂದೇಶ್ವರ ಕ್ಷೇತ್ರವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದರು.


ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಕ್ಷೇತ್ರದ ಮೂಲಸೌಕರ್ಯ ಹೆಚ್ಚಳಕ್ಕೆ ದೇವಸ್ಥಾನದ ಸಂಪರ್ಕ ರಸ್ತೆಗಳನ್ನ ಮೇಲ್ದರ್ಜೆಗೆ ಏರಿಸಬೇಕು ಎಂದು ಹೇಳಿದರು.


ಪ್ರಶಸ್ತಿ ಸ್ವೀಕರಿಸಿದ ಕಾವ್ಯಶ್ರೀ ಅಜೇರು ಮಾತನಾಡಿ, ಇಂತಹ ಶ್ರೇಷ್ಠ ಸಮ್ಮಾನದ ಗೌರವಕ್ಕೆ ಪಾತ್ರರಾಗಿರುವುದು ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಯಕ್ಷಗಾನದಲ್ಲಿ ಪ್ರಾಂಜಲ ಮನಸ್ಸಿನಿಂದ ಕಲಾ ಸೇವೆಯನ್ನು ಮಾಡುತ್ತೇನೆ ಎಂದರು.


ಉಮೇಶ್ ಮಿಜಾರು ಮಾತನಾಡಿ, ಪುಣ್ಯಕ್ಷೇತ್ರಗಳಲ್ಲಿ ರಂಗಭೂಮಿಯ ಕಲಾವಿದರಿಗೆ ಪ್ರಶಸ್ತಿ ಗೌರವ ನೀಡುವುದರಿಂದ ರಂಗಕಲೆಗಳಿಗೆ ಉತ್ತೇಜನ ಲಭಿಸುತ್ತದೆ ಎಂದರು.


ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ನಿಟ್ಟೆ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ನಾಯಕ್, ಧರ್ಮದರ್ಶಿಗಳಾದ ಗಂಗಾ ಆರ್ ಭಟ್, ಪ್ರಧಾನ ಅರ್ಚಕರಾದ ಕೃಷ್ಣರಾಜೇಂದ್ರ ಭಟ್, ವೇದಮೂರ್ತಿ ರವೀಂದ್ರ ಭಟ್, ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ, ಸೃಷ್ಟಿ ಕಲಾವಿದ್ಯಾಲಯ ಸಂಸ್ಥಾಪಕ ಛಾಯಾಪತಿ ಕಂಚಿಬೈಲ್, ಉದ್ಯಮಿ ಸತೀಶ್ ಭಟ್ ಕುಂದೇಶ್ವರ, ಸಿರಿಯಣ್ಣ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ, ಅರ್ಚಕರಾದ ಸುಧೀಂದ್ರ ಭಟ್, ಸುಜ್ಞೇಂದ್ರ ಭಟ್ ಇದ್ದರು.



ಗೌರವ ಸನ್ಮಾನ:

ಇದೇ ಸಂದರ್ಭ ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಂಜುನಾಥ ಪೂಜಾರಿ ಮುದ್ರಾಡಿ ಅವರನ್ನು ಗೌರವಿಸಲಾಯಿತು. ದೇಗುಲ ದ್ವಾರಕ್ಕೆ ಹಿತ್ತಾಳೆ ಹೊದಿಕೆ ಸಮರ್ಪಿಸಿದ ರಮಾನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ರಂಗಿಣಿ ಉಪೇಂದ್ರ ರಾವ್ ಪ್ರಾರ್ಥಿಸಿದರು. ಸಾಂಸ್ಕೃತಿಕ ವೈವಿಧ್ಯ: ಕಾವ್ಯಶ್ರೀ ಅಜೇರು ಮತ್ತು ಲಕ್ಷ್ಮಿ ನಾರಾಯಣ ಹೊಳ್ಳ ದ್ವಂದ್ವ ಭಾಗವತಿಕೆಯಲ್ಲಿ ಕದ್ರಿ ಮಹಿಳಾ ಯಕ್ಷಕೂಟದವರಿಂದ  ತಾಳಮದ್ದಲೆ ನಡೆಯಿತು.


ನಿರ್ದೇಶನ ಮಾಡಿದ ರಾಮಚಂದ್ರ ಭಟ್ ಎಲ್ಲೂರು ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಛಾಯಾ ಗ್ರಾಹಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ನ್ಯೂಸ್ ಕಾರ್ಕಳ ಸಂಪಾದಕ ರಾಮಚಂದ್ರ ಬರೇಪ್ಪಾಡಿ ಸನ್ಮಾನಿಸಿದರು. 


ರಂಜಿನಿ ಲಕ್ಷ್ಮೀನಾರಾಯಣ ಅವರು "ದಾಕ್ಷಾಯಿಣಿ" ಏಕಪಾತ್ರಾಭಿನಯ ಪ್ರದರ್ಶಿಸಿದರು. ನಮ್ಮ ಬೆದ್ರ ಕಲಾವಿದರಿಂದ ವೈರಲ್ ವೈಶಾಲಿ ತುಳು ನಾಟಕ ಜನ ಮೆಚ್ಚುಗೆಗೆ ಪಾತ್ರವಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top